ಬಾಗಲಕೋಟೆ ಜಿಲ್ಲೆ ಬಾದಾಮಿ ಪುರಸಭೆ ಕಾಂಗ್ರೆಸ್ ತೆಕ್ಕೆಗೆ; ಗದಗ-ಬೆಟಗೇರಿ ನಗರಸಭೆ ಬಿಜೆಪಿ ಪಾಲು
13 ಕಾಂಗ್ರೆಸ್, 10 ಬಿಜೆಪಿ ಸದಸ್ಯರು ಇದ್ದು, ಅಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ ಆಯ್ಕೆಯಾದ ಅಭ್ಯರ್ಥಿಗಳ ಪರ 14 ಮತಗಳು ಚಲಾವಣೆಯಾಗಿದೆ. ಆ ಮೂಲಕ ಕಾಂಗ್ರೆಸ್ ಗೆಲುವಿನ ನಗೆ ಬೀರಿದೆ
ಬಾಗಲಕೋಟೆ: ಜಿಲ್ಲೆಯ ಬಾದಾಮಿ ಪುರಸಭೆ ಕಾಂಗ್ರೆಸ್(Congress) ಪಾಲಾಗಿದೆ. ಪುರಸಭೆಯ ಅಧ್ಯಕ್ಷರಾಗಿ ರಾಜಮೊಹಮ್ಮದ್ ಭಾಗವಾನ್, ಬಾದಾಮಿ ಪುರಸಭೆ(Purasabha) ಉಪಾಧ್ಯಕ್ಷರಾಗಿ ಶಾವಕ್ಕ ಕಾಗಿ ಆಯ್ಕೆಯಾಗಿದ್ದಾರೆ. ಒಟ್ಟು 23 ಸಂಖ್ಯಾ ಬಲದ ಪುರಸಭೆ ಇದಾಗಿದ್ದು, ಶಾಸಕ ಸಿದ್ದರಾಮಯ್ಯರ ಒಂದು ಮತ ಸೇರಿ ಒಟ್ಟು 24 ಮತವಾಗಿದೆ. 13 ಕಾಂಗ್ರೆಸ್, 10 ಬಿಜೆಪಿ(BJP) ಸದಸ್ಯರು ಇದ್ದು, ಅಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ ಆಯ್ಕೆಯಾದ ಅಭ್ಯರ್ಥಿಗಳ ಪರ 14 ಮತಗಳು ಚಲಾವಣೆಯಾಗಿದೆ. ಆ ಮೂಲಕ ಬಾಗಲಕೋಟೆ ಜಿಲ್ಲೆ ಬಾದಾಮಿಯಲ್ಲಿ ಕಾಂಗ್ರೆಸ್ ಗೆಲುವಿನ ನಗೆ ಬೀರಿದೆ
ಗದಗ-ಬೆಟಗೇರಿ ನಗರಸಭೆ ಬಿಜೆಪಿ ಪಾಲು
ಗದಗ-ಬೆಟಗೇರಿ ನಗರಸಭೆಯಲ್ಲಿ ಬಿಜೆಪಿ ಪಾಲಾಗಿದೆ. ಅಧ್ಯಕ್ಷೆಯಾಗಿ ಬಿಜೆಪಿಯ ಉಷಾ ದಾಸರ್, ಉಪಾಧ್ಯಕ್ಷರಾಗಿ ಸುನಂದಾ ಬಾಕಳೆ ಆಯ್ಕೆಯಾಗಿದ್ದಾರೆ. ಗದಗ ಬೆಟಗೇರಿ ನಗರಸಭೆಯಲ್ಲಿ ಗೊಂದಲದ ವಾತಾವರಣ ಇತ್ತು. ಈ ನಡುವೆ ತೀವ್ರ ಕುತೂಹಲ ಕೆರಳಿಸಿದ್ದ ಗದಗ ಬೆಟಗೇರಿ ನಗರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆಯಲ್ಲಿ ಬಿಜೆಪಿಗೆ ಗೆಲುವು ಸಾಧಿಸಿದೆ. ಸಂಖ್ಯೆ ಬಲ ಕಡಿಮೆ ಇದ್ದರು ಬಿಜೆಪಿಗೆ ಕಾಂಗ್ರೆಸ್ ಶಾಕ್ ನೀಡಿತ್ತು. ಕೈ ಎತ್ತುವ ಮೂಲಕ 19 ಮತಗಳನ್ನು ಬಿಜೆಪಿ ಅಭ್ಯರ್ಥಿಗಳು ಪಡೆದಿದ್ದಾರೆ. ಅಂತಿಮವಾಗಿ ನಗರಸಭೆ ಕಾರ್ಯಾಲಯದಲ್ಲಿ ಚುನಾವಣಾ ಅಧಿಕಾರಿ ರಾಯಪ್ಪ ಬಿಜೆಪಿ ಗೆಲುವನ್ನು ಘೋಷಣೆ ಮಾಡಿದ್ದಾರೆ.
ಬಾಗಲಕೋಟೆ: ಗುಳೇದಗುಡ್ಡ ಪುರಸಭೆ ಸ್ಥಾನಕ್ಕೆ ಕಾಂಗ್ರೆಸ್ ಅಭ್ಯರ್ಥಿಗಳು ಅವಿರೋಧ ಆಯ್ಕೆ
ವಿಪಕ್ಷ ನಾಯಕ ಸಿದ್ದರಾಮಯ್ಯ ಇಂದು (ಜ.24) ಬಾದಾಮಿ ಕ್ಷೇತ್ರಕ್ಕೆ ಆಗಮಿಸಿದ್ದರು. ಗುಳೇದಗುಡ್ಡ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಗೆ ಸಿದ್ದರಾಮಯ್ಯ ಬರುವುದಿರಂದ ಕುತೂಹಲ ಕೆರಳಿಸಿತ್ತು. ಇಲ್ಲಿ ಕಾಂಗ್ರೆಸ್ ಹೆಚ್ಚು ಸಂಖ್ಯೆಯಲ್ಲಿದ್ದರೂ ಜೆಡಿಎಸ್ ಸದಸ್ಯರು ನಾಮಪತ್ರ ಸಲ್ಲಿಸಿದ್ದರಿಂದ ಕುತೂಹಲ ಹೆಚ್ಚಾಗಿತ್ತು. ಈ ಹಿನ್ನೆಲೆ ಗುಳೇದಗುಡ್ಡ ಪುರಸಭೆ ಮುಂದೆ ಸಾಕಷ್ಟು ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು.
ಗುಳೇದಗುಡ್ಡ ಪುರಸಭೆಯ ಒಟ್ಟು 23 ಸ್ಥಾನದಲ್ಲಿ 15 ಕಾಂಗ್ರೆಸ್, ಬಿಜೆಪಿ 2, ಜೆಡಿಎಸ್ 5 ಪಕ್ಷೇತರ 1 ಸ್ಥಾನದಲ್ಲಿ ಆಯ್ಕೆಯಾಗಿದ್ದು, ಕಾಂಗ್ರೆಸ್ ಬಹುಮತವಿದೆ. ಈ ಹಿಂದೆ ಅಧ್ಯಕ್ಷರಾಗಿದ್ದ ಕಾಂಗ್ರೆಸ್ನ ಶಿಲ್ಪಾ ಹಳ್ಳಿ, ಉಪಾಧ್ಯಕ್ಷೆಯಾಗಿದ್ದ ಶರೀಫಾ ಮಂಗಳೂರ ಅವರ ಅವಧಿ ಒಡಂಬಡಿಕೆ ಪ್ರಕಾರ ಹತ್ತು ತಿಂಗಳಿಗೆ ಅಂತ್ಯವಾಗಿತ್ತು. ಆದರೆ ಕಾರಣಾಂತರಗಳಿಂದ ಅವರು ಹದಿನೈದು ತಿಂಗಳವರೆಗೂ ಅಧಿಕಾರದಲ್ಲಿದ್ದರು. ಈಗ ಅಧ್ಯಕ್ಷರಾಗಿ ಯಲ್ಲವ್ವ ಗೌಡರ, ಉಪಾಧಕ್ಷೆಯಾಗಿ ನಾಗರತ್ನಾ ಲಕ್ಕುಂಡಿ ಆಯ್ಕೆಯಾಗಿದ್ದಾರೆ.
ಗಮನ ಸೆಳೆದ ಪುರಸಭೆ ಸದಸ್ಯರ ಮಾತು ಸರ್ ನೀವು ಬಂದಿದ್ದೀರಿ ಅಂತ ನಮ್ಮ ಅಭ್ಯರ್ಥಿಗಳಾದ ಸುಮಿತ್ರಾ ಕೋಡಬಳೆ ಹಾಗೂ ಜ್ಯೋತಿ ಗೋವನಕೊಪ್ಪ ನಾಮಪತ್ರ ವಾಪಸ್ ಪಡೆದಿದ್ದೇವೆ. ಅಭಿವೃದ್ಧಿ ಮಾಡುತ್ತೀರಿ ಅಂತ ವಾಪಸ್ ಪಡೆದಿದ್ದೇವೆ ಅಂತ ಪುರಸಭೆ ಸದಸ್ಯರು ಹೇಳಿದರು. ಇದಕ್ಕೆ ಸಿದ್ದರಾಮಯ್ಯ ಆಯ್ತು ಅಭಿವೃದ್ಧಿ ಮಾಡೋಣ ಅಂದರು.
ಪತಿ ನೆನೆದು ಕಣ್ಣೀರು ಹಾಕಿದ ಅಧ್ಯಕ್ಷೆ ಯಲ್ಲವ್ವ ಗೌಡರ ಅಧಕ್ಷೆಯಾಗಿ ಆಯ್ಕೆ ಆಗುತ್ತಿದ್ದಂತೆ ಯಲ್ಲವ್ವ ಗೌಡರ ಕಣ್ಣೀರು ಹಾಕಿದರು. ಈ ಹಿಂದೆ ಪುರಸಭೆ ಸದಸ್ಯರಾಗಿದ್ದ ಯಲ್ಲವ್ವ ಪತಿ ಕಳೆದ ಸೆಪ್ಟೆಂಬರ್ನಲ್ಲಿ ಸಾವನ್ನಪ್ಪಿದ್ದರು. ಈಗ ಸಿದ್ದರಾಮಯ್ಯ ಸಮ್ಮುಖದಲ್ಲಿ ತಾನು ಆಯ್ಕೆಯಾಗಿದ್ದಕ್ಕೆ ಕಣ್ಣೀರು ಹಾಕಿದ ಯಲ್ಲವ್ವ ಅವರನ್ನು ಸಿದ್ದರಾಮಯ್ಯ ಸಮಾಧಾನ ಮಾಡಿದರು.
ಇದನ್ನೂ ಓದಿ: ಬಾಗಲಕೋಟೆ: ಗುಳೇದಗುಡ್ಡ ಪುರಸಭೆಯ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಅಭ್ಯರ್ಥಿಗಳು ಅವಿರೋಧ ಆಯ್ಕೆ
Published On - 5:38 pm, Mon, 24 January 22