- Kannada News Photo gallery Unity in Diversity Khichdi Festival in Bagalkot district Benakatti Village
ಜಾತಿ ಭೇದಭಾವವಿಲ್ಲದೆ ಎಲ್ಲರೂ ಒಂದಾಗಿ ಆಚರಿಸುವ ಕಿಚಡಿ ಜಾತ್ರೆಯ ಫೋಟೋಸ್ ನೋಡಿ
ಇದು ಆಧುನಿಕ ಕಾಲ, ಆಧುನಿಕತೆ ಭರಾಟೆಯಲ್ಲಿ ನಮ್ಮ ಸಂಪ್ರದಾಯ ಸಂಸ್ಕೃತಿಗಳು ಮರೆಯಾಗುತ್ತಿವೆ. ಆದರೆ ಇಂತ ಸಮಯದಲ್ಲೂ ಬಾಗಲಕೋಟೆ ಜಿಲ್ಲೆಯ ಆ ಊರಿನಲ್ಲಿ ಮಾತ್ರ ಇಂದಿಗೂ ಅದೊಂದು ಜಾತ್ರೆಯನ್ನು ನೂರಾರು ವರ್ಷಗಳಿಂದ ತಪ್ಪದೆ ಆಚರಿಸಲಾಗುತ್ತಿದೆ. ಇಡೀ ಊರನ್ನೇ ಒಂದುಗೂಡಿಸುವ ಕಿಚಡಿ ಜಾತ್ರೆ ಒಗ್ಗಟ್ಟಿನ ಮಂತ್ರವಾಗಿದೆ. ದೇವರ ಮೇಲಿನ ಪ್ರಮುಖ ನಂಬಿಕೆಯಾಗಿದೆ.
Updated on: Jul 12, 2025 | 10:01 PM

ಇದು ಆಧುನಿಕ ಕಾಲ, ಆಧುನಿಕತೆ ಭರಾಟೆಯಲ್ಲಿ ನಮ್ಮ ಸಂಪ್ರದಾಯ ಸಂಸ್ಕೃತಿಗಳು ಮರೆಯಾಗುತ್ತಿವೆ. ಆದರೆ ಇಂತ ಸಮಯದಲ್ಲೂ ಬಾಗಲಕೋಟೆ ಜಿಲ್ಲೆಯ ಆ ಊರಿನಲ್ಲಿ ಮಾತ್ರ ಇಂದಿಗೂ ಅದೊಂದು ಜಾತ್ರೆಯನ್ನು ನೂರಾರು ವರ್ಷಗಳಿಂದ ತಪ್ಪದೆ ಆಚರಿಸಲಾಗುತ್ತಿದೆ. ಇಡೀ ಊರನ್ನೇ ಒಂದುಗೂಡಿಸುವ ಕಿಚಡಿ ಜಾತ್ರೆ ಒಗ್ಗಟ್ಟಿನ ಮಂತ್ರವಾಗಿದೆ. ದೇವರ ಮೇಲಿನ ಪ್ರಮುಖ ನಂಬಿಕೆಯಾಗಿದೆ.

ಬಾಗಲಕೋಟೆ ಜಿಲ್ಲೆಯ ಬಾಗಲಕೋಟೆ ತಾಲೂಕಿನ ಬೆನಕಟ್ಟಿ ಗ್ರಾಮ ಕೃಷಿಗೆ ಹೆಸರಾದ ಗ್ರಾಮವಾಗಿದೆ. ಕೃಷಿಕ ಕುಟುಂಬದವರೇ ಹೆಚ್ಚಾಗಿರುವ ಈ ಗ್ರಾಮದಲ್ಲಿ ಇಂದಿಗೂ ಸಂಪ್ರದಾಯ, ಸಂಸ್ಕೃತಿ ಉಳಿದುಕೊಂಡಿದೆ. ಈ ಗ್ರಾಮದಲ್ಲಿ ಪ್ರತಿ ವರ್ಷ ಆಷಾಢ ಮಾಸದಲ್ಲಿ ಕಿಚಡಿ ಜಾತ್ರೆ ಮಾಡಲಾಗುತ್ತದೆ. ಈ ಜಾತ್ರೆ ದಿನ ಪ್ರತಿಯೊಬ್ಬರ ಮನೆಯಲ್ಲೂ ಸಂಭ್ರಮ ಇರುತ್ತದೆ. ಪ್ರತಿಯೊಂದು ಮನೆಯ ಒಲೆ ಮೇಲೆ ಕಿಚಡಿ ಬೇಯುತ್ತಿರುತ್ತದೆ. ಮಹಿಳೆಯರು ಮಡಿಯಿಂದ ಕಿಚಡಿಯನ್ನು ತಯಾರು ಮಾಡುತ್ತಾರೆ.

ಬಳಿಕ, ಮನೆಯ ಪುರುಷರು ತಲೆ ಮೇಲೆ ಕಂಬಳಿ ಹಾಕಿಕೊಂಡು, ಕಿಚಡಿಯನ್ನು ಹೊತ್ತುಕೊಂಡು ಎರಡು ಕಿಮೀ ನಡೆದುಕೊಂಡು ಊರು ಹೊರಗೆ ಇರುವ ಕಂಚಿ ವೆಂಕಟೇಶ್ವರ ದೇವಸ್ಥಾನಕ್ಕೆ ಬರುತ್ತಾರೆ. ದೇವರಿಗೆ ಕಿಚಡಿಯನ್ನು ನೈವೇದ್ಯ ಮಾಡುತ್ತಾರೆ. ಅದನ್ನು ದೇವಸ್ಥಾನ ಮುಂದೆ ಇಟ್ಟು ಎಲ್ಲರಿಗೂ ಹಂಚಿ ಪ್ರಸಾದದ ರೀತಿ ಸೇವನೆ ಮಾಡಿ ವೆಂಕಟೇಶ್ವರನ ಕೃಪೆಗೆ ಪಾತ್ರರಾಗುತ್ತಾರೆ.

ಬೆನಕಟ್ಟಿ ಗ್ರಾಮದಲ್ಲಿ ಬೆಳೆಯುವ ಈರುಳ್ಳಿ, ಕಡಲೆ ತೊಗರಿಗೆ ಎಲ್ಲಿಲ್ಲದ ಬೇಡಿಕೆಯಿದೆ. ನಿರಂತರ ಕೃಷಿ ಕಾರ್ಯದಲ್ಲಿ ತೊಡಗುವ ಈ ಗ್ರಾಮಸ್ಥರು ಕೃಷಿ ಜೊತೆಗೆ ಸಂಪ್ರದಾಯವನ್ನು ಮಾತ್ರ ಇಂದಿಗೂ ಮರೆತಿಲ್ಲ. ಕಿಚಡಿ ಜಾತ್ರೆ ಕೇವಲ ಈ ಗ್ರಾಮದ ಸಂಪ್ರದಾಯ ಸಂಸ್ಕೃತಿಯಲ್ಲ. ಅದು ಈ ಗ್ರಾಮದ ಏಕತೆಗೆ ಸಾಕ್ಷಿಯಾಗಿದೆ. ಆಷಾಢ ಪರ್ವದ ದಿನ ಮಾಡುವ ಈ ಕಿಚಡಿ ಇಡೀ ಗ್ರಾಮಸ್ಥರನ್ನು ದ್ವೇಷ ಅಸೂಯೆ ಮೀರಿ ಒಂದಾಗಿಸುತ್ತದೆ.

ಇಡೀ ಊರಿನ ಜನರೇ ಕಿಚಡಿಯನ್ನು ಮಾಡಿ ಬುಟ್ಟಿಯಲ್ಲಿ ಹೊತ್ತು ವೆಂಕಟೇಶ್ವರನ ಸನ್ನಿಧಿಗೆ ತರುತ್ತಾರೆ. ನಂತರ ಅದನ್ನು ನೈವೇದ್ಯ ಮಾಡಿ, ಮಳೆ, ಬೆಳೆ ಚೆನ್ನಾಗಿ ಆಗಲಿ, ಎಲ್ಲರಿಗೂ ಸುಖ ಸಮೃದ್ಧಿ ನೀಡು ದೇವರೆ ಎಂದು ಬೇಡಿಕೊಳ್ಳುತ್ತಾರೆ. ನಂತರ ಅದನ್ನು ದೇವಸ್ಥಾನದ ಮುಂದೆ ಸುರಿದು ಅದಕ್ಕೆ ಕೊಬ್ಬರಿ ಹಾಗೂ ಬೆಲ್ಲ ಕೂಡಿಸುತ್ತಾರೆ.

ಊರಿನ ಎಲ್ಲ ಜನರು ತಮ್ಮ ತಮ್ಮ ಮನೆಯಲ್ಲಿ ಮಾಡಿದ ಕಿಚಡಿಯನ್ನು ಮಿಶ್ರಣ ಮಾಡುತ್ತಾರೆ. ಎಲ್ಲವನ್ನು ಕಲಕುತ್ತಾರೆ ಈ ಮೂಲಕ ಜಾತಿ ಭೇದ ಭಾವವಿಲ್ಲದೆ ಎಲ್ಲರೂ ಒಂದೇ ಎಂಬ ಸಂದೇಶ ಸಾರುತ್ತಾರೆ. ನಂತರ ಆ ಪ್ರಸಾದದ ರೂಪದ ಕಿಚಡಿಯನ್ನು ಎಲ್ಲರೂ ಸಾಮೂಹಿಕವಾಗಿ ಸೇವನೆ ಮಾಡುತ್ತಾರೆ.

ಒಟ್ಟಿನಲ್ಲಿ ಕಾಲ ಎಷ್ಟೇ ವೇಗವಾಗಿದ್ದರೂ ಪೂರ್ವಜರ ಸಂಪ್ರದಾಯ ಇಂದಿಗೂ ಈ ಹಳ್ಳಿಯಲ್ಲಿ ಜೀವಂತವಾಗಿದೆ. ಇದಕ್ಕೆ ಈ ಕಿಚಡಿ ಜಾತ್ರೆಯೇ ಸಾಕ್ಷಿಯಾಗಿದ್ದು ಊರ ಏಕತೆಗೆ ಸಾಕ್ಷಿಯಾಗಿದೆ.




