ಬಾಗಲಕೋಟೆ: ಜಿಲ್ಲೆಯಲ್ಲಿ 2014ರಲ್ಲಿ ನಡೆದ ಕೊಳವೆ ಬಾವಿ ದುರಂತ ಇಡೀ ದೇಶದ ಗಮನ ಸೆಳೆದಿತ್ತು. ಅಂದು ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಸೂಳಿಕೇರಿ ಗ್ರಾಮದಲ್ಲಿ ತಿಮ್ಮಣ್ಣ ಎಂಬ ಆರು ವರ್ಷದ ಬಾಲಕ ಕೊಳವೆ ಬಾವಿಗೆ ಬಿದ್ದು ಸಾವನ್ನಪ್ಪಿದ್ದ. ತಮ್ಮ ಹೊಲದಲ್ಲಿ ತೆರೆದ ಕೊಳವೆ ಬಾವಿಯಲ್ಲಿ ಸಿಲುಕಿದ್ದ ಬಾಲಕನಿಗಾಗಿ ಜಿಲ್ಲಾಡಳಿತ ಹತ್ತು ದಿನಗಳ ಕಾಲ ಕಾರ್ಯಾಚರಣೆ ನಡೆಸಿತ್ತು. ಆದರೆ ಬಾಲಕ ಮಾತ್ರ ಕೊನೆಗೂ ಬದುಕಿ ಬರಲಿಲ್ಲ. ಈ ದುರಂತ ಇಡೀ ರಾಜ್ಯ, ದೇಶದ ಗಮನ ಸೆಳೆದಿತ್ತು. ಎಲ್ಲರೂ ಬಾಲಕ ಬದುಕಿ ಬರಲಿ ಎಂದು ಪ್ರಾರ್ಥನೆ ಮಾಡಿದ್ದರು. ಆದರೆ ಬಾಲಕ ಮಾತ್ರ ಬದುಕಿ ಬರಲೇ ಇಲ್ಲ.
ಅಲ್ಲದೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಜುಂಜರವಾಡ, ವಿಜಯಪುರ ಜಿಲ್ಲೆಯ ನಾಗಠಾಣ ಎರಡು ಸ್ಥಳದಲ್ಲಿ ಇಬ್ಬರು ಬಾಲಕಿಯರು ಕೊಳಬೆ ಬಾವಿಗೆ ಸಿಲುಕಿ ಮೃತಪಟ್ಟಿದ್ದರು. ಬಾಗಲಕೋಟೆಯಲ್ಲಿ ಬಾಲಕ ತಿಮ್ಮಣ್ಣ ಕೊಳವೆ ಬಾವಿಗೆ ಬಲಿಯಾಗಿದ್ದ. ಇಷ್ಟಾದರೂ ಬಾಗಲಕೋಟೆ ಜಿಲ್ಲಾಡಳಿತ ಮಾತ್ರ ಇನ್ನೂ ಎಚ್ಚೆತ್ತುಕೊಂಡಿಲ್ಲ. ಇಂದಿಗೂ ಅಲ್ಲಲ್ಲಿ ತೆರೆದ ಕೊಳವೆ ಬಾವಿಗಳು ಅಪಾಯಕ್ಕೆ ಆಹ್ವಾನ ನೀಡುತ್ತಿವೆ.
ಸಾರ್ವಜನಿಕ ಸ್ಥಳದಲ್ಲೇ ರಾಕ್ಷಸನಂತೆ ಬಾಯಿ ತೆರೆದಿರುವ ಕೊಳವೆ ಬಾವಿ
ಜಿಲ್ಲೆಯಲ್ಲಿ 2014ರಂದು ನಡೆದ ಕೊಳವೆ ಬಾವಿ ಮಹಾದುರಂತದ ನಂತರ ಇಡೀ ರಾಜ್ಯಾದ್ಯಂತ ತೆರೆದ ಕೊಳವೆ ಬಾವಿ ಮುಚ್ಚುವ ಅಭಿಯಾನ ನಡೆದಿತ್ತು. ಆದರೆ ಈಗ ರಬಕವಿ ಬನಹಟ್ಟಿ ತಾಲೂಕಿನ ತೇರದಾಳ ಪಟ್ಟಣದ ಅಂಬೇಡ್ಕರ್ ವೃತ್ತದ ಬಳಿ ಸಾರ್ವಜನಿಕ ಸ್ಥಳದಲ್ಲಿ ತೆರೆದ ಕೊಳವೆ ಬಾವಿ ಕಂಡುಬಂದಿದೆ. ಕಳೆದ ಒಂದು ವರ್ಷದಿಂದ ಇದೇ ಸ್ಥಿತಿಯಲ್ಲಿದ್ದು, ಇದನ್ನು ಮುಚ್ಚುವ ಕೆಲಸವನ್ನು ಪುರಸಭೆ ಅಧಿಕಾರಿಗಳು, ಸಿಬ್ಬಂದಿ ಮಾಡುತ್ತಿಲ್ಲ. ಈ ಸ್ಥಳ ಜನನಿಬಿಡ ಸ್ಥಳವಾಗಿದ್ದು, ಚಿಕ್ಕ ಮಕ್ಕಳು ಕೂಡ ಈ ಜಾಗದಲ್ಲಿ ಓಡಾಡುತ್ತಾರೆ. ಹೀಗಿದ್ದರೂ ಅದನ್ನು ಮುಚ್ಚುವ ಕೆಲಸ ಮಾಡದೆ ಪುರಸಭೆ ಅಧಿಕಾರಿಗಳು ನಿರ್ಲಕ್ಷ್ಯ ಮಾಡಿದ್ದಾರೆ.
ಈ ಬಗ್ಗೆ ಸ್ಥಳೀಯರು ಈಗಾಗಲೇ ಅನೇಕ ಬಾರಿ ಪುರಸಭೆ ಅಧಿಕಾರಿಗಳಿಗೆ ತಿಳಿಸಿದ್ದಾರೆ. ತೆರೆದ ಕೊಳವೆ ಬಾವಿ ಮುಚ್ಚಿ ಅಂತ ಮನವಿ ಮಾಡಿದ್ದಾರೆ. ಆದರೆ ಪುರಸಭೆ ಸಿಬ್ಬಂದಿ ಈ ಬಗ್ಗೆ ಗಮನಹರಿಸಿಲ್ಲ. ನಮ್ಮ ಜಿಲ್ಲೆಯಲ್ಲೇ ಒಂದು ಘಟನೆ ನಡೆದಿದೆ. ಆದರೂ ಅಧಿಕಾರಿಗಳು ಕೇರ್ ಮಾಡುತ್ತಿಲ್ಲ. ಕೂಡಲೆ ಕೊಳವೆ ಬಾವಿ ಮುಚ್ಚಬೇಕು. ಏನಾದರೂ ಅನಾಹುತ ನಡೆದರೆ ಅದಕ್ಕೆ ಪುರಸಭೆ ಅಧಿಕಾರಿಗಳೆ ಹೊಣೆ. ಆದಷ್ಟು ಬೇಗ ಇದನ್ನು ಮುಚ್ಚಿ ಅನಾಹುತ ತಪ್ಪಿಸಿ ಅಂತ ಸ್ಥಳೀಯರು ಆಗ್ರಹಿಸಿದ್ದಾರೆ.
ಇದನ್ನೂ ಓದಿ
ದೆಹಲಿಯಿಂದ ಬೆಂಗಳೂರಿಗೆ ವಾಪಸ್; ಶನಿವಾರ, ಭಾನುವಾರ ಯಾವ ED ಕಚೇರಿ ತೆರೆದಿರುತ್ತೆ ಎಂದ ಜಮೀರ್
ನೀರಾವರಿ ಯೋಜನೆಗಳ ಜಾರಿಗೆ ತೊಡೆ ತಟ್ಟಿದ ದೇವೇಗೌಡ; ಜೆಡಿಎಸ್ ಸಂಘಟಿಸಲು ಕೆಲಸ ಮಾಡುತ್ತೇನೆ ಎಂದ ನಾಯಕ
(Bagalkot Administration not alerted about Borewell)