ಬಾಗಲಕೋಟೆ: ಛತ್ರಪತಿ ಶಿವಾಜಿ ಮಹಾರಾಜರು (Chatrapati Shivaji) ಇಲ್ಲದೇ ಹೋಗಿದ್ದರೇ ನಾವೆಲ್ಲ ಹಿಂದೂಗಳಾಗಿ ಇರುತ್ತಿರಲಿಲ್ಲ. ಎಲ್ಲ ತುಂಡಾಗಿ ಹೋಗ್ತಿತ್ತು, ಎಲ್ಲಾ ತುಂಡು ತುಂಡು ಮಾಡಿ ಇಟ್ಟಿರುತ್ತಿದ್ದರು. ನಾನು ಸೀರಿಯಸ್ ಆಗಿ ಹೇಳುತ್ತಿದ್ದೇನೆ. ಯಾರಾದರೂ ಕೇಸ್ ಹಾಕಲಿ ನನ್ನ ಮೇಲೆ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ (KS Eshwarappa) ಸವಾಲು ಹಾಕಿದ್ದಾರೆ. ಬಾಗಲಕೋಟೆಯಲ್ಲಿ (Bagalkot) ಶಿವಾಜಿ ಮೂರ್ತಿ ತೆರವುಗೊಳಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು ಛತ್ರಪತಿ ಶಿವಾಜಿ ಮಹಾರಾಜರು ಈ ದೇಶದಲ್ಲಿ ಇದ್ದಿದ್ದಕ್ಕೆ ನಾವೆಲ್ಲ ಹಿಂದೂಗಳಾಗಿ ಉಳಿದ್ದಿದ್ದೇವೆ ಎಂದರು. (ಕೆಎಸ್ ಈಶ್ವರಪ್ಪ ಅವರು ಪರೋಕ್ಷವಾಗಿ ಮುಸ್ಲಿಂ ಧರ್ಮದ ಖತ್ನಾ (ಮುಂಜಿ) ಸಂಪ್ರದಾಯದ ಬಗ್ಗೆ ಹೇಳಿದ್ರಾ ಎಂಬ ಅನುಮಾನ ವ್ಯಕ್ತವಾಗಿದೆ)
ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರನ್ನು ಅಪಮಾನ ಮಾಡುವುದರಿಂದ ಮುಸಲ್ಮಾನರ ಓಟು ನಮಗೆ ಬರುತ್ತೆ ಅನ್ನೋ ಭ್ರಮೆಯಲ್ಲಿದ್ದಾರೆ ಅವರು. ಈ ಕಾಂಗ್ರೆಸ್ನವರು ದೇಶದ್ರೋಹಿಗಳಿಗೆ ಬೆಂಬಲ ಕೊಡುವ ವ್ಯಕ್ತಿಗಳು. ರಾಷ್ಟ್ರ ದ್ರೋಹಿಗಳಿಗೆ ಬೆಂಬಲ ಕೊಡುವ ಪಕ್ಷ ಕಾಂಗ್ರೆಸ್. ಮುಸ್ಲಿಂ ಲೀಗ್ ಸ್ವಲ್ಪ ಹಿಂದೆ ಮುಂದೆ ನೋಡುತ್ತೆ ಆದರೆ ಕಾಂಗ್ರೆಸ್ ನೋಡುತ್ತಿಲ್ಲ. ಶಿವಾಜಿ ಮಹಾರಾಜರ ರೋಮಕ್ಕೂ ಸಮ ಇಲ್ಲ ಈ ಕಾಂಗ್ರೆಸ್ನವರು ಎಂದು ವಾಗ್ದಾಳಿ ಮಾಡಿದರು.
ಕಾಂಗ್ರೆಸ್ ಆಡಳಿತ ಅವಧಿಯಲ್ಲಿನ ವ್ಯವಸ್ಥೆಗು, ಪ್ರಧಾನಿ ಮೋದಿ ಆಡಳಿತದಲ್ಲಿ ಬಂದ ವ್ಯವಸ್ಥೆಗೂ ಬಹಳ ಬದಲಾವಣೆ ಇದೆ. ಶಿವಾಜಿ ಮೂರ್ತಿಯನ್ನು ಎರಡು ದಿನ ಆದಮೇಲೆ ಯಾಕೆ ತೆಗೆದರು. ಎಸ್ಪಿ, ಡಿಸಿ ಎರಡೂ ಪೋಸ್ಟ್ ಖಾಲಿ ಇತ್ತಾ ? ಕಾಂಗ್ರೆಸ್ನ ಯಾವ ಮಂತ್ರಿ, ಜಿಲ್ಲಾಧಿಕಾರಿ ಮತ್ತು ಎಸ್ಪಿಗೆ ಧಮ್ಕಿ ಹಾಕಿ ಬ್ಲ್ಯಾಕ್ ಮೇಲ್ ಮಾಡಿದ್ದಾರೆ ಎಂಬುವುದರ ಕುರಿತು ತನಿಖೆ ಮಾಡನೇಕು. ಇದು ಬಾಗಲಕೋಟೆಗೆ ಮಾಡಿದ ಅವಮಾನ ಅಲ್ಲ. ಇಡೀ ದೇಶದ ಹಿಂದೂ ಸಮಾಜಕ್ಕೆ ಮಾಡಿದ ಅವಮಾನ. ಅನುಭವಿಸ್ತಾರೆ ಅನುಭವಿಸಲಿ ಎಂದರು.
ಇದನ್ನೂ ಓದಿ: ಬಾಗಲಕೋಟೆಯಲ್ಲಿ ಶಿವಾಜಿ ಮೂರ್ತಿ ತೆರವು: ಬಿಜೆಪಿಯ ಮಾಜಿ ಎಂಎಲ್ಎ ವಿರುದ್ಧ ಸ್ವಪಕ್ಷದ ಎಂಎಲ್ಸಿಯಿಂದ ಪರೋಕ್ಷ ಆರೋಪ
ಲೋಕಸಭಾ ಚುನಾವಣೆ ಬಳಿಕ ಕಾಂಗ್ರೆಸ್ ಸರ್ಕಾರದ ಪರಿಸ್ಥಿತಿ ನೋಡುವಿರಂತೆ. ದ್ದರಾಮಯ್ಯ ಪಕ್ಷಾಂತರ ವಿಚಾರದಲ್ಲಿ ಬಹಳ ಪ್ರಾವೀಣ್ಯತೆ ಹೊಂದಿದ್ದಾರೆ. ಜೆಡಿಎಸ್ನಿಂದ ಫಸ್ಟ್ ಕಾಂಗ್ರೆಸ್ಗೆ ಬಂದವರು ಇದೇ ಸಿದ್ದರಾಮಯ್ಯ. ಸಿದ್ದರಾಮಯ್ಯಗೆ ಪಕ್ಷಾಂತರದ ಬಗ್ಗೆ ಮಾತನಾರುವ ಅಧಿಕಾರವೇ ಇಲ್ಲ. ಕಾಂಗ್ರೆಸ್ನಲ್ಲಿ ಸರಿ ಇಲ್ಲ ಅಂತಾ 17 ಜನ ರಾಜೀನಾಮೆ ಕೊಟ್ಟು ಬಂದರು. ಒಬ್ಬರನ್ನೂ ವಾಪಸ್ ಸೇರಿಸಿಕೊಳ್ಳಲ್ಲ ಅಂತಾ ಸಿದ್ದರಾಮಯ್ಯ ಹೇಳಿದ್ದರು. ಈಗ ಯಾಕೆ ಅವರ ನಿವಾಸಕ್ಕೆ ಕೈ, ಕಾಲು ಹಿಡಿದುಕೊಂಡು ಹೋಗುತ್ತಿದ್ದೀರಿ. ಎಸ್.ಟಿ.ಸೋಮಶೇಖರ್ ನಿವಾಸಕ್ಕೆ ನಿನ್ನೆ ಮೂರು ಬಾರಿ ಹೋಗಿದ್ದಾರೆ. ಚುನಾವಣೆ ಸಮೀಕ್ಷೆ ಬಂದ ಬಳಿಕ ಸಿಎಂ ಹಾಗೂ ಡಿಸಿಎಂ ನಿದ್ದೆ ಮಾಡುತ್ತಿಲ್ಲ ಎಂದು ವ್ಯಂಗ್ಯವಾಡಿದರು.
ರಾಜ್ಯದಲ್ಲಿ ಬಿಜೆಗೆ 23 ಸ್ಥಾನ ಬರುತ್ತಿದ್ದಂತೆ ಈ ಸರ್ಕಾರ ಇರುತ್ತಾ? ನಾವು ಕರೆಯೋದೆ ಬೇಡ, ಅವರು ದಿಕ್ಕು ದಿಕ್ಕು ಹಾರಾಡೋಕೆ ಹೋಗುತ್ತಾರೆ. ಮುಂದೆ ಕಾಂಗ್ರೆಸ್ ಶಾಸಕರು ಯಾವ ಪಕ್ಷಕ್ಕೆ ಹೋಗುತ್ತಾರೆ ನೋಡುವಿರಂತೆ. ರಾಜ್ಯ ಸರ್ಕಾರದಲ್ಲಿ ಭ್ರಷ್ಟಾಚಾರ ಹಾಗೂ ವರ್ಗಾವಣೆ ದಂಧೆ ನಡೀತಿದೆ ಎಂದು ರಾಯರೆಡ್ಡಿ ಹೇಳಿದ್ದಾರೆ. ಮಗುವಿಗೆ ಈಗ 3 ತಿಂಗಳು ಆಗಿದೆ, ಇನ್ನೂ ಮೂರು ತಿಂಗಳು ಆಗಲಿ. ಲೋಕಸಭಾ ಚುನಾವಣೆ ಆಗಲಿ, ಬಳಿಕ ಇವರ ಪರಿಸ್ಥಿತಿ ನೋಡುವಿರಂತೆ ಎಂದು ಹೇಳಿದರು.
ಲೋಕಸಭೆ ಚುನಾವಣೆ ಹತ್ತಿರ ಬರುತ್ತಿರುವ ಸಂದರ್ಭದಲ್ಲಿ, ಒಬ್ಬರು, ಇಬ್ಬರು ಪಕ್ಷಾಂತರ ಮಾಡಿದರೆ, ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ ಆಗಿಬಿಡುತ್ತೆ ಎಂದು ಮಾಧ್ಯಮಗಳಲ್ಲಿ ವರದಿ ಆಗುತ್ತಿದೆ. ಕಳೆದ ಬಾರಿ ಇದೇ ರೀತಿಯ ಭಾವನೆಗಳನ್ನ ಕಾಂಗ್ರೆಸ್ ತಂದಿತ್ತು. ಒಂದು ಸೀಟ್ ಗೆಲ್ಲಲ್ಲ, ಎರಡು ಸೀಟ್ ಸಹ ಗೆಲ್ಲಲ್ಲ ಎಂದು ಹೇಳಿದ್ದರು. ಈಗಲೂ ಅದೇ ವಾತಾವರಣ ಇದೆ. ಯಾರೋ ಒಂದಿಬ್ರು ಅಲ್ಲಿ ಇಲ್ಲಿ ಹೋದರು ಅಂದ ಮಾತ್ರಕ್ಕೆ ಪಕ್ಷಕ್ಕೆ ಯಾವುದೇ ರೀತಿಯ ಪರಿಣಾಮಬೀರಲ್ಲ ಎಂದು ಹೇಳಿದ್ದಾರೆ.
ಬಿಜೆಪಿಯ ವಿಶೇಷ ಅಂದರೇ ಲಕ್ಷಾಂತರ ಕಾರ್ಯಕರ್ತರು ಕೆಲಸ ಮಾಡುತ್ತಿದ್ದಾರೆ. ಅವರೆಲ್ಲರ ಉದ್ದೇಶ ದೇಶ ಉಳಿಬೇಕು. ಈ ವಿಶ್ವವೇ ಮುನ್ನೆಡೆಸುವ ನಾಯಕ ಅಂದ್ರೆ ಮೋದಿ. ದೇಶಭಕ್ತಿ ಯಾವ ಪಕ್ಷದಲ್ಲಿದೆ, ಎಂದು ದೇಶದ ಜನ ಯೋಚನೆ ಮಾಡ್ತಾರೆ. ಹೀಗಾಗಿ ಯಾವುದೇ ಅಲ್ಲೋಲ ಕಲ್ಲೋಲ ಆಗಲ್ಲ. ಕಳೆದ ಬಾರಿ ರಾಜ್ಯದಲ್ಲಿ ಬಿಜೆಪಿಗೆ ೨೫ ಸ್ಥಾನ ಬಂದಿತ್ತು, ಈ ಬಾರಿಯೂ 25 ಕ್ಕೂ ಹೆಚ್ಚು ಸ್ಥಾನಗಳನ್ನ ಗೆಲ್ಲುತ್ತೇವೆ. ಈ ಬಾರಿಯೂ ಅದೇ ರೀತಿಯ ಪಲಿತಾಂಶ ಬರುತ್ತೆ ಎಂದು ಭವಿಷ್ಯ ನುಡಿದರು.
ಪ್ರಧಾನಿ ಮೋದಿಯವರು ಮೋದಿ ಬೆಂಗಳೂರಿಗೆ ಬಂದಾಗ ಬಿಜೆಪಿ ನಾಯಕರ ಪ್ರೇಕ್ಷಕರ ಗ್ಯಾಲರಿಯಲ್ಲಿ ನಿಂತ ಬಗ್ಗೆ ಕಾಂಗ್ರೆಸ್ ನಾಯಕರ ವ್ಯಂಗಭರಿತ ಪೋಸ್ಟ್ , ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು ಆ ಸುದ್ದಿ ಹಳಸಿಹೋಯ್ತು, ಈಗಾಗಲೇ ಮೂರು ದಿನಗಳಾಯ್ತು ಎಂದು ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.
ಬಿಜೆಪಿಯವರು ಗುತ್ತಿಗೆದಾರರ ಕಡೆಯಿಂದ ಆಣೆ ಪ್ರಮಾಣ ಮಾಡಿಸುತ್ತಿದ್ದಾರೆಂಬ ಡಿಕೆ ಶಿವಕುಮಾರ್ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು ಡಿಕೆ ಶಿವಕುಮಾರ್ ಅವರು ಮುಖ್ಯಮಂತ್ರಿನಾ? ಅಥವಾ ಸಿದ್ದರಾಮಯ್ಯ ಮುಖ್ಯಮಂತ್ರಿನಾ ? ಎಂದು ಅನುಮಾನ ಹುಟ್ಟುವ ತರಹದಲ್ಲಿ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ನಿಮ್ಮ ಕೈಯಲ್ಲೇ ಸರ್ಕಾರ ಇದೆ, ತನಿಖೆ ಮಾಡಿಸಿ ಎಂದು ಸವಾಲ್ ಹಾಕಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:48 am, Mon, 28 August 23