ಆಕೆ ಜೀವನದಲ್ಲಿ ಹೆಣ್ಣಾಗಿ (Woman) ಏನೆಲ್ಲ ಕಷ್ಟ ಎದುರಿಸಬಾರದೊ ಅದನ್ನು ಎದುರಿಸಿದ್ದಾಳೆ. ಮದುವೆ ಅಂದರೆ ಏನು ಎಂದೂ ಅರಿಯದ 8 ನೇ ವಯಸ್ಸಲ್ಲಿ ಆಕೆಗೆ ಬಾಲ್ಯ ವಿವಾಹ ಮಾಡಲಾಗಿದೆ. ವಯಸ್ಸಿಗೆ ಬಂದಾಗ ಆಕೆಯ ಗಂಡ ನಪುಂಸಕ ಎಂಬ ಬರಸಿಡಿಲು ಸಹ ಬಡಿದಿತ್ತು. ಆದರೂ ಗಂಡನ ಜೊತೆ ಬದುಕಿದ್ದ ಆಕೆ, ಗಂಡ 2021ರಲ್ಲಿ ಅನಾರೋಗ್ಯದಿಂದ ಮೃತಪಟ್ಟಿದ್ದಾನೆ. ಆದರೆ ಅದು ಅನಾರೋಗ್ಯದಿಂದಾದ ಸಾವಲ್ಲ, ಕೊಲೆ ಎಂಬುದು ಪತ್ನಿಯ ದಟ್ಟ ಸಂಶಯ. ಅದಾದ ಮೇಲೆ ಕಳೆದ 2021 ರಿಂದ ಅಲೆದಾಡಿದರೂ ಕೊಲೆ ಕೇಸ್ ಪಡೆಯದ ಕಾರಣ ಇಂದು ಆ ಅಬಲೆ ಕಣ್ಣೀರಿಟ್ಟು ಗೋಳು ತೋಡಿಕೊಂಡಿದ್ದಾರೆ. ತಾನು ಪೊಲೀಸರಿಗೆ ನೀಡಿದ ದೂರಿನ ಅರ್ಜಿ ಆಕೆ ಕೈಯಲ್ಲಿ ಹಿಡಿದಿದ್ದಾರೆ. ಕಣ್ತುಂಬ ನೀರು, ಮಾತಾಡುತ್ತಲೇ ಉಮ್ಮಳಿಸಿ ಬರುತ್ತಿರುವ ದುಃಖ. ತನಗಾದ ವ್ಯಥೆ, ಪೊಲೀಸರಿಂದಲೂ ನ್ಯಾಯ (Justice) ಸಿಗುತ್ತಿಲ್ಲ ಎಂದು ಕಣ್ಣೀರು ಹಾಕಿ ಗೋಳಾಟ. ಈ ಕರುಳು ಹಿಂಡುವ ದೃಶ್ಯ ಕಂಡುಬಂದಿದ್ದು ಬಾಗಲಕೋಟೆಯ ಎಸ್ ಪಿ ಕಚೇರಿ ಆವರಣದಲ್ಲಿ (Bagalkot SP).
ಇಲ್ಲಿ ನೋಡಿ ಈ ಮಹಿಳೆ ಒಬ್ಬ ಹೆಣ್ಣು ಮಗಳು ಏನು ಅನುಭವಿಸಬಾರದೊ ಆ ಎಲ್ಲಾ ಹಿಂಸೆ ಅನುಭವಿಸಿದ್ದಾಳೆ. ಇವರ ಹೆಸರು ಸುರೇಖಾ ಭಜಂತ್ರಿ (Surekha Bhajantri). ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಕಲಹಳ್ಳಿ ಗ್ರಾಮದ ನಿವಾಸಿ. ಇವರ ಜೀವನ ಕಥೆ ಕೇಳಿದರೆ ಎಂತಹವರ ಕಣ್ಣಲ್ಲೂ ನೀರು ಬರುತ್ತೆ. ಅಯ್ಯೊ ಪಾಪ! ಎನಿಸುತ್ತದೆ. ಹೌದು ಸುರೇಖಾ ಭಜಂತ್ರಿ ತನ್ನ ಗಂಡನ ಸಾವಿನ ಬಗ್ಗೆ ಸೂಕ್ತ ತನಿಖೆಯಾಗಬೇಕು ಎಂದು ಅಲೆದಾಡುತ್ತಿದ್ದಾರೆ.
ಇವರ ಪತಿ ಮಲ್ಲಪ್ಪ ಭಜಂತ್ರಿ 2021 ಏಪ್ರಿಲ್ 3 ರಂದು ಅನಾರೋಗ್ಯದಿಂದ ಬಳಲಿ ಮೃತಪಟ್ಟಿದ್ದಾರೆ. ಆದರೆ ಇಲ್ಲಿ ಈಕೆ ಸಾಯುವ ವೇಳೆ ಕೆಲ ದಿನ ತವರು ಮನೆಯಲ್ಲಿದ್ದಳು. ಆಗ ಗಂಡನ ಮನೆಯಲ್ಲಿ ಮಲ್ಲಪ್ಪ ಸಾವನ್ನಪ್ಪಿದ್ದು ಸುರೇಖಾ ಅವರಿಗೆ ಗಂಡ ಅನಾರೋಗ್ಯದಿಂದ ಸಾವನ್ನಪ್ಪಿಲ್ಲ. ಆಸ್ತಿ ಹೊಡೆಯುವ ಉದ್ದೇಶದಿಂದ ಗಂಡನ ಕೊಲೆ ಮಾಡಲಾಗಿದೆ ಎಂಬ ಅನಿಸಿಕೆ.
ಇನ್ನು ಗಂಡ ಮೃತಪಟ್ಟ ವೇಳೆ ಜಮಖಂಡಿ ಗ್ರಾಮೀಣ ಠಾಣೆ ಪೊಲೀಸರಿಗೆ ಕೊಲೆ ಕೇಸ್ ಕೊಡಲು ಹೋದರೆ ಕೇಸ್ ಪಡೆದಿಲ್ಲವಂತೆ. 2021 ರಿಂದ ಇದುವರೆಗೂ ಅಲೆದಾಡುವುದೇ ಆಗಿದೆ. ಜಮಖಂಡಿ ನಗರ ಠಾಣೆಯಲ್ಲಿ ನನ್ನ ಗಂಡನ ಸಹೋದರ ಸಂಬಂಧಿ ಯಲ್ಲಪ್ಪ ಭಜಂತ್ರಿ ಎಂಬುವರೇ ಎಎಸ್ ಐ ಆಗಿದ್ದು, ಕೇಸ್ ದಾಖಲಾಗದಂತೆ ಪ್ರಭಾವ ಬೀರುತ್ತಿದ್ದಾರೆ. ನನ್ನ ಗಂಡನ ಸಾವಿನ ಬಗ್ಗೆ ಸಮರ್ಪಕ ತನಿಖೆ ನಡೆಸಿ ನನಗೆ ನ್ಯಾಯ ಕೊಡಿಸಬೇಕು ಅಂತ ಸುರೇಖಾ ಕಣ್ಣೀರಿಡುತ್ತಲೇ ಮನವಿ ಮಾಡಿಕೊಂಡರು.
ಇದೆಲ್ಲದರ ಹೊರತಾಗಿಯೂ… ಇಲ್ಲಿ ಸುರೇಖಾ ಅವರದ್ದು ದುರಂತ ಬದುಕು. ಇವರ ಮದುವೆಯಾಗಿದ್ದು 8 ವರ್ಷದ ವಯಸ್ಸಲ್ಲಿ. ಅದು ತನ್ನ ಸಂಬಂಧಿಯೇ ಆದ ಮಲ್ಲಪ್ಪನ ಜೊತೆಯಾದ ಬಾಲ್ಯ ವಿವಾಹ. ಏನೂ ಅರಿವಿಲ್ಲದ ವೇಳೆ ಮದುವೆ ಮಾಡಿ ಪೋಷಕರು ಮಗಳ ಬಾಳಿಗೆ ಪರೋಕ್ಷವಾಗಿ ಕೊಳ್ಳಿ ಇಟ್ಟಿದ್ದಾರೆ. ಇನ್ನೂ ವಿಪರ್ಯಾಸ ಅಂದರೆ ಈಕೆಯ ವಯಸ್ಸಿಗೆ ಬಂದು ಸಂಸಾರ ಮಾಡೋಕೆ ಗಂಡನ ಮನೆಗೆ ಹೋದಾಗ ಗಂಡ ಮಲ್ಲಪ್ಪ ನಪುಂಸಕ ಅನ್ನೋದು ಮತ್ತೊಂದು ಆಘಾತ!
ಇಷ್ಟಾದರೂ ಮಕ್ಕಳಿಲ್ಲ ಅಂತ ಅತ್ತೆ ಮನೆಯವರು ಕಿರುಕುಳ ಕೊಟ್ಟಿದ್ದಾರೆ. ಇನ್ನು ಗಂಡನಿಗೆ ಕಾಯಿಲೆ ಬಂದು ಮೃತಪಟ್ಟಾಗ ಗಂಡನಿಂದ ಒತ್ತಾಯಪೂರ್ವಕವಾಗಿ ನನಗೆ ಪತ್ನಿ ಮಕ್ಕಳಿಲ್ಲ ಆಸ್ತಿ ನನ್ನ ಸಹೋದರರಿಗೆ ಸೇರಬೇಕು ಎಂದು ಬರೆಸಿಕೊಂಡಿದ್ದಾರಂತೆ. ಗಂಡ ಈ ರೀತಿ ಬರೆದುಕೊಟ್ಟ ಮೇಲೆ ಕೆಲವೇ ದಿನದಲ್ಲಿ ಮೃತಪಟ್ಟಿದ್ದು, ಆಸ್ತಿಗಾಗಿ ನನ್ನ ಗಂಡನ ಕೊಲೆ ಮಾಡಿದ್ದಾರೆ ಎಂಬುದು ಇವರ ಅಭಿಪ್ರಾಯ.
ನನ್ನ ಗಂಡ ಎಂತವನೇ ಆಗಿದ್ದರೂ ನಾನು ನೋಡಿಕೊಳ್ಳುತ್ತಿದ್ದೆ. ಆದರೆ ಆಸ್ತಿಗಾಗಿ ನನ್ನ ಗಂಡನಿಗೆ ಗುಳಿಗೆ ಕೊಟ್ಟು ಕೊಲೆ ಮಾಡಿದ್ದಾರೆ ಅಂತ ಇವರು ಕಣ್ಣೀರು ಹಾಕುತ್ತಿದ್ದಾರೆ. ಇನ್ನು ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯ ಮೊರೆ ಹೋಗಿ ಎಲ್ಲ ವಿವರಿಸಿದ್ದಾರೆ. ಜೊತೆಗೆ ನಮಗೆ ಜಮಖಂಡಿ ನಗರ ಠಾಣೆ ಎಎಸ್ಐ ಯಲ್ಲಪ್ಪ ಭಜಂತ್ರಿ ಹಾಗೂ ಗಂಡನ ಮನೆಯವರಿಂದ ಜೀವಬೆದರಿಕೆಯಿದೆ, ರಕ್ಷಣೆ ನೀಡಿ ಅಂತಾನೂ ಕೇಳಿಕೊಂಡಿದ್ದಾರೆ. ಘಟನೆ ಬಗ್ಗೆ ಪುನಃ ಇನ್ನೊಮ್ಮೆ ವಿಚಾರಣೆ ಮಾಡಲಾಗುವುದು. ಜಮಖಂಡಿ ಗ್ರಾಮೀಣ ಠಾಣೆ ಪೊಲೀಸರಿಗೆ ಈ ಬಗ್ಗೆ ತಿಳಿಸುತ್ತೇನೆ. ಸ್ಥಳೀಯವಾಗಿ ವಿಚಾರಣೆ ನಡೆಸಿ ಮುಂದಿನ ಕ್ರಮ ಕೈಗೊಳ್ಳೋದಾಗಿ ಬಾಗಲಕೋಟೆ ಎಸ್ ಪಿ ಜಯಪ್ರಕಾಶ್ ಹೇಳಿದ್ದಾರೆ.
ಒಟ್ಟಿನಲ್ಲಿ ಜೀವನದಲ್ಲಿ ಆಘಾತದ ಮೇಲೆ ಆಘಾತವನ್ನೇ ಎದುರಿಸುತ್ತಾ ಬಂದ ಮಹಿಳೆಗೆ ಪೊಲೀಸರಿಂದ ಸೂಕ್ತ ನ್ಯಾಯ ಸಿಗಬೇಕಿದೆ. ಘಟನೆ ನಡೆದಾಗಲೇ ಕೊಲೆ ಕೇಸ್ ಪಡೆಯದೆ ನಿರ್ಲಕ್ಷ್ಯ ಮಾಡಿದ ಜಮಖಂಡಿ ಗ್ರಾಮೀಣ ಠಾಣೆ ಪೊಲೀಸರಿಂದ ಇವರಿಗೆ ಎಷ್ಟರಮಟ್ಟಿಗೆ ನ್ಯಾಯ ಸಿಗುತ್ತೊ ನೋಡಬೇಕಿದೆ.
ವರದಿ: ರವಿ ಮೂಕಿ, ಟಿ ವಿ9, ಬಾಗಲಕೋಟೆ
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:46 pm, Thu, 29 December 22