ಬಾಗಲಕೋಟೆ: ನಾನೇ ಮುಂದಿನ ಮುಖ್ಯಮಂತ್ರಿ ಎನ್ನುವ ಮೂಲಕ ಬಸವರಾಜ ಬೊಮ್ಮಾಯಿ (Basavaraj Bommai) ಅವರು ಸಚಿವ ಮುರುಗೇಶ್ ನಿರಾಣಿ ಅವರನ್ನು ನಗುನಗುತ್ತಲೇ ಕಾಲೆಳೆದ ವಿದ್ಯಮಾನಕ್ಕೆ ಮುಧೋಳದಲ್ಲಿ ನಡೆದ ಕಾರ್ಯಕ್ರಮ ಮಂಗಳವಾರ ಸಾಕ್ಷಿಯಾಯಿತು. ಆದರೆ, ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲೇ ಅವರು ನೀಡಿದ ಈ ಹೇಳಿಕೆ ಪಕ್ಷದಲ್ಲಿ ಚರ್ಚೆಗೆ ಗ್ರಾಸವಾಗುವ ಸಾಧ್ಯತೆ ಇದೆ. ಮುಧೋಳದ ಬೀಳಗಿ ಕ್ಷೇತ್ರದಲ್ಲಿ ನೀರಾವರಿ ಸೇರಿದಂತೆ ನೂರಾರು ಅಭಿವೃದ್ಧಿ ಕಾರ್ಯಗಳಾಗಿವೆ. ಆದರೆ, ಮುರುಗೇಶ್ ನಿರಾಣಿ ನನ್ನನ್ನೇ ಅಲ್ಲಿಗೆ ಕರೆದುಕೊಂಡು ಹೋಗಿಲ್ಲ. ನನ್ನನ್ನು ಕರೆದುಕೊಂಡು ಹೋದರೆ ಅಭಿವೃದ್ಧಿ ಚಟುವಟಿಕೆಗಳ ಬಗ್ಗೆ ನನಗೆ ಗೊತ್ತಾಗಬಹುದು ಎಂದು ಅವರು ಕರೆದೊಯ್ದಿಲ್ಲ. ಚಿಂತೆ ಮಾಡಬೇಡಿ, ನಾನು ಮತ್ತೆ ಮುಖ್ಯಮಂತ್ರಿಯಾಗಿ ಬೀಳಗಿಗೆ ಬರುತ್ತೇನೆ ಎಂದು ಬೊಮ್ಮಾಯಿ ಹೇಳಿದ್ದಾರೆ.
ನಂತರ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಕಾಂಗ್ರೆಸ್ನವರಂತೆ ನಮ್ಮದು ಬೋಗಸ್ ಗ್ಯಾರಂಟಿ ಅಲ್ಲ. ನಿಮ್ಮ ಅವಧಿಯಲ್ಲಾದ ಅಭಿವೃದ್ಧಿ ಕೆಲಸಗಳ ಪಟ್ಟಿ ಬಿಡುಗಡೆ ಮಾಡಿ. ನಮ್ಮ ಅವಧಿಯ ಅಭಿವೃದ್ಧಿ ಕೆಲಸಗಳ ಪಟ್ಟಿ ಬಿಡುಗಡೆ ಮಾಡುತ್ತೇವೆ. ಎಲ್ಲವನ್ನೂ ಜನರು ತೀರ್ಮಾನ ಮಾಡುತ್ತಾರೆ ಎಂದು ಕಾಂಗ್ರೆಸ್ಗೆ ಸವಾಲೆಸೆದರು.
ದೀನ ದಲಿತರು, ಹಿಂದುಳಿದವರನ್ನು 5 ವರ್ಷ ಬಾವಿಯಲ್ಲಿ ಹಾಕಿದ್ದೀರಿ. ಚುನಾವಣೆ ಬಂದಾಗ ಮೇಲೆತ್ತಿ ಮತ್ತೆ ಬಾವಿಯಲ್ಲಿಡುವುದು ನಿಮ್ಮ ಕೆಲಸ. ಈಗ ಆ ಸಮುದಾಯಗಳಿಗೆ ಅರಿವಾಗಿದೆ. ಎಸ್ಸಿ, ಎಸ್ಟಿ ಮೀಸಲಾತಿ ವಿಚಾರಕ್ಕೆ ಕೈ ಹಾಕಬೇಡಿ. ಆ ಸಮುದಾಯಗಳಿಗೆ ನ್ಯಾಯ ಕೊಡಿಸಲು ನಾನು ಆ ಜೇನುಗೂಡಿಗೆ ಕೈಹಾಕಿದೆ. ಜೇನುಹುಳು ಕಡಿದರೂ ಸಹಿಸಿಕೊಂಡು ಸಿಹಿ ನೀಡಲು ಕೈಹಾಕಿದ್ದೆ. ಇದು ಒಬ್ಬ ಆಡಳಿತಗಾರನಿಗೆ ಇರಬೇಕಾದ ನಿಯತ್ತು, ನೀತಿ, ಧಮ್ ಎಂದು ಕಾಂಗ್ರೆಸ್ ಅನ್ನು ಉದ್ದೇಶಿಸಿ ಬೊಮ್ಮಾಯಿ ಹೇಳಿದ್ದಾರೆ.
ಇದನ್ನೂ ಓದಿ: BS Yediyurappa: ಅಧಿಕಾರಕ್ಕೆ ಬಂದ ನಂತರ ಮುಖ್ಯಮಂತ್ರಿ ಯಾರೆಂಬ ತೀರ್ಮಾನ; ಯಡಿಯೂರಪ್ಪ
ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಮರಳಿದ ಬಳಿಕವಷ್ಟೇ ಮುಂದಿನ ಮುಖ್ಯಮಂತ್ರಿ ಯಾರೆಂಬುದನ್ನು ನಿರ್ಧರಿಸಲಾಗುವುದು ಎಂದು ಬಿಜೆಪಿ ನಾಯಕ ಬಿಎಸ್ ಯಡಿಯೂರಪ್ಪ ಸೋಮವಾರ ಹೇಳಿದ್ದರು. ಚಿತ್ರದುರ್ಗದ ಹಿರಿಯೂರಿನಲ್ಲಿ ಚುನಾವಣಾ ಪ್ರಚಾರ ಮತ್ತು ರೋಡ್ಶೋದಲ್ಲಿ ಭಾಗವಹಿಸಿದ್ದ ಅವರು, ರಾಜ್ಯದಲ್ಲಿ ನಮ್ಮ ನಿರೀಕ್ಷೆಗೂ ಮೀರಿ ಬಿಜೆಪಿ ಪರ ಉತ್ತಮ ವಾತಾವರಣ ಇದೆ. 140ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಲಿದೆ. ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬಂದ ನಂತರವಷ್ಟೇ ಮುಖ್ಯಮಂತ್ರಿ ಯಾರೆಂಬ ತೀರ್ಮಾನ ಆಗಲಿದೆ ಎಂದು ಹೇಳಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:09 pm, Tue, 21 March 23