ಬೀದಿ ನಾಯಿಗಳ ಹಾವಳಿ ತಡೆಗೆ ಸಿದ್ದವಾದ ಬಾಗಲಕೋಟೆ ನಗರಸಭೆ: 10 ಲಕ್ಷ ವೆಚ್ಚದಲ್ಲಿ 600 ಶ್ವಾನಗಳ ಸಂತಾನಹರಣ

| Updated By: ಕಿರಣ್ ಹನುಮಂತ್​ ಮಾದಾರ್

Updated on: Mar 13, 2023 | 6:58 AM

ನಗರದಲ್ಲಿ ಕಳೆದ ಹಲವಾರು ದಿನಗಳಿಂದ ಬೀದಿನಾಯಿಗಳ ಹಾವಳಿ ತೀರಾ ಹೆಚ್ಚಾಗಿದೆ. ಈಗಾಗಲೆ ಕೆಲ ಕಡೆ ಮಕ್ಕಳಿಗೆ ಬೀದಿನಾಯಿ ಕಚ್ಚಿ ಗಾಯ ಮಾಡಿವೆ. ಇದಕ್ಕೆಲ್ಲ ಕಡಿವಾಣ ಹಾಕಲು ನಗರಸಭೆ ಶ್ವಾನಗಳ ಸಂತಾನಹರಣ ಚಿಕಿತ್ಸೆ ಮಾಡುತ್ತಿದೆ. ಜೊತೆಗೆ ಕಚ್ಚಿದರೂ ನಂಜಾಗದಂತೆ ನಂಜು ನಿರೋಧಕ ಇಂಜೆಕ್ಷನ್ ನೀಡಿ ಜನರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದೆ.

ಬೀದಿ ನಾಯಿಗಳ ಹಾವಳಿ ತಡೆಗೆ ಸಿದ್ದವಾದ ಬಾಗಲಕೋಟೆ ನಗರಸಭೆ: 10 ಲಕ್ಷ ವೆಚ್ಚದಲ್ಲಿ 600 ಶ್ವಾನಗಳ ಸಂತಾನಹರಣ
ಬೀದಿ ನಾಯಿ ಹಾವಳಿಗೆ ಬ್ರೇಕ್​ ಹಾಕಲು ಬಾಗಲಕೋಟೆ ನಗರಸಭೆ ನಿರ್ಧಾರ
Follow us on

ಬಾಗಲಕೋಟೆ: ರಸ್ತೆಯಲ್ಲಿ ರಾಜಾರೋಷವಾಗಿ ಮಲಗಿರುವ ಶ್ವಾನ. ಇನ್ನೊಂದು ಕಡೆ ಬೀದಿ ಬೀದಿಯಲ್ಲಿ ಗುಂಪಾಗಿ ನಿಂತ ಶ್ವಾನಗಳ ಗುಂಪು. ಶ್ವಾನಗಳು ಇರುವ ರಸ್ತೆಯಲ್ಲಿ ಮಕ್ಕಳನ್ನು ಕರೆದುಕೊಂಡು ಹೋಗುತ್ತಿರುವ ಪೋಷಕರು ಅಲ್ಲೇ ಓಡಾಡುತ್ತಿರುವ ಮಕ್ಕಳು. ಬೀದಿನಾಯಿಗಳನ್ನು ಹಿಡಿದು ಶೆಡ್​ನಲ್ಲಿ ಸಂತಾನಹರಣ ಚಿಕಿತ್ಸೆ. ಅಂದ ಹಾಗೆ ಈ ದೃಶ್ಯ ಕಂಡು ಬಂದಿದ್ದು ಬಾಗಲಕೋಟೆ ನಗರದಲ್ಲಿ. ಜಿಲ್ಲೆಯಲ್ಲಿ ಇತ್ತೀಚೆಗೆ ಬೀದಿ ನಾಯಿಗಳ ಹಾವಳಿ ಬಾರಿ ಪ್ರಮಾಣದಲ್ಲಿ ಹೆಚ್ಚಾಗಿದೆ. ರಸ್ತೆಯಲ್ಲಿ ಜನರು ನಿರಾತಂಕವಾಗಿ ಸಂಚರಿಸಲು ಭಯ ಪಡುವಂತಾಗಿದೆ. ಮಕ್ಕಳು ಮರಿ ಕಟ್ಟಿಕೊಂಡು ನಗರದಲ್ಲಿ ಓಡಾಡಬೇಕಾದರೆ ಜೀವ ಕೈಯಲ್ಲಿ ಹಿಡಿದು ಸಾಗಬೇಕು. ಇನ್ನು ರಾತ್ರಿ ವೇಳೆಯಲ್ಲಂತೂ ಹಿಂಡು ಹಿಂಡಾಗಿ ಓಡಾಡುವ ಶ್ವಾನಗಳು ಒಬ್ಬರೇ ಸಿಕ್ಕರೆ ದಾಳಿ ಮಾಡುತ್ತವೆ. ಕೆಲವರಿಗೆ ಕಚ್ಚಿದ ಉದಾಹರಣೆಗಳು ಇವೆ. ಇದರಿಂದ ನಗರಸಭೆಗೆ ಸಾರ್ವಜನಿಕರಿಂದ ಹೆಚ್ಚಿನ ದೂರು ಬಂದಿದ್ದು ನಗರಸಭೆ ಅಧಿಕಾರಿಗಳು ಬೀದಿನಾಯಿಗಳ ಸಂತಾನಹರಣ ಚಿಕಿತ್ಸೆ ಮಾಡುತ್ತಿದ್ದಾರೆ.

ಸುಮಾರು 10 ಲಕ್ಷ ರೂ. ಬಜೆಟ್​ನಲ್ಲಿ ಬೀದಿನಾಯಿಗಳ ಸಂತಾನಹರಣ ಕಾರ್ಯ ನಡೆಯುತ್ತಿದೆ. ಒಂದು ಶ್ವಾನಕ್ಕೆ 1.600 ರೂ ಖರ್ಚು ಮಾಡಲಾಗುತ್ತಿದೆ. ಮೊದಲ ಹಂತದಲ್ಲಿ 600 ಬೀದಿ ನಾಯಿಗಳ ಸಂತಾನಹರಣ ಚಿಕಿತ್ಸೆ ಮಾಡುವುದಕ್ಕೆ ಗುರಿ ಇಟ್ಟುಕೊಂಡಿದ್ದು, ಈಗಾಗಲೇ 249 ಶ್ವಾನಗಳ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಆಪರೇಷನ್ ಮಾಡಿ ಮೂರು ನಾಲ್ಕು ದಿನಗಳ ಕಾಲ ಇವುಗಳನ್ನು ಆರೈಕೆ ಮಾಡಿ ನಂತರ ಹೊರ ಬಿಡಲಾಗುತ್ತದೆ.

ಇದನ್ನೂ ಓದಿ:ಹೈದರಾಬಾದ್‌ನಲ್ಲಿ 4 ವರ್ಷದ ಬಾಲಕನನ್ನು ಹತ್ಯೆಗೈದ ಬೀದಿ ನಾಯಿಗಳು, ಘಟನೆ ಸಿಸಿಟಿವಿಯಲ್ಲಿ ಸೆರೆ

ಇಲ್ಲಿ ಕೇವಲ ಸಂತಾನಹರಣ ಚಿಕಿತ್ಸೆ ಮಾತ್ರ ಮಾಡುತ್ತಿಲ್ಲ. ಈ ಬೀದಿ ನಾಯಿಗಳು ಯಾರಿಗೆ ಕಚ್ಚಿದರೂ ಕೂಡ ನಂಜು ಆಗಬಾರದೆಂದು ನಂಜು ನಿರೋಧಕ ಇಂಜೆಕ್ಷನ್ ಕೂಡ ನೀಡಲಾಗುತ್ತಿದೆ. ಇದು ಬಹಳ ಮುಖ್ಯವಾಗಿದ್ದು ಜನರಿಗೆ ಶ್ವಾನ ಕಚ್ಚಿದರೂ ಅಪಾಯದಿಂದ ಪಾರಾಗಬಹುದು. ಮಾಹಿತಿ ಪ್ರಕಾರ ಬಾಗಲಕೋಟೆ ನಗರದಲ್ಲಿ 2 ಸಾವಿರಕ್ಕೂ ಅಧಿಕ ಬೀದಿ ನಾಯಿಗಳು ಇವೆ. ಹಳೆ ಬಾಗಲಕೋಟೆ, ಮಟನ್ ಮಾರುಕಟ್ಟೆ, ನವನಗರ, ವಿದ್ಯಾಗಿರಿಯಲ್ಲಿ ರಸ್ತೆಯಲ್ಲಿ ಬೀ ಬಜೆಟ್ ದಿ ನಾಯಿಗಳದ್ದೇ ದರ್ಬಾರ್ ಆಗಿದೆ. ಇದರಿಂದ ಜನರಿಗೆ ಇನ್ನಿಲ್ಲದ ಕಿರಿಕ್ ಆಗುತ್ತಿದ್ದು, ನಗರಸಭೆ ಈಗ ಶ್ವಾನ ಭೇಟೆ ನಡೆಸುತ್ತಿದೆ.

ಮೊದಲ ಹಂತದಲ್ಲಿ 6 ನೂರು ಶ್ವಾನಗಳನ್ನು ಹಿಡಿಯೋದಕ್ಕೆ ಸಿದ್ದವಾಗಿದ್ದು. ಸಂತಾನಹರಣ ಚಿಕಿತ್ಸೆ ಮಾಡಿ ಅದನ್ನು ಪುನಃ ಅದೇ ಜಾಗದಲ್ಲೇ ಬಿಟ್ಟು ಬರಲಿದ್ದಾರೆ. ಸದ್ಯ ಬಾಗಲಕೋಟೆ ಕಸ ಸಂಸ್ಕರಣಾ ಘಟಕದಲ್ಲಿ ಸಂತಾನಹರಣ ಶಸ್ತ್ರ ಚಿಕಿತ್ಸೆ ಹಾಗೂ ನಂಜುನಿರೋಧಕ ಇಂಜೆಕ್ಷನ್ ಮಾಡುವ ಕಾರ್ಯ ನಡೆಯುತ್ತಿದೆ. ನಗರದ ನೂರಾರು ಶ್ವಾನಗಳನ್ನು ಇಲ್ಲಿ ಸೇರಿಸಲಾಗಿದೆ. ಈ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಶ್ವಾನಗಳ ಸಂತಾನಹರಣ ಮಾಡುತ್ತಿರೋದು ಒಳ್ಳೆಯದು ಆದರೆ ಸಂತಾನಹರಣವನ್ನು ಸರಿಯಾಗಿ ವೈಜ್ಞಾನಿಕವಾಗಿ ಮಾಡಬೇಕು. ಇದರಿಂದ ಜನರಿಗೆ ತೊಂದರೆಯಾಗಬಾರದು ಇನ್ನೊಂದು ಕಡೆ ಆ ಶ್ವಾನಕ್ಕೆ ಯಾವುದೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಮುಖ್ಯವಾಗಿ ಬೀದಿನಾಯಿಗಳ ಸಂತತಿ ನಾಶವಾಗದ ರೀತಿಯಲ್ಲಿ ಈ ಕಾರ್ಯ ಮಾಡಿ ಎಂದು ಪ್ರಾಣಿ ಪ್ರೀಯರು ಹೇಳುತ್ತಿದ್ದಾರೆ.

ಇದನ್ನೂ ಓದಿ:ಬೀದಿ ನಾಯಿ ಉಪಟಳಕ್ಕೆ ಹೈರಾಣಾದ ಬೆಳಗಾವಿ ಜನರು: ಕಚ್ಚೋ ನಾಯಿ ಬದಲು ಬೇರೆ ನಾಯಿ ಹಿಡಿದುಕೊಂಡು ಹೋದ ಜಿಲ್ಲಾಡಳಿತ

ಒಟ್ಟಿನಲ್ಲಿ ಬೀದಿನಾಯಿಗಳ ಹಾವಳಿಯಿಂದ ರೋಸಿ ಹೋದ ಜನರಿಗೆ,ಶ್ವಾನಗಳ ಸಂತಾನಹರಣ ಮಾಡುವ ವಿಚಾರ ಖುಷಿ ತಂದಿದೆ. ಆದರೆ ಇಲ್ಲಿ ಬೀದಿನಾಯಿಗಳ ಸಂತತಿ ಉಳಿಸೋದು ಕೂಡ ಅಷ್ಟೇ ಮುಖ್ಯವಾಗಿದ್ದು, ನಗರಸಭೆ ಆಡಳಿತಮಂಡಳಿ ಇದನ್ನು ವ್ಯವಸ್ಥಿತವಾಗಿ ಅನುಷ್ಠಾನಗೊಳಿಸಬೇಕಾಗಿದೆ.

ವರದಿ ರವಿಮೂಕಿ ಟಿವಿ9 ಬಾಗಲಕೋಟೆ

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ