AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಗಲಕೋಟೆ: ಕೆರೂರಿನಲ್ಲಿ ಹಿಂದೂ-ಮುಸ್ಲಿಂ ಯುವಕರ ಘರ್ಷಣೆ, ಉದ್ವಿಗ್ನ ವಾತಾವರಣ, ಶಾಲೆಗಳಿಗೆ ರಜೆ

ಕೆರೂರು ಪಟ್ಟಣದ ಎಲ್ಲ ಶಾಲಾ-ಕಾಲೇಜುಗಳಿಗೂ ರಜೆ ಘೋಷಿಸಲಾಗಿದೆ.

ಬಾಗಲಕೋಟೆ: ಕೆರೂರಿನಲ್ಲಿ ಹಿಂದೂ-ಮುಸ್ಲಿಂ ಯುವಕರ ಘರ್ಷಣೆ, ಉದ್ವಿಗ್ನ ವಾತಾವರಣ, ಶಾಲೆಗಳಿಗೆ ರಜೆ
ಕೆರೂರು ಪಟ್ಟಣದಲ್ಲಿ ತಳ್ಳುವ ಗಾಡಿಗಳಿಗೆ ಬೆಂಕಿ ಹಚ್ಚಲಾಗಿದೆ.
TV9 Web
| Edited By: |

Updated on:Jul 07, 2022 | 10:43 AM

Share

ಬಾಗಲಕೋಟೆ: ಬಾದಾಮಿ ತಾಲ್ಲೂಕಿನ ಕೆರೂರು ಪಟ್ಟಣದಲ್ಲಿ (Keruru) ಉದ್ವಿಗ್ನ ವಾತಾವರಣ (Communal Violence) ನೆಲೆಸಿರುವ ಹಿನ್ನೆಲೆಯಲ್ಲಿ ನಾಳೆ (ಜುಲೈ 8) ರಾತ್ರಿ 8 ಗಂಟೆಯವರೆಗೂ 144ನೇ ವಿಧಿಯ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಪಿ.ಸುನಿಲ್ ಕುಮಾರ್ ಆದೇಶ ಹೊರಡಿಸಿದ್ದಾರೆ. ಪಟ್ಟಣದ ಎಲ್ಲ ಶಾಲಾ-ಕಾಲೇಜುಗಳಿಗೂ ರಜೆ ಘೋಷಿಸಲಾಗಿದೆ. ನಿನ್ನೆ ರಾತ್ರಿ (ಜುಲೈ 6) ಎರಡು ಗುಂಪುಗಳು ಪರಸ್ಪರ ಹೊಡೆದಾಟಕ್ಕೆ ಇಳಿದವು. ಗುಂಪು ಘರ್ಷಣೆಯಲ್ಲಿ ಒಟ್ಟು ನಾಲ್ವರು ಗಾಯಗೊಂಡಿದ್ದಾರೆ. ಚಾಕು ಇರಿತದಿಂದ ಗಾಯಗೊಂಡ ಒಂದು ಗುಂಪಿನ ಮೂವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಲಕ್ಷ್ಮಣ, ಅರುಣ, ಯಮನೂರ ಗಾಯಗೊಂಡವರು. ಮತ್ತೊಂದು ಗುಂಪಿನ ಬಂದೇನವಾಜ್ ಗೋಕಾಕ ಎಂಬಾತ ಗಾಯಗೊಂಡಿದ್ದು, ಬಾಗಲಕೋಟೆ ನಗರದ ಕುಮಾರೇಶ್ವರ ಆಸ್ಪತ್ರೆಗೆ ‌ದಾಖಲು ಮಾಡಲಾಗಿದೆ.

ಗುಂಪು ಘರ್ಷಣೆ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಇಂದೂ ಸಹ (ಜುಲೈ 7) ಉದ್ವಿಗ್ನ ಸ್ಥಿತಿ ನೆಲೆಗೊಂಡಿದ್ದು, ಪಟ್ಟಣ ವ್ಯಾಪ್ತಿಯಲ್ಲಿ 144ನೇ ವಿಧಿಯ ಅನ್ವಯ ನಾಳೆ ರಾತ್ರಿ 8 ಗಂಟೆಯವರೆಗೂ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದು, ತರಕಾರಿ ಮಾರುಕಟ್ಟೆ ಬಿಕೋ ಎನ್ನುತ್ತಿದೆ. ಪಟ್ಟಣದಲ್ಲಿ ವ್ಯಾಪಕ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ಗಾಯಾಳುಗಳಾದ ಅರುಣ ಕಟ್ಟಿಮನಿ, ಲಕ್ಷ್ಮಣ ಕಟ್ಟಿಮನಿ, ಯಮನೂರು ಹಿಂದೂ ಜಾಗರಣ ವೇದಿಕೆ ಸದಸ್ಯರು ಎಂದು ತಿಳಿದುಬಂದಿದೆ. ಘಟನೆಯಲ್ಲಿ ತಳ್ಳುವ ಗಾಡಿಗೆ ಬೆಂಕಿ ಹಚ್ಚಿ, ಅಂಗಡಿ ಧ್ವಂಸಗೊಳಿಸಿ, ಬೈಕ್ ಜಖಂಗೊಳಿಸಲಾಗಿತ್ತು. ಪುಂಡರ ಹಾವಳಿಯಿಂದ ಹಾಳಾಗಿರುವ ತರಕಾರಿ ಅಂಗಡಿಗಳನ್ನು ವ್ಯಾಪಾರಸ್ಥರು ದುರಸ್ತಿ ಮಾಡಿಕೊಳ್ಳುತ್ತಿರುವ ದೃಶ್ಯ ಕಂಡು ಬಂತು.

ಸ್ಥಳಕ್ಕೆ ಎಸ್​ಪಿ ಜಯಪ್ರಕಾಶ, ಸಿಪಿಐ ಭೀಮಣ್ಣ ಭೇಟಿ ನೀಡಿ ಬಂದೋಬಸ್ತ್​ ಪರಿಶೀಲಿಸಿದರು. ಘರ್ಷಣೆಗೆ ನಿಖರ ಕಾರಣ ಮತ್ತು ಹೆಚ್ಚಿನ ವಿವರಗಳು ಇನ್ನಷ್ಟೇ ತಿಳಿದು ಬರಬೇಕಿದೆ.

ಕೆರೂರು ಪಟ್ಟಣಕ್ಕೆ ಉತ್ತರ ವಲಯ ಐಜಿಪಿ ಸತೀಶ್​ ಭೇಟಿ ನೀಡಿ ಮಾಹಿತಿ ಪಡೆದರು. ಎಸ್​ಪಿ ಜಯಪ್ರಕಾಶ್ ಅವರು ಕೆರೂರು ಪಟ್ಟಣದಲ್ಲೇ ಮೊಕ್ಕಾಂ ಹೂಡಿದ್ದಾರೆ. ಪಟ್ಟಣದಲ್ಲಿ ಸದ್ಯಕ್ಕೆ 150ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. ಘಟನೆ ಸಂಬಂಧ ಈವರೆಗೆ ಸುಮಾರು 18 ಮಂದಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ನಾಪತ್ತೆಯಾಗಿರುವ 15ಕ್ಕೂ ಹೆಚ್ಚು ಆರೋಪಿಗಳಿಗಾಗಿ ಹುಡುಕಾಟ ನಡೆದಿದೆ. ಕೆಎಸ್‌ಆರ್‌ಪಿ, ಡಿಎಆರ್, ಅಗ್ನಿಶಾಮಕ ತುಕಡಿಗಳನ್ನು ಪಟ್ಟಣದಲ್ಲಿ ನಿಯೋಜಿಸಲಾಗಿದೆ.

Published On - 7:33 am, Thu, 7 July 22