ಶಿಕ್ಷಣ, ಸಂಶೋಧನೆಯಲ್ಲಿ ಹಿಂದುಳಿದ ರಾಯಚೂರಿನಲ್ಲಿ ಸೋಲಾರ್ ಸೈಕಲ್ ಆವಿಷ್ಕರಿಸಿ ಸೈ ಎನಿಸಿಕೊಂಡ ವಿದ್ಯಾರ್ಥಿಗಳು! ಎಲ್ಲೆಡೆ ಪ್ರಶಂಸೆ
ಅದೇನೆ ಇರಲಿ, ಅಂಗೈಯಲ್ಲಿ ಮೊಬೈಲ್ ಹಿಡಿದು ಸೆಲ್ಫಿ, ರೀಲ್ಸ್ ಹುಚ್ಚು, ಅಥವಾ ಗೇಮ್ ಗೀಳು ಬೆಳೆಸಿಕೊಳ್ಳದೆ ಅತ್ಯಂತ ಕ್ರಿಯಾತ್ಮಕವಾಗಿ ತಮ್ಮನ್ನು ತೊಡಗಿಸಿಕೊಂಡಿರುವ ಈ ವಿದ್ಯಾರ್ಥಿಗಳು ನಿಜಕ್ಕೂ ಸಾಧಕರೇ ಸೈ.
ಅದು ಆಂಧ್ರ ಪ್ರದೇಶ ಮತ್ತು ತೆಲಂಗಾಣ ಗಡಿಯಲ್ಲಿರುವ ಜಿಲ್ಲೆ.. ಅದು ಶಿಕ್ಷಣ, ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಹಿಂದುಳಿದ ಜಿಲ್ಲೆ ಅನ್ನುವ ಹಣೆಪಟ್ಟಿಯನ್ನೂ ಕಟ್ಟಿಕೊಂಡಿದೆ. ಆದ್ರೆ ಅದೇ ಜಿಲ್ಲೆಯ ರೈತಾಪಿ ಕುಟುಂಬದ ವಿದ್ಯಾರ್ಥಿಗಳು ಕೇಂದ್ರ ಸರ್ಕಾರ, ಮಲ್ಟಿನ್ಯಾಶನಲ್ ಕಂಪೆನಿಗಳು ಮೆಚ್ಚಿಕೊಳ್ಳುವಂಥ ಆವಿಷ್ಕಾರ ಮಾಡಿ ತೋರಿಸಿದ್ದಾನೆ.
ಕಣ್ಣಿಗೆ ಕುಕ್ಕುವ ಇಂಡಿಕೇಟರ್ ಲೈಟ್ಸ್.. ಹ್ಯಾಂಡಲ್ನಲ್ಲಿಯೇ ಕೀ ಇರೋದನ್ನ ನೋಡಿದರೆ ಇದು ಅಂತಿಂಥ ಸೈಕಲ್ ಅಲ್ಲ… ಬೈಕ್ಗಳನ್ನೇ ಮೀರಿಸುವಂತಹ ಸೈಕಲ್ ಇದು ಅನ್ನಿಸದಿರದು. ಹೌದು.. ಸೋಲಾರ್ ಚಾಲಿತ ಈ ಸೈಕಲ್ ಅನ್ನ (Solar Cycle) ರಾಯಚೂರಿನ ವಿದ್ಯಾರ್ಥಿಗಳು ಆವಿಷ್ಕರಿಸಿದ್ದಾರೆ (Invention).
ಹಿಂದುಳಿದ ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದ ಆಕಾಶ್ ಹಾಗೂ ಇನ್ನಿತರ ವಿದ್ಯಾರ್ಥಿಗಳ ತಂಡವೊಂದು ಇಡೀ ರಾಜ್ಯಕ್ಕೆ ಕೀರ್ತಿ ತಂದಿದೆ. ಹೌದು, ಇಂಥ ಅಪರೂಪದ ಸಾಧನೆ ಮಾಡಿರೊ ಈ ವಿದ್ಯಾರ್ಥಿಗಳೆಲ್ಲಾ ಮಾನ್ವಿ ಪಟ್ಟಣದಲ್ಲಿರೊ (Manvi Students) ಬಸವ ಐಟಿಐ ಶಿಕ್ಷಣ ಸಂಸ್ಥೆಯವರು. ರಾಯಚೂರು ಮೊದಲೇ ಬಿಸಿಲನಾಡು. ಇಲ್ಲಿ ವಿದ್ಯುತ್ ಕಣ್ಣಾಮುಚ್ಚಾಲೆ ಸಮಸ್ಯೆ ಮಾಮೂಲು. ಜೊತೆಗೆ ಹೊಲ ಗದ್ದೆಗಳಿಗೆ ಹೋಗೊ ರೈತರು, ಕೂಲಿ ಕಾರ್ಮಿಕರ ಸಂಖ್ಯೆಯೇ ಹೆಚ್ಚು.
ಹೀಗಾಗಿ ಇಂಥ ಬಡ ರೈತರು, ಕಾರ್ಮಿಕರಿಗೆ ಅನಕೂಲವಾಗಲೆಂದೇ ರೈತಾಪಿ ಕುಟುಂಬದ ವಿದ್ಯಾರ್ಥಿ ಆಕಾಶ್ ಸೋಲಾರ್ ಚಾಲಿತ ಸೈಕಲ್ ಅವಿಷ್ಕರಿಸಿದ್ದಾನೆ. ಆತನಿಗೆ ಕ್ಲಾಸ್ಮೇಟ್ಗಳಾದ ಆಕಾಶ್, ಮೋಜೆ ಶ್, ಅಭಿಷೇಕ, ಜಾಫರ್, ಪಾಷಾ, ಹರೀಶ್ ಮತ್ತು ಜಿಷಾನ್ ಸಾಥ್ ನೀಡಿದ್ದಾರೆ. ಇಲೆಕ್ಟ್ರಿಕ್ ಬೈಕ್ಗಳನ್ನೂ ಸಹ ಮೀರಿಸುವಂತೆ ಸೋಲಾರ್ ಚಾಲಿತ ಹೊಚ್ಚ ಹೊಸ ಸೈಕಲ್ ಗಳನ್ನ ಈ ವಿದ್ಯಾರ್ಥಿಗಳು ಆವಿಷ್ಕರಿಸಿ ಸಾಧಿಸಿದ್ದಾರೆ ಎನ್ನುತ್ತಾರೆ ಪ್ರಿನ್ಸಿಪಲ್ ತಿಪ್ಪಣ್ಣ ಹೊಸಮನಿ ಅವರು.
ಈ ಸೋಲಾರ್ ಚಾಲಿತ ಸೈಕಲ್ ನಲ್ಲಿ ಸೋಲಾರ್ ಪ್ಯಾನಲ್ ಅಳವಡಿಕೆ ಮಾಡಲಾಗಿದ್ದು, ಈ ಸೋಲಾರ್ ಪ್ಯಾನಲ್ ಮೇಲೆ ಬೀಳುವ ಸೂರ್ಯನ ಕಿರಣಗಳಿಂದ ಬ್ಯಾಟರಿ ಚಾರ್ಜ್ ಆಗುತ್ತೆ.. ಒಮ್ಮೆ ಈ ಬ್ಯಾಟರಿ ಫುಲ್ ಚಾರ್ಜ್ ಆದ್ರೆ ಗಂಟೆಗೆ 25-30 ಕಿಮೀ ದೂರ ಕ್ರಮಿಸಬಹುದು. ಒಂದು ವೇಳೆ ಬ್ಯಾಟರಿ ಚಾರ್ಜ್ ಖಾಲಿಯಾದರೂ ಪೆಡಲ್ ತುಳಿಯುವ ಮೂಲಕವೂ ಬ್ಯಾಟರಿ ಚಾರ್ಜ್ ಮಾಡಬಹುದು.
ಈ ಸೈಕಲ್ ಗೆ ಹತ್ತಾರು ಹೊಸ ಪೂಚರ್ಸ್ ಗಳ ಟಚ್ ಕೊಟ್ಟಿರುವ ವಿದ್ಯಾರ್ಥಿಗಳು, ಬೈಕ್ ಗಳಲ್ಲಿ ಇರುವಂತೆ ಹೆಡ್ ಲೈಟ್, ಇಂಡಿಕೇಟರ್ ಲೈಟ್, ಹಾರ್ನ್, ಮತ್ತೆ ಸೆಲ್ಫ್ ಸ್ಪಾರ್ಟ್ ಕೂಡ ಅಳವಡಿಸಿ ಬೈಸಿಕಲ್ ಓಡಿಸುವವರಿಗೆ ನಿಜವಾಗಿಯೂ ಬೈಕ್ ಓಡಿಸಿದಂತೆ ಥ್ರಿಲ್ ಕೊಡುವ ಹಾಗೆ ಮಾಡಿದ್ದೇವೆ. ಪರಿಸರ ಸ್ನೇಹಿ ಸೈಕಲ್ ತಯಾರು ಮಾಡಿದರೆ ಹೇಗೆ ಎಂದು ಪ್ರಶ್ನೆ ಮಾಡಿಕೊಂಡಿದ್ದ ವಿದ್ಯಾರ್ಥಿಗಳು, ತಮ್ಮಲ್ಲಿದ್ದ ಹಳೆಯ ಸೈಕಲ್ ಅನ್ನೇ ಪ್ರಾಯೋಗಿಕವಾಗಿ ಬಳಸಿಕೊಂಡಿದ್ದಾರೆ. ಕೇವಲ 17 ಸಾವಿರ ಖರ್ಚು ಮಾಡಿ ಈ ಇಕೋ ಫ್ರೆಂಡ್ಲಿ ಸೈಕಲ್ ಸಿದ್ಧಪಡಿಸಿದ್ದೇವೆ ಎನ್ನುತ್ತಾರೆ ಸಾಧಕ ವಿದ್ಯಾರ್ಥಿ ಆಕಾಶ್.
ತಮ್ಮೂರಿನ ಮಕ್ಕಳು ಇಂಥ ಸಾಧನೆ ಮಾಡಿದ ಬೆನ್ನಲ್ಲೇ, ಮಾನ್ವಿ ತಾಲ್ಲೂಕಿನ ಗ್ರಾಮೀಣ ಭಾಗದ ಜನ ಕೂಡ ತಮಗೂ ಇಂಥ ಸೈಕಲ್ ಸಿದ್ಧಪಡಿಸಿಕೊಡುವಂತೆ ಕೇಳ್ತಿದ್ದಾರಂತೆ. ಅಷ್ಟೇ ಅಲ್ಲ, ಖಾಸಗಿ ಕಂಪೆನಿಗಳು ಕೂಡ ಈ ಟೀಮಿನ ಬೆನ್ನು ಬಿದ್ದಿದ್ದು, ಸೋಲಾರ್ ಸೈಕಲ್ ತಯಾರಿಕೆಗೆ ಕೈ ಜೋಡಿಸುವ ಆಫರ್ಗಳನ್ನ ನೀಡಿದ್ದಾರೆ.
ಅದೇನೆ ಇರಲಿ, ಅಂಗೈಯಲ್ಲಿ ಮೊಬೈಲ್ ಹಿಡಿದು ಸೆಲ್ಫಿ, ರೀಲ್ಸ್ ಹುಚ್ಚು, ಅಥವಾ ಗೇಮ್ ಗೀಳು ಬೆಳೆಸಿಕೊಳ್ಳದೆ ಅತ್ಯಂತ ಕ್ರಿಯಾತ್ಮಕವಾಗಿ ತಮ್ಮನ್ನು ತೊಡಗಿಸಿಕೊಂಡಿರುವ ಈ ವಿದ್ಯಾರ್ಥಿಗಳು ನಿಜಕ್ಕೂ ಸಾಧಕರೇ ಸೈ. ಹಿಂದುಳಿದ ಜಿಲ್ಲೆ ಅನ್ನೊ ಹಣೆಪಟ್ಟಿ ಕಟ್ಟಿಕೊಂಡಿರೊ ರಾಯಚೂರು ಜಿಲ್ಲೆ ವಿದ್ಯಾರ್ಥಿಗಳು ಹೀಗೆ ಸಾಧನೆ ಮಾಡಿ ಜನರ ಮೆಚ್ಚುಗೆಗೆ ಪಾತ್ರರಾಗಿರುವುದು ಇನ್ನೂ ಹೆಚ್ಚು ಆಶಾದಾಯಕವಾಗಿದೆ. (ವರದಿ: ಭೀಮೇಶ್ ಪೂಜಾರ್, ಟಿವಿ 9, ರಾಯಚೂರು)