ಜೈಲಿನಿಂದ ಹೊರಬಂದ ವಿನಯ್ ಕುಲಕರ್ಣಿ ಮೇಲೆ 2 ಹೊಸ ಕೇಸ್; ವೀಕೆಂಡ್ ಕರ್ಫ್ಯೂ ಉಲ್ಲಂಘಿಸಿದ ಬೆಂಬಲಿಗರ ವಿರುದ್ಧವೂ ಪ್ರಕರಣ
ಬೆಳಗಾವಿಯ ಹಿಂಡಲಗಾ ಜೈಲು ಸೇರಿದ್ದ ಅವರು ಸುಮಾರು 9 ತಿಂಗಳ ಬಳಿಕ ಹೊರಬಂದಿದ್ದು, ಅಭಿಮಾನಿಗಳು ಅದ್ದೂರಿಯಾಗಿ ಸ್ವಾಗತ ಕೋರಿದ್ದಾರೆ. ಆದರೆ, ಈ ವೇಳೆ ಕೊರೊನಾ ನಿಯಮಾವಳಿಗಳನ್ನು ಸಂಪೂರ್ಣ ಉಲ್ಲಂಘಿಸಿದ ಕಾರಣಕ್ಕಾಗಿ ವಿನಯ್ ಕುಲಕರ್ಣಿ ಹಾಗೂ ಅವರ 300ಕ್ಕೂ ಅಧಿಕ ಬೆಂಬಲಿಗರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಬೆಳಗಾವಿ: ಮಾಜಿ ಸಚಿವ ವಿನಯ್ ಕುಲಕರ್ಣಿ ಇಂದು ಜೈಲಿನಿಂದ ಆಚೆ ಬಂದಿದ್ದಾರೆ. ಧಾರವಾಡ ಜಿಲ್ಲಾ ಪಂಚಾಯತಿ ಸದಸ್ಯ ಯೋಗೇಶ್ ಗೌಡ (Yogesh Gowda) ಕೊಲೆ ಕೇಸ್ನಲ್ಲಿ ವಿನಯ್ ಬೆಳಗಾವಿಯ ಹಿಂಡಲಗಾ (Hindalga Jail) ಜೈಲು ಸೇರಿದ್ದ ಅವರು ಸುಮಾರು 9 ತಿಂಗಳ ಬಳಿಕ ಹೊರಬಂದಿದ್ದು, ಅಭಿಮಾನಿಗಳು ಅದ್ದೂರಿಯಾಗಿ ಸ್ವಾಗತ ಕೋರಿದ್ದಾರೆ. ಆದರೆ, ಈ ವೇಳೆ ಕೊರೊನಾ ನಿಯಮಾವಳಿಗಳನ್ನು ಸಂಪೂರ್ಣ ಉಲ್ಲಂಘಿಸಿದ ಕಾರಣಕ್ಕಾಗಿ ವಿನಯ್ ಕುಲಕರ್ಣಿ ಹಾಗೂ ಅವರ 300ಕ್ಕೂ ಅಧಿಕ ಬೆಂಬಲಿಗರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ವಿನಯ್ ಕುಲಕರ್ಣಿ ಬಿಡುಗಡೆಯಾಗುತ್ತಿದ್ದಂತೆ ಹಿಂಡಲಗಾ ಜೈಲು ಮುಂಭಾಗದಿಂದ ದೇಗುಲದವರೆಗೆ ಬೆಂಬಲಿಗರು ಮೆರವಣಿಗೆ ಮಾಡಿದ್ದು, ತೆರೆದ ವಾಹನದಲ್ಲಿ ಕರೆದುಕೊಂಡು ಬಂದಿದ್ದಾರೆ. ಆದರೆ, ಮೆರವಣಿಗೆ ವೇಳೆ ಕೊವಿಡ್ ನಿಯಮ ಉಲ್ಲಂಘನೆಯಾಗಿದ್ದು, ದೈಹಿಕ ಅಂತರವಿಲ್ಲದೆ, ಮಾಸ್ಕ್ ಧರಿಸದೆ ಜನರು ನಿರ್ಲಕ್ಷ್ಯ ತೋರಿದ್ದಾರೆ. ಈ ಬಗ್ಗೆ ಟಿವಿ9 ವರದಿ ಮಾಡಿದ ಬೆನ್ನಲ್ಲೇ ಪ್ರಕರಣ ದಾಖಲಿಸಲಾಗಿದೆ.
ವಿನಯ್ ವಿರುದ್ಧ ಎರಡು ಕೇಸ್! ಕೊರೊನಾ ನಿಯಮ ಉಲ್ಲಂಘಿಸಿದ ವಿನಯ್ ಕುಲಕರ್ಣಿ ವಿರುದ್ಧ ಬೆಳಗಾವಿ ಪೊಲೀಸರು ಸ್ವಯಂಪ್ರೇರಿತರಾಗಿ ಒಂದು ಕೇಸ್ ದಾಖಲಿಸಿದ್ದರೆ, ಹಿಂಡಲಗಾ ಗ್ರಾ.ಪಂ. ಪಿಡಿಒ ಮತ್ತೊಂದು ಕೇಸ್ ನೀಡಿದ್ದಾರೆ. ಜಿಲ್ಲಾಧಿಕಾರಿ ಆದೇಶ ಉಲ್ಲಂಘನೆ ಅಡಿ ಸೆಕ್ಷನ್ 188 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ವಿನಯ್ ವಿರುದ್ಧ ಎರಡು ಪ್ರತ್ಯೇಕ ದೂರು ದಾಖಲಾಗಿವೆ.
ತೆರೆದ ವಾಹನದಲ್ಲಿ ಮೆರವಣಿಗೆ ಮಾಡಿದ ವಿನಯ್ ಕುಲಕರ್ಣಿ ಮೀಸೆ ತಿರುವುತ್ತಾ ಅಭಿಮಾನಿಗಳಿಗೆ ಕೈ ಬೀಸಿದ್ದಾರೆ. ಸಾವಿರಾರು ಜನರು ಭಾಗಿಯಾದ್ರೂ ಭದ್ರತೆಗೆ ಕೇವಲ ಐವತ್ತು ಜನರನ್ನ ಮಾತ್ರ ಬೆಳಗಾವಿ ನಗರ ಪೊಲೀಸ್ ಆಯುಕ್ತ ನೇಮಕ ಮಾಡಿದ್ದರು. ಇನ್ನು ಜೈಲಿನಿಂದ ಹೊರಬಂದು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ವಿನಯ್ ಕುಲಕರ್ಣಿ, ನಾನು ನಿರ್ದೋಷಿಯಾಗಿ ಹೊರಬರುವ ವಿಶ್ವಾಸವಿತ್ತು. ಹಾಗಾಗಿ ನನಗೆ ಸುಪ್ರೀಂಕೋರ್ಟ್ನಿಂದ ಜಾಮೀನು ಸಿಕ್ಕಿದೆ. ನ್ಯಾಯಾಂಗದ ಮೇಲೆ ನನಗೆ ಸಂಪೂರ್ಣ ವಿಶ್ವಾಸವಿದೆ. ಸಂಕಷ್ಟದಲ್ಲಿದ್ದ ನನಗೆ, ನನ್ನ ಕುಟುಂಬಕ್ಕೆ ಜನ ಸ್ಪಂದಿಸಿದ್ದಾರೆ. ಮಠಾಧೀಶರು, ಅಭಿಮಾನಿಗಳು, ಕ್ಷೇತ್ರದ ಜನರ ಬೆಂಬಲಿಸಿದ್ದಾರೆ. ನನ್ನನ್ನು ಬೆಂಬಲಿಸಿದ್ದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ. 9 ತಿಂಗಳ ಬಳಿಕ ಸುಪ್ರೀಂಕೋರ್ಟ್ನಿಂದ ಜಾಮೀನು ಸಿಕ್ಕಿದೆ. ಉಳಿದ ರಾಜಕಾರಣಿಗಳೇ ಬೇರೆ, ನಾನೇ ಬೇರೆ. ಕಟ್ಟಕಡೆಯ ವ್ಯಕ್ತಿಯಿಂದ ಶ್ರೀಮಂತರವರೆಗೆ ನನ್ನೊಂದಿಗಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.
(Case against Vinay Kulakarni and his supporters as they break Covid 19 guidelines during Road show)
ಇದನ್ನೂ ಓದಿ: ನಿರ್ದೋಷಿಯಾಗಿ ಹೊರಬರುವ ವಿಶ್ವಾಸವಿತ್ತು ಎಂದ ವಿನಯ್ ಕುಲಕರ್ಣಿ; ಜೈಲಿನಿಂದ ಬಿಡುಗಡೆ, ಮೆರವಣಿಗೆಯಲ್ಲಿ ಕೊವಿಡ್ ನಿಯಮ ಉಲ್ಲಂಘನೆ
Published On - 1:26 pm, Sat, 21 August 21