ಆಂಧ್ರ ಪ್ರದೇಶದ ಶ್ರೀಶೈಲಂನಲ್ಲಿ (Srisailam) ಯುಗಾದಿ ಹಬ್ಬಕ್ಕೆ ದೇವರ ದರ್ಶನಕ್ಕೆ ತೆರಳಿದ್ದ ಕರ್ನಾಟಕದ ಭಕ್ತರೊಂದಿಗೆ ಅಲ್ಲಿನ ಸ್ಥಳೀಯ ವ್ಯಾಪಾರಿಗಳು ನಡೆಸಿದ ಜಗಳದಿಂದ ಪರಿಸ್ಥಿತಿ ಉದ್ವಿಗ್ನವಾಗಿದೆ. ಹೊಟೆಲ್ನಲ್ಲಿ ನೀರು ಕೇಳುವ ವಿಚಾರದಲ್ಲಿ ಪ್ರಾರಂಭವಾದ ಜಗಳದಲ್ಲಿ ಬಾಗಲಕೋಟೆ ಮೂಲದ ಯುವಕನಿಗೆ ಚಾಕು ಇರಿತವಾಗಿದೆ. ಸದ್ಯ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶ್ರೀಶೈಲ್ ವಾರಿಮಠ (28) ಚಾಕು ಇರಿತಕ್ಕೆ ಒಳಗಾದ ಯುವಕನಾಗಿದ್ದು, ಅವರ ಮನೆಯಲ್ಲಿ ಕುಟುಂಬಸ್ಥರು ಆತಂಕಕ್ಕೀಡಾಗಿದ್ದಾರೆ. ತಾಯಿ ಭಾರತಿ ಹಾಗೂ ಕುಟುಂಬಸ್ಥರು ಕಣ್ಣೀರು ಹಾಕುತ್ತಿದ್ದು, ಶ್ರೀಶೈಲ್ ಆರೋಗ್ಯದ ಬಗ್ಗೆ ಚಿಂತಾಕ್ರಾಂತರಾಗಿದ್ದಾರೆ. ಬಾಗಲಕೋಟೆ ಜಿಲ್ಲೆ ಬೀಳಗಿ ತಾಲ್ಲೂಕಿನ ಜಾನಮಟ್ಟಿ ಗ್ರಾಮದ ಶ್ರೀಶೈಲ್ ಶನಿವಾರ ಗ್ರಾಮದಿಂದ ಶ್ರೀಶೈಲಕ್ಕೆ ತೆರಳಿದ್ದರು. ರೇಲ್ವೆ ಮೂಲಕ ಹೋಗಿದ್ದ ಅವರು ನಂತರ ಕುಟುಂಬವನ್ನು ಸಂಪರ್ಕಿಸಿದ್ದರು. ‘‘ಪೂಜೆ ,ಅಭಿಷೇಕ ಮಾಡಿಸಿದ್ದೇನೆ. ಇಂದು ಗ್ರಾಮಕ್ಕೆ ಮರಳುವುದಾಗಿ ಅವರು ಹೇಳಿದ್ದರು. ಕಳೆದ ಹದಿನೈದು ವರ್ಷಗಳಿಂದ ಶ್ರೀಶೈಲಕ್ಕೆ ಅವರು ಯಾತ್ರೆ ಕೈಗೊಳ್ಳುತ್ತಿದ್ದರು. ಶ್ರೀಶೈಲ್ ಆರೋಗ್ಯದ ಬಗ್ಗೆ ಗೊಂದಲ ಮೂಡಿದ್ದು, ವದಂತಿಗಳು ಹರಿದಾಡಿವೆ. ಈ ಬಗ್ಗೆ ಕರ್ನೂಲ್ ಎಸ್ಪಿ ಮಾಹಿತಿ ನೀಡಿ ಶ್ರೀಶೈಲ್ ಬದುಕಿರುವುದಾಗಿ ತಿಳಿಸಿದ್ದಾರೆ. ಶ್ರೀಶೈಲ್ ಸಹೋದರ ಶಿವು ಸದ್ಯ ಆಸ್ಪತ್ರೆಗೆ ತೆರಳಿದ್ದಾರೆ.
ಘಟನೆ ಬಗ್ಗೆ ಬೀಳಗಿ ಠಾಣೆ ಪೊಲೀಸರು ಹಾಗೂ ಬಾಗಲಕೋಟೆ ಎಸ್ ಪಿ ಲೋಕೇಶ್ ಜಗಲಾಸರ್ ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ. ಬಾಗಲಕೋಟೆ ಎಸ್ಪಿ ಲೋಕೇಶ್ ಜಗಲಾಸರ್ ಮಾಹಿತಿ ನೀಡಿ, ಶ್ರೀಶೈಲ್ ವಾರಿಮಠ ಕೊಲೆ ಎಂಬುದು ಸದ್ಯಕ್ಕೆ ವದಂತಿ. ಯಾವುದೇ ಸಾವು ಆಗಿಲ್ಲ ಎಂದು ಕರ್ನೂಲ್ ಎಸ್ ಪಿ ಮಾಹಿತಿ ನೀಡಿದ್ದಾರೆ. ವದಂತಿ, ತಪ್ಪು ಸಂದೇಶ ಹೋಗಬಾರದು ಎಂದು ನುಡಿದಿದ್ದಾರೆ.
ಕರ್ನಾಟಕ ಮೂಲದ ಭಕ್ತರೊಬ್ಬರ ಮೇಲೆ ಮಾರಣಾಂತಿಕ ಹಲ್ಲೆ ಆರೋಪದ ಹಿನ್ನೆಲೆಯಲ್ಲಿ ಉಂಟಾದ ಘರ್ಷಣೆಯಲ್ಲಿ ಅಪಾರ ಹಾನಿಯಾಗಿದೆ. ಹಲವು ವಾಹನಗಳು ಜಖಂಗೊಂಡಿವೆ. ಗಲಾಟೆ ಹಿನ್ನೆಲೆಯಲ್ಲಿ ಸದ್ಯ ಶ್ರೀಶೈಲದಲ್ಲಿ ಅಂಗಡಿ-ಮುಂಗಟ್ಟುಗಳು ಬಂದ್ ಮಾಡಲಾಗಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಘಟನೆಯ ಬಗ್ಗೆ ಸಿಎಂ ಬೊಮ್ಮಾಯಿ ಪ್ರತಿಕ್ರಿಯೆ:
ಶ್ರೀಶೈಲದಲ್ಲಿ ಬಾಗಲಕೋಟೆಯ ಯುವಕನ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬೆಂಗಳೂರಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ. ಶ್ರೀಶೈಲದಲ್ಲಿ ಸ್ಥಳೀಯರು ಮತ್ತು ಭಕ್ತರ ನಡುವೆ ಗಲಾಟೆ ನಡೆದಿದೆ. ನಾನು ಆಂಧ್ರಪ್ರದೇಶದ ಅಧಿಕಾರಿಗಳ ಜೊತೆ ಚರ್ಚೆ ಮಾಡಿದ್ದೇನೆ. ಇಬ್ಬರಿಗೆ ತೀವ್ರವಾದ ಗಾಯವಾಗಿದೆ, ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಸಿಎಂ ತಿಳಿಸಿದ್ದಾರೆ.
ಇದನ್ನೂ ಓದಿ: ಆಂಧ್ರದ ಶ್ರೀಶೈಲದಲ್ಲಿ ಉದ್ವಿಗ್ನ ವಾತಾವರಣ; ಕರ್ನಾಟಕದ ವಾಹನಗಳು ಜಖಂ
ಸಿದ್ದರಾಮಯ್ಯ ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಾರೆ; ಕೊಪ್ಪಳದಲ್ಲಿ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ
Published On - 1:09 pm, Thu, 31 March 22