ಬಾಗಲಕೋಟೆ, ಜೂ.25: ತಗಡಿನ ಶೆಡ್ ಮನೆ ಮೇಲೆ ಹೈಟೆನ್ಶನ್ ವಿದ್ಯುತ್ ತಂತಿ ಹರಿದು ಬಿದ್ದು, ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬಾಗಲಕೋಟೆ ಜಿಲ್ಲೆಯ ತೇರದಾಳ(Terdal) ಪಟ್ಟಣದ ದಾಸರಮಡ್ಡಿಯಲ್ಲಿ ನಡೆದಿದೆ. ಸಂತೋಷ ಸುಣಗಾರ(22), ಮತ್ತು ಸಂತೋಷ್ ಅತ್ತೆ ಶೋಭಾ ಹುಲ್ಲೆಣ್ಣವರ (32) ಮೃತರು. ಇನ್ನುಳಿದಂತೆ ಶ್ರೀಕಾಂತ್ , ಮಹೇಶ್, ಕಸ್ತೂರಿ ಹಾಗೂ ಸಂಗೀತಾ ಕಾಮಶೆಟ್ಟಿ ಸೇರಿ ನಾಲ್ವರಿಗೆ ಗಾಯವಾಗಿದ್ದು, ಸ್ಥಳೀಯ ಸರಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ದಾಸರಮಡ್ಡಿಯಲ್ಲಿ ದುರ್ಗಾದೇವಿ ಜಾತ್ರೆಯಿತ್ತು. ಜಾತ್ರೆಗೆ ಎಲ್ಲರೂ ಮನೆಯಲ್ಲಿ ಸೇರಿದ್ದರು. ಜೊತೆಗೆ ಮೃತ ಸಂತೋಷ್ ಹಾಗೂ ಗಾಯಗೊಂಡ ಸಂಗೀತಾ ನಡುವೆ ಎಂಗೇಜ್ ಮೆಂಟ್ ಆಗಿದ್ದು, ಇದೇ ಜೂನ್ 28 ರಂದು ಮದುವೆಯಾಗಲಿದ್ದರು. ಆದರೆ, ಇದೀಗ ಈ ಅವಘಡ ಸಂಭವಿಸಿದ್ದು, ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಸ್ಥಳಕ್ಕೆ ತೇರದಾಳ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ:ಚಿಕ್ಕಮಗಳೂರು: ವಿದ್ಯುತ್ ಶಾಕ್ನಿಂದ ಬಾಲಕ ಸಾವು; ಅಧಿಕಾರಿ, ಸಿಬ್ಬಂದಿ ಸೇರಿ 8 ಮಂದಿ ಸಸ್ಪೆಂಡ್
ಕೊಪ್ಪಳ: ಜಿಲ್ಲೆಯ ಕುಷ್ಟಗಿ ತಾಲೂಕಿನ ಡೊಣ್ಣೆಗುಡ್ಡ ಗ್ರಾಮದಲ್ಲಿ ವಿದ್ಯುತ್ ಪ್ರವಹಿಸಿ ರೈತ ಸಾವನ್ನಪ್ಪಿದ್ದಾನೆ. ಗ್ರಾಮದ ದುರಗಪ್ಪ ಗ್ವಾಡಿ(45) ಮೃತ ವ್ಯಕ್ತಿ. ಪಂಪ್ಸೆಟ್ ಮೋಟಾರ್ ಆನ್ ಮಾಡುವಾಗ ಈ ದುರಂತ ಸಂಭವಿಸಿದೆ. ಈ ಕುರಿತು ಕುಷ್ಟಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಶಿವಮೊಗ್ಗ: ಶಿವಮೊಗ್ಗ ನಗರದ ಕಾಶಿಪುರದಲ್ಲಿ ಹೃದಯವಿದ್ರಾವಕ ಘಟನೆಯೊಂದು ನಡೆದಿದೆ. ಕಟ್ಟಡದ ಕೆಲಸ ಮಾಡುತ್ತಿದ್ದ ವೇಳೆ ಪಕ್ಕದಲ್ಲೇ ಇದ್ದ ಹೈಟೆನಕ್ಷನ್ ಲೈನ್ನಿಂದ ವಿದ್ಯುತ್ ಹರಿದು ಮೂರು ಅಂತಸ್ತಿನ ನಿರ್ಮಾಣ ಹಂತದ ಕಟ್ಟಡದಿಂದ ಗಣೇಶ್ (26) ಮತ್ತು ರಾಜು(35) ಎಂಬ ಇಬ್ಬರು ಕಾರ್ಮಿಕರು ಬಿದ್ದಿದ್ದಾರೆ. ಮತ್ತೊಬ್ಬ ಕಾರ್ಮಿಕ ವಿದ್ಯುತ್ ಶಾಕ್ನಿಂದ ನಿರ್ಮಾಣ ಹಂತದ ಕಟ್ಟಡಕ್ಕೆ ಅಳವಡಿಸಿದ ಸೆಂಟರಿಂಗ್ ಸಾರ್ವೆಯಲ್ಲಿ (ಕಬ್ಬಿಣದ ಸ್ಟ್ಯಾಂಡ್) ಸಿಕ್ಕು ಒದ್ದಾಡಿದ್ದಾನೆ. ಕೂಡಲೇ ಸ್ಥಳೀಯರು ಮತ್ತು ಇತರೆ ಕಟ್ಟಡ ಕಾರ್ಮಿಕರು ಇಬ್ಬರನ್ನು ರಕ್ಷಣೆ ಮಾಡಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ