ಡಿಸೆಂಬರ್ ಅಧಿವೇಶನ ಸುವರ್ಣಸೌಧದಲ್ಲಿ ನಡೆಸುವೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
Basavaraj Bommai: ಸುವರ್ಣಸೌಧಕ್ಕೆ ಸಕ್ಕರೆ ಆಯುಕ್ತಾಲಯ ವರ್ಗಾಯಿಸುವೆ. ಸುವರ್ಣಸೌಧ ಸಮರ್ಪಕವಾಗಿ ಬಳಸಿಕೊಳ್ಳಲು ನಿರ್ಧರಿಸಿದ್ದೇವೆ ಎಂದು ಬೆಳಗಾವಿ ಸುವರ್ಣ ಸೌಧದಲ್ಲಿ ನೆರೆ ಹಾಗೂ ಕೊವಿಡ್19 ಪರಿಸ್ಥಿತಿ ಪರಿಶೀಲನೆ ಸಭೆ ನಡೆಸಿದ ಬಳಿಕ ಮಾತನಾಡಿದ ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.
ಬೆಳಗಾವಿ: ಡಿಸೆಂಬರ್ನಲ್ಲಿ ಸುವರ್ಣಸೌಧದಲ್ಲಿ ಅಧಿವೇಶನ ನಡೆಸುವೆ ಎಂದು ಬೆಳಗಾವಿ ಸುವರ್ಣಸೌಧದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ. ಸುವರ್ಣಸೌಧಕ್ಕೆ ಸಕ್ಕರೆ ಆಯುಕ್ತಾಲಯ ವರ್ಗಾಯಿಸುವೆ. ಸುವರ್ಣಸೌಧ ಸಮರ್ಪಕವಾಗಿ ಬಳಸಿಕೊಳ್ಳಲು ನಿರ್ಧರಿಸಿದ್ದೇವೆ. ಪೂರ್ಣ ಪ್ರಮಾಣದಲ್ಲಿ ಇಲಾಖೆ ವರ್ಗಾವಣೆಗೆ ಆದೇಶಿಸುವೆ. ಬೆಂಗಳೂರಿಗೆ ತೆರಳಿದ ನಂತರ ಆದೇಶ ಹೊರಡಿಸುವೆ. ಇದರ ಜೊತೆಗೆ ಮತ್ತಷ್ಟು ಇಲಾಖೆ ವರ್ಗಾವಣೆ ಆದೇಶಿಸುವೆ ಎಂದು ಬೆಳಗಾವಿ ಸುವರ್ಣ ಸೌಧದಲ್ಲಿ ನೆರೆ ಹಾಗೂ ಕೊವಿಡ್19 ಪರಿಸ್ಥಿತಿ ಪರಿಶೀಲನೆ ಸಭೆ ನಡೆಸಿದ ಬಳಿಕ ಮಾತನಾಡಿದ ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.
ಬೆಳಗಾವಿ ಜಿಲ್ಲೆಯಲ್ಲಿ ನೆರೆ, ಕೊರೊನಾ ನಿರ್ವಹಣೆ ಬಗ್ಗೆ ಸಭೆ ನಡೆಸಿದ್ದೇನೆ. 2ನೇ ಅಲೆ ಸಂದರ್ಭದಲ್ಲಿ ಆಕ್ಸಿಜನ್, ಬೆಡ್ಗೆ ಬೇಡಿಕೆಯಿತ್ತು. ಕೊರೊನಾ 3ನೇ ಅಲೆ ಸಾಧ್ಯತೆ ಹಿನ್ನೆಲೆ ಗಡಿ ಜಿಲ್ಲೆಗಳಲ್ಲಿ ಎಚ್ಚರಿಕೆ ವಹಿಸಲು ಹೇಳಿದ್ದೇನೆ. ಮಹಾರಾಷ್ಟ್ರ, ಕೇರಳ ಗಡಿ ಜಿಲ್ಲೆಗಳಲ್ಲಿ ಸಾಕಷ್ಟು ಮುನ್ನಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಸ್ವತಃ ನಾನೇ ಗಡಿ ಜಿಲ್ಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಮುನ್ನೆಚ್ಚರಿಕೆ ಕ್ರಮಕೈಗೊಂಡಿದ್ದರಿಂದ ಪಾಸಿಟಿವಿಟಿ ರೇಟ್ ಇಳಿಕೆಯಾಗಿದೆ ಎಂದು ಬೊಮ್ಮಾಯಿ ಹೇಳಿದ್ದಾರೆ.
ಇಂದು ವಿಜಯಪುರ, ಬೆಳಗಾವಿ ಜಿಲ್ಲೆಗಳಿಗೆ ಭೇಟಿ ನೀಡಿದ್ದೇನೆ. ಹತ್ತು ಕಡೆ ಆಕ್ಸಿಜನ್ ಉತ್ಪಾದನಾ ಘಟಕ ಸ್ಥಾಪನೆಗೆ ತೀರ್ಮಾನ. ಗೋಕಾಕ, ಚಿಕ್ಕೋಡಿ, ಸವದತ್ತಿ, ಬೆಳಗಾವಿ ಮತ್ತಿತರ ಕಡೆಗಳಲ್ಲಿ ಸ್ಥಾಪಿಸಲಾಗುತ್ತಿದೆ. ಇಪ್ಪತ್ತು ದಿನಗಳಲ್ಲಿ ಎಲ್ಲ ಆಕ್ಸಿಜನ್ ಘಟಕಗಳು ಸಿದ್ಧಪಡಿಸಲಾಗುವುದು. ಚಿಕ್ಕೋಡಿಯಲ್ಲಿ ಆರ್ಟಿಪಿಸಿಆರ್ ಟೆಸ್ಟ್ ಸೆಂಟರ್ ತೆರೆಯಲಾಗಿದೆ. ಗೋಕಾಕ್ನಲ್ಲೂ ಆರ್ಟಿಪಿಸಿಆರ್ ಟೆಸ್ಟ್ ಸೆಂಟರ್ ಸ್ಥಾಪಿಸುತ್ತೇವೆ. ಬೆಂಗಳೂರಿಗೆ ಹೋದ ನಂತರ ಮಂಜೂರಾತಿ ನೀಡುವೆ. ಬೆಂಗಳೂರು ನಂತರ ಬೆಳಗಾವಿ ಅತಿದೊಡ್ಡ ಜಿಲ್ಲೆಯಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ಹೊಸದಾಗಿ 5 ತಾಲೂಕು ರಚನೆಯಾಗಿದೆ. ಬೇಡಿಕೆಗೆ ಅನುಗುಣವಾಗಿ ಲಸಿಕೆ ಪೂರೈಸಲು ಕ್ರಮಕೈಗೊಳ್ಳುವೆ ಎಂದು ಮಾಹಿತಿ ನೀಡಿದ್ದಾರೆ.
ಪ್ರತಿದಿನ 45 ಸಾವಿರ ಲಸಿಕೆ ನೀಡುವ ಗುರಿ ಇಟ್ಟುಕೊಳ್ಳಬೇಕು. ಹೆಚ್ಚು ಜನರಿಗೆ ಲಸಿಕೆ ನೀಡುವುದರಿಂದ ಕೊರೊನಾ ಸೋಂಕು ತಡೆಯಬಹುದು ಎಂದು ಬೆಳಗಾವಿ ಸುವರ್ಣಸೌಧದಲ್ಲಿ ಸಿಎಂ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ.
ಕೊರೊನಾ 3ನೇ ಅಲೆ, ನೆರೆ ಪರಿಹಾರದ ಬಗ್ಗೆ ಬಸವರಾಜ ಬೊಮ್ಮಾಯಿ 3ನೇ ಅಲೆಯಲ್ಲಿ ಮಕ್ಕಳ ಮೇಲೆ ಪರಿಣಾಮ ಸಾಧ್ಯತೆ ಹಿನ್ನೆಲೆ ಮಕ್ಕಳ ವೈದ್ಯಾಧಿಕಾರಿ ನೇತೃತ್ವದಲ್ಲಿ ಆರೋಗ್ಯ ತಪಾಸಣೆ ನಡೆಸಲಾಗುವುದು. ಪೌಷ್ಟಿಕಾಂಶದ ಕೊರತೆಯಿರುವ ಮಕ್ಕಳನ್ನು ಗುರುತಿಸಿ ಚಿಕಿತ್ಸೆ ನೀಡಲಾಗುವುದು. ಅಪೌಷ್ಟಿಕ ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ನೆರೆಯಿಂದ ಬೆಳೆ ಹಾನಿ ಸಂಬಂಧ ಸಮೀಕ್ಷೆಗೆ ಸೂಚಿಸಿದ್ದೇನೆ. ಮನೆ ಹಾನಿ ಬಗ್ಗೆಯೂ ಸಮೀಕ್ಷೆಗೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಯಾವುದೇ ಗೊಂದಲ ಉಂಟಾಗದಂತೆ ಕ್ರಮಕ್ಕೆ ಸೂಚನೆ ಕೊಟ್ಟಿದ್ದೇನೆ. ಫೋಟೋ, ಜಿಪಿಎಸ್ ಮೂಲಕ ಸಮಸ್ಯೆ ಬಗೆಹರಿಸುತ್ತೇವೆ. ಅರ್ಜಿ ಹಾಕುವುದು ತಡವಾಗಿದ್ದರೆ ಕೂಡ ಮಾನವೀಯತೆಯಡಿ ಕ್ರಮ ಕೈಗೊಳ್ಳಲಾಗುವುದು ಎಂದು ಬೆಳಗಾವಿ ಸುವರ್ಣಸೌಧದಲ್ಲಿ ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.
ಶಾಸಕ ಅಭಯ್ ಪಾಟೀಲ್ ನನ್ನನ್ನು ಸಂಪರ್ಕಿಸಿ ಹೋಗಿದ್ದಾರೆ. ರಮೇಶ್ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ ಇಬ್ಬರು ಸಹೋದರರನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದೇನೆ. ಕಡಿಮೆ ಅವಧಿಯಲ್ಲಿ ಪ್ರವಾಸ ನಿರ್ಧರಿಸಿದ್ದರಿಂದ ಜಿಲ್ಲೆಯ ಎಲ್ಲಾ ಶಾಸಕರಿಗೂ ಮಾಹಿತಿ ತಿಳಿಸಲು ಅನನುಕೂಲವಾಗಿದೆ. ಹಾಗಂತ ಎಲ್ಲಾ ಶಾಸಕರು ನನ್ನ ಜತೆ ಇರಬೇಕೆಂದು ಹೇಳಲ್ಲ. ಬೆಳಗಾವಿ ಜಿಲ್ಲೆಯ ಶಾಸಕರಲ್ಲಿ ಯಾವುದೇ ಅಸಮಾಧಾನವಿಲ್ಲ ಎಂದು ಬೆಳಗಾವಿ ಸುವರ್ಣಸೌಧದಲ್ಲಿ ಸಿಎಂ ಬೊಮ್ಮಾಯಿ ಹೇಳಿದ್ದಾರೆ.
ನಾನೆಲ್ಲೇ ಇದ್ದರೂ ಹುಬ್ಬಳ್ಳಿ ಅಭಿವೃದ್ಧಿ ಬಗ್ಗೆ ಸದಾ ಚಿಂತಿಸ್ತೇನೆ ಬೆಳಗಾವಿ ಕಾರ್ಯಕ್ರಮಗಳ ಬಳಿಕ ಬಸವರಾಜ ಬೊಮ್ಮಾಯಿ ಹುಬ್ಬಳಿಗೆ ತೆರಳಿದ್ದಾರೆ. ಹುಬ್ಬಳಿಯನ್ನು ಪ್ರಮುಖ ಕೈಗಾರಿಕಾ ಪ್ರದೇಶವನ್ನಾಗಿ ಮಾಡುವ ಚಿಂತನೆ ಇದೆ. ಮುಂಬೈ ಕರ್ನಾಟಕದ ಕೈಗಾರಿಕಾ ಪ್ರದೇಶವನ್ನಾಗಿ ಮಾಡ್ತೇವೆ. ಹುಬ್ಬಳ್ಳಿ ಅಭಿವೃದ್ಧಿ ಬಗ್ಗೆ ಜಗದೀಶ್ ಶೆಟ್ಟರ್, ಪ್ರಲ್ಹಾದ್ ಜೋಶಿ ಜತೆ ಚರ್ಚಿಸುತ್ತೇನೆ ಎಂದು ಹುಬ್ಬಳ್ಳಿ ನಿವಾಸದಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ.
ಬಳ್ಳಾರಿಯಲ್ಲಿ ಯಾರೋ ಒಬ್ಬರನ್ನ ಉಸ್ತುವಾರಿ ಮಾಡಬೇಕು. ಮುಂದಿನ ದಿನಗಳಲ್ಲಿ ಉಸ್ತುವಾರಿ ಸಚಿವರನ್ನು ಮಾಡುತ್ತೇವೆ. ನನ್ನ ಜೊತೆಗೆ ಆನಂದ್ ಸಿಂಗ್ ನಿರಂತರ ಸಂಪರ್ಕದಲ್ಲಿದ್ದಾರೆ. ಸಂಪುಟ ಸಭೆಗೆ ಹಾಜರಾಗದಿದ್ರೂ ಅವರು ಸಂರ್ಪಕದಲ್ಲಿದ್ದಾರೆ. ಜಿಲ್ಲಾ ಉಸ್ತುವಾರಿ ನೇಮಕದ ಬಗ್ಗೆ ಚರ್ಚಿಸಿ ನಿರ್ಧರಿಸುತ್ತೇವೆ ಎಂದು ಬೊಮ್ಮಾಯಿ ತಿಳಿಸಿದ್ದಾರೆ.
ಇದನ್ನೂ ಓದಿ: ಪೊಲೀಸರ ಗೌರವ ವಂದನೆ ಸ್ವೀಕರಿಸಲು ಬಸವರಾಜ ಬೊಮ್ಮಾಯಿ ಹಿಂದೇಟು; ಹತ್ತಾರು ಕಡೆ ಗೌರವ ವಂದನೆ ಬೇಡ ಎಂದ ಸಿಎಂ
Letter to CM Bommai: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರಕಾರದ ಯಶಸ್ಸಿಗೆ ಹತ್ತು ಸೂತ್ರಗಳು ಇಲ್ಲಿವೆ ನೋಡಿ
Published On - 4:51 pm, Sat, 21 August 21