
ಬಾಗಲಕೋಟೆ, ನವೆಂಬರ್ 25: ಜಿಲ್ಲೆಯಲ್ಲಿ ಸದ್ದಿಲ್ಲದೆ ಕಳ್ಳರ ಗ್ಯಾಂಗ್ ಕರಾಮತ್ತು ತೋರುತ್ತಿದೆ. ಈ ಹಿಂದೆ ಚಡ್ಡಿ ಗ್ಯಾಂಗ್ ಅದೊಂದು ತಾಲ್ಲೂಕು ಕೇಂದ್ರದಲ್ಲಿ ಒಂದು ಮನೆ ದೋಚಿತ್ತು. ಇನ್ನೊಂದು ಮನೆ ಕಳ್ಳತನ (Thefts) ಯತ್ನ ನಡೆಸಿದಾಗ ಅಮೇರಿಕದಲ್ಲಿ ನೆಲೆಸಿದ ಆ ಮನೆಯ ಮಗಳು ತನ್ನ ಮೊಬೈಲ್ನಲ್ಲಿ ಸಿಸಿ ಕ್ಯಾಮೆರಾದಲ್ಲಿ ದೃಶ್ಯವನ್ನು ನೋಡಿ ಕಳ್ಳತನ ತಪ್ಪಿಸಿದ್ದಳು. ಇದೀಗ ಅದೇ ಜಿಲ್ಲೆಯ ಇನ್ನೊಂದು ತಾಲ್ಲೂಕಿನ ಪಟ್ಟಣದಲ್ಲಿ ಲುಂಗಿ ಗ್ಯಾಂಗ್ (Lungi Gang) ಕಳ್ಳತನ ವಿಫಲಯತ್ನ ನಡೆಸಿತ್ತು. ಇಂದು ಹಾಡಹಗಲೇ ಅದೇ ಪಟ್ಟಣದಲ್ಲಿ ಆಟೋ ಚಾಲಕನ ಮನೆಯಲ್ಲಿ 8 ಲಕ್ಷ ರೂ ಹಣ ಕಳ್ಳತನವಾಗಿದೆ.
ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲ್ಲೂಕಿನ ಅಮೀನಗಡ ಪಟ್ಟಣದಲ್ಲಿ ಲುಂಗಿ ಗ್ಯಾಂಗ್ ಆ್ಯಕ್ಟೀವ್ ಆಗಿದೆ. ಅಮೀನಗಡ ಅಂದರೆ ಎಲ್ಲರಿಗೂ ನೆನಪಾಗುವುದು ಕರದಂಟು. ಕರದಂಟಿಗೆ ಪ್ರಸಿದ್ಧವಾದ ಪಟ್ಟಣದಲ್ಲಿ ಇದೀಗ ಲುಂಗಿ ಗ್ಯಾಂಗ್ ಕಳ್ಳರದ್ದೇ ಸುದ್ದಿ ಹೆಚ್ಚಾಗಿದೆ. ನವೆಂಬರ್ 23ರಂದು ಲುಂಗಿ ಗ್ಯಾಂಗ್ ಕಳ್ಳತನಕ್ಕೆ ಯತ್ನಿಸಿತ್ತು.
ಇದನ್ನೂ ಓದಿ: ಬ್ಯಾಂಕ್ಗಳ ರಾಬರಿ ಪ್ರಕರಣ: ಅಂತಾರಾಜ್ಯ ಕಳ್ಳರು ಅಂದರ್; ಹಣ, ಬಂಗಾರ ಸೀಜ್
ಪಟ್ಟಣದ ದಡ್ಡೆನವರ ಎಂಬುವರ ಮನೆ, Spr ಖಾದ್ರಿ ಎಂಬುವರ ಕಚೇರಿ, ಮಂಜು ಹೂಗಾರ ಟೈಲ್ಸ್ ಅಂಗಡಿಯಲ್ಲಿ ಕಳ್ಳತನಕ್ಕೆ ಯತ್ನಿಸಲಾಗಿದೆ. ಆದರೆ ಏನು ಸಿಗದೆ ಮೂರು ಜನರ ಗ್ಯಾಂಗ್ ಅಲ್ಲಿಂದ ಕಾಲ್ಕಿತ್ತಿದೆ. ಈ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಇನ್ನು ಅದೇ ಪಟ್ಟಣದ ವಾರ್ಡ್ ನಂ 1ರಲ್ಲಿ ಇಂದು ಹಾಡಹಗಲೇ 3 ಗಂಟೆ ವೇಳೆ 8 ಲಕ್ಷ ರೂ. ಹಣ ಕಳ್ಳತನವಾಗಿದೆ. ಆಟೋ ಚಾಲಕ ಸಿದ್ದಪ್ಪ ಹಳ್ಳಿಮನಿ ಎಂಬುವವರು ಮನೆ ಕಟ್ಟಿಸುವುದಕ್ಕೆ ಕೂಡಿಟ್ಟಿದ್ದ 8 ಲಕ್ಷ ರೂ. ಹಣ ದೋಚಿದ್ದಾರೆ.
ಮನೆಯಲ್ಲಿ ಕಣ್ಣು ಕಾಣಿಸದ ಸಿದ್ದಪ್ಪ ಅವರ ತಾಯಿ ಇದ್ದರು. ಅವರಿಗೆ ಗೊತ್ತಾಗದಂತೆ ಕಳ್ಳತನ ಮಾಡಿ ಎಸ್ಕೇಪ್ ಆಗಿದ್ದಾರೆ. ಸ್ಥಳಕ್ಕೆ ಅಮೀನಗಡ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಪೊಲೀಸರು ಲುಂಗಿ ಗ್ಯಾಂಗ್ ಅನ್ನು ಹಿಡಿಯುವುದಕ್ಕೆ ಪ್ರಯತ್ನ ನಡೆಸಿದ್ದಾರೆ.
ಇನ್ನು ಈ ಚಡ್ಡಿ ಗ್ಯಾಂಗ್ ಆಗಸ್ಟ್ 27ರ ರಾತ್ರಿ ಜಿಲ್ಲೆಯ ಮುಧೋಳ ನಗರದಲ್ಲಿ ಕಾಣಿಸಿಕೊಂಡಿತ್ತು. ಮುಧೋಳ ನಗರದ ಸಿದ್ದರಾಮೇಶ್ವರ ಕಾಲೋನಿಯಲ್ಲಿ ಚಡ್ಡಿ ಗ್ಯಾಂಗ್ ಪ್ರತ್ಯಕ್ಷವಾಗಿತ್ತು. ಅಂದು ಹನುಮಂತಗೌಡ ಎಂಬ ನಿವೃತ್ತ ಇಂಜಿನಿಯರ್ ಮನೆಯಲ್ಲಿ ಕಳ್ಳತನಕ್ಕೆ ಯತ್ನಿಸಲಾಗಿತ್ತು. ಮನೆಗೆ ಸಿಸಿ ಕ್ಯಾಮೆರಾ ಅಳವಡಿಸಲಾಗಿದ್ದು, ಅಮೆರಿಕದಲ್ಲಿ ನೆಲೆಸಿದ್ದ ಅವರ ಮಗಳ ಮೊಬೈಲ್ಗೆ ಲಿಂಕ್ ಇತ್ತು. ಹೀಗಾಗಿ ಕಳ್ಳರು ತಮ್ಮ ಮನೆಗೆ ಬಂದ ದೃಶ್ಯವನ್ನು ಮೊಬೈಲ್ನಲ್ಲಿ ಗಮನಿಸಿದ ಶೃತಿ, ಮನೆಯವರಿಗೆ ಕರೆ ಮಾಡಿ ಕಳ್ಳತನ ತಪ್ಪಿಸುವಲ್ಲಿ ಯಶಸ್ವಿಯಾಗಿದ್ದರು. ಆದರೆ ಅದೇ ಕಳ್ಳರು ಅಂದು ರಾತ್ರಿ ಹನುಮಂತಗೌಡ ಅವರ ಮನೆಗೂ ಮುನ್ನ ಅಶೋಕ ಕರಿಹೊನ್ನ ಎಂಬುವರ ಮನೆಯಲ್ಲಿ 12 ಗ್ರಾಂ ಚಿನ್ನ, 40 ಸಾವಿರ ರೂ ಹಣ ಕದ್ದಿದ್ದರು. ಅದು ಇನ್ನು ಪತ್ತೆಯಾಗಿಲ್ಲ.
ಇನ್ನೊಂದೆಡೆ ಮತ್ತೊಂದು ಕಳ್ಳರ ಗ್ಯಾಂಗ್, ಬಾದಾಮಿ ತಾಲ್ಲೂಕಿನ ಎಸ್ ಬಿ ಬೈ ಬ್ಯಾಂಕ್ನಲ್ಲಿ ಕಳ್ಳತನ ಮಾಡಿತ್ತು. ನಂತರ ಕುಳಗೇರಿ ವೀರಪುಲಿಕೇಶಿ ಬ್ಯಾಂಕ್ನಲ್ಲಿ ಕಳ್ಳತನ ಮಾಡಿತ್ತು. ಬ್ಯಾಂಕ್ಗೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಕಳ್ಳರೆಂದು ಗುರುತಿಸಿದ್ದು, ಅವರನ್ನು ಬಂಧಿಸಲಾಗಿದೆ. ಎರಡು ಬ್ಯಾಂಕ್ಗೆ ಸಂಬಂಧಿಸಿದಂತೆ 26 ಲಕ್ಷ 30 ಸಾವಿರ ರೂ. ಮೌಲ್ಯದ ಚಿನ್ನಾಭರಣ ಹಾಗೂ ಹಣವನ್ನು ಬಾದಾಮಿ ಹಾಗೂ ಕೆರೂರು ಪೊಲೀಸರು ಜಪ್ತಿ ಮಾಡಿದ್ದಾರೆ. ಇನ್ನು ಬೇರೆ ಗ್ಯಾಂಗ್ಗಳಿಂದಲೂ ಜಿಲ್ಲೆಯಲ್ಲಿ ಕಳ್ಳತನ ಪ್ರಕರಣಗಳು ನಡೆದಿವೆ. ಇಂತಹ ಗ್ಯಾಂಗ್ನಿಂದ ಸಾರ್ವಜನಿಕರು ಭಯದಲ್ಲಿ ರಾತ್ರಿ ಕಳೆಯುವಂತಾಗಿದೆ. ಮೇಲಾಗಿ ಈಗ ಬಂದಿರುವ ಕಳ್ಳರ ಗ್ಯಾಂಗ್ ಹೆಚ್ಚು ಆತಂಕ ಹುಟ್ಟಿಸಿದೆ.
ಇದನ್ನೂ ಓದಿ: ಬಾಗಲಕೋಟೆ ವ್ಯಾಪಾರಿಗೆ ಅಂತಾರಾಜ್ಯ ಆನ್ಲೈನ್ ಚೋರರಿಂದ 1 ಕೋಟಿ ರೂ. ಪಂಗನಾಮ
ಇನ್ನು ಲುಂಗಿ ಗ್ಯಾಂಗ್ ಮಹಾರಾಷ್ಟ್ರ ಮೂಲದ ಕಬ್ಬಿನ ಗ್ಯಾಂಗ್ ರೀತಿ ಕಾಣುತ್ತಿದ್ದು, ಯಾರು ಕಬ್ಬಿನ ಗ್ಯಾಂಗ್ ನವರು, ಯಾರು ಕಳ್ಳರು ಎಂದು ಗುರುತು ಹಿಡಿಯದಂತಾಗಿದೆ. ಆದ್ದರಿಂದ ಆದಷ್ಟು ಬೇಗ ಈ ಲುಂಗಿ ಗ್ಯಾಂಗ್ ಹಿಡಿದು ಜನರಲ್ಲಿರುವ ಭಯ ದೂರ ಮಾಡಬೇಕೆಂದು ಸಾರ್ವಜನಿಕರು ಪೊಲೀಸ್ ಇಲಾಖೆಗೆ ಮನವಿ ಮಾಡುತ್ತಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.