ಪತ್ನಿಗೆ ಲೋಕಸಭೆ ಟಿಕೆಟ್​ ನೀಡುವಂತೆ ಸಿಎಂಗೆ ಬೇಡಿಕೆಯಿಟ್ಟ ಶಾಸಕ ವಿಜಯಾನಂದ ಕಾಶಪ್ಪನವರ್

| Updated By: ಗಂಗಾಧರ​ ಬ. ಸಾಬೋಜಿ

Updated on: Nov 23, 2023 | 4:29 PM

ಬಾಗಲಕೋಟೆ ನಗರದ ಅಂಜುಮನ್ ಶಾಲಾ ಮೈದಾನದಲ್ಲಿ ಆಯೋಜಿಸಿದ್ದ ವಿವಿಕೆ ಫೌಂಡೇಶನ್ ಕೋಚಿಂಗ್ ಸೆಂಟರ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ವಿಜಯಾನಂದ ಕಾಶಪ್ಪನವರ್​, ನನ್ನ ಪತ್ನಿ ವೀಣಾಗೆ ಲೋಕಸಭಾ ಟಿಕೆಟ್​ ಕೊಟ್ಟಿದ್ದರು. ಈಗ ಮತ್ತೆ ಆಶೀರ್ವಾದ ಮಾಡಿ ಎಂದು ಹೇಳುವ ಮೂಲಕ ಪರೋಕ್ಷವಾಗಿ ಸಿಎಂ ಸಿದ್ದರಾಮಯ್ಯ ಮುಂದೆ ಟಿಕೆಟ್​ ಬೇಡಿಕೆಯಿಟ್ಟಿದ್ದಾರೆ.

ಪತ್ನಿಗೆ ಲೋಕಸಭೆ ಟಿಕೆಟ್​ ನೀಡುವಂತೆ ಸಿಎಂಗೆ ಬೇಡಿಕೆಯಿಟ್ಟ ಶಾಸಕ ವಿಜಯಾನಂದ ಕಾಶಪ್ಪನವರ್
ಶಾಸಕ ವಿಜಯಾನಂದ ಕಾಶಪ್ಪನವರ್
Follow us on

ಬಾಗಲಕೋಟೆ, ನವೆಂಬರ್​​​​ 23: ನನ್ನ ಪತ್ನಿ ವೀಣಾಗೆ ಲೋಕಸಭಾ ಟಿಕೆಟ್​ ಕೊಟ್ಟಿದ್ದರು. ಈಗ ಮತ್ತೆ ಆಶೀರ್ವಾದ ಮಾಡಿ ಎಂದು ಹೇಳುವ ಮೂಲಕ ಪರೋಕ್ಷವಾಗಿ ಸಿಎಂ ಸಿದ್ದರಾಮಯ್ಯ ಮುಂದೆ ಶಾಸಕ ವಿಜಯಾನಂದ ಕಾಶಪ್ಪನವರ್ (Vijayananda Kashappanavar)​​ ಟಿಕೆಟ್​ ಬೇಡಿಕೆಯಿಟ್ಟಿದ್ದಾರೆ. ನಗರದ ಅಂಜುಮನ್ ಶಾಲಾ ಮೈದಾನದಲ್ಲಿ ಆಯೋಜಿಸಿದ್ದ ವಿವಿಕೆ ಫೌಂಡೇಶನ್ ಕೋಚಿಂಗ್ ಸೆಂಟರ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾವು ಮತ್ತೆ ಬರುತ್ತೇವೆ ಅಂತಾ ಮೊದಲೇ ಹೇಳಿದೆವು, ಈಗ ಮತ್ತೆ ಬಂದಿದ್ದೇವೆ ಎಂದು ಹೇಳಿದ್ದಾರೆ.

ಇದು ನನ್ನ ಕನಸಿನ ಕೂಸು: ಕಾಂಗ್ರೆಸ್​ ನಾಯಕಿ ವೀಣಾ ಕಾಶಪ್ಪನವರ್

ಕಾಂಗ್ರೆಸ್​ ನಾಯಕಿ ವೀಣಾ ಕಾಶಪ್ಪನವರ್​ ಮಾತನಾಡಿ, ಇದು ನನ್ನ ಕನಸಿನ ಕೂಸು. ಕೋಚಿಂಗ್ ಸೆಂಟರ್ ಉದ್ಘಾಟನೆ ಆಗಿದೆ. ಅದು ನನ್ನ ರಾಜಕೀಯ ಗುರು ಸಿದ್ದರಾಮಯ್ಯ ಅವರಿಂದ ಆಗಿರುವುದು ನನ್ನ ಪುಣ್ಯ. ಬಡ ಮಕ್ಕಳಿಗೆ ಉಚಿತ ಕೋಚಿಂಗ್ ಸೆಂಟರ್ ಮಾಡುವುದು ಕನಸಾಗಿತ್ತು ಅದು ಈಡೇರಿದೆ ಎಂದಿದ್ದಾರೆ.

ಎರಡು ದಿನದ ಹಿಂದಷ್ಟೆ ನನಗೆ ಅಪಘಾತವಾಗಿತ್ತು. ತಮ್ಮೆಲ್ಲರ ಆಶೀರ್ವಾದದಿಂದ ನಾನು ಇಂದು ಗುಣಮುಖಳಾಗಿ ನಿಮ್ಮ ಮುಂದೆ ನಿಂತಿದ್ದೇನೆ. ಸಿಎಂ ಸಿದ್ದರಾಮಯ್ಯ ಅವರು ನನ್ನ ರಾಜಕೀಯ ಗುರುಗಳು. ನನ್ನ ತಂದೆಯ ಸ್ಥಾನದಲ್ಲಿ‌ ನಿಂತು ಸಹಕಾರ ನೀಡಿದ್ದಾರೆ. ನನ್ನ ಪತಿ ಹಾಗೂ ಸಿದ್ದರಾಮಯ್ಯ ಅವರಿಂದ ನಾನು ಇಷ್ಟು ಎತ್ತರಕ್ಕೆ ಬೆಳೆದಿದ್ದೇನೆ. ಬಾಗಲಕೋಟೆ ಜಿಲ್ಲಾ ಪಂಚಾಯತಿ ಅಧ್ಯಕ್ಷೆಯಿಂದ ಲೋಕಸಭೆ ಗೆ ಸ್ಪರ್ಧಿಸುವ ವರೆಗೆ ಬಂದಿದ್ದು ಇವರಿಂದಲೇ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಮತ್ತೆ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ನಿಖಿಲ್​​ಗೆ ಆಹ್ವಾನ, ಹಳೇ ಸೇಡು ತೀರಿಸಿಕೊಳ್ಳಲು ಪ್ಲ್ಯಾನ್

ಭಾಗ್ಯವಿದಾತಾ, ಆಧುನಿಕ ದೇವರಾಜ ಅರಸು ಅವರು ಎಂದರೆ ಅವರು ಸಿದ್ದಾಮಯ್ಯನವರು. ಸಿಎಂ ಅವರಿಗೆ ಕರೆದಾಗ ಒಂದೇ ಮಾತಿಗೆ ಬರುತ್ತೇನೆ ಎಂದರು. ಇಂದು 200 ವಿದ್ಯಾರ್ಥಿಗಳಿಂದ ಆರಂಭವಾದ ಈ ಸಂಸ್ಥೆ  ಮುಂದೆ ಸಾವಿರ ವಿದ್ಯಾರ್ಥಿಗಳಿಗೆ ತಲುಪಲಿದೆ ಎಂದಿದ್ದಾರೆ.

ಇದು ಸಮಾಜಮುಖಿ ಕೆಲಸ, ಉತ್ತಮ ಕೆಲಸ: ಸಿಎಂ ಸಿದ್ದರಾಮಯ್ಯ

ಸಿಎಂ ಸಿದ್ದರಾಮಯ್ಯ ಮಾತನಾಡಿ, ಬಡ ಮಕ್ಕಳು ಕೆಎಎಸ್​, ಪಿಎಸ್​ಐ ಪಾಸ್ ಆಗಬೇಕು ಅನ್ನುವ ಸದುದ್ದೇಶ ಇಟ್ಟುಕೊಂಡಿದ್ದಾರೆ. ವೀಣಾ ಕಾಶಪ್ಪನವರ್​ 200 ಜನ ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ಕೊಡುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ಇಂತಹ ಕಾರ್ಯಕ್ರಮಕ್ಕೆ‌ ನನಗೆ ಆಹ್ವಾನ ಮಾಡಿದರು. ಇದು ಸಮಾಜಮುಖಿ ಕೆಲಸ, ಉತ್ತಮ ಕೆಲಸ ಮಾಡಿದ್ದಾರೆ. 200 ರಿಂದ 1500 ಸಾವಿರ ವಿದ್ಯಾರ್ಥಿಗಳಿಗೆ ಕೋಚಿಂಗ್ ಕೊಡುವ ಉದ್ದೇಶ ಇಟ್ಕೊಂಡಿದಿರಿ. ಇದು ಒಳ್ಳೆಯ ಉದ್ದೇಶ ಅದಕ್ಕೆ ಬಂದಿದ್ದೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಭಾವುಕ ಮಾತುಗಳಲ್ಲೇ ಮತ್ತೆ ಲೋಕಸಭೆಗೆ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ ನಳಿನ್ ಕುಮಾರ್ ಕಟೀಲ್

ಚುನಾವಣೆ ಸಂದರ್ಭದಲ್ಲಿ ನಾವು ಐದು ಗ್ಯಾರಂಟಿ ಘೋಷಿಸಿದ್ದೆವು. 6 ತಿಂಗಳಲ್ಲಿ ಈಗಾಗಲೇ ನಾಲ್ಕು ಗ್ಯಾರಂಟಿಗಳನ್ನು ಜಾರಿ ಮಾಡಿದ್ದೇವೆ. ಶಕ್ತಿ, ಅನ್ನಭಾಗ್ಯ, ಗೃಹಜ್ಯೋತಿ, ಗೃಹಲಕ್ಷ್ಮೀ ಯೋಜನೆ ಜಾರಿ ಮಾಡಿದ್ದೇವೆ. ವಿರೋಧ ಪಕ್ಷಗಳು ಗ್ಯಾರಂಟಿ ಜಾರಿ ಮಾಡಲು ಆಗಲ್ಲ ಎಂದಿದ್ದವು. ಗ್ಯಾರಂಟಿ ಜಾರಿ ಮಾಡಿದರೆ ರಾಜ್ಯ ಆರ್ಥಿಕ ದಿವಾಳಿ ಆಗುತ್ತೆ ಎಂದಿದ್ದರು. 4 ಗ್ಯಾರಂಟಿಗಳನ್ನು ಜಾರಿ ಮಾಡಿದ್ದೇವೆ ರಾಜ್ಯ ದಿವಾಳಿ ಆಗಿದೆಯಾ ಎಂದು ಪ್ರಶ್ನಿಸಿದರು.

ಗ್ಯಾರಂಟಿಗಳಿಗೆ ಈ ವರ್ಷ 38 ಸಾವಿರ ಕೋಟಿ ಖರ್ಚು ಮಾಡಿದ್ದೇವೆ. ಮುಂದಿನ ವರ್ಷ 58 ಸಾವಿರ ಕೋಟಿ ರೂ. ಖರ್ಚು ಮಾಡುತ್ತೇವೆ ಎಂದು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.