ಸಿದ್ದರಾಮಯ್ಯ ಕ್ಷೇತ್ರದಲ್ಲಿ ಗ್ರಾಮ ಪಂಚಾಯಿತಿ ಉಪಚುನಾವಣೆ ಬಹಿಷ್ಕರಿಸಿದ ಗ್ರಾಮಸ್ಥರು! ಕಾರಣ ಇಲ್ಲಿದೆ

ಸಿದ್ದರಾಮಯ್ಯ ಕ್ಷೇತ್ರದಲ್ಲಿ ಗ್ರಾಮ ಪಂಚಾಯಿತಿ ಉಪಚುನಾವಣೆ ಬಹಿಷ್ಕರಿಸಿದ ಗ್ರಾಮಸ್ಥರು! ಕಾರಣ ಇಲ್ಲಿದೆ
ಮತಗಟ್ಟೆ ಖಾಲಿಯಾಗಿದೆ

ಕುಟಕನಕೇರಿ ಗ್ರಾಮಸ್ಥರು ಈ ಬಾರಿ ಅಷ್ಟೇ ಅಲ್ಲದೇ 2015, 2020 ರಲ್ಲೂ ಚುನಾವಣೆ ಬಹಿಷ್ಕಾರ ಮಾಡಿದ್ದರು. ಇದಕ್ಕೆ ಕಾರಣ ಗ್ರಾಮ ಪಂಚಾಯತಿಯನ್ನು ತಮ್ಮೂರಿಗೆ ನೀಡದ ಕಾರಣ. 2015 ರಲ್ಲಿ ಕುಟಕನಕೇರಿ ಗ್ರಾಮಕ್ಕೆ ಗ್ರಾಮ ಪಂಚಾಯತಿ ಘೋಷಣೆಯಾಗಿತ್ತು.

TV9kannada Web Team

| Edited By: sandhya thejappa

Dec 28, 2021 | 8:50 AM

ಬಾಗಲಕೋಟೆ: ಚುನಾವಣೆಯಲ್ಲಿ ಮತದಾರರೆ ಪ್ರಭುಗಳು. ಮತದಾನ ಜನರ ಹಕ್ಕು. ಆದರೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕುಟಕನಕೇರಿ ಗ್ರಾಮದಲ್ಲಿ ತಮಗಿರುವ ಹಕ್ಕನ್ನೇ ಹತ್ತಿಕ್ಕಿ ಚುನಾವಣೆ ಬಹಿಷ್ಕಾರ ಮಾಡಿದ್ದಾರೆ. ಸಿದ್ದರಾಮಯ್ಯ ಕ್ಷೇತ್ರದ ಕುಟಕನಕೇರಿ ಗ್ರಾಮದಲ್ಲಿ ಬೆಳಿಗ್ಗೆಯಿಂದ ಸಂಜೆವರೆಗೂ ಒಂದೇ ಒಂದು ಮತ ಚಲಾವಣೆ ಆಗಿಲ್ಲ. ಇದರಿಂದ ಚುನಾವಣಾ ಸಿಬ್ಬಂದಿ ಖಾಲಿ ಖಾಲಿ ಕೂತಿದ್ದು, ಮತಗಟ್ಟೆ ಬಳಿ ಒಬ್ಬರೇ ಒಬ್ಬ ಮತದಾರರು ಕಾಣದೆ ಮತಗಟ್ಟೆ ಬಿಕೋ ಎನ್ನುತ್ತಿತ್ತು. ಯಾವುದೇ ಗಲಾಟೆ ಆಗಬಾರದೆಂದು ಸ್ಥಳದಲ್ಲಿ ಡಿಎಆರ್ ತುಕಡಿ ಸೇರಿದಂತೆ ಒಟ್ಟು 38 ಜನ ಪೊಲೀಸರು ಭದ್ರತೆಗೆ ನಿಯೋಜನೆಗೊಂಡಿದ್ದರು.

ಮತದಾನ ಬಹಿಷ್ಕಾರಕ್ಕೆ ಕಾರಣ? ಕುಟಕನಕೇರಿ ಗ್ರಾಮಸ್ಥರು ಈ ಬಾರಿ ಅಷ್ಟೇ ಅಲ್ಲದೇ 2015, 2020 ರಲ್ಲೂ ಚುನಾವಣೆ ಬಹಿಷ್ಕಾರ ಮಾಡಿದ್ದರು. ಇದಕ್ಕೆ ಕಾರಣ ಗ್ರಾಮ ಪಂಚಾಯತಿಯನ್ನು ತಮ್ಮೂರಿಗೆ ನೀಡದ ಕಾರಣ. 2015 ರಲ್ಲಿ ಕುಟಕನಕೇರಿ ಗ್ರಾಮಕ್ಕೆ ಗ್ರಾಮ ಪಂಚಾಯತಿ ಘೋಷಣೆಯಾಗಿತ್ತು. ಆದರೆ ನಂತರದ ರಾಜಕೀಯ ಮೇಲಾಟದಲ್ಲಿ ಕುಟಕನಕೇರಿ ಗ್ರಾಮಕ್ಕೆ ಬಂದ ಗ್ರಾಮ ಪಂಚಾಯತಿ ಕಚೇರಿಯನ್ನು ಕೆಂದೂರು ಗ್ರಾಮಕ್ಕೆ ವರ್ಗಾಯಿಸಲಾಗಿದೆ. ಹೀಗಾಗಿ ಗ್ರಾಮಸ್ಥರು ಅಂದಿನಿಂದ ಗ್ರಾಮ ಪಂಚಾಯತಿ ಮತದಾನ ಬಹಿಷ್ಕಾರ ಮಾಡುತ್ತಲೇ ಬಂದಿದ್ದಾರೆ. ಸದ್ಯ ಗ್ರಾಮದಲ್ಲಿ ಮತದಾನ ಸಿಬ್ಬಂದಿ ಎಲ್ಲ ಸಿದ್ಧತೆ ಮಾಡಿಕೊಂಡು ಕೂತಿದ್ದಾರೆ. ಆದರೆ ಒಬ್ಬರೂ ಮತದಾನ ಮಾಡಿಲ್ಲ. ಮತದಾನ ಮಾಡೋದಕ್ಕೆ ಯಾರನ್ನೂ ಬಿಡದೇ ಗ್ರಾಮಸ್ಥರು ಊರ ದ್ವಾರಬಾಗಿಲು ಹಾಗೂ ಊರ ಒಳಗಡೆ ಮತಗಟ್ಟೆಯಿಂದ ಅನತಿ ದೂರದಲ್ಲಿ ಕಾವಲು ಕೂತಿದ್ದಾರೆ.

ನಮ್ಮೂರಿಗೆ 2015 ರಲ್ಲಿ ಮೊದಲು ಗ್ರಾಪಂ ಕಚೇರಿ ಘೋಷಣೆ ಆಗಿತ್ತು. ಆದ ನಂತರ ರಾಜಕೀಯ ತಿಕ್ಕಾಟದಿಂದ ಕೆಂದೂರು ಗ್ರಾಮಕ್ಕೆ ವರ್ಗಾವಣೆ ಮಾಡಲಾಗಿದೆ. ಈ ಬಗ್ಗೆ ನಾವು ಹೋರಾಟ ಶುರು ಮಾಡಿದ್ದೇವೆ. ನಮ್ಮ ಕ್ಷೇತ್ರದ ಶಾಸಕ ಸಿದ್ದರಾಮಯ್ಯ ಅವರಿಗೆ ಅನೇಕ ಬಾರಿ ಮನವಿ ಮಾಡಿದ್ದೇವೆ. ಆದರೆ ಏನು ಪ್ರಯೋಜನವಾಗಿಲ್ಲ. ನಾವು ನಮ್ಮೂರಿಗೆ ಗ್ರಾಪಂ ಕಚೇರಿ ನೀಡುವವರೆಗೂ ಯಾವುದೇ ಕಾರಣಕ್ಕೂ ಮತದಾನ ಮಾಡುವುದಿಲ್ಲ ಅಂತ ಗ್ರಾಮದ ಪ್ರಶಾಂತ ಗೋಜಿ ಹೇಳಿದರು.

ಕುಟಕನಕೇರಿ ಗ್ರಾಮದಲ್ಲಿ ನಡೆದ ಗ್ರಾಪಂ ಉಪಚುನಾವಣೆ; ಅಭ್ಯರ್ಥಿಗಳು ಕೆಂದೂರು ಗ್ರಾಮಸ್ಥರು ಕೆಂದೂರು ಗ್ರಾಪಂ ವ್ಯಾಪ್ತಿಗೆ ಬರುವ ಕುಟಕನಕೇರಿ ಗ್ರಾಮದಲ್ಲಿ ಉಪಚುನಾವಣೆ ಇದೆ. ಆದರೆ ಇಲ್ಲಿ ಅಭ್ಯರ್ಥಿಗಳು ಮಾತ್ರ ಕೆಂದೂರು ಗ್ರಾಮದವರು. ಕುಟಕನಕೇರಿ ಗ್ರಾಮದವರು ಯಾರೂ ನಾಮಪತ್ರ ಸಲ್ಲಿಸಿಲ್ಲ. ಒಟ್ಟು ಏಳು ಸ್ಥಾನಗಳಿದ್ದು, ಇಬ್ಬರು ಅವಿರೋಧ ಆಯ್ಕೆಯಾಗಿದ್ದಾರೆ. ಎರಡು ಸ್ಥಾನಕ್ಕೆ ಯಾರೂ ನಾಮಪತ್ರ ಸಲ್ಲಿಸಿಲ್ಲ. ಇನ್ನುಳಿದ ಮೂರು ಸ್ಥಾನಗಳಿಗೆ ಕೆಂದೂರು ಗ್ರಾಮದ ಐದು ಜನರು ನಾಮಪತ್ರ ಸಲ್ಲಿಸಿದ್ದಾರೆ. ಕುಟಕನಕೇರಿ ಗ್ರಾಮಸ್ಥರು ಮಾತ್ರ ಸಾಮೂಹಿಕವಾಗಿ ಬಹಿಷ್ಕಾರ ಹಾಕಿದ್ದಾರೆ. ಸ್ಥಳಕ್ಕೆ ಬಂದ ಬಾದಾಮಿ ತಹಶೀಲ್ದಾರ್ ಸುಹಾಸ್ ಇಂಗಳೆ, ಚುನಾವಣೆ ಘೋಷಣೆಯಾದಾಗ ಗ್ರಾಮಸ್ಥರಿಗೆ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಿ ಎಂದು ಸಭೆ ಮಾಡಿ ಮನವಿ ಮಾಡಲಾಗಿತ್ತು. ಘೋಷಣೆ ಪ್ರಕಾರ ಚುನಾವಣೆ ನಡೆಸುತ್ತಿದ್ದೇವೆ. ಆದರೆ ಯಾರೂ ಮತ ಹಾಕಲು ಬರುತ್ತಿಲ್ಲ ಎಂದು ತಿಳಿಸಿದರು.

ಇದನ್ನೂ ಓದಿ

IND vs SA Live Score, 1st Test Day 2: ವಿರಾಮ ತೆಗೆದುಕೊಂಡ ಮಳೆರಾಯ; 3 ಗಂಟೆಗೆ ಮೈದಾನ ಪರೀಕ್ಷಿಸಲಿರುವ ಅಂಪೈರ್

‘ಬೆಳೆಯಲು ಆ ನಟಿಗೆ ಕನ್ನಡ ಬೇಕಿತ್ತು; ಈಗ ಕನ್ನಡದಲ್ಲಿ ಡಬ್​ ಮಾಡೋಕೆ ಟೈಂ ಇಲ್ಲ’: ವಿಶ್ವನಾಥ್ ಜಿ.ಪಿ. ಆಕ್ರೋಶ

Follow us on

Related Stories

Most Read Stories

Click on your DTH Provider to Add TV9 Kannada