ಪೊಲೀಸರ ಗೌರವ ವಂದನೆ ಸ್ವೀಕರಿಸಲು ಬಸವರಾಜ ಬೊಮ್ಮಾಯಿ ಹಿಂದೇಟು; ಹತ್ತಾರು ಕಡೆ ಗೌರವ ವಂದನೆ ಬೇಡ ಎಂದ ಸಿಎಂ
Basavaraj Bommai: ಬೆಳಗಾವಿ ಸುವರ್ಣಸೌಧದಲ್ಲಿ ಸಿಎಂ ನೇತೃತ್ವದಲ್ಲಿ ಸಭೆ ಶುರುವಾಗಿದೆ. ಕೊವಿಡ್ ಹಾಗೂ ನೆರೆ ಪರಿಹಾರ ಕುರಿತು ಪ್ರಗತಿ ಪರಿಶೀಲನೆ ಸಭೆ ಆರಂಭವಾಗಿದೆ. ಬೆಳಗಾವಿ ಜಿಲ್ಲೆಯ ಶಾಸಕರು, ಸಚಿವರು, ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ದಾರೆ.
ಬೆಳಗಾವಿ: ಪೊಲೀಸರ ಗೌರವ ವಂದನೆ ಸ್ವೀಕರಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಿಂದೇಟು ಹಾಕಿದ ಘಟನೆ ಬೆಳಗಾವಿ ನಗರದ ಸುವರ್ಣಸೌಧದ ಮುಂಭಾಗದಲ್ಲಿ ನಡೆದಿದೆ. ದಿನಕ್ಕೆ ಒಂದು ಬಾರಿ ಈ ವ್ಯವಸ್ಥೆ ಮಾಡಿ ಸಾಕು. ಹತ್ತಾರು ಕಡೆಗಳಲ್ಲಿ ಪೊಲೀಸರ ಗೌರವ ವಂದನೆ ಬೇಡ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಸಿಬ್ಬಂದಿ ಸುವರ್ಣಸೌಧ ಇರುವುದರಿಂದ ಗೌರವ ವಂದನೆ ವ್ಯವಸ್ಥೆ ಮಾಡಿರುವುದು ಎಂದು ತಿಳಿಸಿದ್ದಾರೆ. ಹಾಗಾಗಿ, ಗೌರವ ವಂದನೆ ಸ್ವೀಕರಿಸಿದ ಬೊಮ್ಮಾಯಿ ಬಳಿಕ ಸಭೆಗೆ ತೆರಳಿದ್ದಾರೆ.
ಬಳಿಕ, ಬೆಳಗಾವಿ ಸುವರ್ಣಸೌಧದಲ್ಲಿ ಸಿಎಂ ನೇತೃತ್ವದಲ್ಲಿ ಸಭೆ ಶುರುವಾಗಿದೆ. ಕೊವಿಡ್ ಹಾಗೂ ನೆರೆ ಪರಿಹಾರ ಕುರಿತು ಪ್ರಗತಿ ಪರಿಶೀಲನೆ ಸಭೆ ಆರಂಭವಾಗಿದೆ. ಬೆಳಗಾವಿ ಜಿಲ್ಲೆಯ ಶಾಸಕರು, ಸಚಿವರು, ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ದಾರೆ. ಸುವರ್ಣಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಸಭೆ ನಡೆಯುತ್ತಿದೆ. ಸಿಎಂ ನೇತೃತ್ವದ ಸಭೆಗೂ ಶಾಸಕ ರಮೇಶ್ ಜಾರಕಿಹೊಳಿ ಆಗಮಿಸಿಲ್ಲ. ಕ್ಷೇತ್ರದ ವಿವಿಧೆಡೆ ಕಾರ್ಯಕ್ರಮಗಳಲ್ಲಿ ಶಾಸಕ ರಮೇಶ್ ಭಾಗಿ ಆಗುತ್ತಿದ್ದಾರೆ. ಆದರೆ, ನೆರೆ, ಕೊವಿಡ್ ಸಭೆಗೆ ರಮೇಶ್ ಜಾರಕಿಹೊಳಿ ಆಗಮಿಸಿಲ್ಲ.
ಇದಕ್ಕೂ ಮೊದಲು ವಿಜಯಪುರ ಆಲಮಟ್ಟಿ ಡ್ಯಾಂಗೆ ಬಾಗಿನ ಅರ್ಪಿಸಲು ಬಂದಿದ್ದಾಗ ಮುಖ್ಯಮಂತ್ರಿ ಬೊಮ್ಮಾಯಿ ಎಸ್ಪಿ ಆನಂದ್ ಕುಮಾರ್ಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಪೊಲೀಸರಿಂದ ಗೌರವ ವಂದನೆ ಆಯೋಜಿಸಿದ್ದಕ್ಕೆ ತರಾಟೆಗೆ ತೆಗೆದುಕೊಂಡಿದ್ದಾರೆ. ದಿನಕ್ಕೆ ಒಮ್ಮೆ ಮಾತ್ರ ಪೊಲೀಸ್ ವಂದನೆ ನೀಡಿ ಎಂದು ಮುಖ್ಯಮಂತ್ರಿ ಆದೇಶ ನೀಡಿದ್ದರು. ಸಿಎಂ ಸೂಚನೆಯ ನಂತರವೂ ಮತ್ತೊಮ್ಮೆ ಗೌರವ ವಂದನೆ ಕಾರ್ಯಕ್ರಮ ಆಯೋಜಿಸಿದ್ದಕ್ಕೆ ಸಿಎಂ ಗರಂ ಆಗಿದ್ದಾರೆ. ಕೋಪಗೊಂಡು ಎಸ್ಪಿಗೆ ತರಾಟೆ ತೆಗೆದುಕೊಂಡಿದ್ದಾರೆ. ಉತ್ತರ ವಲಯ ಐಜಿಪಿ ಎನ್. ಸತೀಶ್ ಕುಮಾರ್‌ಗೂ ಸಿಎಂ ವಾರ್ನ್ ಮಾಡಿದ್ದಾರೆ.
ವಿಜಯಪುರ: ರೈತರ ಮಕ್ಕಳಿಗೆ ಪಿಯುಸಿಯಿಂದ ಪಿಜಿವರೆಗೆ ಸ್ಕಾಲರ್ ಶಿಪ್ ವಿಜಯಪುರ ಜಿಲ್ಲೆ ನಿಡಗುಂದಿ ತಾಲೂಕಿನ ಆಲಮಟ್ಟಿ ಡ್ಯಾಂ ಬಳಿ ಮಾತನಾಡಿದ ಸಿಎಂ ಬೊಮ್ಮಾಯಿ ಸಂಧ್ಯಾ ಸುರಕ್ಷಾ ಹಣವನ್ನು ಹೆಚ್ಚಳ ಮಾಡಲಾಗಿದೆ. ಅಮೃತ ಯೋಜನೆ ಅನುಷ್ಠಾನಕ್ಕೆ ಈಗಾಗಲೇ ಸೂಚಿಸಿದ್ದೇನೆ. ರೈತರ ಮಕ್ಕಳಿಗೆ ಪಿಯುಸಿಯಿಂದ ಪಿಜಿವರೆಗೆ ಸ್ಕಾಲರ್ ಶಿಪ್ ನೀಡಲಾಗುವುದು. 18 ಲಕ್ಷ ವಿದ್ಯಾರ್ಥಿಗಳಿಗೆ ಇದರ ಉಪಯೋಗವಾಗಲಿದೆ ಎಂದು ತಿಳಿಸಿದ್ದಾರೆ.
ಆಲಮಟ್ಟಿಯ ಲಾಲ್ ಬಹಾದ್ದೂರ್ ಶಾಸ್ತ್ರೀ ಸಾಗರದ ಆವರಣದಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಮಾತನಾಡಿದ್ದಾರೆ. ಆಲಮಟ್ಟಿ ಜಲಾಶಯ ಭರ್ತಿಯಾದ ಹಿನ್ನಲೆಯಲ್ಲಿ ಇಂದು ಬಾಗಿನ ಅರ್ಪಿಸಿದ್ದೇನೆ. ಜಲಾಶಯಕ್ಕೆ ಬಾಗಿನ ಅರ್ಪಣೆ ಮಾಡಬೇಕು ಎಂದು ಈ ಭಾಗದ ಜನರ ಒತ್ತಾಸೆ ಇತ್ತು. ಅದರ ಪ್ರಯುಕ್ತ ಇಂದು ಭಕ್ತಿ ಭಾವದಿಂದ ಪೂಜೆ ಸಲ್ಲಿಸಿದ್ದೇನೆ. ಕನ್ನಡ ನಾಡಿನ ಸುಭಿಕ್ಷೆ ರೈತನಲ್ಲಿದೆ ಎಂದು ನಂಬಿದವನು ನಾನು. ರೈತನ ಮಕ್ಕಳಿಗೆ ಪಿಯುಸಿಯಿಂದ ಪಿಜಿ ವರೆಗೆ ಸ್ಕಾಲರ್ ಶಿಪ್ ಕೊಡುವ ನಿರ್ಧಾರ ಮಾಡಲಾಗಿದೆ ಎಂದು ಹೇಳಿದ್ದಾರೆ.
ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಯ ಕೋವಿಡ್ ಪರಿಸ್ಥಿತಿ ಅರಿಯಲು ಇಂದು ಸಭೆ ನಡೆಸಿದ್ದೇನೆ. ಎರಡನೇ ಅಲೆಯಲ್ಲಿ ಜಿಲ್ಲಾಡಳಿತ ಜನ ಪ್ರತಿನಿಧಿಗಳು ಮಂತ್ರಿಗಳು ಉತ್ತಮ ಕೆಲಸ ಮಾಡಿದ್ದಾರೆ. ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಯಲ್ಲಿ ಎರಡು ಮೂರು ಬೇಡಿಕೆ ಇದೆ ಎಂಬ ವಿಚಾರವನ್ನು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ‘ನಮ್ಮ ಕಾಲದ ಈ 3 ಹೀರೋಯಿನ್ಸ್ ನಂಗಿಷ್ಟ’: ಸಿಎಂ ಬಸವರಾಜ ಬೊಮ್ಮಾಯಿ ಹಂಚಿಕೊಂಡ ಫಿಲ್ಮೀ ಮಾತುಗಳು
ಸಂಪೂರ್ಣ ಭರ್ತಿಯಾದ ಆಲಮಟ್ಟಿ ಸಾಗರಕ್ಕೆ ಗಂಗಾಪೂಜೆ ನೆರವೇರಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
Published On - 4:08 pm, Sat, 21 August 21