ಬಾಗಲಕೋಟೆಯಲ್ಲಿ ಅಮಾನವೀಯ ಕೃತ್ಯ: ಮಾನಸಿಕ ಅಸ್ವಸ್ಥೆ ಮೇಲೆ ಅತ್ಯಾಚಾರ?

ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಕೂಡಲಸಂಗಮ ಕ್ರಾಸ್ ಬಳಿ 40 ವರ್ಷದ ವಿಚ್ಛೇದಿತ ಮಾನಸಿಕ ಅಸ್ವಸ್ಥೆ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ. ಜನವರಿ 5ರಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಸಂತ್ರಸ್ತೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಪಿಗಳ ಬಂಧನಕ್ಕೆ ಸಂತ್ರಸ್ತೆಯ ಸಹೋದರ ಆಗ್ರಹಿಸಿದ್ದಾರೆ.

ಬಾಗಲಕೋಟೆಯಲ್ಲಿ ಅಮಾನವೀಯ ಕೃತ್ಯ: ಮಾನಸಿಕ ಅಸ್ವಸ್ಥೆ ಮೇಲೆ ಅತ್ಯಾಚಾರ?
ಪ್ರಾತಿನಿಧಿಕ ಚಿತ್ರ
Edited By:

Updated on: Jan 11, 2026 | 4:16 PM

ಬಾಗಲಕೋಟೆ, ಜನವರಿ 11: ವಿಚ್ಛೇದಿತ ಮಹಿಳೆ‌ ಮೇಲೆ ಲೈಂಗಿಕ ದೌರ್ಜನ್ಯ (physically harassment) ನಡೆದಿರುವಂತಹ ಘಟನೆ ಬಾಗಲಕೋಟೆ (Bagalkote) ಜಿಲ್ಲೆಯ ಹುನಗುಂದ ತಾಲೂಕಿನ ಕೂಡಲಸಂಗಮ ಕ್ರಾಸ್​​​ನಲ್ಲಿ ನಡೆದಿದೆ. ಜನವರಿ 5ರಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. 40 ವರ್ಷದ ಮಹಿಳೆ ಮಾನಸಿಕ ಅಸ್ವಸ್ಥೆಯಾಗಿದ್ದು, ದೌರ್ಜನ್ಯವೆಸಗಿ ರಾಷ್ಟ್ರೀಯ ಹೆದ್ದಾರಿ ಬಳಿ ಬಿಸಾಕಿ ಹೋಗಲಾಗಿದೆ. ಸದ್ಯ ಮಹಿಳೆ ಮೇಲೆ ಗ್ಯಾಂಗ್​ನಿಂದ​ ಅಥವಾ ಒಬ್ಬರಿಂದ ಅತ್ಯಾಚಾರ ನಡೆಯಿತಾ ಎಂಬುವುದು ಪೊಲೀಸ್​ ತನಿಖೆ ನಡೆಸಿದ್ದಾರೆ. ಹುನಗುಂದ ಠಾಣೆಯಲ್ಲಿ ಎಫ್​ಐಆರ್​​ ದಾಖಲಾಗಿದೆ.

ಕೃತ್ಯವೆಸಗಿ ಬಿಸಾಕಿ ಹೋದ ದುಷ್ಟರು

ವಿಚ್ಚೇದಿತ ಮಹಿಳೆ ಬಾಗಲಕೋಟೆ ತಾಲೂಕಿನ ಬೇವೂರು ಗ್ರಾಮದವರು. ರಾಷ್ಟ್ರೀಯ ಹೆದ್ದಾರಿ ಬಳಿ ಬಿಸಾಕಿ ಹೋದ ಮಹಿಳೆಯನ್ನು ನೋಡಿದ ಸಾರ್ವಜನಿಕರು 108ಕ್ಕೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಬಳಿಕ ಆಂಬ್ಯುಲೆನ್ಸ್ ಮೂಲಕ ಅವರನ್ನು ಮೊದಲಿಗೆ ಹುನಗುಂದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬಾಗಲಕೋಟೆ ‌ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಚಿಕಿತ್ಸೆ ಮುಂದುವರಿದಿದೆ.

ದೌರ್ಜನ್ಯ ನೆನೆದು ಬಿಕ್ಕಿಬಿಕ್ಕಿ ಅತ್ತ ಮಹಿಳೆಯ ಸಹೋದರ  

ಇನ್ನು ಮಹಿಳೆಯ ಸಹೋದರ ತಮ್ಮ ಸಹೋದರಿ ಮೇಲಾದ ದೌರ್ಜನ್ಯ ನೆನೆದು ಕಣ್ಣೀರು ಹಾಕಿದ್ದಾರೆ. ಈ ವೇಳೆ ಮಾತನಾಡಿದ ಸಹೋದರ ರವಿ ಮಾದರ, ಇದುವರೆಗೂ ಯಾರನ್ನೂ ಬಂಧಿಸಿಲ್ಲ ಎಂದು ಬಿಕ್ಕಿಬಿಕ್ಕಿ ಅತ್ತರು. ಯಾರು ಇಂತಹ ಕೆಲಸ ಮಾಡಿದ್ದಾರೆ ಅವರನ್ನು ಪತ್ತೆ ಹಚ್ಚಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ತಾಯಿ ಮೇಲಿನ ದ್ವೇಷಕ್ಕೆ ಮಗು ಬಲಿ; ಕೊಲೆಗೂ ಮುನ್ನ 6 ವರ್ಷದ ಕಂದಮ್ಮನ ಮೇಲೆ ಅತ್ಯಾಚಾರವೆಸಗಿದ್ದ ಪಾಪಿ!

ಸಂತ್ರಸ್ತೆ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ಪರೀಕ್ಷೆ ಮಾಡಲಾಗಿದ್ದು, ಗುಪ್ತಾಂಗದ ಮೇಲೆ‌ ಗಾಯಗಳಾಗಿದ್ದು, ಚಿಕಿತ್ಸೆ ನೀಡಲಾಗಿದೆ. ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ. ಅತ್ಯಾಚಾರ ಆಗಿದೆಯಾ ಎಂಬ ಬಗ್ಗೆ ವೈದ್ಯಕೀಯ ವರದಿ ಬಂದ ನಂತರ ಖಚಿತವಾಗಲಿದೆ ಎಂದು ಜಿಲ್ಲಾಸ್ಪತ್ರೆ ವೈದ್ಯರು ತಿಳಿಸಿದ್ದಾರೆ.

ಬಾಗಲಕೋಟೆ ಎಸ್​ಪಿ ಸಿದ್ದಾರ್ಥ ಗೋಯಲ್‌ ಹೇಳಿದ್ದಿಷ್ಟು

ಇನ್ನು ಘಟನೆ ಬಗ್ಗೆ ಬಾಗಲಕೋಟೆ ಎಸ್​ಪಿ ಸಿದ್ದಾರ್ಥ ಗೋಯಲ್‌ ಪ್ರತಿಕ್ರಿಯಿಸಿದ್ದು, ಈ ವಿಚಾರವಾಗಿ ಈಗಾಗಲೇ ಎಫ್​ಐಆರ್​​ ದಾಖಲಾಗಿದೆ. ಸಿಸಿಟಿವಿ ಕ್ಯಾಮರಾಗಳನ್ನು ಪರಿಶೀಲನೆ ಮಾಡಿದ್ದು, 72 ಜನರ ಪಟ್ಟಿ ಸಿದ್ಧಪಡಿಸಿದ್ದೇವೆ. ಆ ಮೂಲಕ ಆರೋಪಿಗಳ ಪತ್ತೆಗೆ ಮುಂದಾಗಿದ್ದೇವೆ. ಆದಷ್ಟು ಬೇಗ ಆರೋಪಿಗಳ ಪತ್ತೆ ಹಚ್ಚುತ್ತೇವೆ ಎಂದು ಅವರು ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:12 pm, Sun, 11 January 26