ಬೈಕ್ ಮೇಲೆ ಶಹನಾಯಿ ನುಡಿಸ್ತಾನೆ ಬಾಗಲಕೋಟೆ ಯುವಕ; ಕೂಡಲಸಂಗಮದಿಂದ ದೆಹಲಿಗೆ ಹೋಗುವ ಗುರಿಯೂ ಇದೆ
ಮೌನೇಶ್ ಭಜಂತ್ರಿ ಮೂಲತಃ ವಾದ್ಯ ನುಡಿಸುವ ಕುಟುಂಬಕ್ಕೆ ಸೇರಿದವರು. ಅವರ ಮನೆಯ ಹೆಸರಲ್ಲೇ ಭಜಂತ್ರಿ ಅಂತ ಇರೋದು ಇದಕ್ಕೆ ಸಾಕ್ಷಿ. ಜೊತೆಗೆ ಇವರು ಗೌಂಡಿ ಕೆಲಸ ಮಾಡಿಕೊಂಡು ಕೂಡ ಜೀವನ ನಡೆಸುತ್ತಾರೆ.
ಬಾಗಲಕೋಟೆ: ಬೈಕ್ನ ಕೈ ಬಿಟ್ಟು ಓಡಿಸುವುದು ತುಂಬಾ ಕಷ್ಟ. ಕೆಲವೊಂದಿಷ್ಟು ಜನರು ಅಭ್ಯಾಸದಿಂದ ಕೈ ಬಿಟ್ಟು ಬೈಕ್ ಚಲಾಯಿಸಬಹುದು. ಸ್ವಲ್ಪ ಆಯ ತಪ್ಪಿದರೂ ನೆಲಕ್ಕೆ ಬೀಳೋದು ಖಚಿತ. ನಿರಂತರ ಪ್ರಯತ್ನದ ಮೇರೆಗೆ ಬೈಕ್ ಮೇಲೆ ಅನೇಕ ಸ್ಟಂಟ್ಗಳನ್ನು ಮಾಡ್ತಾರೆ. ಅದು ನೋಡೋದಕ್ಕೆ ರೋಮಾಂಚನವಾಗಿದ್ದರೂ, ಅಷ್ಟೇ ರಿಸ್ಕಿ ಕೂಡಾ ಹೌದು. ಆದರೆ ಬಾಗಲಕೋಟೆ ಜಿಲ್ಲೆಯ ಇಳಕಲ್ ನಗರದ ಯುವಕನೊಬ್ಬ ಬೈಕ್ ಮೇಲೆ ‘ಶಹನಾಯಿ ಸುತಿ’ ನುಡಿಸುವ ಮೂಲಕ ತನ್ನದೇ ಆದ ವಿಭಿನ್ನ ಕಲೆ ಪ್ರದರ್ಶನ ಮಾಡಿ, ಗಮನ ಸೆಳೆದಿದ್ದಾನೆ.
ಇಳಕಲ್ ನಗರದ ಮೌನೇಶ್ ಭಜಂತ್ರಿ ಎಂಬುವವರು ಇಂತಹದ್ದೊಂದು ಸಾಧನೆ ಮಾಡುವ ಮೂಲಕ ಎಲ್ಲರ ಮನ ಹಾಗೂ ಗಮನ ಸೆಳೆದಿದ್ದಾನೆ. ಮೌನೇಶ್ ಭಜಂತ್ರಿ ಬೈಕ್ ಮೇಲೆ ತಮ್ಮ ಮೂಲ ವೃತ್ತಿಯಲ್ಲಿ ಒಂದಾದ ಶಹನಾಯಿ ಸುತಿ ನುಡಿಸೋದನ್ನು ಎಷ್ಟು ಕರಗತ ಮಾಡಿಕೊಂಡಿದ್ದಾನೆ ಅಂದರೆ ಕೈ ಬಿಟ್ಟು ನಿರಾತಂಕವಾಗಿ ನುಡಿಸ್ತಾನೆ. ಬೈಕ್ ಮೇಲೆ ಮಲಗಿಕೊಂಡು, ಪದ್ಮಾಸನ ಹಾಕಿ ಕುಳಿತು ಈತ ಶಹನಾಯಿ ಸುತಿ ನುಡಿಸುತ್ತಿದ್ದರೆ ರಸ್ತೆಯಲ್ಲಿ ಸಂಚರಿಸುವವರು ಒಂದು ಕ್ಷಣ ಗಾಬರಿಯಾಗಿ ನೋಡುತ್ತಾರೆ.
ರವಿಚಂದ್ರನ್ ಚಿತ್ರದ ಹಾಡೆ ಈತನಿಗೆ ಪ್ರೇರಣೆ ಮೌನೇಶ್ ಭಜಂತ್ರಿ ಮೂಲತಃ ವಾದ್ಯ ನುಡಿಸುವ ಕುಟುಂಬಕ್ಕೆ ಸೇರಿದವರು. ಅವರ ಮನೆಯ ಹೆಸರಲ್ಲೇ ಭಜಂತ್ರಿ ಅಂತ ಇರೋದು ಇದಕ್ಕೆ ಸಾಕ್ಷಿ. ಜೊತೆಗೆ ಇವರು ಗೌಂಡಿ ಕೆಲಸ ಮಾಡಿಕೊಂಡು ಕೂಡ ಜೀವನ ನಡೆಸುತ್ತಾರೆ. ಶಹನಾಯಿ ಸುತಿಯನ್ನು ಉಳಿಸಿ ಬೆಳೆಸಬೇಕು ಎಂಬ ಉದ್ದೇಶದಿಂದ ಈ ರೀತಿ ಬೈಕ್ ಮೇಲೆ ಸಾಹಸದ ಮೂಲಕ ಅದರ ಮಹತ್ವ ಸಾರುತ್ತಿದ್ದಾರೆ. ಕೇವಲ ಮೂರನೇ ತರಗತಿ ಓದಿರುವ ಮೌನೇಶ್ ಈಗಾಗಲೇ ನೂರಾರು ಕಡೆ ಬೈಕ್ ಮೇಲೆ ಶಹನಾಯಿ ಸುತಿ ನುಡಿಸಿ ತಮ್ಮ ಕಲೆ ಪ್ರದರ್ಶನ ಮಾಡಿದ್ದಾರೆ. ಇವರು ರವಿಚಂದ್ರನ್ ಅವರ ಪಕ್ಕಾ ಅಭಿಮಾನಿಯಾಗಿದ್ದು, ಈ ಸಾಧನೆಗೆ ರವಿಚಂದ್ರನ್ ಅಭಿನಯದ ಹಠವಾದಿ ಚಿತ್ರದ ಹಠ ಹಠ ಎಂಬ ಹಾಡು ಪ್ರೇರಣೆಯಂತೆ. ಆ ಹಾಡಿನ ಸಾಲಿನಿಂದ ನಾನು ಏನಾದರೂ ಸಾಧಿಸಬೇಕೆಂದು ಪಣ ತೊಟ್ಟ ಮೌನೇಶ್, ಈಗಾಗಲೇ ಇಳಕಲ್ ಭಾಗದಲ್ಲಿ ಬೈಕ್ ಮೇಲೆ ವಿವಿಧ ಸಾಹಸ ಮಾಡಿ ನೂರಾರು ಕಿ.ಮೀ ಕೈ ಬಿಟ್ಟು ಬೈಕ್ ಓಡಿಸಿ ಸಾಧನೆ ಮಾಡಿದ ಈರಣ್ಣ ಕುಂದರಗಿ ಅವರನ್ನು ಭೇಟಿ ಮಾಡ್ತಾರೆ. ಅವರ ಮಾರ್ಗದರ್ಶನದಲ್ಲಿ ಬೈಕ್ ಮೇಲೆ ಶಹನಾಯಿ ಸುತಿ ನುಡಿಸೋದನ್ನು ಕರಗತ ಮಾಡಿಕೊಂಡಿದ್ದಾರೆ ಮೌನೇಶ್.
ಕೂಡಲಸಂಗಮದ ಬಸವಣ್ಣನ ಐಕ್ಯಮಂಟಪದಿಂದ ದೆಹಲಿ ಬಸವಣ್ಣನ ಪುತ್ಥಳಿವರೆಗೂ ಶಹನಾಯಿ ನುಡಿಸುತ್ತಾ ಸಾಗಬೇಕೆಂಬ ಮಹದಾಸೆ ಮೌನೇಶ್ ಭಜಂತ್ರಿ ಈಗಾಗಲೇ ಅನೇಕ ಕಡೆ ತಮ್ಮ ಸಾಹಸ ಪ್ರದರ್ಶನ ಮಾಡಿದ್ದಾರೆ. ಇದರಿಂದ ಅನೇಕ ಪ್ರಶಸ್ತಿಗಳು ಸಿಕ್ಕಿದ್ದು, ಇವರ ಸಾಧನೆ ಮೆಚ್ಚಿ ಅನೇಕರು ಸನ್ಮಾನಿಸಿ ಬೆನ್ನು ತಟ್ಟಿದ್ದಾರೆ. ಆದರೆ ಮೌನೇಶ್ ಅವರು ಈಗ ಮಹಾನ್ ಸಾಧನೆ ಮಾಡಬೇಕೆಂಬ ಕನಸು ಕಟ್ಟಿಕೊಂಡಿದ್ದು ಅದಕ್ಕೆ ತಯಾರಿ ಶುರು ಮಾಡಿಕೊಳ್ಳುತ್ತಿದ್ದಾರೆ. ವಚನಕಾರ ಮಹಾಮಾನವತಾವಾದಿ ಬಸವಣ್ಣನವರು ಐಕ್ಯವಾಗಿದ್ದು, ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಕೂಡಲಸಂಗಮದಲ್ಲಿ. ಬಸವಣ್ಣನ ಕಾಯಕವೇ ಕೈಲಾಸ, ಸಮಾನತೆ ತತ್ವ, ಅವರ ವಚನದಿಂದ ಪ್ರಭಾವಿತನಾಗಿರುವ ಮೌನೇಶ್ ಕೂಡಲಸಂಗಮದಿಂದ ದೆಹಲಿಯಲ್ಲಿರುವ ಬಸವಣ್ಣನ ಪುತ್ಥಳಿವರೆಗೂ ಬೈಕ್ ಮೇಲೆ ಶಹನಾಯಿ ನುಡಿಸುತ್ತಾ ಸಾಗಬೇಕು ಅಂತ ಅಂದುಕೊಂಡಿದ್ದಾರೆ. ಬೈಕ್ಗೆ ದೀಪಗಳ ಅಲಂಕಾರ ಲೈಟಿಂಗ್ ಅಲಂಕಾರ ಮಾಡಿಕೊಂಡು ತೆರಳಲು ತಯಾರಿ ನಡೆಸಿದ್ದಾರೆ.
ಕನಿಷ್ಟ ಐದು ನೈಜ ದೀಪಗಳನ್ನು ಕೂಡಲಸಂಗಮದಿಂದ ದೆಹಲಿವರೆಗೂ ಬೈಕ್ ಮೂಲಕವೇ ಶಹನಾಯಿ ನುಡಿಸುತ್ತಾ ಹೊಗಬೇಕು ಅಂತ ಅಂದುಕೊಂಡಿದ್ದಾರೆ. ಕೂಡಲಸಂಗಮದಿಂದ ಒಯ್ದ ದೀಪಗಳನ್ನು ದೆಹಲಿಯಲ್ಲಿರುವ ಬಸವಣ್ಣನ ಪುತ್ಥಳಿ ಮುಂದೆ ಬೆಳಗಲು ನಿರ್ಧರಿಸಿದ್ದಾರೆ.
ನಾನು ಈಗಾಗಲೇ ಅನೇಕ ಕಡೆ ನನ್ನ ಕಲೆ ಪ್ರದರ್ಶನ ಮಾಡಿದ್ದೇನೆ. ಎಲ್ಲರೂ ಸಾಕಷ್ಟು ಪ್ರೋತ್ಸಾಹ ನೀಡಿ ಬೆನ್ನು ತಟ್ಟಿದ್ದಾರೆ. ಮುಂದೆ ಕೂಡಲಸಂಗಮದಿಂದ ದೆಹಲಿವರೆಗೂ ಬೈಕ್ ಮೇಲೆ ಶಹನಾಯಿ ನುಡಿಸುತ್ತಾ ದೀಪದ ಸಮೇತ ಹೋಗಬೇಕು. ದೆಹಲಿ ಸಂಸತ್ ಭವನದ ಮುಂದಿರುವ ಬಸವಣ್ಣನ ಪುತ್ಥಳಿ ಮುಂದೆ ದೀಪ ಬೆಳಗಬೇಕು ಇದಕ್ಕೆ ತಯಾರಿ, ಸಿದ್ದತೆ ಹೇಗೆಲ್ಲ ಮಾಡಬಹುದು ಎಂದು ಪ್ಲಾನ್ ಮಾಡಿಕೊಳ್ಳುತ್ತಿದ್ದೇನೆ. ಆದಷ್ಟು ಬೇಗ ಈ ಕಾರ್ಯ ಮುಗಿಸುತ್ತೇನೆ ಅಂತ ಮೌನೇಶ್ ಭಜಂತ್ರಿ ಹೇಳಿದ್ದಾರೆ.
ಇದನ್ನೂ ಓದಿ
ಶಿವರಾಜ್ಕುಮಾರ್ ಆಶೀರ್ವಾದ ಪಡೆದ ಮಂಜು ಪಾವಗಡ; ಇಲ್ಲಿವೆ ಫೋಟೋಗಳು
Mehndi Designs: ನಾಗರ ಪಂಚಮಿ ಹಬ್ಬಕ್ಕೆ ನಿಮ್ಮ ಕೈಗಳಿಗೆ ಮೆಹಂದಿ ಹಚ್ಚಿ; ಡಿಫರೆಂಟ್ ಡಿಸೈನ್ ಇಲ್ಲಿವೆ ನೋಡಿ
(Bagalkot young man playing a Shehnai on a bike)