ಸಾಲ ಮರುಪಾವತಿಸದ ಹಿನ್ನಲೆ ಹಲ್ಲೆ ಆರೋಪ: ಮಾಜಿ ಶಾಸಕ ಚರಂತಿಮಠ ಸೇರಿ ನಾಲ್ವರ ವಿರುದ್ಧ ದೂರು

| Updated By: ಗಂಗಾಧರ​ ಬ. ಸಾಬೋಜಿ

Updated on: Jan 09, 2025 | 9:04 PM

ಬಾಗಲಕೋಟೆಯ ಮಾಜಿ ಬಿಜೆಪಿ ಶಾಸಕ ವೀರಣ್ಣ ಚರಂತಿಮಠ ಅವರು ಹಿಂದೂ ಜಾಗರಣಾ ವೇದಿಕೆಯ ಜಿಲ್ಲಾಧ್ಯಕ್ಷ ಆನಂದ ಮುತ್ತಗಿ ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. 35 ಲಕ್ಷ ರೂ. ಸಾಲ ಮರುಪಾವತಿ ಮಾಡದಿರುವುದಕ್ಕೆ ಹಲ್ಲೆ ಮಾಡಲಾಗಿದೆ ಎನ್ನಲಾಗಿದೆ. ಚರಂತಿಮಠ ಸೇರಿ ನಾಲ್ವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಸಾಲ ಮರುಪಾವತಿಸದ ಹಿನ್ನಲೆ ಹಲ್ಲೆ ಆರೋಪ: ಮಾಜಿ ಶಾಸಕ ಚರಂತಿಮಠ ಸೇರಿ ನಾಲ್ವರ ವಿರುದ್ಧ ದೂರು
ಸಾಲ ಮರುಪಾವತಿಸದ ಹಿನ್ನೆಲೆ ಹಲ್ಲೆ ಆರೋಪ: ಮಾಜಿ ಶಾಸಕ ಚರಂತಿಮಠ ಸೇರಿ ನಾಲ್ವರ ವಿರುದ್ಧ ದೂರು
Follow us on

ಬಾಗಲಕೋಟೆ, ಜನವರಿ 09: ಬ್ಯಾಂಕ್ ಸಾಲ ಮರುಪಾವತಿ ಮಾಡದ ಹಿನ್ನಲೆ ಹಿಂದೂ ಜಾಗರಣಾ ವೇದಿಕೆ ಜಿಲ್ಲಾಧ್ಯಕ್ಷ ಆನಂದ ಮುತ್ತಗಿ ಮೇಲೆ ಮಾಜಿ ಶಾಸಕ ವೀರಣ್ಣ ಚರಂತಿಮಠ (veeranna charantimath) ವಿರುದ್ಧ ಹಲ್ಲೆ ಆರೋಪ ಕೇಳಿಬಂದಿದೆ. ಹಲ್ಲೆಗೊಳಗಾದ ಆನಂದ ಮುತ್ತಗಿಗೆ ಸದ್ಯ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಶಾಸಕ ವೀರಣ್ಣ ಚರಂತಿಮಠ ಸೇರಿ ನಾಲ್ವರ ವಿರುದ್ಧ ಬಾಗಲಕೋಟೆ ಶಹರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಚರಂತಿಮಠ ಬೀಳೂರು ಗುರುಬಸವ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿದ್ದಾರೆ. ಇದೇ ಸಹಕಾರ ಸಂಘದಿಂದ ಆನಂದ ಮುತ್ತಗಿ 35 ಲಕ್ಷ ರೂಪಾಯಿ ಸಾಲ ಪಡೆದಿದ್ದರು. 2018ರಿಂದ ಸಾಲ ಮರುಪಾವತಿ ಮಾಡದೆ ಬಾಕಿ ಉಳಿಸಿಕೊಂಡಿದ್ದರು. ಇದೀಗ ಸಾಲದ ಹಣ ಕಟ್ಟದಿದ್ದಕ್ಕೆ ವೀರಣ್ಣ ಚರಂತಿಮಠ ಹಲ್ಲೆ ಮಾಡಿದ್ದಾರೆಂದು ಆರೋಪ ಮಾಡಿದ್ದಾರೆ.

ನನಗೆ, ನನ್ನ ಕುಟುಂಬದವರಿಗೆ ಏನಾದ್ರೂ ಆದರೆ ಚರಂತಿಮಠ ಕಾರಣ: ಆನಂದ ಮುತ್ತಗಿ

ಈ ಬಗ್ಗೆ ಆನಂದ ಮುತ್ತಗಿ ಮಾಧ್ಯಮದವರೊಂದಿಗೆ ಮಾತನಾಡಿದ್ದು, ಬೀಳೂರು ಗುರುಬಸವ ಪತ್ತಿನ ಸಹಕಾರ ಸಂಘದಿಂದ ಸಾಲ ಪಡೆದಿದ್ದೆ. ಉದ್ಯಮದಲ್ಲಿ ನಷ್ಟವಾಗಿದ್ದರಿಂದ 35 ಲಕ್ಷ ರೂ. ಸಾಲ ಮರುಪಾವತಿಸಿರಲಿಲ್ಲ. ಜಮೀನು ಮಾರಾಟ ಮಾಡಿ ಸಾಲದ ಹಣ ಹಿಂದಿರುಗಿಸಲು ನಿರ್ಧರಿಸಿದ್ದೆ ಎಂದಿದ್ದಾರೆ.

ಇದನ್ನೂ ಓದಿ: ಕನ್ಯೆ ಸಿಗದ ಯುವ ರೈತರೇ ಇವರ ಟಾರ್ಗೆಟ್: ಉತ್ತರ ಕರ್ನಾಟಕದಲ್ಲಿ ಮದುವೆ ವಂಚನೆ ಜಾಲ?

ಸಹಕಾರ ಸಂಘದ ಸಿಬ್ಬಂದಿ ನನ್ನನ್ನು ಬಸವೇಶ್ವರ ಶಿಕ್ಷಣ ಸಂಸ್ಥೆ ಸಂಘದ ಕಚೇರಿಗೆ ಕರೆದುಕೊಂಡು ಹೋಗಿದ್ದರು. ನಾನು ಕಚೇರಿಗೆ ಹೋಗ್ತಿದ್ದಂತೆ ಅಧ್ಯಕ್ಷ ವೀರಣ್ಣ ಚರಂತಿಮಠ ನಿಂದಿಸಿದ್ದರು. ಅವಾಚ್ಯ ಶಬ್ದಗಳಿಂದ ನಿಂದಿಸಿ ಮಾನಸಿಕವಾಗಿ ಹಿಂಸಿಸಿ ಹಲ್ಲೆ ಮಾಡಿದ್ದರು. ಹಲ್ಲೆಯಿಂದ ನಾನು ಜಿಲ್ಲಾಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದೇನೆ. ನನ್ನ ಮೇಲೆ ಹಲ್ಲೆ ನಡೆಸಿದ ವೀರಣ್ಣ ಚರಂತಿಮಠ ಸೇರಿದಂತೆ ನಾಲ್ವರ ವಿರುದ್ಧ ದೂರು ದಾಖಲಿಸಿದ್ದೇನೆ. ನನಗೆ, ನನ್ನ ಕುಟುಂಬದವರಿಗೆ ಏನಾದ್ರೂ ಆದರೆ ಚರಂತಿಮಠ ಕಾರಣ ಎಂದು ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 9:02 pm, Thu, 9 January 25