ಹಿಂದೂ ಆದವ ಹಿಂದುತ್ವ ಗೌರವಿಸಲೇಬೇಕು: ಸಿದ್ದರಾಮಯ್ಯ ಹೇಳಿಕೆಗೆ ಸುಬುಧೇಂದ್ರ ತೀರ್ಥ ಶ್ರೀ ತಿರುಗೇಟು
ನಾನು ಹಿಂದೂ ವಿರೋಧಿ ಅಲ್ಲ, ಹಿಂದುತ್ವ, ಮನುವಾದದ ವಿರೋಧಿ ಎಂದು ಹೇಳಿದ ಸಿದ್ದರಾಮಯ್ಯ ಅವರ ವಿರುದ್ಧ ಸ್ವಾಮೀಜಿಗಳು ಕೂಡ ಸಿಡಿದೆದ್ದಿದ್ದಾರೆ. ಸಿದ್ದರಾಮಯ್ಯ ಅವರ ದ್ವಂದ್ವ ಹೇಳಿಕೆಯಲ್ಲಿ ಅರ್ಥ ಇಲ್ಲ ಎಂದು ಸುಬುಧೇಂದ್ರ ತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಬಾಗಲಕೋಟೆ: ನಾನು ಹಿಂದೂ ಅಂದಮೇಲೆ ಹಿಂದುತ್ವವನ್ನು ಗೌರವಿಸಲೇಬೇಕು ಎಂದು ಮಂತ್ರಾಲಯ ಶ್ರೀ ರಾಘವೇಂದ್ರ ಮಠದ ಸುಬುಧೇಂದ್ರ ತೀರ್ಥ ಸ್ವಾಮೀಜಿ (Subudhendra Teertha Swamiji) ಅವರು ಹೇಳಿದ್ದಾರೆ. ನಾನು ಹಿಂದೂ ವಿರೋಧಿ ಅಲ್ಲ, ಹಿಂದುತ್ವ, ಮನುವಾದದ ವಿರೋಧಿ ಎಂಬ ಸಿದ್ದರಾಮಯ್ಯ (Siddaramaiah) ಅವರ ಹೇಳಿಕೆಗೆ ತಿರುಗೇಟು ನೀಡಿದ ಸ್ವಾಮೀಜಿ, ಸಿದ್ದರಾಮಯ್ಯ ಅವರ ದ್ವಂದ್ವ ಹೇಳಿಕೆಯಲ್ಲಿ ಅರ್ಥವಿಲ್ಲ. ಹಿಂದುತ್ವ ವಿಚಾರದಲ್ಲಿ ಅವರಿಗೆ ಸ್ವಲ್ಪ ಭೇದ ಇರಬಹುದು. ಆದರೆ ನಾನು ಹಿಂದೂ ಅಂದಮೇಲೆ ಹಿಂದುತ್ವವನ್ನು ಗೌರವಿಸಲೇಬೇಕು. ಹಿಂದುಗಳಲ್ಲಿ ಇರುವಂತಹದ್ದು ಹಿಂದುತ್ವ. ಹೀಗಾಗಿ ಹಿಂದೂಗಳೆಲ್ಲರೂ ಹಿಂದುತ್ವವನ್ನು ಗೌರವಿಸಲೇಬೇಕು ಎಂದರು.
ಯಾವ ಹಿನ್ನಲೆಯಲ್ಲಿ ಸಿದ್ದರಾಮಯ್ಯ ಅವರು ಆ ಭಾವನೆಯನ್ನ ಹೇಳುತ್ತಾರೆ ಗೊತ್ತಿಲ್ಲ. ಹಿಂದುತ್ವ ವಿಚಾರದಲ್ಲಿ ಅವರಿಗೆ ಸ್ವಲ್ಪ ಬೇಧ ಇರಬಹುದು. ಆದರೆ ಹಿಂದೂಗಳೆಲ್ಲರೂ ಹಿಂದುತ್ವವನ್ನ ಆಧರಿಸಲೇಬೇಕು. ಹಿಂದುಗಳಲ್ಲಿ ಇರುವಂತಹದ್ದು ಹಿಂದುತ್ವ. ನನ್ನ ತಾಯಿ ಅನ್ನೋದು, ಅವಳು ನಿಸ್ಸಾಂತಾನ ಉಳ್ಳುವಳು ಅನ್ನೋದು ಎಷ್ಟು ಅಪಹಾಸ್ಯ. ತಾಯಿ ಅಂದಮೇಲೆ ಅವಳಿಗೆ ಸಂತಾನ ನೀನು ಅಂತಾ ಆಯಿತಲ್ವಾ? ಎಂದು ಹೇಳುವ ಮೂಲಕ ಸಿದ್ದರಾಮಯ್ಯ ಅವರಿಗೆ ಶ್ರೀಗಳು ತೀಕ್ಷ್ಣವಾಗಿ ತಿರುಗೇಟು ನೀಡಿದರು.
ಸಿದ್ದರಾಮಯ್ಯ ಅವರಿಗೆ ಯಾವುದಾದರೂ ವಿಚಾರದಲ್ಲಿ ಭಿನ್ನಾಭಿಪ್ರಾಯಗಳಿದ್ದರೆ ಅವರು ವಿಚಾರ ವಿನಿಮಯ ಮಾಡಿಕೊಂಡು ಪರಿಸಿಕೊಳ್ಳುವುದು ಉತ್ತಮ. ಅದುಬಿಟ್ಟು ಹಿಂದೂ ಎಂದು ಹೇಳುತ್ತಾ ಹಿಂದುತ್ವ ವಿರೋಧಿಸುತ್ತೇನೆ ಅನ್ನೋದು ಅರ್ಥಹೀನವಾಗಿದೆ ಎಂದು ಸುಬುಧೇಂದ್ರ ತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಇದನ್ನೂ ಓದಿ: ಹಿಂದುತ್ವ, ಮನುವಾದದ ವಿರೋಧಿ ಎಂದ ಸಿದ್ದರಾಮಯ್ಯ ಮೇಲೆ ಕೇಸರಿ, ಕುಂಕುಮಾಸ್ತ್ರ ಪ್ರಯೋಗಿಸಿದ ಸಚಿವ ಸಿಸಿ ಪಾಟೀಲ್
ಸಿದ್ದರಾಮಯ್ಯ ಅವರ ಹೇಳಿಕೆಗೆ ಬಿಜೆಪಿ ಕೂಡ ಕಿಡಿಕಾರುತ್ತಿದೆ. ನಿನ್ನೆ ಇದೇ ವಿಚಾರವಾಗಿ ಮಾತನಾಡಿದ ಸಚಿವ ಸಿಸಿ ಪಾಟೀಲ್, ಕೇಸರಿ, ಕುಂಕುಮ ಮನುವಾದದ ಸಂಕೇತನ? ಕೇಸರಿ, ಕುಂಕುಮ ಕಂಡರೆ ಭಯ ಎಂದವರ್ಯಾರು ಎಂದು ಪ್ರಶ್ನಿಸಿದ್ದಾರೆ. ಕೇಸರೀ ಕಂಡರೆ ಭಯ ಆಗತ್ತೆ ಕುಂಕುಮ ಕಂಡರೆ ಭಯ ಆಗತ್ತೆ ಅಂತಾ ಹೇಳಿದವರು ಅದೇ ಸಿಧ್ಧರಾಮಯ್ಯನವರು ತಾನೇ? ಕೇಸರಿ ಮತ್ತು ಕುಂಕುಮ ಹಿಂದೂ ಮತ್ತು ಹಿಂದುತ್ವದ ಸಂಕೇತವಾಗಿದೆ ಎಂದಿದ್ದರು.
ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದ್ದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ದೇವನೊಬ್ಬ ನಾಮ ಹಲವು ಎಂಬುವ ತತ್ವ ಹಿಂದುತ್ವದಲ್ಲಿದೆ. ಓರ್ವ ಹಿಂದೂ ಪ್ರತಿಯೊಬ್ಬರಲ್ಲೂ ಸಮಾನತೆ ಬಯಸುತ್ತಾನೆ. ಆದರೆ ಸಿದ್ದರಾಮಯ್ಯ ಜಾತಿ ಸಮಾನತೆಯನ್ನು ಬಯಸುವುದಿಲ್ಲ. ಹಿಂದುತ್ವ ಒಪ್ಪಲ್ಲ ಅಂದರೆ ಸಿದ್ದರಾಮಯ್ಯಗೆ ಸಮಾನತೆ ಬೇಕಾಗಿಲ್ಲ ಎಂದರ್ಥ ಎಂದು ಟೀಕಿಸಿದ್ದರು. ಹೀಗೆ ಬಿಜೆಪಿಯ ಅನೇಕ ನಾಯಕರು ಸಿದ್ದರಾಮಯ್ಯ ಅವರ ಹೇಳಕೆಯನ್ನು ಖಂಡಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:09 pm, Tue, 7 February 23