ಬಿಕಾಂ ಪದವೀಧರನ ಕೃಷಿ ಪಯಣ; 20 ಎಕರೆ ಜಮೀನಿನಲ್ಲಿ ಸಮೃದ್ಧ ಬೆಳೆ, ಸ್ವಾವಲಂಬಿ ಜೀವನದ ಯಶೋಗಾಥೆ ಇಲ್ಲಿದೆ
ಆನಂದ ಮೋಕಾಶಿ ಅವರು 20 ಎಕರೆ ಜಮೀನಿನಲ್ಲಿ 8 ಎಕರೆ ಗೋಡಂಬಿ, ಎರಡು ಎಕರೆ ಜಾಗದಲ್ಲಿ ಶ್ರೀಗಂಧ, ತೇಗ, ಎರಡು ಎಕರೆಯಲ್ಲಿ ಶೇಂಗಾ, ರೇಷ್ಮೆ, ಕೋಳಿ ಫಾರಂ, ಮೇಕೆ ಸಾಕಾಣಿಕೆ ಮಾಡುತ್ತಿದ್ದಾರೆ. ರೇಷ್ಮೆಗೆ ಒಂದು ತಿಂಗಳಲ್ಲಿ 50-60 ಸಾವಿರ ಆದಾಯ ಗಳಿಸುತ್ತಿದ್ದಾರೆ.
ಬಾಗಲಕೋಟೆ: ಆತ ಓರ್ವ ಬಿಕಾಂ(Bcom) ಪದವೀಧರ. ಆತ ಮನಸ್ಸು ಮಾಡಿದರೆ ಯಾವುದೇ ಸರಕಾರಿ ಅಥವಾ ಖಾಸಗಿ ಸಂಸ್ಥೆಯಲ್ಲಿ ಉತ್ತಮ ಕೆಲಸ ಪಡೆದು ಜೀವನ ಮಾಡಬಹುದಿತ್ತು. ಆದರೆ ಆತನ ಮನಸ್ಸು ಸೆಳೆಯುತ್ತಿದ್ದು ಮಾತ್ರ ಕೃಷಿ ಕಾಯಕದ ಕಡೆ. ಕೃಷಿ ಅಪ್ಪಿಕೊಂಡ ಪದವೀಧರ ವ್ಯವಸಾಯ(Agriculture), ಉಪಕಸುಬು ಮೂಲಕ ಲಕ್ಷ ಲಕ್ಷ ಆದಾಯ ಗಳಿಸಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. ಹೌದು ಹೀಗೆ ಸಮಗ್ರ ಬೇಸಾಯ ಹಾಗೂ ಉಪಕಸುಬಿನಲ್ಲಿ ಯಶಸ್ಸು ಸಾಧಿಸಿರುವ ಇವರು ಹೆಸರು ಆನಂದ ಮೋಕಾಶಿ. ಬಾಗಲಕೋಟೆ ಜಿಲ್ಲೆಯ ಬೀಳಗಿಯ ತಾಲ್ಲೂಕಿನ ಬಾಡಗಿ ಗ್ರಾಮದವರು. ಬಾಡಗಿ ಹಾಗೂ ಬೀಳಗಿ ಕ್ರಾಸ್ನಲ್ಲಿ ಒಟ್ಟು ಸುಮಾರು 20 ಎಕರೆ ಜಮೀನಿನಲ್ಲಿ ಆನಂದ ಮೋಕಾಶಿ ಸಮಗ್ರ ಕೃಷಿ ಮಾಡುವ ಮೂಲಕ ಯಶಸ್ವಿ ರೈತನಾಗಿ(Farmer) ಯಶಸ್ಸು ಕಂಡಿದ್ದಾರೆ.
ಬಿಕಾಂ ಓದಿರುವ ಆನಂದ ಯಾವುದೇ ಸರ್ಕಾರಿ ಅಥವಾ ಖಾಸಗಿ ಕೆಲಸಕ್ಕೆ ಅರ್ಜಿ ಹಾಕಿ ಕೂರಲಿಲ್ಲ. ಬದಲಾಗಿ ತಮ್ಮ ಪಿತ್ರಾರ್ಜಿತವಾಗಿ ಬಂದಿದ್ದ ಭೂಮಿಯನ್ನೇ ನಂಬಿ ಮುನ್ನುಗ್ಗಿದ್ದರು. ಹೀಗೆ ಯಾವುದೇ ಭಯ ಇಲ್ಲದೇ ಮುನ್ನುಗ್ಗಿದ ಆನಂದ ಅವರು ಈಗ ಸಮಗ್ರ ಕೃಷಿಯಲ್ಲಿ ಯಶಸ್ಸು ಸಾಧಿಸಿದ್ದಾರೆ. ಪ್ರತಿ ವರ್ಷ ಆನಂದ ಅವರು 20 ರಿಂದ 25 ಲಕ್ಷದವರೆಗೂ ಆದಾಯ ಗಳಿಸುತ್ತಿದ್ದಾರೆ. ಇನ್ನು ತಮ್ಮಂತೆ ಎಲ್ಲ ರೈತರು ಆಗಲಿ ಅನ್ನೋದು ಆನಂದ ಅವರ ಆಶಯವಾಗಿದೆ. ಜೊತೆಗೆ ಕೃಷಿ ಕಡೆ ಆಸಕ್ತಿ ಇರೋರು ಕೇವಲ ಒಂದೆರಡು ಬೆಳೆಗೆ ಸೀಮಿತವಾಗಿರಬಾರದು. ಸಮಗ್ರ ಕೃಷಿ ಕಡೆಗೆ ಹೆಚ್ಚಿನ ಗಮನ ನೀಡಬೇಕು. ಅಲ್ಲದೇ ಉಪಕಸುಬಿನ ಮೂಲಕ ಕೃಷಿಯಲ್ಲಿ ಮುಂದುವರೆದರೆ ರೈತರಿಗೆ ನಷ್ಟ ಎನ್ನುವುದೇ ಇರುವುದಿಲ್ಲ ಎಂದು ಸಲಹೆ ನೀಡಿದ್ದಾರೆ.
ಆನಂದ ಮೋಕಾಶಿ ಅವರು 20 ಎಕರೆ ಜಮೀನಿನಲ್ಲಿ 8 ಎಕರೆ ಗೋಡಂಬಿ, ಎರಡು ಎಕರೆ ಜಾಗದಲ್ಲಿ ಶ್ರೀಗಂಧ, ತೇಗ, ಎರಡು ಎಕರೆಯಲ್ಲಿ ಶೇಂಗಾ, ರೇಷ್ಮೆ, ಕೋಳಿ ಫಾರಂ, ಮೇಕೆ ಸಾಕಾಣಿಕೆ ಮಾಡುತ್ತಿದ್ದಾರೆ. ರೇಷ್ಮೆಗೆ ಒಂದು ತಿಂಗಳಲ್ಲಿ 50-60 ಸಾವಿರ ಆದಾಯ ಗಳಿಸುತ್ತಿದ್ದಾರೆ. ಇನ್ನು ಪಿತ್ರಾರ್ಜಿತವಾಗಿ ಜಮೀನು ಬಂದಿದ್ರೂ ಈ ಹಿಂದೆ ಆನಂದ ಮನೆಯವರೂ ಯಾರೂ ಈ ರೀತಿಯ ಸಮಗ್ರ ಕೃಷಿ ಮಾಡಿರಲಿಲ್ಲ. ಕೇವಲ ಕಬ್ಬು ಇತರೆ ವಾಣಿಜ್ಯ ಬೆಳೆಗಳನ್ನು ಬೆಳೆಯುತ್ತಿದ್ದರು. ಯಾವಾಗ ಶಿಕ್ಷಣ ಮುಗಿಯಿತೋ ಆಗ ಆನಂದ ಅವರ ಒಲವು ಜಮೀನಿನ ಕಡೆ ಹೆಚ್ಚಾಯಿತು.
ಅಕ್ಕಪಕ್ಕದ ಬೇರೆ ಕೃಷಿ ಪದ್ಧತಿಗಳನ್ನು ಒಂದೊಂದಾಗಿಯೇ ಆನಂದ ತಮ್ಮ ಜಮೀನಿನಲ್ಲಿ ಅಳವಡಿಸಿಕೊಂಡು ಈಗ ಪರಿಪೂರ್ಣ ರೈತರಾಗಿದ್ದಾರೆ. ಇನ್ನು ಆನಂದ ಅವರ ಸಮಗ್ರ ಕೃಷಿಗಾಗಿ ರಾಜ್ಯೋತ್ಸವ, ಶ್ರೇಷ್ಠ ಕೃಷಿಕ, ಧಾರವಾಡ ಕೃಷಿ ವಿಶ್ವವಿದ್ಯಾಲಯದಿಂದ ಶ್ರೇಷ್ಠ ಕೃಷಿಕ ಅವಾರ್ಡ್ಗಳನ್ನು ಪಡೆದುಕೊಂಡಿದ್ದಾರೆ. ಒಟ್ಟಾರೆ ಕೇವಲ ನೌಕರಿ ಅಂತ ಕೂರದೆ ಕೃಷಿ ಕಡೆ ಮುಖ ಮಾಡಿದರೆ, ನಿರುದ್ಯೋಗ ಕೂಡ ದೂರ ಆಗುತ್ತದೆ. ಆನಂದ ಅವರು ಪದವೀಧರ ಆದರೂ ಕೃಷಿ, ಉಪಕಸುಬು ಮಾಡುವ ಮೂಲಕ ತಿಂಗಳಿಗೆ ಲಕ್ಷ ಲಕ್ಷ ಆದಾಯ ಪಡೆದು ಎಲ್ಲರಿಗೂ ಮಾದರಿಯಾಗಿದ್ದಾರೆ.
ವರದಿ: ರವಿ ಮೂಕಿ
ಇದನ್ನೂ ಓದಿ: ಶಾಂತವೇರಿ ಗೋಪಾಲಗೌಡರ ಹೆಸರಿನಲ್ಲಿ ಶ್ರೇಷ್ಠ ಕೃಷಿಕ, ಶ್ರೇಷ್ಠ ಶಾಸಕ ಎಂಬ ಎರಡು ಪ್ರಶಸ್ತಿ ಘೋಷಿಸಿದ ಸಿಎಂ ಬೊಮ್ಮಾಯಿ
ಬರಡು ಭೂಮಿಯಲ್ಲಿ ಮಿಶ್ರ ಬೆಳೆ ಬೆಳೆದ ಬೀದರ್ ರೈತ; ನೈಸರ್ಗಿಕ ಕೃಷಿ ಪದ್ಧತಿಯಿಂದಲೇ ವರ್ಷಕ್ಕೆ 20 ಲಕ್ಷ ರೂ. ಆದಾಯ
Published On - 9:43 pm, Mon, 14 March 22