ಬಾಗಲಕೋಟೆ: 5 ಲಕ್ಷ 71 ಸಾವಿರದ ಒಂದು ರೂ.ಗೆ ದೇವರ ತೆಂಗಿನಕಾಯಿ ಹರಾಜು, ಭಕ್ತ ಫುಲ್​ ಖುಷ್​​

ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಚಿಕ್ಕಲಕಿ ಗ್ರಾಮದ ಮಾಳಿಂಗರಾಯ ಜಾತ್ರೆಯಲ್ಲಿ ದೇವರಿಗೆ ಅರ್ಪಿಸಿದ ತೆಂಗಿನಕಾಯಿಯನ್ನ ಹರಾಜು ಪ್ರಕ್ರಿಯೆಯಲ್ಲಿ ವಿಜಯಪುರ ಜಿಲ್ಲೆಯ ಭಕ್ತರೊಬ್ಬರು ಬರೋಬ್ಬರಿ 5,71,001 ರೂ.ಗೆ ಪಡೆದುಕೊಂಡಿದ್ದಾರೆ. ಆ ಮೂಲಕ ಮಾಳಿಂಗರಾಯನ ಮೇಲಿನ ಭಕ್ತಿ ಮೆರೆದಿದ್ದಾರೆ. ಪ್ರತಿ ವರ್ಷದಂತೆ ಈ ವರ್ಷವೂ ಮಾಳಿಂಗರಾಯನ ಜಾತ್ರೆ ಅದ್ದೂರಿಯಾಗಿ ನಡೆಯಿತು.

ಬಾಗಲಕೋಟೆ: 5 ಲಕ್ಷ 71 ಸಾವಿರದ ಒಂದು ರೂ.ಗೆ ದೇವರ ತೆಂಗಿನಕಾಯಿ ಹರಾಜು, ಭಕ್ತ ಫುಲ್​ ಖುಷ್​​
ಹರಾಜಿನಲ್ಲಿ ದೇವರ ತೆಂಗಿನಕಾಯಿ ಪಡೆದುಕೊಂಡ ಮಾಹಾವೀರ ಹರಕೆ
Updated By: ಗಂಗಾಧರ​ ಬ. ಸಾಬೋಜಿ

Updated on: Aug 25, 2025 | 12:47 PM

ಬಾಗಲಕೋಟೆ, ಆಗಸ್ಟ್​ 25: ಎಲ್ಲೆಡೆ ದೇವರಲ್ಲಿ ಭಕ್ತಿ, ಸಂಪ್ರದಾಯಕ್ಕೆ ಇಂದಿಗೂ ಮಾನ್ಯತೆ ಇದೆ. ಕಾಲ ಎಷ್ಟೇ ಬದಲಾದರೂ ದೇವರ ಮೇಲಿನ ಭಕ್ತಿ, ನಂಬಿಕೆ ಮಾತ್ರ ಬದಲಾಗುವುದಿಲ್ಲ. ದೇವರ ಭಕ್ತಿ ಮುಂದೆ ನಗ ನಾಣ್ಯ ಕೂಡ ನಗಣ್ಯ. ಇದಕ್ಕೆ ಬಾಗಲಕೋಟೆ (Bagalkote) ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಚಿಕ್ಕಲಕಿ ಗ್ರಾಮದಲ್ಲಿ ನಡೆದ ಅದೊಂದು ಘಟನೆ ಸಾಕ್ಷಿ ಆಗಿದೆ. ದೇವರಿಗೆ ಅರ್ಪಿಸಿದ್ದ ತೆಂಗಿನಕಾಯಿಯನ್ನು ಓರ್ವ ಭಕ್ತ (devotees)  ಹರಾಜಿನಲ್ಲಿ ಬರೋಬ್ಬರಿ 5,71,001 ರೂ ಬೆಲೆಗೆ ತಮ್ಮದಾಗಿಸಿಕೊಂಡಿದ್ದಾರೆ.

ತೆಂಗಿನಕಾಯಿಗೆ ಅಷ್ಟೊಂದು ಬೆಲೆ ಕೊಟ್ಟಿದ್ದು ಯಾಕೆ?

ಚಿಕ್ಕಲಕಿ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಮಾಳಿಂಗರಾಯನ ಜಾತ್ರೆ ಅದ್ದೂರಿಯಾಗಿ ನಡೆಯಿತು. ಶ್ರಾವಣ ಮಾಸದ ಒಂದು ತಿಂಗಳ ವಿವಿಧ ಆಚರಣೆ ನಂತರ ಕೊನೆಯಲ್ಲಿ ಜಾತ್ರೆ ನಡೆಯುತ್ತದೆ. ಪ್ರತಿ ವರ್ಷದಂತೆ ಈ ವರ್ಷವೂ ಜಾತ್ರೆ ಅದ್ದೂರಿಯಾಗಿ ನಡೆಯಿತು. ಜಾತ್ರೆ ಮುಗಿಯುವ ಹಂತದಲ್ಲಿ ದೇವರ ಮೇಲಿನ ಹಾಗೂ ಗದ್ದುಗೆ ಮೇಲಿನ ವಸ್ತುಗಳನ್ನು ಹರಾಜು ಮಾಡುವ ಸಂಪ್ರದಾಯವಿದೆ.

ಇದನ್ನೂ ಓದಿ: ಜಾತಿ ಭೇದಭಾವವಿಲ್ಲದೆ ಎಲ್ಲರೂ ಒಂದಾಗಿ ಆಚರಿಸುವ ಕಿಚಡಿ ಜಾತ್ರೆಯ ಫೋಟೋಸ್​ ನೋಡಿ

ಅದರಂತೆಯೇ ಮಾಳಿಂಗರಾಯರ ಗದ್ದುಗೆ ಮೇಲೆ ಪೂಜಿಸುವ ತೆಂಗಿನಕಾಯಿಗೆ ಬಾರಿ ಮಹತ್ವವಿದೆ. ಅದು ಅಂತಿಂತಹ ತೆಂಗಿನಕಾಯಿ ಅಲ್ಲ. ದೇವರಿಗೆ ಅರ್ಪಿಸಿದ ತೆಂಗಿನಕಾಯಿ. ಅದಕ್ಕೆ ಬೆಲೆ ಕಟ್ಟುವುದಕ್ಕೆ ಸಾಧ್ಯವಿಲ್ಲ ಎಂಬುದು ಭಕ್ತರ ನಂಬಿಕೆ.

ಆ ಪ್ರಕಾರ ಹರಾಜು ಪ್ರಕ್ರಿಯೆ ಆರಂಭವಾಗಿತ್ತು. ಮಾಳಿಂಗರಾಯನ ಗದ್ದುಗೆ ತೆಂಗಿನಕಾಯಿ ಹರಾಜು ನಡೆದಿತ್ತು. ತೆಂಗಿನಕಾಯಿ ಹರಾಜು 100, 200, ಸಾವಿರ ರೂ, ಅಂತೆ ಸಾಗಿ ಕೊನೆಗೆ ತಲುಪಿದ್ದು ಬರೋಬ್ಬರಿ 5,71,001 ರೂ. ಆ ಮೂಲಕ ವಿಜಯಪುರ ಜಿಲ್ಲೆಯ ತಿಕೋಟಾ ಗ್ರಾಮದ ಮಾಹಾವೀರ ಹರಕೆ ಎಂಬ ಭಕ್ತರ ಪಾಲಾಗಿದೆ.

ಇದನ್ನೂ ಓದಿ: ಗೊಬ್ಬರ ಅಭಾವ ನಡುವೆ ರೈತರಿಗೆ ಮತ್ತೊಂದು ಆಘಾತ: ಯೂರಿಯಾ ಜತೆ ನ್ಯಾನೋ ಡಿಎಪಿ ಖರೀದಿ ಕಡ್ಡಾಯ

ಇನ್ನು ಹರಾಜಿನಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿತ್ತು. ಮಾಹಾವೀರ ಹರಕೆ ಸೇರಿದಂತೆ ಚಿಕ್ಕಲಕಿ ಗ್ರಾಮದ ಮುದುಕಪ್ಪ ಪಟೇದ್ದಾರ, ಗೋಠೆ ಗ್ರಾಮದ ಸದಾಶಿವ ಮೈಗೂರ ಮಧ್ಯೆ ಸ್ಪರ್ಧೆ ಏರ್ಪಟ್ಟಿತ್ತು. ಕೊನೆಗೆ ಮಹಾವೀರ ತೆಂಗಿನಕಾಯಿ ತಮ್ಮದಾಗಿಸಿಕೊಂಡರು. ಹಿಂದೊಮ್ಮೆ‌ಇದೇ ಮಹಾವೀರ ಹರಾಜಿನಲ್ಲಿ 6,50,001 ರೂ.ಗೆ ತೆಂಗಿನಕಾಯಿ ಪಡೆದಿದ್ದರು.

ಮಾಹಾವೀರ ಹರಕೆ ಹೇಳಿದ್ದಿಷ್ಟು 

ಇದು ನಮಗೆ ದೇವರ ಮೇಲಿರುವ ಭಕ್ತಿ ಹಾಗೂ ನಂಬಿಕೆ. ಮಾಳಿಂಗರಾಯನ ಕೃಪೆಯಿಂದ ನಮಗೆ ಒಳಿತಾಗಿದೆ. ನಮಗೆ ಮಾಳಿಂಗರಾಯ ಸಂಪತ್ತು ಸಮೃದ್ದಿ ನೀಡಿದ್ದಾನೆ. ಹಿಂದೊಮ್ಮೆ ನಾನೇ ಹೆಚ್ಚು ಹರಾಜು ಕೂಗಿ ಪಡೆದಿದ್ದೆ ಈಗ ಮತ್ತೆ ನನಗೆ ದೇವರ ತೆಂಗಿನಕಾಯಿ ಸಿಕ್ಕಿದ್ದು ನನ್ನ ಪುಣ್ಯ ಎಂದು ಮಾಹಾವೀರ ಹರಕೆ ಹೇಳಿದ್ದಾರೆ.

ಮಾಳಿಂಗರಾಯ ಎಂದೂ ಕೈ ಬಿಡುವುದಿಲ್ಲ: ಗುರೂಜಿ ಮುತ್ಯಾ ಬಬಲಾದಿ

ಮಠದ ಗುರೂಜಿ ಮುತ್ಯಾ ಬಬಲಾದಿ ಅವರು ಮಾತಾಡಿ, ಇದು ಭಕ್ತರ ನಂಬಿಕೆ. ಹರಾಜಿನಲ್ಲಿ ದೇವರ ತೆಂಗಿನಕಾಯಿ ‌ಲಭಿಸುವುದು ಒಂದು ಸೌಭಾಗ್ಯ. ಅದನ್ನು ಪಡೆದವರನ್ನು ಮಾಳಿಂಗರಾಯ ಎಂದೂ ಕೈ ಬಿಡುವುದಿಲ್ಲ. ಆದ್ದರಿಂದ ಭಕ್ತರು ಲಕ್ಷಾಂತರ ರೂ ಹರಾಜು ಕೂಗಿ ಅದನ್ನು ಪಡೆಯುತ್ತಾರೆ. ಮಾಳಿಂಗರಾಯ ಎಲ್ಲರಿಗೂ ಸುಖ ಶಾಂತಿ ನೀಡಲಿ ಎಂದರು. ಒಟ್ಟಾರೆ ಎಲ್ಲವೂ ದೇವರ ಮೇಲಿನ ನಂಬಿಕೆಯಾಗಿದ್ದು, ಗದ್ದುಗೆ ತೆಂಗಿನಕಾಯಿ ಭಕ್ತರ‌ ಭಕ್ತಿಗೆ ಸಾಕ್ಷಿಯಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.