SBI special: 175 ದೇಶಗಳ ಜಿಡಿಪಿಗಿಂತ ಎಸ್ಬಿಐ ದೊಡ್ಡದು; ಖಾತೆದಾರರ ಸಂಖ್ಯೆ 190 ದೇಶಗಳ ಜನಸಂಖ್ಯೆಗಿಂತ ಹೆಚ್ಚು
State Bank of India milestones, records and achievements: ಎಸ್ಬಿಐ ಅಧಿಕೃತವಾಗಿ ಸ್ಥಾಪನೆಯಾಗಿ 70 ವರ್ಷ ಆಗಿದೆ. ಈ ಏಳು ದಶಕದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಗಾಧವಾಗಿ ಬೆಳೆದಿದೆ. ಇವತ್ತು ಅದರ ಬ್ಯಾಲನ್ಸ್ ಶೀಟ್ 66 ಲಕ್ಷ ಕೋಟಿ ರೂ ಇದೆ. ಇಷ್ಟು ದೊಡ್ಡ ಮೊತ್ತದಷ್ಟು ಜಿಡಿಪಿ ಹೊಂದಿದ ದೇಶಗಳ ಸಂಖ್ಯೆ 20ಕ್ಕಿಂತಲೂ ಕಡಿಮೆ. ಎಸ್ಬಿಐ ಖಾತೆದಾರರ ಸಂಖ್ಯೆ 53 ಕೋಟಿ ಇದೆ.

ಎಸ್ಬಿಐ
ನವದೆಹಲಿ, ಜುಲೈ 2: ಭಾರತದ ಅತಿದೊಡ್ಡ ಬ್ಯಾಂಕ್ ಎನಿಸಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI- State Bank of India) ಹಲವು ಮೈಲಿಗಲ್ಲು, ದಾಖಲೆಗಳನ್ನು ನಿರ್ಮಿಸಿದ ಹಣಕಾಸು ಸಂಸ್ಥೆ. ನಿನ್ನೆ (ಜುಲೈ 1) ಎಸ್ಬಿಐನ 70ನೇ ಸಂಸ್ಥಾಪನಾ ದಿನವಾಗಿತ್ತು. ಇದರ ಇತಿಹಾಸ ಎರಡು ಶತಮಾನಗಳಿಗೂ ಹೆಚ್ಚು ಸುದೀರ್ಘವಾಗಿದ್ದರೂ 1955ರ ಜೂನ್ 30ರಂದು ಎಸ್ಬಿಐ ಕಾಯ್ದೆ ಮೂಲಕ ಈ ಬ್ಯಾಂಕ್ನ ಅಧಿಕೃತ ರಚನೆಯಾಯಿತು. ಸರ್ಕಾರಿ ಸ್ವಾಮ್ಯದ ಈ ಬ್ಯಾಂಕ್ ಸಾಧನೆ, ಅಂಕಿ ಅಂಶಗಳು ಅಮೋಘವಾಗಿವೆ. ಆ ಹೈಲೈಟ್ಸ್ ಮುಂದಿವೆ…
ಸ್ಟೇಟ್ ಬ್ಯಾಂಕ್ ಇಂಡಿಯಾದ ಅಂಕಿ ಅಂಶ, ಸಾಧನೆಗಳು
- ಎಸ್ಬಿಐ ಬ್ಯಾಂಕ್ನ ಬ್ಯಾಲನ್ಸ್ ಶೀಟ್ 66 ಲಕ್ಷ ಕೋಟಿ ರೂ (0.77 ಟ್ರಿಲಿಯನ್ ಡಾಲರ್) ಇದೆ. ಜಗತ್ತಿನ 175 ದೇಶಗಳ ಜಿಡಿಪಿಗಿಂತ ಇದು ದೊಡ್ಡ ಮೊತ್ತ.
- 1955ರಲ್ಲಿ ಎಸ್ಬಿಐನಲ್ಲಿ ಠೇವಣಿ 210.95 ಕೋಟಿ ರೂ ಇತ್ತು. 2025ರ ಮಾರ್ಚ್ನಲ್ಲಿ ಇದು 53.82 ಲಕ್ಷ ಕೋಟಿ ರೂಗೆ ಏರಿದೆ.
- ಭಾರತದ ಜಿಡಿಪಿಗೆ ಎಸ್ಬಿಐ ಕೊಡುಗೆ ಶೇ 16 ರಷ್ಟಿದೆ. ಜಾಗತಿಕ ಜಿಡಿಪಿಯಲ್ಲಿ ಎಸ್ಬಿಐ ಪಾಲು ಶೇ. 1.1 ಇದೆ.
- ಎಸ್ಬಿಐನ ಗ್ರಾಹಕರ ಸಂಖ್ಯೆ ಬರೋಬ್ಬರಿ 53 ಕೋಟಿ. ಒಂದು ದೇಶದಲ್ಲಿ ಇಷ್ಟು ಸಂಖ್ಯೆಯ ಜನರು ಇದ್ದರೆ ಅದು ವಿಶ್ವದ ಮೂರನೇ ಅತಿದೊಡ್ಡ ಜನಸಂಖ್ಯಾ ದೇಶವೆನಿಸುತ್ತದೆ. ಅಂದರೆ, ಭಾರತ ಮತ್ತು ಚೀನಾ ಬಿಟ್ಟರೆ ಬೇರಾವ ದೇಶದಲ್ಲೂ ಇಷ್ಟು ಜನಸಂಖ್ಯೆ ಇಲ್ಲ.
ಇದನ್ನೂ ಓದಿ: Cost Inflation Index: ಬೆಲೆ ಉಬ್ಬರ ಸೂಚಿಯಲ್ಲಿ ಏರಿಕೆ; ತಗ್ಗಲಿದೆ ಟ್ಯಾಕ್ಸ್ ಹೊರೆ
- ಎಸ್ಬಿಐನ ಯೋನೋ ಆ್ಯಪ್ವೊಂದರಲ್ಲೇ 8.8 ಕೋಟಿ ನೊಂದಾಯಿತ ಬಳಕೆದಾರರಿದ್ದಾರೆ. ಇದೂ ಕೂಡ 18ನೇ ಅತಿದೊಡ್ಡ ಜನಸಂಖ್ಯಾ ದೇಶ ಎನಿಸಬಹುದು.
- ಎಸ್ಬಿಐ ಭಾರತದಾದ್ಯಂತ 23,000ಕ್ಕೂ ಅಧಿಕ ಶಾಖೆಗಳನ್ನು ಹೊಂದಿವೆ. 78,000 ಸರ್ವಿಸ್ ಸೆಂಟರ್ ಹಾಗೂ 64,000 ಎಟಿಎಂಗಳನ್ನು ಹೊಂದಿದೆ.
- ಎಸ್ಬಿಐ ಭಾರತದಲ್ಲಿ ಅತಿಹೆಚ್ಚು ಉದ್ಯೋಗ ನೀಡುವ ಬ್ಯಾಂಕ್ ಎನಿಸಿದೆ. ಒಟ್ಟು ಉದ್ಯೋಗಿಗಳ ಸಂಖ್ಯೆ 2,36,226 ಇದೆ.
- ಎಸ್ಬಿಐ ಭಾರತದ ಅತಿದೊಡ್ಡ ಬ್ಯಾಂಕ್ ಹಾಗೂ ವಿಶ್ವದ 43ನೇ ಅತಿದೊಡ್ಡ ಬ್ಯಾಂಕ್ ಎನಿಸಿದೆ.
- ಭಾರತದ ಸರ್ಕಾರಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಎಸ್ಬಿಐ ಕಿಂಗ್ ಎನಿಸಿದೆ. 2024-25ರಲ್ಲಿ ಇದು ಪಡೆದ ಲಾಭ 70,901 ಕೋಟಿ ರೂ. ಎಲ್ಲಾ ಸರ್ಕಾರಿ ಬ್ಯಾಂಕುಗಳ ಲಾಭವನ್ನು ಒತ್ತಟ್ಟಿಗೆ ಇಟ್ಟರೆ ಅದರಲ್ಲಿ ಎಸ್ಬಿಐ ಪಾಲು ಶೇ. 40ರಷ್ಟಾಗುತ್ತದೆ.
- 2025-26ರಲ್ಲಿ ಸಂದಾಯವಾದ ಭಾರತದ ಒಟ್ಟಾರೆ ಕಾರ್ಪೊರೇಟ್ ಆದಾಯ ತೆರಿಗೆಯಲ್ಲಿ ಎಸ್ಬಿಐ ಕೊಡುಗೆ ಶೇ. 2.53ರಷ್ಟಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




