ಬಾಗಲಕೋಟೆ, ಜುಲೈ.16: ಪೆಟ್ರೋಲ್ ಸುರಿದು ತಗಡಿನ ಶೆಡ್ಗೆ ದುಷ್ಕರ್ಮಿಗಳು ಬೆಂಕಿ ಇಟ್ಟಿದ್ದು ಘಟನೆಯಲ್ಲಿ ತಾಯಿ-ಮಗಳು ಸಜೀವ ದಹನವಾಗಿದ್ದಾರೆ (Death). ಹಾಗೂ ಇಬ್ಬರಿಗೆ ಗಂಭೀರ ಗಾಯಗಳಾಗಿವೆ. ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ಬೆಳಗಲಿ ಗ್ರಾಮದ ತೋಟದಲ್ಲಿದ್ದ ತಗಡಿನ ಶೆಡ್ಗೆ ದುಷ್ಕರ್ಮಿಗಳು ಪೆಟ್ರೋಲ್ ಸುರಿದು ಬೆಂಕಿ ಇಟ್ಟು ದುಷ್ಕೃತ್ಯ ಮೆರೆದಿದ್ದಾರೆ. ಬೆಳಗಲಿ ಗ್ರಾಮದ ಜೈಬಾನ್(55), ಶಬಾನ್(25) ಎಂಬ ತಾಯಿ-ಮಗಳು ಬೆಂಕಿಯಲ್ಲಿ ಸುಟ್ಟು ಪ್ರಾಣ ಕಳೆದುಕೊಂಡಿದ್ದಾರೆ.
ಇನ್ನು ದಸ್ತಗಿರಿಸಾಬ್, ಸುಬಾನ್ಗೆ ಸುಟ್ಟ ಗಾಯಗಳಾಗಿದ್ದು ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಸಿದ್ದಿಕ್ಕಿ ಎಂಬ ಯುವಕ ಪೆಟ್ರೋಲ್ ವಾಸನೆ ಬರುತ್ತಿದೆ ಎಂದು ಹೊರ ಬಂದು ಪ್ರಾಣಾಪಾಯದಿಂದ ಬಚಾವ್ ಆಗಿದ್ದಾನೆ. ಸ್ಥಳಕ್ಕೆ ಮಹಾಲಿಂಗಪುರ ಪೊಲೀಸರು, ಬಾಗಲಕೋಟೆ ಎಸ್ಪಿ ಅಮರನಾಥ ರೆಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶ್ವಾನ ದಳ ಮೂಲಕ ಪರಿಶೀಲನೆ ನಡೆಸಲಾಗುತ್ತಿದೆ.
ದಸ್ತಗಿರಿಸಾಬ್ ಪೆಂಡಾರಿ ಅವರ ಸ್ವಂತ ಜಮೀನಿನಲ್ಲಿದ್ದ ಶೆಡ್ನಲ್ಲಿ ಕಳೆದ ರಾತ್ರಿ ಕುಟುಂಬದ ಒಟ್ಟು ಐವರು ಮಲಗಿದ್ದರು. ಬೆಳಗಿನ ಜಾವ 2.30 ರಿಂದ 3.30 ನಡುವೆ ದುಷ್ಕರ್ಮಿಗಳು ಈ ಕೃತ್ಯವೆಸಗಿದ್ದಾರೆ. ಅಂದಾಜು 100 ಲೀಟರ್ ಸಾಮರ್ಥ್ಯದ ಸಿಂಟೆಕ್ಸ್ ಹಾಗೂ ಎರಡು ಹೆಚ್ಪಿ ಮೋಟಾರನ್ನು ದುಷ್ಕರ್ಮಿಗಳು ಈ ಕೃತ್ಯಕ್ಕೆ ಬಳಕೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಶೆಡ್ಗೆ ಪೆಟ್ರೋಲ್ ಸ್ಪ್ರೆ ಮಾಡಿ, ಬೆಂಕಿ ಹಚ್ಚುವ ಮುನ್ನ ಬಾಗಿಲನ್ನು ಲಾಕ್ ಮಾಡಿದ್ದಾರೆ. ಇಡೀ ಕುಟುಂಬವನ್ನು ನಾಶ ಮಾಡುವ ಉದ್ದೇಶದಿಂದ ಈ ಹೀನ ಕೃತ್ಯ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಮದ್ಯಪ್ರಿಯರಿಗೆ ಗುಡ್ ನ್ಯೂಸ್, 10 ನಿಮಿಷಗಳಲ್ಲಿ ನಿಮ್ಮ ಮನೆ ಬಾಗಿಲಿಗೆ ಬರಲಿದೆ ಮದ್ಯ
ಇನ್ನು ಕಿಡಿಗೇಡಿಗಳು ಹಚ್ಚಿದ ಬೆಂಕಿಗೆ ಸುಟ್ಟು ಮೃತಪಟ್ಟ ಶಬಾನ ಪಿಎಸ್ಐ ಆಗೋ ಕನಸು ಕಂಡಿದ್ದಳು. ಮುಧೋಳದಲ್ಲಿ ಎಂಎ ವ್ಯಾಸಂಗ ಮಾಡುತ್ತಿದ್ದ ಶಬಾನ ಪಿಎಸ್ಐ ಆಗಬೇಕು ಎಂದು ಶ್ರಮಿಸುತ್ತಿದ್ದಳು. ಶಬಾನ ಶವ ಕಂಡು ಆಕೆಯ ಸಹೋದರಿ ಕಣ್ಣೀರು ಹಾಕಿದ್ದಾರೆ. ನನ್ನ ತಂಗಿ ಎಂಎ ಪದವಿ ಓದುತ್ತಿದ್ದಳು. ಪಿಎಸ್ಐ ಪರೀಕ್ಷೆ ಸಿದ್ಧತೆ ನಡೆಸಿದ್ಲು. ಎರಡು ಬಾರಿ ದೈಹಿಕ ಪರೀಕ್ಷೆ ಪಾಸ್ ಮಾಡಿದ್ದಳು. ಇನ್ನೊಮ್ಮೆ ಊರಿಗೆ ಬಂದ್ರೆ ಪಿಎಸ್ಐ ಆಗಿಯೇ ಊರಿಗೆ ಬರುತ್ತೇನೆ ಎನ್ನುತ್ತಿದ್ದಳು. ಮೈ ಮೇಲೆ ಖಾಕಿ ಬಟ್ಟೆ ಹಾಕಿಕೊಂಡು ಬರ್ತೇನೆ ಅಂದಾಕಿ ಬಿಳಿ ಬಟ್ಟೆ ಹಾಕಿಕೊಂಡು ಹೋಗೋ ಹಾಗೆ ಆಯ್ತು. ನನ್ನ ತಾಯಿ ಹಾಗೂ ತಂಗಿಯ ಮುಖ ನೋಡಲು ಆಗದಂತೆ ಆಗಿದೆ. ಇಂತಹ ಕೃತ್ಯ ಮಾಡಿದವರಿಗೆ ಜೀವಾವಧಿ, ಗಲ್ಲು ಶಿಕ್ಷೆ ಆಗಬಾರದು. ಅವರನ್ನು ಪ್ರತಿ ದಿನ ಸಾರ್ವಜನಿಕವಾಗಿ ತುಂಡು ತುಂಡಾಗಿ ಕತ್ತರಿಸಬೇಕು ಎಂದು ತಾಯಿ ಹಾಗೂ ಸಹೋದರಿಯ ಶವದ ಮುಂದೆ ರೇಷ್ಮಾ ಕಣ್ಣೀರು ಹಾಕಿ ಆಕ್ರೋಶ ಹೊರ ಹಾಕಿದ್ದಾರೆ.
ಬೆಂಗಳೂರಿನ ಚನ್ನಸಂದ್ರ ಸೇತುವೆ ಬಳಿ ನೈಸ್ ರಸ್ತೆಯಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಕನಕಪುರ ತಾಲೂಕಿನ ಶಿವನಹಳ್ಳಿ ಗ್ರಾಮ ಪಂಚಾಯ್ತಿ ಸದಸ್ಯ ವಿನೋದ್ ಸೇರಿದಂತೆ ಮೂವರು ಮೃತಪಟ್ಟಿದ್ದಾರೆ. ಇನ್ನೂ ಹನುಮನಹಳ್ಳಿ ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿ ಕುಮಾರ್ ಹಾಗೂ ಟ್ರಾವೆಲ್ಸ್ ಏಜೆನ್ಸಿ ನಡೆಸುತ್ತಿದ್ದ ನಂಜೇಗೌಡ ಕೂಡ ಬಲಿಯಾಗಿದ್ದಾರೆ. ಮೃತರು ಬಸ್ ಖರೀದಿಸಲು ಗೋವಾಗೆ ತೆರಳಲು KIABಗೆ ಹೋಗ್ತಿದ್ದಾಗ ಅಪಘಾತ ಸಂಭವಿಸಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 10:25 am, Tue, 16 July 24