
ಬಾಗಲಕೋಟೆ, ಡಿಸೆಂಬರ್ 25: ಕಾಕನೂರು ಗ್ರಾಮದಲ್ಲಿ ಎಸ್‌ಬಿಐ ದರೋಡೆ ಪ್ರಕರಣ ಸಂಬಂಧ ಇಬ್ಬರು ಖತರ್ನಾಕ್ ಕಳ್ಳರನ್ನು ಬಾದಾಮಿ ಪೊಲೀಸರು ಬಂಧಿಸಿದ್ದಾರೆ. ಮಹಾರಾಷ್ಟ್ರದ ಚಿಕಲಿ ತಾಲೂಕಿನ ನಯಗಾಂವ್ ನಿವಾಸಿಗಳಾದ ಅಕ್ಷಯ್ ಅಂಬೋರೆ ಮತ್ತು ಕುನಾಲ್ ಚವ್ಹಾಣ್ ಬಂಧಿತ ಆರೋಪಿಗಳು. ಬಂಧಿತರಿಂದ ಹಣ, ಚಿನ್ನಾಭರಣ, ವಾಹನ ಸೇರಿ ಹಲವು ವಸ್ತುಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
2025ರ ಸೆಪ್ಟೆಂಬರ್ 2ರಂದು ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲ್ಲೂಕಿನ ಕಾಕನೂರಿನ ಎಸ್‌ಬಿಐ ಲಾಕರ್ ಒಡೆದು ಚಿನ್ನಾಭರಣ ಮತ್ತು ಹಣ ದರೋಡೆ ಮಾಡಲಾಗಿತ್ತು. ಸಿಸಿ ಕ್ಯಾಮರಾಗಳಿಗೆ ಸ್ಪ್ರೇ ಹೊಡೆದು, ಮೊಬೈಲ್ ಬಳಕೆ ಮಾಡದೆ, ಫಿಂಗರ್ ಪ್ರಿಂಟ್ ಕೂಡ ಸಿಗದ ರೀತಿಯಲ್ಲಿ ಆರೋಪಿಗಳು ಬ್ಯಾಂಕ್ನಲ್ಲಿ ಕಳವು ಮಾಡಿದ್ದರು. ಕಳ್ಳತನ ನಡೆಸುವ ಆರು ತಿಂಗಳ ಹಿಂದೆಯೇ ಬ್ಯಾಂಕ್ಗೆ ಬಂದು ಹೇಗೆ ಕನ್ನ ಹಾಕಬಹುದು ಎಂದು ತಂತ್ರ ರೂಪಿಸಿದ್ದರು.
ಇದನ್ನೂ ಓದಿ: ಬ್ಯಾಂಕ್ಗಳ ರಾಬರಿ ಪ್ರಕರಣ; ಅಂತಾರಾಜ್ಯ ಕಳ್ಳರು ಅಂದರ್
ಬಂಧಿತ ಆರೋಪಿಗಳಿಂದ 25 ಲಕ್ಷ 90 ಸಾವಿರ ಮೌಲ್ಯದ ಚಿನ್ನಾಭರಣ, ಹಣ, ಕಳ್ಳತನಕ್ಕೆ ಬಳಸಿದ್ದ ಕಾರು, ಗ್ಯಾಸ್ ಕಟರ್, ಕಂಟ್ರಿಮೇಡ್ ಗನ್, ಎರಡು ಜೀವಂತಗುಂಡು, ರಾಡ್ ಸೇರಿ ಹಲವು ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಇದೇ ಪ್ರಕರಣ ಸಂಬಂಧ ಈ ಹಿಂದೆ ಬಾಗಲಕೋಟೆ ಜಿಲ್ಲಾ ಪೊಲೀಸರು ಉತ್ತರ ಪ್ರದೇಶದ ಕಕ್ರಾಳ ಗ್ರಾಮದ ಮಹಮ್ಮದ ನವಾನ್ ಹಾಗೂ ಕಮರುಲ್‌ಖಾನ್ ಎಂಬವರನ್ನು ಬಂಧಿಸಿದ್ದರು. ಒಟ್ಟು ನಾಲ್ವರು ಆರೋಪಿಗಳಿಂದ 62 ಲಕ್ಷ 20 ಸಾವಿರ ಮೌಲ್ಯದ 472.20 ಗ್ರಾಂ ಚಿನ್ನಾಭರಣ ಸೇರಿ ಹಣ ಜಪ್ತಿ ಮಾಡಲಾಗಿದೆ. ಆರೋಪಿಗಳು ಬೇರೆ ಬೇರೆ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಇವರಿಗೆ ಜೈಲಿನಲ್ಲಿ ಪರಸ್ಪರ ಪರಿಚಯವಾಗಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.