ಲಿಂಗಾಯತ ಧರ್ಮ ನಮ್ಮ ಅಸ್ಮಿತೆ, ರಾಜಕೀಯ ಬಳಕೆ ಇಲ್ಲ: ಎಂಬಿ ಪಾಟೀಲ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: May 03, 2022 | 9:57 AM

ಬಸವ ಜಯಂತಿ ಹಿನ್ನೆಲೆಯಲ್ಲಿ ಹುನಗುಂದ ತಾಲ್ಲೂಕಿನ ಕೂಡಲಸಂಗಮದಲ್ಲಿರುವ ವಿಶ್ವಜ್ಯೋತಿ ಬಸವೇಶ್ವರರ ಐಕ್ಯಮಂಟಪಕ್ಕೆ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್ ಭೇಟಿ ನೀಡಿ, ಬಸವೇಶ್ವರರಿಗೆ ಗೌರವ ಸಲ್ಲಿಸಿದರು.

ಲಿಂಗಾಯತ ಧರ್ಮ ನಮ್ಮ ಅಸ್ಮಿತೆ, ರಾಜಕೀಯ ಬಳಕೆ ಇಲ್ಲ: ಎಂಬಿ ಪಾಟೀಲ
ಕೂಡಲಸಂಗಮದಲ್ಲಿ ಸಚಿವ ಎಂಬಿ ಪಾಟೀಲ
Follow us on

ಬಾಗಲಕೋಟೆ: ಬಸವ ಜಯಂತಿ ಹಿನ್ನೆಲೆಯಲ್ಲಿ ಹುನಗುಂದ ತಾಲ್ಲೂಕಿನ ಕೂಡಲಸಂಗಮದಲ್ಲಿರುವ ವಿಶ್ವಜ್ಯೋತಿ ಬಸವೇಶ್ವರರ ಐಕ್ಯಮಂಟಪಕ್ಕೆ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್ ಭೇಟಿ ನೀಡಿ, ಬಸವೇಶ್ವರರಿಗೆ ಗೌರವ ಸಲ್ಲಿಸಿದರು. ಕೆಲ ಹೊತ್ತು ಐಕ್ಯಮಂಟಪದಲ್ಲಿ ಕುಳಿತು ವಚನ ಪಠಿಸಿದರು. ಬಳಿಕ ಪಂಚಮಸಾಲಿಪೀಠದ ಬಸವ ಜಯಮೃತ್ಯುಂಜಯ ಶ್ರೀಗಳ ಆಶೀರ್ವಾದ ಪಡೆದರು. ಎಂ.ಬಿ.ಪಾಟಿಲ್ ತಲೆಗೆ ಹೂ ಹಾಕಿ ಪಂಚಮಸಾಲಿ ಶ್ರೀಗಳು ಆಶೀರ್ವದಿಸಿದರು. ಲಿಂಗಾಯತ ಸ್ವತಂತ್ರ ಧರ್ಮ ನಮ್ಮ ಅಸ್ಮಿತೆ. ನಾವು ಇದನ್ನು ರಾಜಕೀಯವಾಗಿ ಬಳಸುವುದಿಲ್ಲ. ಎಲ್ಲ ಸ್ವಾಮೀಜಿಗಳು, ನಾಯಕರು ಚುನಾವಣೆಯ ಬಳಿಕ ಕುಳಿತು ಚರ್ಚೆ ಮಾಡುತ್ತೇವೆ. ಕಳೆದ ಬಾರಿ ಚುನಾವಣೆ ವೇಳೆ ಅನೇಕ ಗೊಂದಲ ಸೃಷ್ಟಿ ಮಾಡಿದರು. ಈ ಬಾರಿ ನಾವು ಯಾವುದೇ ಗೊಂದಲಕ್ಕೆ ಬೀಳುವುದಿಲ್ಲ. ಈ ಬಗ್ಗೆ ನಾನು ಯಾವುದೇ ಹೇಳಿಕೆ ಕೊಡುವುದಿಲ್ಲ. ಎರಡೂ ಕಡೆಯ ನಾಯಕರು ಸ್ವಾಮೀಜಿಗಳು ಸೇರಿ ತೀರ್ಮಾನ ಮಾಡುತ್ತೇವೆ. ಚುನಾವಣೆ ಮುಗಿದ ಐದು ವರ್ಷಗಳ ಬಳಿಕ ಆ ಬಗ್ಗೆ ಚರ್ಚೆ ಮಾಡಲಿ ಎಂದು ಹೇಳಿದರು.

ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ವಿಚಾರದ ಬಗ್ಗೆ ನನಗೇನೂ ಗೊತ್ತಿಲ್ಲ. ಬಿಜೆಪಿ ಎಲ್ಲ ಕಡೆ ತತ್ತರಿಸಿದೆ. ಮೂವರನ್ನು ಮುಖ್ಯಮಂತ್ರಿ ಮಾಡಿದರೂ ಅಷ್ಟೇ, 10 ಮಂದಿಯನ್ನು ಬದಲಿಸಿದರೂ ಅಷ್ಟೇ. ಅವರ ಪರಿಸ್ಥಿತಿ ಬದಲಾಗುವುದಿಲ್ಲ ಎಂದು ತಿಳಿಸಿದರು. ಪಿಎಸ್ಐ ನೇಮಕಾತಿ ಹಗರಣದಲ್ಲಿ ಪ್ರಾಮಾಣಿಕರು ಕಣ್ಣೀರು ಹಾಕುತ್ತಿದ್ದಾರೆ ಎಂದ ಅವರು, ಕೆಲವರು ಮಾಡಿದ ತಪ್ಪಿಗೆ ಎಲ್ಲರಿಗೂ ಶಿಕ್ಷೆಯಾಗುತ್ತಿದೆ. ಬಹಳಷ್ಟು ವಿದ್ಯಾರ್ಥಿಗಳು ಕಷ್ಟಪಟ್ಟು ಓದಿ ಉದ್ಯೋಗ ಪಡೆದಿದ್ದಾರೆ. ಒಂದು ವೇಳೆ ಮರು ಪರೀಕ್ಷೆ ಆದರೆ ಕಷ್ಟವಾಗುತ್ತದೆ. ಸರ್ಕಾರವೇ ತಜ್ಞರ ಸಮಿತಿ ನೇಮಿಸಿ, ಅಭ್ಯರ್ಥಿಗಳಿಗೆ ನ್ಯಾಯ ಒದಗಿಸುವ ಪ್ರಯತ್ನ ಮಾಡಬೇಕು ಎಂದರು.

ಪಿಎಸ್ಐ ನೇಮಕಾತಿ ಹಗರಣದಲ್ಲಿ ಪ್ರಭಾವಿ ಸಚಿವರ ಸಹೋದರ ಹಾಗೂ ಅಧಿಕಾರಿಗಳ ಪಾತ್ರ ಇರುವ ಕುರಿತು ಪ್ರಸ್ತಾಪಿಸಿದ ಅವರು, ಪಿಎಸ್​ಐ ಹಗರಣ ಅಥವಾ ಗುತ್ತಿಗೆದಾರರ ಒಕ್ಕೂಟ ಮಾಡಿದ ಆರೋಪವೇ ಇರಬಹುದು. ಸರ್ಕಾರ ಹೈಕೋರ್ಟ್ ಸಿಟಿಂಗ್ ಜಡ್ಜ್ ಉಸ್ತುವಾರಿಯಲ್ಲಿ ನಿಷ್ಪಕ್ಷಪಾತ ತನಿಖೆ ನಡೆಸಬೇಕು. ಪಿಎಸ್ಐ ಹಗರಣ, ಇನ್ನಿತರ ಹಗರಣಗಳನ್ನು ಮುಚ್ಚಿ ಹಾಕೋಕೆ ಆಗಲ್ಲ. ನಾನು ಪ್ರಭಾವಿ ಸಚಿವರಾಗಲಿ, ಅವರ ಸಹೋದರರಾಗಲಿ ತಪ್ಪಿತಸ್ಥರು ಅಂತ ಹೇಳೋದಿಲ್ಲ. ನಿವೃತ್ತ ನ್ಯಾಯಮೂರ್ತಿಗಳಿಂದ ತನಿಖೆ ಅಂದರೆ ತಡವಾಗುತ್ತೆ. ಸಿಟಿಂಗ್​ ಜಡ್ಜ್​ಗಳಿಂದಲೇ ತನಿಖೆ ಆಗಬೇಕು ಎಂದು ಒತ್ತಾಯಿಸಿದರು.

ಧಾರವಾಡದಲ್ಲಿ ಬೃಹತ್ ಮೆರವಣಿಗೆ
ಧಾರವಾಡ:
ಬಸವ ಜಯಂತಿ ಹಿನ್ನೆಲೆಯಲ್ಲಿ ಧಾರವಾಡದಲ್ಲಿ ಜಿಲ್ಲಾಡಳಿತದ ವತಿಯಿಂದ ಬೃಹತ್ ಮೆರವಣಿಗೆ ನಡೆಯಿತು. ನಗರದ ಉಳವಿ ಬಸಪ್ಪ ದೇವಸ್ಥಾನದಿಂದ ಆರಂಭವಾದ ಮೆರವಣಿಗೆಗೆ ಮುರುಘಾ ಮಠದ ಮಲ್ಲಿಕಾರ್ಜುನ ಸ್ವಾಮೀಜಿ ಚಾಲನೆ ನೀಡಿದರು. ಶಾಸಕ ಅಮೃತ ದೇಸಾಯಿ, ಡಿಸಿ ನಿತೇಶ ಪಾಟೀಲ್‌ ಭಾಗವಹಿಸಿದ್ದರು. ನಗರದ ಪ್ರಮುಖ ರಸ್ತೆಗಳಲ್ಲಿ ಎತ್ತುಗಳ ಜೋಡಿ, ವಾದ್ಯ ಮೇಳದ ರಂಗಿನೊಂದಿಗೆ ಮೆರವಣಿಗೆ ಕಳೆಕಟ್ಟಿತು.

ಅಮಿತ್ ಶಾ ಮಾಲಾರ್ಪಣೆ
ಬೆಂಗಳೂರು:
ಚಾಲುಕ್ಯ ಸರ್ಕಲ್​ನಲ್ಲಿರುವ ಬಸವೇಶ್ವರ ಪ್ರತಿಮೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾಲಾರ್ಪಣೆ ಮಾಡಲಿದ್ದಾರೆ. ಚಾಲುಕ್ಯ ಸರ್ಕಲ್ ವಿಧಾನಸೌಧ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಹಾಕಲಾಗಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಅಮಿತ್ ಶಾ: ರಸ್ತೆಗಳಿಗೆ ಬಿಜೆಪಿ ಬಾವುಟ ಸಿಂಗಾರ, ಸಾರ್ವಜನಿಕರಿಗೆ ಟ್ರಾಫಿಕ್ ಜಾಂ ಬಿಸಿ

ಇದನ್ನೂ ಓದಿ: Basava Jayanti 2022: ಇಂದು ಬಸವ ಜಯಂತಿ; ಕಾಯಕವೇ ಕೈಲಾಸ ಎನ್ನುತ್ತ ಸಕಲರಿಗೂ ಮಾದರಿಯಾಗಿದ್ದ ಬಸವಣ್ಣ

Published On - 9:57 am, Tue, 3 May 22