ಚಂದ್ರಯಾನ 3 ಯಶಸ್ವಿ: ಪ್ರಾರ್ಥನೆ ಸಲ್ಲಿಸಲು ಸೈಕಲ್ನಲ್ಲೇ 25 ಸಾವಿರ ಕಿಮೀ ದೂರದ ಮೆಕ್ಕಾಗೆ ಹೊರಟ ಬಾಗಲಕೋಟೆ ಯುವಕ
ಆಗಸ್ಟ್ 23 ರಂದು ಚಂದ್ರಯಾನ ಯಶಸ್ಸಿನ ನಂತರ ಇಡೀ ಜಗತ್ತೇ ಭಾರತದ ಕಡೆ ತಿರುಗಿ ನೋಡುತ್ತಿದೆ. ದಕ್ಷಿಣ ಧ್ರುವದಲ್ಲಿ ನಮ್ಮ ವಿಕ್ರಮ್ ಲ್ಯಾಂಡರ್ ಯಶಸ್ಸಿನ ಹೆಜ್ಜೆ ಇಟ್ಟಿದ್ದು, ಎಲ್ಲ ಕಡೆ ಇಸ್ರೊ ವಿಜ್ಞಾನಿಗಳಿಗೆ ಶಹಬ್ಬಾಷ್ ಗಿರಿ ಸಿಗುತ್ತಿದೆ. ಇದೀಗ ಅದೊಬ್ಬ ಮುಸ್ಲಿಂ ಯುವಕ ತ್ರಿವರ್ಣ ಧ್ವಜ ಹಿಡಿದು ಸೈಕಲ್ ಮೂಲಕ 25 ಸಾವಿರ ಕಿಮೀ ಯಾತ್ರೆ ಮಾಡಿ, ಇಸ್ರೊ ವಿಜ್ಞಾನಿಗಳ ಬಗ್ಗೆ ಮೆಕ್ಕಾದಲ್ಲಿ ದುವಾ ಮಾಡಲು ಮುಂದಾಗಿದ್ದಾನೆ.
ಬಾಗಲಕೋಟೆ,ಆ.27: ಕೊರಳಿಗೆ ಮಾಲಾರ್ಪಣೆ ಮಾಡಿ ಶುಭ ಕೋರುತ್ತಿರುವ ಸ್ನೇಹಿತರು. ಸೈಕಲ್ ಮೇಲೆ ತ್ರಿವರ್ಣ ಧ್ವಜ ಹಿಡಿದು ಸೈಕಲ್ ಸವಾರಿ ಮಾಡುತ್ತಿರುವ ಯುವಕ. ಅಂದ ಹಾಗೆ ಈ ದೃಶ್ಯ ಕಂಡುಬಂದಿದ್ದು ಬಾಗಲಕೋಟೆ (Bagalakote) ಜಿಲ್ಲೆಯ ಗದ್ದನಕೇರಿ ಕ್ರಾಸ್ನಲ್ಲಿ. ಇಲ್ಲಿ ಎಲ್ಲರ ಮಧ್ಯೆ ಸೈಕಲ್ ಮೇಲೆ ತ್ರಿವರ್ಣ ಧ್ವಜ ಹಿಡಿದು ಸೈಕಲ್ ಸವಾರಿ ಮಾಡುತ್ತಿರುವ ಯುವಕನ ಹೆಸರು ಹಸನ್ ರಜಿಯಾ. ಈ ಯುವಕ ಬಾಗಲಕೋಟೆ ತಾಲ್ಲೂಕಿನ ತನ್ನ ಊರು ಕಲಾದಗಿಯಿಂದ ಮೆಕ್ಕಾವರೆಗೆ ಬರೊಬ್ಬರಿ 25 ಸಾವಿರ ಕಿ.ಮೀ ಸೈಕಲ್ ಸವಾರಿ ಹೊರಟಿದ್ದಾನೆ.
ಇಸ್ರೊ ವಿಜ್ಞಾನಿಗಳ ಸಾಧನೆ; ಸೈಕಲ್ ಮೇಲೆ ತೆರಳಿ ಮೆಕ್ಕಾದಲ್ಲಿ ಪ್ರಾರ್ಥನೆ
ಹೌದು, ಈ ಕುರಿತು ಮಾತನಾಡಿದ ಹಸನ್ ರಜಿಯಾ ‘ಮೆಕ್ಕಾದಲ್ಲಿ ಇಸ್ರೊ ವಿಜ್ಞಾನಿಗಳ ಸಾಧನೆ ಚಂದ್ರಯಾನ ಯಶಸ್ಸಿನ ಹಿನ್ನೆಲೆ ಮೆಕ್ಕಾದಲ್ಲಿ ಪ್ರಾರ್ಥನೆ ಮಾಡಲಿದ್ದೇನೆ. ಭಾರತಕ್ಕೆ ಒಳ್ಳೆಯದಾಗಲಿ, ಇಸ್ರೊ ಇನ್ನು ಹೆಚ್ಚಿನ ಸಾಧನೆ ಮಾಡಲಿ ಎಂದು ಪವಿತ್ರ ಸ್ಥಳ ಮೆಕ್ಕಾದಲ್ಲಿ ಪ್ರಾರ್ಥನೆ ಸಲ್ಲಿಸುತ್ತೇನೆ. ಮೊದಲಿನಿಂದಲೂ ಮೆಕ್ಕಾವರೆಗೆ ಸೈಕಲ್ ಮೇಲೆ ಹೋಗಬೇಕೆಂಬ ಕನಸಿತ್ತು. ಆ ಕನಸು ಇದೀಗ ಈಡೇರುತ್ತಿದೆ. ನನ್ನ ವ್ಯಯಕ್ತಿಕ ಹರಕೆ ಜೊತೆಗೆ ದೇಶಕ್ಕೆ ಒಳ್ಳೆಯದಾಗಲಿ, ಚಂದ್ರಯಾನದಲ್ಲಿ ಸಾಧನೆ ಮಾಡಿದ ಇಸ್ರೊ ವಿಜ್ಞಾನಿಗಳಿಗೆ ಒಳ್ಳೆಯದಾಗಲಿ, ಇನ್ನೂ ಹೆಚ್ಚಿನ ಸಾಧನೆ ಇಸ್ರೊ ವಿಜ್ಞಾನಿಗಳು ಮಾಡಲಿ ಎಂದು ಪ್ರಾರ್ಥನೆ ಮಾಡುವುದಾಗಿ ಹೇಳಿದರು.
ಒಂದು ವರ್ಷದಿಂದ ಸೈಕಲ್ ಸವಾರಿ ಪ್ರ್ಯಾಕ್ಟೀಸ್
ಹಸನ್ ರಜಿಯಾ ಕಳೆದ ಒಂದು ವರ್ಷಕ್ಕೂ ಅಧಿಕ ಸಮಯದಿಂದ ಸೈಕಲ್ ಸವಾರಿ ಪ್ರ್ಯಾಕ್ಟೀಸ್ ಮಾಡುತ್ತಿದ್ದ. ಎಲ್ಲ ದಾಖಲಾತಿ ಸಿದ್ದ ಮಾಡಿಕೊಂಡು ಇಂದು(ಆ.27) ಕಲಾದಗಿ ಗ್ರಾಮದಿಂದ ಹೊರಟಿದ್ದಾನೆ. ಕಲಾದಗಿ ವಿಜಯಪುರ, ಸೊಲ್ಲಾಪುರ, ಮಧ್ಯಪ್ರದೇಶ, ದೆಹಲಿ ಮಾರ್ಗವಾಗಿ ಮೆಕ್ಕಾ ಪ್ರಯಾಣ ಕೈಗೊಂಡಿದ್ದಾರೆ. ದಿನಕ್ಕೆ 100 ರಿಂದ 120 ಕಿ.ಮೀ ಸೈಕಲ್ ಸವಾರಿ ಮಾಡಲಿದ್ದು, 2023 ರ ಜೂನ್ ತಿಂಗಳಲ್ಲಿ ಮೆಕ್ಕಾ ತಲುಪಲಿದ್ದಾನೆ. ಆ ವೇಳೆ ಹಜ್ ಶುಭಸಂದರ್ಭ ಬಂದಿರುತ್ತದೆ. ಆಗ ಮೆಕ್ಕಾದಲ್ಲಿ ಇಸ್ರೊ ಹಾಗೂ ದೇಶದ ಬಗ್ಗೆ ಅಲ್ಲಾನಲ್ಲಿ ವಿಶೇಷ ದುವಾ ಮಾಡೋದಾಗಿ ಹೇಳ್ತಿದ್ದಾನೆ.
ಇನ್ನು ಹಸನ್ ರಜಿಯಾ ಸೈಕಲ್ ಯಾತ್ರೆ ಮೂಲಕ ಮೆಕ್ಕಾ ಪ್ರಯಾಣ ಸುದ್ದಿ ಕೇಳಿ ಸುತ್ತಮುತ್ತಲಿನ ಗ್ರಾಮದ ಸ್ನೇಹಿತರು, ಮುಸ್ಲಿಂ-ಹಿಂದು ಸಮಾಜದ ಜನರು ಸ್ಥಳಕ್ಕೆ ಬಂದು, ಹೂಮಾಲೆ ಹಾಕಿ ಸನ್ಮಾನಿಸಿ ಪ್ರಯಾಣಕ್ಕೆ ಶುಭ ಕೋರಿದರು. ನೂರಾರು ಯುವಕರು ಬೈಕ್ ಮೂಲಕ ವಿಜಯಪುರವರೆಗೂ ತೆರಳಿ ಬೀಳ್ಕೊಟ್ಟರು. ಇಂದು ಹಸನ್ ರಜಿಯಾ ಸೈಕಲ್ ಮೂಲಕ ಹೊರಡಿದ್ದು, ಬಹಳ ಖುಷಿ ತಂದಿದೆ. ಅಲ್ಲಿ ಆತ ಕೇವಲ ವ್ಯಯಕ್ತಿಕವಾಗಲಿ ಕೇವಲ ಮುಸ್ಲಿಂ ಸಮಾಜದ ಪರವಾಗಿ ದುವಾ ಮಾಡುತ್ತಿಲ್ಲ. ಬದಲಿಗೆ ದೇಶ ಹಾಗೂ ಇಸ್ರೊ ಸಾಧನೆ ವಿಜ್ಞಾನಿಗಳ ಬಗ್ಗೆ ದುವಾ ಮಾಡುತ್ತೇನೆ ಎಂದು ಹೇಳಿರೋದು ಮತ್ತಷ್ಟು ಹೆಮ್ಮೆ ಮೂಡಿಸಿದೆ ಒಳ್ಳೆಯ ಸದುದ್ದೇಶದಿಂದ ಹೊರಟ ಹಸನ್ ಪ್ರಯಾಣ ಸುಖಕರವಾಗಲಿ ಎಂದರು.
ಒಟ್ಟಿನಲ್ಲಿ ಸದ್ಯ ಎಲ್ಲ ಕಡೆ ಇಸ್ರೊ ಬಗ್ಗೆ ಅಭಿಮಾನದ ಹೊಳೆ ಹರಿಯುತ್ತಿದೆ. ಮುಸ್ಲಿಂ ಯುವಕ ಮೆಕ್ಕಾದಲ್ಲಿ ಇಸ್ರೊ ಬಗ್ಗೆ ಪ್ರಾರ್ಥನೆ ಮಾಡೋದಾಗಿ ಹೇಳಿದ್ದು ಎಲ್ಲರಿಂದ ಉತ್ತಮ ಪ್ರಶಂಸೆ ವ್ಯಕ್ತವಾಗುತ್ತಿದೆ.
ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:01 pm, Sun, 27 August 23