ಬಾಗಲಕೋಟೆ: ಭಾವೈಕ್ಯತೆಯ ಮೊಹರಂ (Moharam) ಹಬ್ಬದ ಆಚರಣೆ ವೇಳೆ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿರುವ ಘಟನೆ ಬಾಗಲಕೋಟೆ (Bagalkot) ತಾಲೂಕಿನ ಕಲಾದಗಿ ಗ್ರಾಮದಲ್ಲಿ ಶನಿವಾರ ರಾತ್ರಿ ನಡೆದಿದೆ. ಘಟನೆಯಲ್ಲಿ ಪರಶುರಾಮ ಆಡಗಲ್, ಫಾರೂಖ್ ಎಂಬುವರಿಗೆ ಗಾಯಗಳಾಗಿವೆ. ಇವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಗ್ರಾಮದಲ್ಲಿ ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. ಕಲಾದಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದೇವರು ಎದುರುಗೊಳ್ಳುವ ವೇಳೆ ಮಜಲು ಹಚ್ಚಿದ ವಿಚಾರವಾಗಿ ಮಾತಿನ ಚಕಮಕಿ ನಡೆದು ಪರಸ್ಪರ ಕಲ್ಲಿನಿಂದ ಹೊಡೆದಾಡಿಕೊಂಡಿದ್ದಾರೆ. ಕಲಾದಗಿ ಗ್ರಾಮದಲ್ಲಿ ಪ್ರತಿವರ್ಷವೂ ಕೋಮು ಸೌಹಾರ್ದತೆಯಿಂದ ಮೊಹರಂ ಆಚರಣೆ ನಡೆಯುತ್ತಿತ್ತು. ಆದರೆ ಈ ಬಾರಿ ಎರಡು ಗುಂಪುಗಳ ಮಧ್ಯೆ ಗಲಾಟೆ ನಡೆದಿದೆ.
ಕಲಬುರಗಿ: ಭಾವೈಕ್ಯತೆಯ ಮೊಹರಂ ಹಬ್ಬವನ್ನು ನಿನ್ನೆ (ಜು.29) ನಾಡಿನಾದ್ಯಂತ ಅದ್ಧೂರಿಯಾಗಿ ಆಚರಿಸಲಾಯಿತು. ಹಿಂದೂ-ಮುಸ್ಲಿಂ ಬಾಂಧವರು ಒಟ್ಟಾಗಿ ವಿಜೃಂಭಣೆಯಿಂದ ಆಚರಿಸಿದರು. ಈ ಹಬ್ಬದ ದಿನದಂದೇ ಜಿಲ್ಲೆಯ ಚಿತ್ತಾಪುರ ತಾಲೂಕಿನ ಇಂಗಳಗಿ ಗ್ರಾಮದಲ್ಲಿ ಎರಡು ಕುಟುಂಬಗಳ ನಡುವೆ ಗಲಾಟೆ ನಡೆದಿದೆ.
ಇದನ್ನೂ ಓದಿ: ವಿಜಯಪುರ: ಮೊಹರಂ ನಿಮಿತ್ತ ಕೆಂಡದಲ್ಲಿ ಕಂಬಳಿ ಹಾಸಿ ಕುಳಿತ ವ್ಯಕ್ತಿ; ವಿಡಿಯೋ ವೈರಲ್
ಒಂದೇ ಸಮುದಾಯದ ಹೊನಗುಂಟಾ, ಗೋಟಾಳ್ ಕುಟುಂಬಗಳ ನಡುವೆ ಕಲ್ಲು ತೂರಾಟವಾಗಿ ಎಂಟು ಜನರಿಗೆ ಗಾಯಗಳಾಗಿವೆ. ಪ್ರೇಮ ವಿವಾಹಕ್ಕೆ ಸಂಬಂಧಿಸಿದಂತೆ ಎರಡು ಕುಟುಂಬದ ನಡುವೆ ಕಳೆದ ಕೆಲ ವರ್ಷಗಳಿಂದ ದ್ವೇಷವಿದ್ದ ಹಿನ್ನೆಲೆ ಗಲಾಟೆ ನಡೆದಿದೆ ಎನ್ನಲಾಗುತ್ತಿದೆ. ವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬೆಳಗಾವಿ: ಬೆಳಗಾವಿಯ ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ ಇಬ್ಬರು ಕೈದಿಗಳ ನಡುವೆ ಮಾರಾಮಾರಿ ನಡೆದಿದೆ. ಗಲಾಟೆಯಲ್ಲಿ ಓರ್ವ ಕೈದಿ ಸ್ಕ್ರೂಡ್ರೈವರ್ನಿಂದ ಮತ್ತೊಬ್ಬ ಕೈದಿಗೆ ಐದು ಬಾರಿ ಇರಿದು ಕೊಲೆ ಮಾಡಲು ಯತ್ನಿಸಿದ್ದಾನೆ. ಶಂಕರ ಭಜಂತ್ರಿ ಕೊಲೆ ಮಾಡಲು ಯತ್ನಿಸಿದ ಕೈದಿ. ಮಂಡ್ಯ ಮೂಲದ ಸಾಯಿಕುಮಾರ್ ಗಾಯಗೊಂಡ ವಿಚಾರಣಾಧೀನ ಕೈದಿ.
ಸಾಯಿಕುಮಾರ್ ಅವರಿಗೆ ಎದೆ, ಹೊಟ್ಟೆ, ಕಿವಿಗೆ ಗಾಯವಾಗಿದ್ದು, ಜಿಲ್ಲಾಸ್ಪತ್ರೆಯ ಐ.ಸಿ.ಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಜೈಲಿನಲ್ಲಿ ನಡೆದ ಈ ಘರ್ಷಣೆಯನ್ನು ಮುಚ್ಚಿಹಾಕಲು ಯತ್ನಿಸುತ್ತಿರುವ ಆರೋಪ ಕೇಳಿಬಂದಿದೆ. ಬೆಳಗಾವಿ ಜಿಲ್ಲಾಸ್ಪತ್ರೆ ಎದರು ಬಿಗಿ ಪೊಲೀಸ್ ಭದ್ರತೆ ನಿಯೋಜಿಸಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:17 am, Sun, 30 July 23