ಸಾಮಾನ್ಯವಾಗಿ ಒಂದು ಎತ್ತಿನ (Ox) ಬೆಲೆ ಎಷ್ಟು ಇರಬಹುದು? 20,000 ದಿಂದ 30,000 ರೂಪಾಯಿ ಇರಬಹುದು. ಅಥವಾ ಇನ್ನೂ ಸ್ರವಲ್ಪ ಜಾಸ್ತಿಯೆಂದರೆವ ಒಂದು ಲಕ್ಷ ರೂಪಾಯಿ ತಲುಪಬಹುದು. ಆದರೆ ಇಲ್ಲೊಂದು ಎತ್ತು ಬರೋಬ್ಬರಿ 12,25,000 ರೂಪಾಯಿಗೆ ಮಾರಾಟವಾಗಿದೆ! ಹೌದು ಬಾಗಲಕೋಟೆ (Bagalkot) ಜಿಲ್ಲೆ ಮುಧೋಳ (Mudhol) ತಾಲೂಕಿನ ಬುದ್ನಿ ಪಿಎಂ ಗ್ರಾಮದ ಸಿದ್ದು ಪೂಜಾರಿ ಎಂಬುವರ ಎತ್ತು (Bullock) ಇಂಥದೊಂದು ಬೃಹತ್ ಮೊತ್ತಕ್ಕೆ ಮಾರಾಟವಾಗಿದ್ದು ಎಲ್ಲರಿಗೂ ಅಚ್ಚರಿ ಮೂಡಿಸಿದೆ.
ಚಿಂಚ ಎಂದೇ ಹೆಸರುವಾಸಿ ಆಗಿರುವಂತಹ ಎತ್ತು ಇಡೀ ಉತ್ತರ ಕರ್ನಾಟಕದಲ್ಲಿ ಪ್ರಸಿದ್ಧಿಯಾಗಿದೆ. ಚಿಂಚ ಎತ್ತು ಅಂದ್ರೆ ಯಾವುದೇ ತೆರೆಬಂಡಿ ಸ್ಪರ್ಧೆಯಲ್ಲಿ ಬಹುಮಾನ ಪಕ್ಕಾ ಅಂತಾನೆ ಲೆಕ್ಕ. ಬಾಗಲಕೋಟೆ ವಿಜಯಪುರ ಬೆಳಗಾವಿ ಸೇರಿದಂತೆ ಉತ್ತರ ಕರ್ನಾಟಕ ಭಾಗಗಳಲ್ಲಿ ನೂರಾರು ಸ್ಪರ್ಧೆಯಲ್ಲಿ ಭಾಗವಹಿಸಿದ ಈ ಎತ್ತು ಅನೇಕ ಬಹುಮಾನಗಳನ್ನು ತನ್ನ ಕೊಂಬಿನಿಂದ ಬಾಚಿಕೊಂಡಿದೆ.
“ಚಿಂಚ” ಎಂದೇ ಖ್ಯಾತಿ ಹೊಂದಿದ ಈ ಎತ್ತು ತೆರೆಬಂಡಿ ಸ್ಪರ್ಧೆಯಲ್ಲಿ ಗೆದ್ದಿದ್ದು ಬರೊಬ್ಬರಿ 30 ಲಕ್ಷ ರೂಪಾಯಿ ನಗದು, 13 ತೊಲೆ ಬಂಗಾರ, ಎಂಟು ಬೈಕ್ ಬಹುಮಾನವಾಗಿ ಪಡೆದಿದೆ. ಇಂತಹ ಎತ್ತನ್ನು ಇದೀಗ ಮುಧೋಳ ತಾಲ್ಲೂಕಿನ ಒಂಟಗೋಡಿ ಗ್ರಾಮದ ಭೀಮಸಿ ಐನಾಪುರ 12 ಲಕ್ಷ 25 ಸಾವಿರ ರೂ ಕೊಟ್ಟು ಖರೀದಿಸಿದ್ದಾರೆ.
ಹೌದು ಉತ್ತರ ಕರ್ನಾಟಕ ಭಾಗದಲ್ಲಿ ಅದರಲ್ಲೂ ಬಾಗಲಕೋಟೆ ಜಿಲ್ಲೆ, ಬೆಳಗಾವಿ, ವಿಜಯಪುರಲ್ಲಿ ತೆರೆದ ಬಂಡಿ ಸ್ಪರ್ಧೆ ಸರ್ವೇಸಾಮಾನ್ಯ. ಜಿಲ್ಲೆಯ ಪ್ರತಿಯೊಂದು ತಾಲೂಕಿನ ವ್ಯಾಪ್ತಿಯ ಹಳ್ಳಿ ಭಾಗದಲ್ಲಿ ತೆರೆದ ಬಂಡಿ ಸ್ಪರ್ಧೆಗಳು ಮೇಲಿಂದ ಮೇಲೆ ನಡೆಯುತ್ತಲೇ ಇರುತ್ತವೆ. ವರ್ಷಗಟ್ಟಲೇ ದುಡಿದು ದಣಿದ ರೈತರಿಗೆ ಇದೊಂದು ಮನರಂಜನೆ.
ಈ ಸಂದರ್ಭದಲ್ಲಿ ತಮ್ಮ ಎತ್ತುಗಳನ್ನು ಚೆನ್ನಾಗಿ ಬೆಳೆಸಿ ಸ್ಪರ್ಧೆಗೆ ಬಿಡುತ್ತಾರೆ ತೆರೆ ಬಂಡಿ ಸ್ಪರ್ಧೆಯಲ್ಲಿ ಭಾಗವಹಿಸುವ ಎತ್ತುಗಳು ನೋಡೋದಕ್ಕೆ ಮದಗಜಗಳಂತೆ ತಯಾರಾಗಿರುತ್ತವೆ. ಕಠಿಣವಾದ ತೆರೆಬಂಡಿಯನ್ನು ಎಳೆದುಕೊಂಡು ಓಡೋದು ಅಷ್ಟು ಸುಲಭವಲ್ಲ. ಒಂದು ನಿಮಿಷದಲ್ಲಿ ಯಾವ ಜೋಡಿ ಹೆಚ್ಚು ದೂರ ಓಡುತ್ತದೋ ಆ ಜೋಡಿಗೆ ಬಹುಮಾನ ಇರುತ್ತದೆ.
ಉತ್ತರಕರ್ನಾಟಕದ ಯಾವುದೇ ಭಾಗದಲ್ಲಿ ಕೂಡ ತೆರೆದ ಬಂಡಿ ಓಟ ಸ್ಪರ್ಧೆ ಇದ್ರೆ ಅಲ್ಲಿ ಆ ಸ್ಪರ್ಧೆಯಲ್ಲಿ ಈ ಚಿಂಚನಿಗೆ ಬಹುಮಾನ ಪಕ್ಕಾ. ಇದರಿಂದ ಉತ್ತರ ಕರ್ನಾಟಕ ಭಾಗದಲ್ಲಿ ಈ ಚಿಂಚನಿಗೆ ತನ್ನದೇ ಆದ ಅಭಿಮಾನಿಗಳು ಇದ್ದಾರೆ ಸಾವಿರಾರು ಸಂಖ್ಯೆಯಲ್ಲಿ. ಚಿಂಚ ಅಖಾಡಕ್ಕೆ ಬಂತು ಅಂತಂದ್ರೆ ಯಾವುದಾದರೂ ಬಹುಮಾನ ಪಕ್ಕಾ ಅಂತಲೇ ಹೇಳಬಹುದು. ಇದನ್ನು ನೋಡೋದಕ್ಕೆ ಅಂತಾನೆ ಅಭಿಮಾನಿಗಳು ಬರುತ್ತಾರೆ.
ನಾಲ್ಕು ವರ್ಷಗಳ ಹಿಂದೆ ಹಿಂದೆ ಇಂಗಳಗಿ ಗ್ರಾಮದ ಶಂಕರಪ್ಪ ಇಮ್ಮಣ್ಣವರ ಎಂಬುವರಿಂದ 12 ಲಕ್ಷಕ್ಕೆ ಇದನ್ನು ಖರೀದಿಸಲಾಗಿತ್ತು. ಈ ರೈತರಿಗೆ ಮಾರಾಟ ಮಾಡೋದಕ್ಕೆ ಮನಸ್ಸು ಇರದಿದ್ದರೂ ಕೂಡ ಈಗ ಖರೀದಿ ಮಾಡುತ್ತಿರುವಂತಹ ವ್ಯಕ್ತಿ ರೈತ ಹಾಗೂ ಎತ್ತುಗಳ ಬಗ್ಗೆ ಅಪಾರ ಪ್ರೀತಿ ಹೊಂದಿರುವವರು, ಜೊತೆಗೆ ಚಿಂಚನ ಬಗ್ಗೆ ಅಭಿಮಾನ ಹೊಂದಿರುವ ರೈತನಾಗಿರೋದ್ರಿಂದ ಆ ರೈತನ ಇನ್ನೊಂದು ವ್ಯಕ್ತಿಗೆ ಇದನ್ನು ಜೋಡಿಯಾಗಿ ಖರೀದಿ ಮಾಡುತ್ತಿರುವುದರಿಂದ ಅನಿವಾರ್ಯವಾಗಿ ಮಾರಾಟ ಮಾಡಿದ್ದಾರೆ.
2020 ರಲ್ಲಿ ಒಂದು ವರ್ಷ ಕಾಯಿಲೆ ಬಿದ್ದ ಚಿಂಚನನ್ನು ಧಾರವಾಡದ ಪಶು ಆಸ್ಪತ್ರೆಯಲ್ಲಿ ಮೂರು ತಿಂಗಳು ಐಸಿಯುನಲ್ಲಿಟ್ಟು ಆರೈಕೆ ಮಾಡಿದ್ದರು. ಮೂರು ಟನ್ ಇದ್ದ ಎತ್ತು ಒಂದು ಟನ್ ಗೆ ಇಳಿದು ಸಾಯುವ ಸ್ಥಿತಿ ತಲುಪಿತ್ತು. ಗೂಳಪ್ಪ ಅವರು ಮನೆಯಲ್ಲಿ ಮಗುವಿನಂತೆ ಜೋಪಾನ ಮಾಡಿದ್ದರು. ಎತ್ತಿನ ಚೇತರಿಕೆಗಾಗಿ ಮೇಕೆ ಕುರಿಗಳ ಕರಳಿನ ರಸ ಕುಡಿಸಿ ಆರೈಕೆ ಮಾಡಿದ್ದರು. ಕೊನೆಗೆ ರೈತರ ನಿರಂತರ ಪ್ರಯತ್ನದಿಂದ ಗುಣಮುಖವಾಗಿ ಮತ್ತೆ ತೆರೆಬಂಡಿ ಸ್ಪರ್ಧೆಯಲ್ಲಿ ಬಹುಮಾನ ಬೇಟೆಯಾಡಿ ಅಚ್ಚರಿ ಮೂಡಿಸಿದೆ ಚಿಂಚ. ಅಂತಹ ಚಿಂಚ ದಾಖಲೆ ಮೊತ್ತಕ್ಕೆ ಮಾರಾಟವಾಗಿದೆ.
ಒಟ್ಟಿನಲ್ಲಿ ಹೇಳುವುದಾದರೆ ರೈತರು ಎತ್ತುಗಳಿಗೆ ಬಿಡಿಸಲಾಗದ ನಂಟು. ಅನ್ನದಾತನಿಗೆ ಲಕ್ಷ ಲಕ್ಷ ಬಹುಮಾನಗಳನ್ನು ತಂದುಕೊಟ್ಟ ಎತ್ತು ಇಂತಹ ದಾಖಲೆ ಬೆಲೆಗೆ ಮಾರಾಟವಾಗಿದ್ದು ಎಲ್ಲರ ಹುಬ್ಬೇರಿಸಿದೆ.
ವರದಿ: ರವಿ ಮೂಕಿ, ಟಿವಿ 9, ಬಾಗಲಕೋಟೆ
Published On - 4:39 am, Tue, 7 February 23