ಬಸವಣ್ಣನವರ ಅಂಕಿತನಾಮ ಗೊಂದಲಕ್ಕೆ ತೆರೆ; ಕೂಡಲಸಂಗಮದೇವ ಅಂಕಿತನಾಮ ಬಳಸಲು ಆದೇಶ

ಬಸವಣ್ಣನವರ ಅಂಕಿತನಾಮ ಗೊಂದಲಕ್ಕೆ ತೆರೆ; ಕೂಡಲಸಂಗಮದೇವ ಅಂಕಿತನಾಮ ಬಳಸಲು ಆದೇಶ
ಬಸವಣ್ಣ, ಬಸವಧರ್ಮ ಪೀಠಾಧ್ಯಕ್ಷೆ ಮಾತೆ ಗಂಗಾದೇವಿ

ಸುದ್ದಿಗೋಷ್ಠಿಯಲ್ಲಿ ಆದೇಶ ನೀಡಿದ ಮಾತೆ ಗಂಗಾದೇವಿ ಅವರು, ಸುಪ್ರೀಂ ಕೋರ್ಟ್ 2017 ಸೆಪ್ಟೆಂಬರ್ 21 ರಂದು ಕೂಡಲಸಂಗಮದೇವ ಅಂತಾನೆ ಅಂಕಿತನಾಮ ಬಳಸಲು ಆದೇಶ ನೀಡಿದೆ. ನಾವು ಕೋರ್ಟ್ ಆದೇಶಕ್ಕೆ ತಲೆ ಬಾಗಿ, ಗೌರವ ನೀಡುವ ಉದ್ದೇಶದಿಂದ ಈ ಕರೆ ನೀಡಿದ್ದೇವೆ.

TV9kannada Web Team

| Edited By: sandhya thejappa

Dec 28, 2021 | 1:03 PM

ಬಾಗಲಕೋಟೆ: ವಿಶ್ವಗುರು, ಮಹಾಮಾನವತಾವಾದಿ, ಸಾಮಾಜಿಕ ಸಮಾನತೆಯ ಹರಿಕಾರ ಬಸವಣ್ಣ ತಮ್ಮ ವಚನಗಳ ಮೂಲಕ ಸಮಾಜದ ಅಂಕು ಡೊಂಕು ತಿದ್ದಿದವರು. 12ನೇ ಶತಮಾನದ ಕ್ರಾಂತಿಕಾರಿ ಬಸವಣ್ಣನವರ ವಚನದ ಅಂಕಿತನಾಮ ಬದಲಾವಣೆ ರಾಜ್ಯದಲ್ಲಿ 1996 ರಲ್ಲಿ ಕೋಲಾಹಲ ಸೃಷ್ಟಿ ಮಾಡಿತ್ತು. ಬಸವಧರ್ಮ ಪೀಠಾಧ್ಯಕ್ಷೆ ಲಿಂಗೈಕ್ಯ ಮಾತೆ ಮಹಾದೇವಿ ತಮ್ಮ ವಚನದೀಪ್ತಿ ಎಂಬ ವಚನ ಗ್ರಂಥದಲ್ಲಿ ಬಸವಣ್ಣನವರ ವಚನಗಳ ಅಂಕಿತನಾಮ ಕೂಡಲಸಂಗಮದೇವ ಬದಲಿಸಿ ಲಿಂಗದೇವ ಎಂದು ಉಲ್ಲೇಖ ಮಾಡಿದ್ದರು. ಇದರಿಂದ ರಾಜ್ಯದಲ್ಲಿ ಬಾರಿ ವಿರೋಧ ವ್ಯಕ್ತವಾಗಿತ್ತು. ಈಗಿರುವ ಬಸವಧರ್ಮ ಪೀಠಾಧ್ಯಕ್ಷೆ ಮಾತೆ ಗಂಗಾದೇವಿ ಅಂಕಿತನಾಮ ವಿವಾದಕ್ಕೆ ತೆರೆ ಎಳೆದಿದ್ದಾರೆ.

ಬಾಗಲಕೋಟೆಯಲ್ಲಿ ಮಾತಾಡಿದ ಬಸವಧರ್ಮ ಪೀಠಾಧ್ಯಕ್ಷೆ ಮಾತೆ ಗಂಗಾದೇವಿ ಅವರು, ವಚನದೀಪ್ತಿಯಲ್ಲಿ ಬಸವಣ್ಣನವರ ವಚನಗಳ ಅಂಕಿತನಾಮ ತಿದ್ದುಪಡಿ ಗೊಂದಲಕ್ಕೆ ತೆರೆ ಎಳೆದಿದ್ದಾರೆ. ಇನ್ಮುಂದೆ ವಚನದೀಪ್ತಿಯಲ್ಲಿನ ಬಸವಣ್ಣನವರ ವಚನಗಳಲ್ಲಿ ಕೂಡಲಸಂಗಮದೇವ ಎಂಬ ಅಂಕಿತನಾಮ ಬಳಸಲು ಆದೇಶ ನೀಡಿದ್ದಾರೆ. ಇನ್ಮುಂದೆ ಬಸವಧರ್ಮ ಪೀಠದ ಎಲ್ಲ ಜಂಗಮ ಮೂರ್ತಿಗಳು, ಭಕ್ತರು, ಬಸವಧರ್ಮ ಪೀಠದ ಅಧೀನ ಸಂಸ್ಥೆಗಳು, ರಾಷ್ಟ್ರೀಯ ಬಸವದಳ, ಲಿಂಗಾಯತ ಧರ್ಮ ಮಹಾಸಭಾದ ಪದಾಧಿಕಾರಿಗಳು, ಸದಸ್ಯರು ಎಲ್ಲರೂ ಕೂಡಲಸಂಗಮದೇವ ಎಂದು ಬಳಸಲು ಆದೇಶಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಆದೇಶ ನೀಡಿದ ಮಾತೆ ಗಂಗಾದೇವಿ ಅವರು, ಸುಪ್ರೀಂ ಕೋರ್ಟ್ 2017 ಸೆಪ್ಟೆಂಬರ್ 21 ರಂದು ಕೂಡಲಸಂಗಮದೇವ ಅಂತಾನೆ ಅಂಕಿತನಾಮ ಬಳಸಲು ಆದೇಶ ನೀಡಿದೆ. ನಾವು ಕೋರ್ಟ್ ಆದೇಶಕ್ಕೆ ತಲೆ ಬಾಗಿ, ಗೌರವ ನೀಡುವ ಉದ್ದೇಶದಿಂದ ಈ ಕರೆ ನೀಡಿದ್ದೇವೆ. ಮುಂಬರುವ ಶರಣ ಮೇಳದಲ್ಲಿ ಪ್ರಾರ್ಥನೆ, ವಚನ ಪಠಣ ಎಲ್ಲದರಲ್ಲೂ ಕೂಡಲಸಂಗಮದೇವ ಎಂಬ ಅಂಕಿತನಾಮವನ್ನೇ ಬಳಸುತ್ತೇವೆ. ಇದರ ಹೊರತಾಗಿ ಯಾರಾದರೂ ಲಿಂಗದೇವ ಎಂಬ ಅಂಕಿತನಾಮ ಬಳಸಿ ಕೋರ್ಟ್ ಆದೇಶ ಉಲ್ಲಂಘನೆ ಮಾಡಿದರೆ ಅದಕ್ಕೆ ನಾವಾಗಲಿ ಬಸವಧರ್ಮ ಪೀಠ ಜವಾಬ್ದಾರಿ ಅಲ್ಲ ಎಂದಿದ್ದಾರೆ.

ಬಸವಣ್ಣನವರ ಅನುಯಾಯಿಗಳ ವಿರೋಧ ಕಟ್ಟಿಕೊಂಡಿದ್ದ ಲಿಂಗೈಕ್ಯ ಮಾತೆ ಮಹಾದೇವಿ ವಚನದೀಪ್ತಿ ಲಿಂಗೈಕ್ಯ ಮಾತೆ ಮಹಾದೇವಿ ಬರೆದ ಗ್ರಂಥ. ಗ್ರಂಥದಲ್ಲಿ ಬಸವಣ್ಣನವರ ವಚನಗಳ ಅಂಕಿತನಾಮ ಲಿಂಗದೇವ ಎಂದು ಬದಲಿಸಿದ್ದರು. ವಿವಾದ ಸೃಷ್ಟಿಯಾಗಿ ಸರಕಾರ ವಚನ ದೀಪ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿತ್ತು. ವಿವಾದ ಹೈಕೋರ್ಟ್, ಸುಪ್ರೀಂ ಕೋರ್ಟ್ ವರೆಗೂ ಹೋಗಿತ್ತು. 2017 ಸೆಪ್ಟೆಂಬರ್ 21 ರಂದು ಸುಪ್ರೀಂ ಕೋರ್ಟ್ ಕೂಡಲಸಂಗಮದೇವ ಎಂದೇ ಅಂಕಿತನಾಮ ಬಳಸಲು ಆದೇಶ ನೀಡಿತ್ತು. ಕೋರ್ಟ್ ಆದೇಶ ಉಲ್ಲಂಘನೆಯಾಗಬಾರದು. ಕೋರ್ಟ್ ಆದೇಶ ಗೌರವಿಸಬೇಕೆಂದು ಭಕ್ತರಿಗೆ ಆದೇಶ ನೀಡುತ್ತಿದ್ದೇನೆ. ಇದರಿಂದ ಕೆಲ ಭಕ್ತರಿಗೆ ನೋವು ಆಗಲೂಬಹುದು. ಕೋರ್ಟ್ ಆದೇಶ ಎಲ್ಲರೂ ಗೌರವಿಸೋಣ ಅಂತ ಮಾತೆ ಗಂಗಾದೇವಿ ಹೇಳಿದ್ದಾರೆ.

ಮಾತೆ ಮಹಾದೇವಿ ವಚನ ದೀಪ್ತಿ ಗ್ರಂಥ ಮುಟ್ಟುಗೋಲು ಹಾಕಿಕೊಂಡಿದ್ದ ಸರಕಾರ ಲಿಂಗೈಕ್ಯ ಮಾತೆ ಮಹಾದೇವಿ 1996 ರಲ್ಲಿ ಬಸವಣ್ಣನವರ ವಚನಗಳ ಸಂಗ್ರಹ ಸಂಶೋಧನೆ ನಡೆಸಿ ವಚನ ದೀಪ್ತಿ ಎಂಬ ಗ್ರಂಥ ರಚಿಸಿದ್ದರು. ಇದರಲ್ಲಿ ಅವರು ಬಸವಣ್ಣನರವರ ವಚನಗಳಿಗೆ ಕೂಡಲಸಂಗಮದೇವ ಬದಲಿಗೆ ಲಿಂಗದೇವ ಎಂದು ಉಲ್ಲೇಖ ಮಾಡಿದ್ದರು. ಮಾತೆ ಮಹಾದೇವಿಗೆ ಧೀಕ್ಷೆ ನೀಡಿದ್ದ ಲಿಂಗಾನಂದ ಸ್ವಾಮೀಜಿಗಳಾಗಿದ್ದರು. ಈ ಹಿನ್ನೆಲೆ ಮಾತೆ ಮಹಾದೇವಿ ಲಿಂಗದೇವ ಎಂದು ಅಂಕಿತನಾಮ ಬದಲಿಸಿದ್ದಾರೆ ಎಂದು ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು. ನಂತರ ರಾಜ್ಯ ಸರಕಾರ ವಚನ ದೀಪ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿತ್ತು. ವಿವಾದ ಬೆಂಗಳೂರು ಹೈಕೋರ್ಟ್ ತಲುಪಿತ್ತು. ಹೈಕೋರ್ಟ್ನಲ್ಲಿ ಕೂಡಲಸಂಗಮದೇವ ಅಂತಾನೆ ಬಳಸಬೇಕು ಎಂದ ಆದೇಶವಾಗಿತ್ತು. ಈ ಆದೇಶ ಪ್ರಶ್ನಿಸಿ ಬಸವ ಧರ್ಮ ಪೀಠ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿತ್ತು. 2017 ರಲ್ಲಿ ಸುಪ್ರೀಂ ಕೋರ್ಟ್ ಹೈಕೋರ್ಟ್ ಆದೇಶವನ್ನು ಎತ್ತಿ ಹಿಡಿದು ವಚನಗಳಿಗೆ ಕೂಡಲಸಂಗಮದೇವ ಅಂತಾನೆ ಬಳಸಬೇಕೆಂದು ಮಹತ್ವದ ತೀರ್ಪು ನೀಡಿತ್ತು.

ಸುಪ್ರೀಂ ತೀರ್ಪು ಬಂದ ನಂತರ ನಾಲ್ಕು ವರ್ಷಗಳ ಬಳಿಕ ಬಸವ ಧರ್ಮ ಪೀಠಾಧ್ಯಕ್ಷೆ ಮಾತೆ ಗಂಗಾದೇವಿ ಇಂದು ಅಧಿಕೃತವಾಗಿ ಎಲ್ಲ ಭಕ್ತರಿಗೆ ಬಸವಣ್ಣನವರ ವಚನಗಳಿಗೆ ಕೂಡಲಸಂಗಮದೇವ ಅಂತಾನೆ ಅಂಕಿತನಾಮ ಬಳಸಬೇಕೆಂದು ಕರೆ ನೀಡಿದ್ದಾರೆ.

ವರದಿ: ರವಿ ಮೂಕಿ

ಇದನ್ನೂ ಓದಿ

Video: ಕಾಂಗ್ರೆಸ್ ಸಂಸ್ಥಾಪನಾ ದಿನ ಇಂದು; ಧ್ವಜಾರೋಹಣ ವೇಳೆ ಕೆಳಗೆ ಬಿದ್ದ ಬಾವುಟ, ವಿಡಿಯೋ ಸಂದೇಶ ಬಿಡುಗಡೆ ಮಾಡಿದ ಸೋನಿಯಾ ಗಾಂಧಿ

Diganth: ಹಲವು ಚಿತ್ರಗಳಲ್ಲಿ ಬ್ಯುಸಿಯಾಗಿರುವ ನಟ ದಿಗಂತ್; ಅವರ ಖಾತೆಯಲ್ಲಿ ಒಟ್ಟು ಎಷ್ಟು ಸಿನಿಮಾಗಳಿವೆ ಗೊತ್ತಾ?

Follow us on

Related Stories

Most Read Stories

Click on your DTH Provider to Add TV9 Kannada