ಬಾಗಲಕೋಟೆ, ಜು.18: ಮುಧೋಳ(Mudhol) ತಾಲ್ಲೂಕಿನ ಬೆಳಗಲಿ ತೋಟದ ವಸತಿ ಪ್ರದೇಶದಲ್ಲಿ ನಡೆದಿದ್ದ ಅನಾಹುತದಲ್ಲಿ ಬೆಂಕಿಗೆ ತಾಯಿ-ಮಗಳು ಸುಟ್ಟು ಕರಕಲಾಗಿದ್ದರು. ಇತ್ತ ಸುಟ್ಟು ಗಂಭೀರ ಗಾಯಗೊಂಡಿದ್ದ ಮಗ ಇಂದು(ಜು.18) ಚಿಕಿತ್ಸೆ ಫಲಿಸದೆ ಮೃತನಾಗಿದ್ದಾನೆ. ಇದೇ ಜುಲೈ 16 ರಂದು ರಾತ್ರಿ 2.30 ರ ಸುಮಾರಿಗೆ ದುಷ್ಕರ್ಮಿಗಳು, ಈ ಶೆಡ್ಗೆ ಬೆಂಕಿ ಹಚ್ಚಿದ್ದರು. ನೂರು ಲೀಟರ್ ಸಾಮರ್ಥ್ಯದ ಸಿಂಟೆಕ್ಷ್ನಲ್ಲಿ ಪೆಟ್ರೋಲ್ ತಂದು, 2 ಎಚ್ಪಿ ಮೋಟರ್ ಅಳವಡಿಸಿ ಪೈಪ್ ಮೂಲಕ ದಸ್ತಗೀರಸಾಬ್ ಶೆಡ್ಗೆ ಪೆಟ್ರೋಲ್ ಸಿಂಪಡಿಸಿ ನಂತರ ಬೆಂಕಿ ಹಚ್ಚಿದ್ದರು. ಶೆಡ್ನಲ್ಲಿ 55 ವರ್ಷದ ಜೈಬಾನ್, 25 ವರ್ಷದ ಮಗಳು ಶಬಾನ್ ಸಜೀವ ದಹನವಾಗಿದ್ದರು. ದಸ್ತಗೀರಸಾಬ್, ಮಗಲ ಸುಬಾನ್, ಮೊಮ್ಮಗ ಸಿದ್ದಿಕ್ ಬದುಕಿ ಬಂದಿದ್ದರು. ಗಂಭೀರ ಗಾಯಗೊಂಡ ಸುಬಾನ್ ಪೆಂಡಾರಿಯನ್ನು ಬೆಳಗಾವಿ ಕೆಎಲ್ಇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಇಂದು 27 ವರ್ಷದ ಸುಬಾನ್ ಮೃತಪಟ್ಟಿದ್ದಾನೆ. ಇದರಿಂದ ಸಾವಿನ ಸಂಖ್ಯೆ ಮೂರಕ್ಕೆ ಏರಿದೆ.
ಸುದ್ದಿ ತಿಳಿದು ಘಟನಾ ಸ್ಥಳಕ್ಕೆ ಮುಧೋಳ, ಮಹಾಲಿಂಗಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಶ್ವಾನದಳ , ಎಫ್ಎಸ್ಎಲ್ ತಂಡದೊಂದಿಗೆ ತನಿಖೆ ಮುಂದುವರೆಸಲಾಗಿದೆ. ಘಟನೆ ನಡೆದು ಮೂರು ದಿನಗಳಾದರೂ ಇಂದಿಗೂ ಆರೋಪಿಗಳ ಬಂಧನವಾಗಿಲ್ಲ. ಈ ಬಗ್ಗೆ ಪೊಲೀಸರು ಮೃತರ ಸಂಬಂಧಿಕರಲ್ಲೇ ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ಆರೋಪಿಗಳ ಪತ್ತೆಗೆ ಐದು ತಂಡ ರಚನೆ ಮಾಡಿದ್ದಾರೆ.
ಇದನ್ನೂ ಓದಿ:ತೋಟದಲ್ಲಿ ನಿರ್ಮಿಸಿದ್ದ ಶೆಡ್ಗೆ ಬೆಂಕಿ ಹೆಚ್ಚಿದ ದುಷ್ಕರ್ಮಿಗಳು; ತಾಯಿ-ಮಗಳು ಸಜೀವ ದಹನ, ಇಬ್ಬರಿಗೆ ಗಾಯ
ಪ್ರಾಥಮಿಕ ಮಾಹಿತಿ ಪ್ರಕಾರ ಕೃತ್ಯಕ್ಕೆ ಇಂದು ಮೃತಟ್ಟ ಸುಬಾನ್ ಹೊಂದಿರುವ ಅನೈತಿಕ ಸಂಬಂಧ ಎಂದು ತಿಳಿದು ಬಂದಿದೆ. ಸುಟ್ಟು ಕರಕಲಾದವರನ್ನು ನೋಡಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಶಬಾನ್ ಎಮ್ಎ ಇಂಗ್ಲೀಷ್ ಫೈನಲ್ ಓದುತ್ತಿದ್ದು, ಪಿಎಸ್ಐ ಆಗಬೇಕೆಂದು ಕನಸು ಕಂಡಿದ್ದಳು. ಆದರೆ, ಬೆಂಕಿಯಲ್ಲೇ ಕನಸು ಕಮರಿದೆ. ಇದನ್ನು ನೆನೆದು ಸಹೋದರಿ ರೇಷ್ಮಾ ಕಣ್ಣೀರು ಹಾಕಿದ್ದಾರೆ. ಖಾಕಿ ಹಾಕಿಕೊಂಡು ಬರ್ತಿನಿ ಅಂದಿದ್ದಳು. ಈಗ ಬಿಳಿ ಬಟ್ಟೆಯಲ್ಲಿ ಶವ ನೋಡುವಂತಾಯಿತು ಎಂದು ರೋಧಿಸಿದ್ದಾರೆ. ಈ ಕೃತ್ಯವೆಸಗಿದವರನ್ನು ತುಂಡು ತುಂಡಾಗಿ ಕತ್ತರಿಸಬೇಕೆಂದು ಆಕ್ರೋಶ ಹೊರ ಹಾಕಿದರು. ಇಂದು ಸುಬಾನ್ ಮೃತಪಟ್ಟಿದ್ದು, ಇಡೀ ಕುಟುಂಬ ಮುಗಿಸಬೇಕೆಂದಿದ್ದ ದುಷ್ಕರ್ಮಿಗಳು ಮೂವರನ್ನು ಬಲಿ ಪಡೆದಂತಾಗಿದೆ. ಪೊಲೀಸರು ನಿರಂತರ ತನಿಖೆ ಮುಂದುವರೆಸಿದ್ದು, ಆದಷ್ಟು ಬೇಗ ದುಷ್ಕರ್ಮಿಗಳ ಬಂಧಿಸಬೇಕಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ