ಬಾಗಲಕೋಟೆ: ಕಲ್ಯಾಣಮಂಟಪದಲ್ಲೇ ವರನಿಗೆ ಹೃದಯಾಘಾತ, ತಾಳಿ ಕಟ್ಟಿಸಿಕೊಂಡ 15 ನಿಮಿಷದಲ್ಲೇ ವಿಧವೆಯಾದ ನವವಧು
ನಗುವ ನಯನ ಮಧುರ ಮೌನ ಎಂದು ರೆಟ್ರೋ ಸ್ಟೈಲ್‌ನಲ್ಲಿ ಪ್ರಿ ವೆಡ್ಡಿಂಗ್ ಶೂಟ್ ಮಾಡಿಸಿ, ಸುಂದರ ವಿಡಿಯೋ ಮೂಲಕ ಜೋಡಿ ಮದುವೆ ಆಮಂತ್ರಣ ನೀಡಿದ್ದರು. ಮದುವೆ ಮಂಟಪದಲ್ಲಿ ಕಲರ್ ಪುಲ್ ಪೊಟೊಗಳನ್ನು ತೆಗೆಸಿಕೊಂಡು, ಹೊಸ ಜೀವನಕ್ಕೆ ಕಾಲಿಟ್ಟಿದ್ದ ಜೋಡಿಯ ಸಂಭ್ರಮಕ್ಕೆ ಪಾರವೇ ಇರಲಿಲ್ಲ. ಈ ಮುದ್ದಾದ ಜೋಡಿಗೆ ಹಾರೈಸಲು ಆಗಮಿಸಿದ್ದ ಬಂಧು ಬಳಗ ದುಃಖದಲ್ಲಿ ಮರಳುವಂತಾಗಿದೆ.

ಬಾಗಲಕೋಟೆ, ಮೇ 17: ಎಲ್ಲರ ದೃಷ್ಟಿ ತಾಗುವಂತಹ ಸುಂದರ ಜೋಡಿ ಹೊಸ ಜೀವನದ ಕನಸು ಕಂಡಿತ್ತು. ಎಲ್ಲರೂ ಆ ಜೋಡಿಗೆ ಹರಸಿ ಹಾರೈಸಿದ್ದರು. ಆದರೆ ವಿಧಿಗೆ ಮಾತ್ರ ಈ ಜೋಡಿಯ ಹಾಗೂ ಕುಟುಂಬಸ್ಥರ ಸಂಭ್ರಮ ಹೊಟ್ಟೆಕಿಚ್ಚು ತರಿಸಿತ್ತು. ವಿಧಿಯ ವಕ್ರದೃಷ್ಟಿಗೆ ತಾಳಿ ಕಟ್ಟಿದ 15 ನಿಮಿಷದಲ್ಲೇ ವರ (Groom) ಹೃದಯಾಘಾತದಿಂದ (Heart attack) ಮೃತಪಟ್ಟಿದ್ದಾರೆ. ವರ ಪ್ರವೀಣ ಕುರ್ನೆ (26) ಮೃತ ದುರ್ದೈವಿ. ಕೆಲವೇ ಕ್ಷಣದಲ್ಲಿ ಮಧು ವಿಧವೆಯಾಗಿದ್ದಾರೆ. ಮದುವೆ ಸಂಭ್ರಮದ ಬದಲು ಸೂತಕದ ಛಾಯೆ ಆವರಿಸಿದೆ.
ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಗರದ ನಂದಿಕೇಶ್ವರ ಕಲ್ಯಾಣಮಂಟಪದಲ್ಲಿ ಶನಿವಾರ (ಮೇ.17) ಪ್ರವೀಣ ಕುರ್ನೆಯವರ ವಿವಾಹವಾಗಿತ್ತು. ಆದರೆ, ಮದುವೆ ಸಂಭ್ರಮದ ಕೆಲವೇ ಕ್ಷಣದಲ್ಲಿ ಸೂತಕದ ಛಾಯೆ ಆವರಿಸಿದೆ. ಏಕೆಂದರೆ ತಾಳಿ ಕಟ್ಟಿದ 15 ನಿಮಿಷದಲ್ಲೇ ಪ್ರವೀಣ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ತಾಳಿ ಕಟ್ಟಿದ ನಂತರ ವೇದಿಕೆ ಮೇಲೆ ನವವಧುವರರ ಆರತಕ್ಷತೆಗೆ ನಿಂತಿದ್ದರು. ಕೇವಲ ಎರಡರಿಂದ ಮೂರು ಪೊಟೊ ಮಾತ್ರ ಕ್ಲಿಕ್ ಆಗಿದ್ದವು. ಅಷ್ಟರಲ್ಲೇ ವರ ಪ್ರವೀಣ ಅವರಿಗೆ ಕಾಲು ನಡುಗುವುದು, ಎದೆನೋವು ಶುರುವಾಗಿದೆ. ಕೂಡಲೇ ಕುಟುಂಬಸ್ಥರು ಪ್ರವೀಣ ಅವರನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ, ಅಷ್ಟೊತ್ತಿಗಾಗಲೇ ಪ್ರವೀಣ ಮೃತಪಟ್ಟಿದ್ದರು. ತಾಳಿ ಕಟ್ಟಿದ ಕೇವಲ 15 ನಿಮಿಷದಲ್ಲೇ ವಧು ವಿಧವೆಯಾಗಿದ್ದಾರೆ. ವರನ ಮನೆಯಲ್ಲಿ ಸಂಭ್ರಮದ ಬದಲು ಕಣ್ಣೀರ ಕಡಲು ಹರಿಯುತ್ತಿದೆ.
ಮೃತ ಪ್ರವೀಣ ಜಮಖಂಡಿ ತಾಲೂಕಿನ ಕುಂಬಾರಹಳ್ಳ ಗ್ರಾಮದ ನಿವಾಸಿಯಾಗಿದ್ದರು. ಸದ್ಯ ಜಮಖಂಡಿ ನಗರದಲ್ಲಿ ವಾಸವಾಗಿದ್ದಾರೆ. ಇನ್ನು ವಧು ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಪಾರ್ಥನಹಳ್ಳಿ ಗ್ರಾಮದವರು. ವಧು, ಪ್ರವೀಣ ಅವರ ಸೋದರ ಮಾವನ ಮಗಳು. ಪ್ರವೀಣ ತಂದೆ ಶ್ರೀಶೈಲ್ ಕುರ್ನೆ ರಾಜ್ಯ ಸೈಕ್ಲಿಂಗ್ ಅಸೋಸಿಯೇಷನ್ ರಾಜ್ಯ ಕಾರ್ಯದರ್ಶಿಯಾಗಿದ್ದಾರೆ. ಪ್ರವೀಣ ಹಿರಿಮಗನಾಗಿದ್ದು ಖಾಸಗಿ ಬ್ಯಾಂಕ್ವೊಂದರಲ್ಲಿ ಕೆಲಸ ಮಾಡುತ್ತಿದ್ದರು.
ಸೋದರ ಮಾವನ ಮಗಳನ್ನೇ ಪ್ರವೀಣ ಅವರು ವರಸಿದ್ದರು. ಬಂಧು ಬಳಗ ಎಲ್ಲರೂ ಸಂಭ್ರಮದಿಂದ ನವಜೋಡಿಯನ್ನು ಆಶೀರ್ವದಿಸಲು ಬಂದಿದ್ದರು. ಬಂದ ಅತಿಥಿಗಳಿಗೆ ಬರಪೂರ ಊಟ ಮಾಡಿಸಲಾಗಿತ್ತು. ಆದರೆ, ಮದುವೆ ಮಾಡಿಕೊಂಡು ಸುಂದರ ಸಂಸಾರದಲ್ಲಿ ತೇಲಬೇಕಿದ್ದ ವರ ಮಸಣ ಸೇರಿದ್ದಾರೆ. ಇನ್ನು ಮದುಮಗ ತೀರಿಕೊಂಡಿದ್ದೇ ತಡ ನಂದಿಕೇಶ್ವರ ಕಲ್ಯಾಣಮಂಟಪ ಬಿಕೊ ಅಂತಿದೆ. ಅಡುಗೆ, ಪಾತ್ರೆ ಎಲ್ಲವನ್ನೂ ಸ್ಥಳಾಂತರಿಸಲಾಗಿದೆ.
ಈ ದುರಂತ ಘಟನೆ ಕಂಡ ಜನರು “ಇಂತಹ ಘಟನೆ ಆಗಬಾರದಿತ್ತು. ನಮಗೆ ಇದೊಂದು ದುಃಖದ ದಿನ ಮದುವೆಯಲ್ಲಿ ನೂರಾರು ವರ್ಷ ಚೆನ್ನಾಗಿ ಬಾಳಿ ಎಂದು ಶುಭ ಹಾರೈಸಲು ಬಂದ, ನಮಗೆ ಪ್ರವೀಣ ಅವರ ಅಂತ್ಯಸಂಸ್ಕಾರ ನೆರವೇರಿಸಿ ಹೋಗುವಂತಾಗಿದೆ” ಎಂದು ಮಮ್ಮಲ ಮರುಗಿದರು.
ಇದನ್ನೂ ನೋಡಿ: ತಾಳಿ ಕಟ್ಟಿದ ಕೆಲವೇ ಕ್ಷಣದಲ್ಲಿ ವರ ಹೃದಯಾಘಾತದಿಂದ ಸಾವು
ಸುಂದರ ಬದುಕಿನ ಕನಸು ಹೊತ್ತು ಸಪ್ತಪದಿ ತುಳಿದಿದ್ದ ಮದುಮಗ ತಾಳಿ ಕಟ್ಟಿದ ಕೆಲವೇ ಕ್ಷಣದಲ್ಲಿ ಉಸಿರು ಚೆಲ್ಲಿದ್ದಾರೆ. ಇದು ವಧು ಸೇರಿದಂತೆ ಇಡೀ ಕುಟುಂಬಕ್ಕೆ ಬರಸಿಡಿಲು ಬಡಿದಂತಾಗಿದ್ದು, ಮದುವೆ ಸಂಭ್ರಮದಲ್ಲಿ ಕಣ್ಣೀರಿನ ಸಾಗರ ಹರಿಯುತ್ತಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:33 pm, Sat, 17 May 25








