ಅಮಾನವೀಯ ಕೃತ್ಯ: ಅನಾರೋಗ್ಯ ಪೀಡಿತ ವ್ಯಕ್ತಿಯನ್ನು ಆಸ್ಪತ್ರೆಯಲ್ಲಿ ಬಿಟ್ಟು ಪರಾರಿ; 10 ದಿನದಿಂದ ನರಳಾಟ
ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ಆಸ್ಪತ್ರೆಯಲ್ಲಿ ಸಂಬಂಧಿಕರು ತೀವ್ರ ಅನಾರೋಗ್ಯ ಪೀಡಿತ ವ್ಯಕ್ತಿಯನ್ನು ಬಿಟ್ಟು ಹೋಗಿದ್ದಾರೆ. 10 ದಿನಗಳ ಕಾಲ ಸೂಕ್ತ ಆರೈಕೆ ಇಲ್ಲದೆ ನರಳಾಡಿದ ವ್ಯಕ್ತಿಯ ದುಸ್ಥಿತಿಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದ್ಯ ಶಾಸಕ ಸಿದ್ದು ಸವದಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ಮುಂದಾಗಿದ್ದಾರೆ.

ಬಾಗಲಕೋಟೆ, ಜನವರಿ 03: ತೀವ್ರ ಅನಾರೋಗ್ಯಕ್ಕೆ ಒಳಗಾಗಿರುವ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆದುಕೊಂಡು ಬಂದು ಬಳಿಕ ಬಿಟ್ಟು ಪರಾರಿ ಆಗಿರುವಂತಹ ಘಟನೆಯೊಂದು ಬಾಗಲಕೋಟೆ (Bagalkote) ಜಿಲ್ಲೆಯ ರಬಕವಿ-ಬನಹಟ್ಟಿ (Rabkavi Banhatti) ಸರಕಾರಿ ಆಸ್ಪತ್ರೆಯಲ್ಲಿ ನಡೆದಿದೆ. ಸಂಬಂಧಿಕರಿಂದಲೇ ಅಮಾನವೀಯ ಕೃತ್ಯ ಎಸಗಲಾಗಿದ್ದು, ಸುಮಾರು ಹತ್ತು ದಿನಗಳಿಂದ ಸೂಕ್ತ ಆರೈಕೆ ಇಲ್ಲದೆ ವ್ಯಕ್ತಿ ಆಸ್ಪತ್ರೆಯಲ್ಲಿ ನರಳಾಡುತ್ತಿದ್ದಾರೆ. ಸದ್ಯ ಸಂಬಂಧಿಕರ ಈ ಕೃತ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.
ನಡೆದದ್ದೇನು?
ತೀವ್ರ ಅನಾರೋಗ್ಯಕ್ಕೆ ಒಳಗಾಗಿರುವ ವ್ಯಕ್ತಿಯ ಹೆಸರು ವಿಠ್ಠಲ ರಾವಳ್ (22) ಎಂದು ತಿಳಿದುಬಂದಿದ್ದು, ಮೂಲತಃ ಬನಹಟ್ಟಿ ನಿವಾಸಿಯಾಗಿದ್ದಾರೆ. ಆಧಾರ ಕಾರ್ಡ ಪರಿಶೀಲನೆ ಮಾಡಿದ ಬಳಿಕ ಬನಹಟ್ಟಿ ನಿವಾಸಿ ಎಂದು ತಿಳಿದು ಬಂದಿದೆ. ವಾಸಿಯಾಗದ ರೋಗಕ್ಕೆ ತುತ್ತಾಗಿರುವ ಕಾರಣಕ್ಕೆ ವಿಠ್ಠಲ ರಾವಳ್ರನ್ನು ಸಂಬಂಧಿಕರು ಆಸ್ಪತ್ರೆಗೆ ಕರೆತಂದು ಬಿಟ್ಟು ಹೋಗಿದ್ದಾರೆ. ಸುಮಾರು ಹತ್ತು ದಿನಗಳಿಂದ ಸೂಕ್ತ ಆರೈಕೆ ಇಲ್ಲದೆ ನರಳಾಡಿದ್ದಾರೆ. ಸ್ನಾನ ಹಾಗೂ ಸ್ವಚ್ಚತೆ ಇಲ್ಲದಿರುವುದರಿಂದ ಗಬ್ಬೆದ್ದು ನಾರುತ್ತಿದ್ದು, ಇದರಿಂದ ಇತರೆ ರೋಗಿಗಳೂ ಪರದಾಡುವಂತಾಗಿದೆ.
ಇದನ್ನೂ ಓದಿ: ಬಾಗಲಕೋಟೆ: ಕೃಷ್ಣಾ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನ; ತಾಯಿ, ಮಗು ರಕ್ಷಣೆ
ಸದ್ಯ ಸ್ಥಳೀಯರು ಶಾಸಕರು ಹಾಗೂ ಪೊಲೀಸ್ರಿಗೆ ಮಾಹಿತಿ ನೀಡಿದ್ದಾರೆ. ಇತ್ತ ಸಂಬಂಧಿಕರ ಬಗ್ಗೆ ಪರಿಶೀಲನೆ ಮಾಡಲಾಗಿದ್ದು, ಎಂಟು ದಿನಗಳ ಹಿಂದೆಯೇ ಮೊಬೈಲ್ ಸ್ವಿಚ್ ಆಫ್ ಆಗಿದೆ. ಇನ್ನು ಮನೆಗೆ ಬೀಗ ಹಾಕಿಕೊಂಡು ಹೋಗಿದ್ದಾರೆ.
ಚಿಕಿತ್ಸೆ ಕೂಡಿಸಲು ಮುಂದಾದ ಶಾಸಕ ಸಿದ್ದು ಸವದಿ
ಸ್ಥಳೀಯರ ಮಾಹಿತಿ ಬೆನ್ನಲ್ಲೇ ಇದೀಗ ಖಾಸಗಿ ಆಸ್ಪತ್ರೆಯಲ್ಲಿ ವಿಠ್ಠಲ ರಾವಳ್ಗೆ ಚಿಕಿತ್ಸೆ ಕೂಡಿಸಲು ಶಾಸಕ ಸಿದ್ದು ಸವದಿ ಮುಂದಾಗಿದ್ದಾರೆ. ಅಲ್ಲದೇ ಒಂದು ವಾರದಿಂದ ಡಾ. ನದಾಪ್ ಚಿಕಿತ್ಸೆ ನೀಡುವುದರ ಜೊತೆಗೆ ಅವರ ಊಟೋಪಚಾರ ಹಾಗೂ ಹೆಚ್ಚಿನ ಚಿಕಿತ್ಸೆಗೆ ಹಣ ನೀಡಲು ಮುಂದಾಗಿದ್ದಾರೆ. ಇನ್ನು ಸಂಬಂಧಿಕರಾಗಲಿ ಅಥವಾ ಸಮಾಜದ ಮುಖಂಡರಾಗಲಿ ವಿಠ್ಠಲ ರಾವಳ್ ಹತ್ತಿರ ಸುಳಿಯುತ್ತಿಲ್ಲ. ಸದ್ಯ ಸಂಬಂಧಿಕರ ನೀಚ ಕೃತ್ಯ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:24 pm, Sat, 3 January 26




