ಬಾಗಲಕೋಟೆ: ಗಂಡ ನಾಪತ್ತೆ, ಮಾನಸಿಕ ಸ್ಥಿಮಿತ ಕಳೆದುಕೊಂಡ ಪತ್ನಿ, ದನದ ಕೊಟ್ಟಿಗೆಯಲ್ಲಿ ಕಟ್ಟಿಹಾಕಿದ ಪೋಷಕರು

ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲ್ಲೂಕಿನ ವಡಗೇರಿ ಗ್ರಾಮದಲ್ಲಿ ಮಹಿಳೆಯ ಕರುಣಾಜನಕ‌ ಕಥೆಯೊಂದು ಕಂಡುಬಂದಿದೆ. ಮದುವೆಯಾಗಿ ಎರಡೇ ತಿಂಗಳಿಗೆ ಪತಿ ನಾಪತ್ತೆಯಾಗಿದ್ದು, ಪತ್ನಿ ಆ ಶಾಕ್​ನಿಂದ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ಹೀಗಾಗಿ ಸತಃ ಆಕೆಯ ಪೋಷಕರೇ ತನ್ನ ಮಗಳನ್ನು ಏಳು ವರ್ಷಗಳಿಂದ ಗೃಹಬಂಧನದಲ್ಲಿರಿಸಿದ್ದಾರೆ.

ಬಾಗಲಕೋಟೆ: ಗಂಡ ನಾಪತ್ತೆ, ಮಾನಸಿಕ ಸ್ಥಿಮಿತ ಕಳೆದುಕೊಂಡ ಪತ್ನಿ, ದನದ ಕೊಟ್ಟಿಗೆಯಲ್ಲಿ ಕಟ್ಟಿಹಾಕಿದ ಪೋಷಕರು
ಶಂಕ್ರವ್ವ ಸೇಬಿನಕಟ್ಟಿ
Updated By: ಗಂಗಾಧರ​ ಬ. ಸಾಬೋಜಿ

Updated on: May 22, 2025 | 7:46 AM

ಬಾಗಲಕೋಟೆ, ಮೇ 22: ಪ್ರತಿಯೊಬ್ಬರ ಜೀವನದಲ್ಲಿ ಮದುವೆ, ಗಂಡ (Husband) ಮತ್ತು ಮಕ್ಕಳು ಬಹಳ ಪ್ರಮುಖವಾದ ಪಾತ್ರವಹಿಸುತ್ತದೆ. ನೂರಾರು ಸುಂದರ ಕನಸುಗಳನ್ನು ಕಂಡು ಹಲವರು ಮದುವೆಯಾಗತ್ತಾರೆ. ಹೆಂಡತಿಗೆ (wife) ಗಂಡನೇ ಎಲ್ಲಾ, ಆತನೇ ಪ್ರಪಂಚ. ಹೀಗಿರುವಾಗ ಇದ್ದಕ್ಕಿದ್ದ ಹಾಗೆ ಆತ ನಾಪತ್ತೆ ಆದರೆ ಹೆಂಡತಿಯ ಗತಿಯೇನು? ಇಂತಹದ್ದೆ ಒಂದು ಘಟನೆ ಇದೀಗ ಜಿಲ್ಲೆಯಲ್ಲಿ ನಡೆದಿದೆ.  ಮದುವೆಯಾಗಿ ಕೇವಲ ಎರಡು ತಿಂಗಳಿಗೆ ಮನೆಯಿಂದ ಹೋದ ಆಕೆಯ ಗಂಡ ತಿರುಗಿ ಬರಲೇ ಇಲ್ಲ. ಗಂಡ ನಾಪತ್ತೆಯಿಂದ ಶಾಕ್‌ಗೆ ಒಳಗಾಗಿರುವ ಪತ್ನಿ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ಪರಿಣಾಮ ಅವರನ್ನು  ಬರೊಬ್ಬರಿ ಏಳು ವರ್ಷದಿಂದ ದನದ ಕೊಟ್ಟಿಗೆಯಲ್ಲಿ ಹಗ್ಗ ಕಟ್ಟಿ ಗೃಹಬಂಧನದಲ್ಲಿ ಇರಿಸಲಾಗಿದೆ. ಸದ್ಯ ಯುವತಿಯ ಸ್ಥಿತಿ ನೋಡಿದರೆ ಎಂತವರ ಕಣ್ಣಲ್ಲೂ ನೀರು ತರಿಸುತ್ತಿದೆ.

ಈ ಘಟನೆ ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲ್ಲೂಕಿನ ವಡಗೇರಿ ಗ್ರಾಮದಲ್ಲಿ ಕಂಡುಬಂದಿದೆ. ಮಹಿಳೆಯ ಸ್ಥಿತಿ ನೋಡಿದರೆ ಎಂತವರ ಮನ ಕಲುಕುತ್ತದೆ. ಅಯ್ಯೋ ಪಾಪ ಎಂದು ಎಲ್ಲರೂ ‌ಮರುಗುತ್ತಾರೆ. ಆ ಮಹಿಳೆಯ ಹೆಸರು ಶಂಕ್ರವ್ವ ಸೇಬಿನಕಟ್ಟಿ (26). ಕಳೆದ ಏಳು ವರ್ಷದಿಂದ ಈಕೆಯನ್ನು ಗೃಹಬಂಧನದಲ್ಲಿ ಇಡಲಾಗಿದೆ. ಈಕೆಯ ಈ ಸ್ಥಿತಿಗೆ ಕಾರಣ ಪತಿ ನಾಪತ್ತೆಯಾಗಿರುವುದು.

ಮದುವೆಯಾಗಿ ಎರಡೇ ತಿಂಗಳಿಗೆ ಮನೆಬಿಟ್ಟು ಹೋದ ಗಂಡ

ವಡಗೇರಿ ಗ್ರಾಮದ ಶಂಕ್ರವ್ವ ಹಾಗೂ ಗೂಡೂರು ಗ್ರಾಮದ ಪಿಡ್ಡಪ್ಪರ ಮದುವೆ 2018 ಫೆಬ್ರುವರಿ 14 ಪ್ರೇಮಿಗಳ ದಿನದಂದು ನಡೆದಿತ್ತು. ನವಜೋಡಿಗಳು ಸಂಭ್ರಮದಿಂದ ಸುಂದರ ಸಂಸಾರಕ್ಕೆ ಕಾಲಿಟ್ಟಿದ್ದರು. ಆದರೆ‌ ಮದುವೆಯಾದ ಎರಡು ತಿಂಗಳ ನಂತರ ಅದೊಂದು ದಿನ ಬೆಳಿಗ್ಗೆ ಮನೆಯಿಂದ ಹೋದ ಪಿಡ್ಡಪ್ಪ ಇಂದಿಗೂ ವಾಪಸ್ ಬಂದಿಲ್ಲ. ಬದುಕಿದ್ದಾರಾ ಅಥವಾ ಮೃತಪಟ್ಟಿದ್ದಾರಾ ಅನ್ನೋದು ಗೊತ್ತಿಲ್ಲ. ಯಾವಾಗ ಗಂಡ ವಾಪಸ್ ಬರಲಿಲ್ಲವೊ, ಗಂಡನ ಮೇಲೆ ಅಪಾರ ಪ್ರೀತಿ ಇಟ್ಕೊಂಡಿದ್ದ ಶಂಕ್ರವ್ವ ಶಾಕ್​ಗೆ ಒಳಗಾಗಿದ್ದಾರೆ. ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ಏಳು ವರ್ಷದಿಂದ ಮಾನಸಿಕತೆಯಿಂದ ಬಳಲುತ್ತಿದ್ದಾರೆ.

ಇದನ್ನೂ ಓದಿ
ಕಾಂಗ್ರೆಸ್ ಸರ್ಕಾರದ ಸಾಧನಾ ಸಮಾವೇಶಕ್ಕೆ ಬಸ್​ ಬುಕ್​: ನಾಳೆ ಸಂಚಾರ ವ್ಯತ್ಯಯ
ವರನಿಗೆ ಹೃದಯಾಘಾತ, ತಾಳಿ ಕಟ್ಟಿಸಿಕೊಂಡ 15 ನಿಮಿಷದಲ್ಲೇ ವಿಧವೆಯಾದ ನವವಧು
ತಾಳಿ ಕಟ್ಟಿದ ಕೆಲವೇ ಕ್ಷಣದಲ್ಲಿ ಮದುಮಗ ಸಾವು: ಅಸಲಿಗೆ ಆಗಿದ್ದೇನು?
ಬಾಗಲಕೋಟೆ: ತಾಳಿ ಕಟ್ಟಿದ ಕೆಲವೇ ಕ್ಷಣದಲ್ಲಿ ವರ ಹೃದಯಾಘಾತದಿಂದ ಸಾವು

ಇದನ್ನೂ ಓದಿ: ಬಾಗಲಕೋಟೆ: ಕಲ್ಯಾಣಮಂಟಪದಲ್ಲೇ ವರನಿಗೆ ಹೃದಯಾಘಾತ, ತಾಳಿ ಕಟ್ಟಿಸಿಕೊಂಡ 15 ನಿಮಿಷದಲ್ಲೇ ವಿಧವೆಯಾದ ನವವಧು

ನಿತ್ಯ ತನ್ನ ತಾಯಿ ಮೇಲೆ‌ ಹಲ್ಲೆ ಮಾಡುವುದು, ಊರಲ್ಲಿ ಬಿಟ್ಟರೆ ಎಲ್ಲೆಂದರಲ್ಲಿ ಹೋಗುವುದು, ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸುತ್ತಿದ್ದಾರೆ. ಇದರಿಂದ ಅನಿವಾರ್ಯವಾಗಿ ಈಕೆಯನ್ನು ದನದ ಕೊಟ್ಟಿಗೆಯಲ್ಲಿ ಹಗ್ಗದಿಂದ ಎರಡು ಕೈಕಟ್ಟಿ ಗೃಹಬಂಧನದಲ್ಲಿ ಇರಿಸಲಾಗಿದೆ. ಮಗಳನ್ನು ಯಾರಾದರೂ ಈ ರೀತಿ ಕಟ್ಟುತ್ತಾರಾ ಎಂದು ಕೇಳಿದರೆ, ಏನು ಮಾಡುವುದು ಬಿಟ್ಟರೆ ನನ್ನ ಮೇಲೆ‌ ಹಲ್ಲೆ ಮಾಡುತ್ತಾಳೆ. ಬಾವಿಗೆ ಹಾರುವುದಕ್ಕೆ ಹೋಗುತ್ತಾಳೆ. ಏನು ಮಾಡುವುದು. ಅದಕ್ಕಾಗಿ ಇದು ಅನಿವಾರ್ಯ ಅಂತ ತಾಯಿ ದೇವಕ್ಕ ಕಣ್ಣೀರು ಹಾಕುತ್ತಾರೆ.

ಶಂಕ್ರವ್ವಳ ತಂದೆ-ತಾಯಿ ಸೇರಿದಂತೆ ಇಡೀ ಕುಟುಂಬಸ್ಥರು ಬೆಂಗಳೂರಲ್ಲಿ ಮನೆ ಕಟ್ಟುವ ಕೆಲಸದಲ್ಲಿದ್ದರು. 2018 ರಲ್ಲಿ ಮಗಳ‌ ಮದುವೆ ನಂತರ ಪಿಡ್ಡಪ್ಪ ಹಾಗೂ ಮಗಳು ಕೂಡ ಬೆಂಗಳೂರಿಗೆ ಕಟ್ಟಡ ಕೆಲಸಕ್ಕೆ ಹೋಗಿದ್ದರು. ಆದರೆ ಶಂಕ್ರವ್ವ ತಂದೆ ತಾಯಿ ಹೆಚ್​​ಎಸ್​ಆರ್ ಲೇಔಟ್​ನಲ್ಲಿ ಇದ್ದರೆ, ಮಗಳು ಅಳಿಯ ಕಸಬನಹಳ್ಳಿಯಲ್ಲಿದ್ದರು. ಬೆಂಗಳೂರಲ್ಲಿದ್ದಾಗಲೇ ಪಿಡ್ಡಪ್ಪ ನಾಪತ್ತೆಯಾಗಿದ್ದಾನೆ. ಈ ಬಗ್ಗೆ ಬೆಂಗಳೂರಿನ ಬೆಳ್ಳಂದೂರು ಠಾಣೆಯಲ್ಲಿ ದೂರು ದಾಖಲಾಗಿದೆ.

ಶಂಕ್ರವ್ವ ಹಾಗೂ ಪಿಡ್ಡಪ್ಪ ಕುಟುಂಬಸ್ಥರು ಎಲ್ಲಾ ಕಡೆ ಹುಡುಕಾಡಿದರೂ ಪಿಡ್ಡಪ್ಪ ಮಾತ್ರ ಸಿಕ್ಕಿಲ್ಲ. ಮೊದಲು ಲಾರಿ ಓಡಿಸುತ್ತಿದ್ದ ಪಿಡ್ಡಪ್ಪ ಬೇರೆ ಬೇರೆ ರಾಜ್ಯಗಳಿಗೆ ಹೋಗುತ್ತಿದ್ದರು. ಹೀಗಾಗಿ ಆರು ತಿಂಗಳು, ಇಲ್ಲಾ ವರ್ಷಗಳಂತೆ ಬರುತ್ತಿರಲಿಲ್ಲವಂತೆ. ಆದರೆ 2018 ರಲ್ಲಿ ಮದುವೆಯಾಗಿ ಎರಡೇ ತಿಂಗಳಕ್ಕೆ ನಾಪತ್ತೆಯಾದವ ಇಂದಿಗೂ ಸುಳಿವಿಲ್ಲ. ಇತ್ತ ಮನೆಯಲ್ಲಿ ಪತ್ನಿ ಗೃಹಬಂಧನದಲ್ಲಿ ಬಳಲುತ್ತಿದ್ದಾಳೆ. ಮಗಳ ಸ್ಥಿತಿ ಕಂಡು ತಾಯಿ ನಿತ್ಯ ಕಣ್ಣೀರು ಹಾಕ್ತಿದ್ದಾರೆ.

ಒಲ್ಲದ ಮನಸ್ಸಿನಿಂದಲೇ ಮಗಳನ್ನು ಕಟ್ಟಿಹಾಕಿದ ಪೋಷಕರು

ಗುಣಮುಖ ಆಗಲಿ ಅಂತ‌ ನಿಮ್ಹಾನ್ಸ್​ಗೆ ತೋರಿಸಿದ್ದಾರೆ. ಹತ್ತಾರು ದೇವರಿಗೆ ಹರಕೆ ಹೊತ್ತಿದ್ದಾರೆ. ಆದರೆ ಮಗಳು ಮಾತ್ರ ಗುಣಮುಖವಾಗಿಲ್ಲ. ನಿತ್ಯ ಕೂಲಿ ಮಾಡದೆ ಇವರಿಗೆ ಗತಿಯಿಲ್ಲ. ಮಗಳನ್ನು ಬಿಟ್ಟು ಹೋಗುವ ಹಾಗಿಲ್ಲ, ಇದರಿಂದ ಇವರು ಒಲ್ಲದ ಮನಸ್ಸಿನಿಂದಲೇ ಮಗಳನ್ನು ಕಟ್ಟಿ ಹಾಕಬೇಕಾಗಿದೆ. ಮೇಲಾಗಿ ಗಂಡನ ಮನೆಯವರು ನಮ್ಮ ಮಗ ನಾಪತ್ತೆಯಾಗಲು ಇವರೇ ಕಾರಣ ಅಂತಿದ್ದಾರಂತೆ. ಇವರ ಸ್ಥಿತಿ ಕಂಡು ನೆರೆಹೊರೆಯವರು ಕೂಡ ಮರುಗುತ್ತಿದ್ದು, ಸರಕಾರ, ಸಂಘ ಸಂಸ್ಥೆಗಳು ಇವರಿಗೆ ಸಹಾಯ ಮಾಡಬೇಕು. ಮಾನಸಿಕ ವೈದ್ಯರು ಇವಳಿಗೆ ಚಿಕಿತ್ಸೆಗೆ ಆಸರೆಯಾಗಬೇಕು. ಅವಳು ಸಹಜ ಜೀವನಕ್ಕೆ ಮರಳುವಂತೆ ಸ್ಥಳೀಯರಾದ ಶ್ರೀಕಾಂತ್ ಮತ್ತು ರತ್ನವ್ವ ಎಂಬುವವರು ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಬಾಗಲಕೋಟೆ: ತಾಳಿ ಕಟ್ಟಿದ ಕೆಲವೇ ಕ್ಷಣದಲ್ಲಿ ವರ ಹೃದಯಾಘಾತದಿಂದ ಸಾವು

ಗಂಡ ನಾಪತ್ತೆ ಸುದ್ದಿ ಕೇಳಿದ ಪತ್ನಿ ಶಾಕ್​ಗೆ ಒಳಗಾಗಿ, ಮದುವೆ ಹೊಸತರಲ್ಲೇ ಮಾನಸಿಕವಾಗುವಂತಾಗಿದೆ. ಅವರಿಗೆ ಸೂಕ್ತ‌ ಚಿಕಿತ್ಸೆ ನೀಡಿ ಆಸರೆ ಹಸ್ತಚಾಚಬೇಕಿದೆ. ಇಲ್ಲದಿದ್ದರೆ ಈಕೆಯ ಗಂಡ ಬದುಕಿದ್ದೇ ಆದರೆ ಮಾಧ್ಯಮದ ವರದಿ ಗಮನಿಸಿ ವಾಪಸ್‌ ಬಂದರೆ ಅವರ ಹುಚ್ಚು ಬಿಡಬಹುದೇನೊ ಗೊತ್ತಿಲ್ಲ. ಆದರೆ ಗಂಡನಿಲ್ಲದ ಶಾಕ್ ಮಾತ್ರ ಅವರನ್ನು ಗೃಹಬಂಧನದಲ್ಲಿಡುವ ಸ್ಥಿತಿಗೆ ತಂದಿದ್ದು ವಿಪರ್ಯಾಸ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.