ತಾಯಿ ಮೇಲಿನ ದ್ವೇಷಕ್ಕೆ ಮಗು ಬಲಿ; ಕೊಲೆಗೂ ಮುನ್ನ 6 ವರ್ಷದ ಕಂದಮ್ಮನ ಮೇಲೆ ಅತ್ಯಾಚಾರವೆಸಗಿದ್ದ ಪಾಪಿ!
ಬೆಂಗಳೂರು ವೈಟ್‌ಫೀಲ್ಡ್‌ನಲ್ಲಿ ತಾಯಿಯ ಮೇಲಿನ ದ್ವೇಷಕ್ಕೆ ಆರೋಪಿ 6 ವರ್ಷದ ಮಗುವನ್ನು ಕೊಲೆ ಮಾಡಿದ್ದ ಪ್ರಕರಣ ಬೆಳಕಿಗೆ ಬಂದಿತ್ತು. ಮೃತದೇಹ ಚರಂಡಿಯಲ್ಲಿ ಪತ್ತೆಯಾದ ಬಳಿಕ ಕೇಸ್ ಪಕ್ಕದಮನೆಯವನೇ ಈ ಕೃತ್ಯವೆಸಗಿರುವ ಅನುಮಾನ ಮೂಡಿತ್ತು. ಆ ಅನುಮಾನ ತನಿಖೆ ವೇಳೆ ದೃಢಪಟ್ಟಿತ್ತು. ಮಗುವನ್ನು ಅಪಹರಿಸಿದ್ದ ಆರೋಪಿ ಅತ್ಯಾಚಾರವೆಸಗಿ, ಕೊಲೆ ಮಾಡಿದ್ದಾನೆಂಬ ಸ್ಫೋಟಕ ಮಾಹಿತಿ ತನಿಖೆ ವೇಳೆ ಬಹಿರಂಗವಾಗಿದೆ.

ಬೆಂಗಳೂರು, ಜನವರಿ 11: ಬೆಂಗಳೂರು ವೈಟ್‌ಫೀಲ್ಡ್‌ನಲ್ಲಿ ಆರು ವರ್ಷದ ಬಾಲಕಿಯನ್ನು ಕತ್ತು ಹಿಸುಕಿ ಕೊಲ್ಲಲಾಗಿತ್ತು. ತಾಯಿಯ ಮೇಲಿನ ದ್ವೇಷಕ್ಕೆ ಮಗುವನ್ನು ಕೊಂದ ಪಾಪಿ ಚರಂಡಿಗೆ ಬಿಸಾಕಿದ್ದ. ಈ ಕೊಲೆ ಪ್ರಕರಣದ ತನಿಖೆಯ ವೇಳೆ ಸ್ಪೋಟಕ ಮಾಹಿತಿ ಬಹಿರಂಗವಾಗಿದ್ದು, ಕೊಲೆಗೂ ಮುನ್ನ ಪುಟ್ಟ ಬಾಲಕಿಯ ಮೇಲೆ ಆರೋಪಿ ಅತ್ಯಾಚಾರವೆಸಗಿರುವುದು ಗೊತ್ತಾಗಿದೆ. ಆರೋಪಿಯು ಈ ಹಿಂದೆಯೂ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದನೆಂಬುದು ವಿಚಾರಣೆ ವೇಳೆ ತಿಳಿದುಬಂದಿದ್ದು, ಪೋಕ್ಸೋ ಕೇಸ್ ದಾಖಲಾಗಿದೆ.
ಶವವನ್ನು ರಸ್ತೆ ಬದಿಯ ಚರಂಡಿಗೆ ಎಸೆದಿದ್ದ
ಬಾಲಕಿಯ ಕೊಲೆ ಪ್ರಕರಣದಲ್ಲಿ ಯುಸೂಫ್ ಮೀರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಬಾಲಕಿಯ ತಾಯಿಯೊಂದಿಗೆ ಜಗಳ ಮಾಡಿಕೊಂಡಿದ್ದ ಆರೋಪಿಯು ಮಗುವನ್ನು ಕಿಡ್ನಾಪ್ ಮಾಡಿದ್ದ. 6 ವರ್ಷದ ಮಗುವಿನ ಮೇಲೆ ಅತ್ಯಾಚಾರ ನಡೆಸಿದ್ದ ಪಾಪಿ, ನಂತರ ಪ್ಲಾಸ್ಟಿಕ್ ವೈರ್ ಬಳಸಿ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದ. ಕೊಲೆ ಬಳಿಕ ಮೃತದೇಹವನ್ನು ಪ್ಲಾಸ್ಟಿಕ್ ಚೀಲದಲ್ಲಿ ಹಾಕಿ ರಸ್ತೆ ಬದಿಯ ಚರಂಡಿಗೆ ಎಸೆದಿದ್ದಾನೆ ಎಂದು ತನಿಖೆಯಲ್ಲಿ ದೃಢಪಟ್ಟಿದೆ.
ಬಾಲಕಿ ನಾಪತ್ತೆಯಾದ ಒಂದು ದಿನದ ಬಳಿಕ ಪೋಷಕರು ದೂರು ನೀಡಿದ್ದು, ದೂರು ದಾಖಲಾದ ಹನ್ನೆರಡು ಗಂಟೆಗಳೊಳಗೆ ರಸ್ತೆ ಬದಿಯ ಪ್ಲಾಸ್ಟಿಕ್ ಚೀಲದಲ್ಲಿ ಮೃತದೇಹ ಪತ್ತೆಯಾಗಿತ್ತು. ಮೃತದೇಹ ಕೊಳೆತ ಸ್ಥಿತಿಯಲ್ಲಿ ಕಂಡುಬಂದಿದ್ದು, ಆರಂಭದಲ್ಲಿ ಕೊಲೆ ಮಾತ್ರ ನಡೆದಿರುವ ಅನುಮಾನ ಇತ್ತು. ಆದರೆ ತನಿಖೆಯಲ್ಲಿ ಅತ್ಯಾಚಾರ ಬಳಿಕ ಕೊಲೆ ನಡೆದಿರುವುದು ಬೆಳಕಿಗೆ ಬಂದಿದೆ.
ಇದನ್ನೂ ಓದಿ ತಾಯಿ ಮೇಲಿನ ದ್ವೇಷಕ್ಕೆ ಮುಗ್ಧ ಮಗುವಿನ ಕತ್ತು ಹಿಸುಕಿ ಕೊಲೆ!
ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯವೆಸಗುತ್ತಿದ್ದ ಆರೋಪಿ
ಪೊಲೀಸ್ ತನಿಖೆಯಲ್ಲಿ ಯುಸೂಫ್ ಮೀರ್ ವಿರುದ್ಧ ಈಗಾಗಲೇ ಎರಡು ಗಂಭೀರ ಪ್ರಕರಣಗಳು ದಾಖಲಾಗಿರುವುದು ಗೊತ್ತಾಗಿದೆ. ಪಶ್ಚಿಮ ಬಂಗಾಳದಲ್ಲಿ ಒಂದು ಪೋಕ್ಸೋ ಹಾಗೂ ಮತ್ತೊಂದು ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಗಳು ದಾಖಲಾಗಿದ್ದವು. ಸದ್ಯ ಆರೋಪಿಯನ್ನು ಪಶ್ಚಿಮ ಬಂಗಾಳದಿಂದ ಬಂಧಿಸಿ ಕರೆತಂದು ವಿಚಾರಣೆ ನಡೆಸಲಾಗುತ್ತಿದೆ. ಯುಸೂಫ್ ಮಕ್ಕಳ ಮೇಲೆ ಲೈಂಗಿಕ ದೌರ್ಜ್ಯನ್ಯ ನಡೆಸುವ ಮನಸ್ಥಿತಿಯ ವ್ಯಕ್ತಿ ಎಂಬುದು ತನಿಖೆಯಲ್ಲಿ ತಿಳಿದುಬಂದಿದ್ದು, ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.