ಬಾಗಲಕೋಟೆ, ಏ.16: ರೀಲ್ಸ್, ಇನ್ಸ್ಟಾಗ್ರಾಮ್ ಹಾಗೂ ಗೇಮ್ ಗೀಳಿಗೆ ಬಿದ್ದ ಬಾಲಕನೊಬ್ಬ ಪೋಷಕರು ಐಪೋನ್ ಕೊಡಿಸದ ಹಿನ್ನೆಲೆ ಮನೆ ಬಿಟ್ಟು ಹೋಗಿರುವ ಘಟನೆ ಬಾಗಲಕೋಟೆ(Bagalkote) ತಾಲ್ಲೂಕಿನ ಗದ್ದನಕೇರಿ ಗ್ರಾಮದಲ್ಲಿ ನಡೆದಿದೆ. ಶ್ರವಣಕುಮಾರ ಮನೆ ಬಿಟ್ಟು ಹೋದ ಬಾಲಕ. ಇತ ಒಂಬತ್ತನೇ ತರಗತಿ ಮುಗಿಸಿ ಇದೀಗ ಹತ್ತನೇ ತರಗತಿಗೆ ತೇರ್ಗಡೆಯಾಗಿದ್ದ. ಕಳೆದ ಶನಿವಾರ(ಏ.13) ಮನೆಯಲ್ಲಿದ್ದ 800 ರೂ. ತೆಗೆದುಕೊಂಡು ಮನೆಯಿಂದ ಹೋಗಿದ್ದಾನೆ.
ಇನ್ನು ಮನೆಯ ಹಿರಿಮಗ ಕಾಣೆಯಾಗಿದ್ದಕ್ಕೆ ಪೋಷಕರು ಕಂಗಾಲಾಗಿದ್ದು, ಶ್ರವಣಕುಮಾರನನ್ನ ನೆನೆದು ತಂದೆ-ತಾಯಿ, ಸಹೋದರ ಹಾಗೂ ಕುಟುಂಬಸ್ಥರು ಕಣ್ಣೀರು ಹಾಕುತ್ತಿದ್ದಾರೆ. ಎಲ್ಲೇ ಇದ್ದರೂ ಮನೆಗೆ ಬಾ ಎಂದು ಪೋಷಕರು ಹಾಗೂ ಪ್ರೀತಿಯ ಅಜ್ಜ ಫೋಟೋ ಹಿಡಿದು ಕಣ್ಣೀರಿಡುತ್ತಿದ್ದಾರೆ.
ಇದನ್ನೂ ಓದಿ:ಆನೇಕಲ್: ಮೊಬೈಲ್ಗಾಗಿ ಸೋದರಿಯರಿಬ್ಬರ ಜಗಳ: ಅತ್ತಿಗೆಯನ್ನೇ ಹತ್ಯೆಗೈದ ಮೈದುನ
ಕಳೆದ ಕೆಲ ದಿನಗಳಿಂದ ಐಪೋನ್ ಕೊಡಿಸಿ ಎಂದು ಮನೆಯಲ್ಲಿ ಪಟ್ಟು ಹಿಡಿದಿದ್ದ. ಪೋಷಕರು ಕೊಡಿಸೋದಾಗಿ ಹೇಳಿ ಹದಿನೈದು ಸಾವಿರ ಹಣ ಸಂಗ್ರಹ ಮಾಡಿದ್ದರು. ಮತ್ತೆ ಹಠ ಮಾಡಿದಾಗ ತಾಯಿ ಸ್ವಲ್ಪ ಬೈದು ಬುದ್ದಿವಾದ ಹೇಳಿದ್ದಾಳೆ. ಅಷ್ಟಕ್ಕೆ ಮನೆ ಬಿಟ್ಟು ಹೋಗಿದ್ದಾನೆ. ಇದರಿಂದ ಮಗ ನಿಲ್ಲದ ಮನೆಯಲ್ಲಿ ತಾಯಿ ಕರುಳು ಕಿತ್ತು ಬರುತ್ತಿದೆ. ಮಗ ಎಲ್ಲಿದ್ದಾನೊ, ಹೇಗಿದ್ದಾನೊ, ಏನಾದರೂ ತಿಂದನೋ ಇಲ್ಲವೋ ಎಂದು ಬಿಕ್ಕಿ ಬಿಕ್ಕಿ ಅಳುತ್ತಿದ್ದಾರೆ. ಎಲ್ಲೇ ಇದ್ದರೂ ಮಗನೆ ಮನೆಗೆ ಬಂದು ಬಿಡು ಎಂದು ತಾಯಿ ಕರುಳು ಮಗನ ಕೂಗಿ ಕರೆಯುತ್ತಿದೆ.
ಇನ್ನು ಸುವರ್ಣಾ ಹಾಗೂ ಗುರುನಾಥ ತಳವಾರಗೆ ಇಬ್ಬರು ಗಂಡು ಮಕ್ಕಳು, ಶ್ರವಣಕುಮಾರ ಹಿರಿಮಗ. ಗುರುನಾಥ ಕೆಎಸ್ಆರ್ಟಿಸಿ ಕಂಡಕ್ಟರ್ ಕಂ ಚಾಲಕ. ತಾಯಿ ಗೃಹಿಣಿಯಾಗಿದ್ದಾಳೆ. ಬಾಲಕ ಶಾಲೆಯಲ್ಲಿ ತುಂಬಾ ಜಾಣನಾಗಿದ್ದು, ಮೊರಾರ್ಜಿ ವಸತಿ ಶಾಲೆಯಲ್ಲಿ ಓದುತ್ತಿದ್ದಾನೆ. ಒಂಬತ್ತನೇ ತರಗತಿಯಲ್ಲಿ 92 ಪ್ರತಿಶತ ಅಂಕ ಗಳಿಸಿದ್ದಾನೆ. ಪ್ರತಿಭಾವಂತ ವಿದ್ಯಾರ್ಥಿಯಾಗಿರುವ ಶ್ರವಣಕುಮಾರ ಮನೆ ಬಿಟ್ಟು ಹೋಗಿದ್ದು, ಕುಟುಂಬಸ್ಥರಿಗೆ ಧಿಕ್ಕು ತೋಚದಂತಾಗಿದೆ. ಎಲ್ಲೇ ಇದ್ದರೂ ನನ್ನ ಮಗನ ಕಳಿಸಿ ಕೊಡಿ ಎಂದು ತಂದೆ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ. ಅಜ್ಜ ಬೇಗ ಮನೆಗೆ ಬಾರೊ ಮೊಮ್ಮಗನೇ ಎಂದು ಕಣ್ಣೀರಿಡುತ್ತಿದ್ದಾನೆ. ಈತನ ಗುರುತು ಸಿಕ್ಕವರು 9380526652 ನಂಬರ್ಗೆ ಕರೆ ಮಾಡಬಹುದಾಗಿದೆ.
ಒಟ್ಟಿನಲ್ಲಿ ಐಪೋನ್ ಗೀಳು ಹಚ್ಚಿಕೊಂಡ ಬಾಲಕ ನಾಲ್ಕು ದಿನಗಳಾದರೂ ಸಂಪರ್ಕಕ್ಕೆ ಸಿಕ್ಕಿಲ್ಲ.ಇಡೀ ಕುಟುಂಬಸ್ಥರು ಪ್ರತಿಕ್ಷಣವೂ ಮಗನ ನೆನೆಪಿನಲ್ಲೇ ಕಾಲ ಕಳೆಯುತ್ತಿದ್ದಾರೆ.ಎಲ್ಲೆ ಇರಲಿ ಮಗ ಸುರಕ್ಷಿತವಾಗಿ ಮನೆಗೆ ಬರಲಿ ಎಂಬುದು ಎಲ್ಲರ ಆಶಯವಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:27 pm, Tue, 16 April 24