ಮಹಾರಾಷ್ಟ್ರದಲ್ಲಿ ಭೀಕರ ರಸ್ತೆ ಅಪಘಾತ: ಬಾಗಲಕೋಟೆ, ವಿಜಯಪುರದ ಜಿಲ್ಲೆಯ ನಾಲ್ವರು ಸಾವು

| Updated By: Ganapathi Sharma

Updated on: Apr 18, 2024 | 2:13 PM

ಮಹಾರಾಷ್ಟ್ರದ ಜತ್ತ ಬಳಿಯ ನಾಗಾಸಪಾಟಾ ಎಂಬಲ್ಲಿ ಖಾಸಗಿ ವೊಲ್ವೊ ಬಸ್​​​ ಮತ್ತು ಕ್ರೂಸರ್ ಡಿಕ್ಕಿಯಾಗಿ ಕರ್ನಾಟಕದ ನಾಲ್ವರು ಯುವತಿಯರು ಮೃತಪಟ್ಟಿದ್ದಾರೆ. ಮದುವೆಗೆಂದು ತೆರಳುತ್ತಿದ್ದಾಗ ದುರ್ಘಟನೆ ಸಂಭವಿಸಿದ್ದು, ಮೃತರಲ್ಲಿ ವಧುವಿನ ತಂಗಿಯೂ ಸೇರಿದ್ದಾರೆ ಎನ್ನಲಾಗಿದೆ. ಬುಧವಾರ ರಾತ್ರಿ ದುರ್ಘಟನೆ ಸಂಭವಿಸಿದ್ದು, ಇದೀಗ ಮಾಹಿತಿ ದೊರೆತಿದೆ.

ಮಹಾರಾಷ್ಟ್ರದಲ್ಲಿ ಭೀಕರ ರಸ್ತೆ ಅಪಘಾತ: ಬಾಗಲಕೋಟೆ, ವಿಜಯಪುರದ ಜಿಲ್ಲೆಯ ನಾಲ್ವರು ಸಾವು
ಸಾಂದರ್ಭಿಕ ಚಿತ್ರ
Follow us on

ಬಾಗಲಕೋಟೆ, ಏಪ್ರಿಲ್ 18: ಮಹಾರಾಷ್ಟ್ರದ (Maharashtra) ಜತ್ತ ಬಳಿಯ ನಾಗಾಸಪಾಟಾ ಎಂಬಲ್ಲಿ ಬುಧವಾರ ರಾತ್ರಿ ಸಂಭಿಸಿದ ಭೀಕರ ರಸ್ತೆ (Accident) ಅಪಘಾತದಲ್ಲಿ ಬಾಗಲಕೋಟೆ (Bagalkot)  ಜಿಲ್ಲೆಯ ನಾಲ್ವರು ದಾರುಣವಾಗಿ ಮೃತಪಟ್ಟಿದ್ದಾರೆ. ಬಾಗಲಕೋಟೆಯ ನಾಲ್ವರು ಯುವತಿಯರು ಮಹಾರಾಷ್ಟ್ರದ  ಶಿವಾನಿ ಅಂಬೇಕರ್ ಎಂಬುವರ ಮದುವೆಗೆ ಹೊರಟಿದ್ದರು. ಖಾಸಗಿ ವೊಲ್ವೊ ಬಸ್​​​ಗೆ ಕ್ರೂಸರ್ ಡಿಕ್ಕಿ ಹೊಡೆದ ಪರಿಣಾಮ ವಧುವಿನ ತಂಗಿ ಸೇರಿದಂತೆ ನಾಲ್ವರು ಮೃತಪಟ್ಟಿದ್ದಾರೆ. ಮೃತರನ್ನು ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಅಡಿಹುಡಿ, ರೆಹಮತ್ ಪುರ, ಮುಧೋಳ ತಾಲ್ಲೂಕಿನ ಲೋಕಾಪುರ, ವಿಜಯಪುರ ಜಿಲ್ಲೆಯ ಕನಮಡಿ ಮೂಲದವರು ಎಂದು ಗುರುತಿಸಲಾಗಿದೆ.

ಡಿಕ್ಕಿಯ ತೀವ್ರತೆಗೆ ಕ್ರೂಸರ್​ ಸಂಪೂರ್ಣ ನುಜ್ಜುಗುಜ್ಜಾಗಿತ್ತು. ಅಪಘಾತದ ತೀವ್ರತೆಗೆ ತಕ್ಷಣವೇ ಕ್ರೂಸರ್​​ಗೆ ಬೆಂಕಿಹೊತ್ತಿಕೊಂಡಿತ್ತು. ಸ್ಥಳದಲ್ಲಿದ್ದವರು ತಕ್ಷಣವೇ ರಕ್ಷಣೆಗೆ ಧಾವಿಸಿದ್ದಾರೆ. ಬಳಿಕ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಮೃತಪಟ್ಟವರನ್ನು ಕನಮಡಿ ಗ್ರಾಮದ ಅನುಸೂಯಾ ಮೋರೆ (56), ಲೋಕಾಪುರ ಗ್ರಾಮದ ನಿವೇದಿತಾ (17) ರೆಹಮತ್ ಪುರದ ಭಾಗ್ಯಶ್ರೀ ಅಂಬೇಕರ್ (18) ಹಾಗೂ ಅಡಿಹುಡಿ ಗ್ರಾಮದ ಉಜ್ವಲಾ ಸಿಂಧೆ (19) ಎಂದು ಗುರುತಿಸಲಾಗಿದೆ. ಇಂದು ಶಿವಾನಿ ಅಂಬೇಕರ್ ಮದುವೆಯಿತ್ತು. ಹೀಗಾಗಿ ಬುಧವಾರ ಅರಿಷಿಣ ಶಾಸ್ತ್ರ ಕಾರ್ಯಕ್ಕೆ ಇವರೆಲ್ಲ ಹೊರಟಿದ್ದರು.

ಇದನ್ನೂ ಓದಿ: ಬಾಗಲಕೋಟೆ: ತಮ್ಮನನ್ನ ಕೊಂದು ಸ್ಮಶಾನಕ್ಕೆ ಹೋಗಿ ಭಸ್ಮ ಧರಿಸಿ ನಿಂತ ಅಣ್ಣ

ರಾಯಚೂರು: ಲಾರಿ ಡಿಕ್ಕಿಯಾಗಿ ಇಬ್ಬರ ಸಾವು

ಲಾರಿ ಡಿಕ್ಕಿಯಾಗಿ ಬೈಕ್​ನಲ್ಲಿದ್ದ ಇಬ್ಬರು ಸ್ಥಳದಲ್ಲೇ ದುರ್ಮರಣ ಹೊಂದಿದ ಘಟನೆ ರಾಯಚೂರಿನ ಮಸ್ಕಿಯ ಅಶೋಕ‌ ಶಿಲಾಶಾಸನ ರಸ್ತೆ ಬಳಿ ಸಂಭವಿಸಿದೆ. ಸಿಂಧನೂರು ಮೂಲದ ಶಾಮೀದ್ (22), ಸಲ್ಮಾ (10) ಮೃತರು. ಮಸ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ. ಶಾಮೀದ್ ಹಾಗೂ ಸಲ್ಮಾ ಸಿಂಧನೂರಿನಿಂದ ಮುದಗಲ್‌ಗೆ ಮದುವೆಗೆ ತೆರಳುತ್ತಿದ್ದಾಗ ಅಪಘಾತವಾಗಿದೆ.‌

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:56 pm, Thu, 18 April 24