ಬಾಗಲಕೋಟೆ: ಬಹಳ ದಿನಗಳಿಂದ ಬಾಗಲಕೋಟೆಯಲ್ಲಿ ವಿಮಾನ ನಿಲ್ದಾಣ ಸ್ಥಾಪನೆಯ ವಿಚಾರ ನನೆಗುದಿಗೆ ಬಿದ್ದಿದೆ. ಮುಂಬರುವ ದಿನಗಳಲ್ಲಿ ಯಾವ ಸ್ಥಳ ಸೂಕ್ತವೆಂದು ನೋಡಿ ಅಗತ್ಯವಿರುವ ಭೂಸ್ವಾಧೀನ ಮಾಡಿಕೊಳ್ಳುತ್ತೇವೆ. ನಂತರ ಏರ್ಪೋರ್ಟ್ ನಿರ್ಮಾಣ ಮಾಡಲು ಗಮನಹರಿಸುತ್ತೇವೆ ಎಂದು ಬಾಗಲಕೋಟೆಯಲ್ಲಿ ಬೃಹತ್ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ತಿಳಿಸಿದರು. 2022ರ ನವೆಂಬರ್ನಲ್ಲಿ ‘ಇನ್ವೆಸ್ಟ್ ಕರ್ನಾಟಕ’ ನಡೆಸುತ್ತೇವೆ. ಕೈಗಾರಿಕಾ ಬಂಡವಾಳ ಹೂಡಿಕೆಗೆ ಪ್ಲ್ಯಾನ್ ಮಾಡುತ್ತಿದ್ದೇವೆ. ಈ ವಿಚಾರವಾಗಿ ಸಿಎಂ ಹಾಗೂ ಅಧಿಕಾರಿಗಳ ಜೊತೆ ಸಭೆ ನಡೆಸುತ್ತೇವೆ. ಕೈಗಾರಿಕೆಗಳ ಒಕ್ಕೂಟಗಳ ಜೊತೆ ಚರ್ಚಿಸಿ ದಿನಾಂಕ ನಿಗದಿ ಮಾಡುತ್ತೇವೆ. ಬಂಡವಾಳ ಹೂಡಿಕೆದಾರರಿಗೆ ಎಲ್ಲಾ ಅನುಕೂಲ ಕಲ್ಪಿಸುತ್ತೇವೆ. ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ಕೈಗಾರಿಕೆಗೆ ಬೇಕಾದ ಭೂಮಿ, ಮೂಲಸೌಲಭ್ಯ ಕಲ್ಪಿಸುತ್ತೇವೆ ಎಂದು ಅವರು ಸ್ಪಷ್ಟಪಡಿಸಿದರು.
ಸರ್ಕಾರಗಳು ಇನ್ಮುಂದೆ ಹೊಸ ಫ್ಯಾಕ್ಟರಿಗಳನ್ನ ಮಾಡುವುದಿಲ್ಲ. ಇಂದು ಕರ್ನಾಟಕ ಅಷ್ಟೇ ಅಲ್ಲದೇ ದೇಶದಲ್ಲಿ ಎಲ್ಲ ಸೆಕ್ಟರ್ಗಳಲ್ಲಿ ಸ್ವಂತ ಬಂಡವಾಳವನ್ನು ಹೂಡುವ ಶಕ್ತಿ ಎಲ್ಲರಿಗೂ ಬಂದಿದೆ. ಖಾಸಗಿಯವರಿಗೆ ಅನುಕೂಲ ಆಗುವಂಥ ಶಾಸನ ಮಾಡುತ್ತೇವೆ. ಬಾಗಲಕೋಟೆಗೆ ಟೆಕ್ಸ್ಟೈಲ್ ತರಬೇಕೆಂಬ ಯೋಜನೆ ಇದೆ. ಹಿಂದೆ ಕೈಗಾರಿಕೆ ಮಂತ್ರಿ ಆಗಿದ್ರಿ? ಆಗ ಯಾವುದೇ ಕೈಗಾರಿಕೆ ಆಗಲಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಮ್ಮ ಕಡೆ ಬಂಡವಾಳ ಹಾಕುವವರು ಮುಂದೆ ಬರಬೇಕಲ್ವ? ಕನ್ಯೆ ತೋರಿಸುವುದು, ಮದುವೆ ಹುಡುಗನ ಜೋಡಿಸುವುದು ಸರ್ಕಾರದ ಕೆಲಸ. ಮದುವೆ ಮಾಡಿಕೊಳ್ಳುವುದು, ಒಪ್ಪೋದು ಬಿಡೋದು ಅವರಿಗೆ ಬಿಟ್ಟಿದ್ದು ಎಂದು ಸ್ಪಷ್ಟಪಡಿಸಿದರು.
ಕಲಬುರಗಿಯ ಜನರು ಬಹಳ ಲೇಜಿ
ಕಲಬುರಗಿ ಜಿಲ್ಲೆಯ ಜನರಿಗೆ ನೀರಾವರಿ ಮಾಡುವ ಅಭ್ಯಾಸವಿಲ್ಲ. ಕಲಬುರಗಿಯಲ್ಲಿ ನದಿ ಇದ್ರೂ ನೀರಾವರಿ ಮಾಡುವ ಅಭ್ಯಾಸವಿಲ್ಲ.‘ಕಲಬುರಗಿ ಜಿಲ್ಲೆಯ ಜನ ಬಹಳ ಲೇಜಿ. ಜಿಲ್ಲೆಯ ಪ್ರತಿ ತಾಲೂಕಿಗೂ ಒಂದೊಂದು ಬಸ್ ಬಿಟ್ಟು ಪ್ರವಾಸ ಏರ್ಪಡಿಸುತ್ತೇವೆ. ನೀರಾವರಿ ಪ್ರದೇಶಗಳಿಗೆ ಪಿಕ್ನಿಕ್ಗೆ ಕರೆದೊಯ್ಯಲು ವ್ಯವಸ್ಥೆ ಮಾಡುತ್ತೇವೆ. ಕೊಲ್ಹಾಪುರ, ಸಾಂಗ್ಲಿ, ಮುಧೋಳ, ಬಾದಾಮಿ ಕಡೆ ಪ್ರವಾಸ ಏರ್ಪಡಿಸಿ ಅಂತಹ ಭಾಗದಲ್ಲಿ ಹೇಗೆ ನೀರಾವರಿ ಮಾಡುತ್ತಾರೆಂದು ತೋರಿಸುತ್ತೇವೆ. 100 ಎಕರೆಯಲ್ಲಿ ಇಸ್ರೇಲ್ ಮಾದರಿಯಲ್ಲಿ ನೀರಾವರಿ ಮಾಡುತ್ತೇವೆ ಎಂದು ಅವರು ತಿಳಿಸಿದರು.
ಕಲಬುರಗಿ ಜಿಲ್ಲಾ ಉಸ್ತುವಾರಿ ನೀಡುವಂತೆ ಸಿಎಂಗೆ ಕೇಳಿದ್ದೇನೆ. ಕಲಬುರಗಿ ಜಿಲ್ಲೆಯನ್ನು ಅಭಿವೃದ್ಧಿ ಪಡಿಸಲು ಸವಾಲಾಗಿ ಸ್ವೀಕಾರ ಮಾಡಿದ್ದೇನೆ. ಕಳೆದ 70 ವರ್ಷಗಳಲ್ಲಿ ಶಿಕ್ಷಣದಲ್ಲಿ ಕಲಬುರಗಿ ಜಿಲ್ಲೆ ಱಂಕಿಂಗ್ ಪಟ್ಟಿಯಲ್ಲಿ 10ರೊಳಗೆ ಬಂದಿಲ್ಲ. ಮುಂದಿನ ವರ್ಷಗಳಲ್ಲಿ 10ರೊಳಗೆ ತರುವ ಪ್ರಯತ್ನ ಮಾಡುತ್ತೇನೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ:
ಕೈಗಾರಿಕಾ ಪ್ರದೇಶದಲ್ಲಿ ರೆಸಿಡೆನ್ಷಿಯಲ್ ಟೌನ್ಶಿಪ್ ನಿರ್ಮಾಣ; ಸಚಿವ ಮುರುಗೇಶ್ ನಿರಾಣಿ ನಿರ್ಧಾರ
ಡಿಸೆಂಬರ್ ಅಧಿವೇಶನ ಸುವರ್ಣಸೌಧದಲ್ಲಿ ನಡೆಸುವೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
(Karnataka Minister Murugesh Nirani says will Construct airport in Bagalkot and arrange Invest Karnataka in 2022)
Published On - 7:32 pm, Sat, 21 August 21