ಬಾಗಲಕೋಟೆ: ಮುಚಖಂಡಿ ಕೆರೆ ಒಂದು ಪ್ರವಾಸಿತಾಣ. ಬ್ರಿಟೀಷರ ಕಾಲದ ಈ ಐತಿಹಾಸಿಕ ಕೆರೆ ನಿರ್ಮಾಣವಾಗಿದ್ದು, 1882ರಲ್ಲಿ. ಸುಮಾರು 700 ಎಕರೆ ವಿಸ್ತೀರ್ಣದ ಈ ಕೆರೆ ಬಾಗಲಕೋಟೆ ಜಿಲ್ಲೆಯಲ್ಲಿನ ಅತಿ ದೊಡ್ಡದಾದ ಕೆರೆಗಳಲ್ಲಿ ಒಂದಾಗಿದೆ. ಬೃಹತ್ತಾದ ಕೆರೆಗೆ ಕಲ್ಲಿನ ಡ್ಯಾಮ್ ಇದ್ದು, ಸುತ್ತಮುತ್ತಲೂ ಬೆಟ್ಟ ಗುಡ್ಡದಿಂದ ಕೂಡಿದ ಸುಂದರ ಪ್ರಕೃತಿ ಇದೆ. ಈ ಸುಂದರ ಕೆರೆಯಲ್ಲಿ ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯ ರೈ ಅಭಿನಯದ ‘ಗುರು’ ಹಿಂದಿ ಸಿನಿಮಾ ಕೂಡ ಶೂಟಿಂಗ್ ಆಗಿದೆ. ಈಗ ಈ ಐತಿಹಾಸಿಕ ಕೆರೆಯನ್ನು ಸುಂದರ ಪ್ರವಾಸಿತಾಣವನ್ನಾಗಿ ಮಾಡಲು ಯೋಜನೆಯೊಂದು ಸಿದ್ಧಗೊಂಡಿದೆ. ಅಂದಾಜು 8 ಕೋಟಿ ರೂ. ವೆಚ್ಚದಲ್ಲಿ ಮುಚಖಂಡಿ ಕೆರೆ ಪ್ರದೇಶವನ್ನು ಅಭಿವೃದ್ಧಿಪಡಿಸಿ ಸುಂದರ ಪ್ರವಾಸಿತಾಣ ಮಾಡಿ ಇನ್ನಷ್ಟು ಆಕರ್ಷಣೆಯ ತಾಣವನ್ನಾಗಿ ಮಾಡಲು ಬಾಗಲಕೋಟೆ ಶಾಸಕ ವೀರಣ್ಣ ಚರಂತಿಮಠ ಮುಂದಾಗಿದ್ದಾರೆ.
ಮುಚಖಂಡಿ ಕೆರೆ ಒಂದು ಆಧ್ಯಾತ್ಮಿಕ ಕೇಂದ್ರ
ಮುಚಖಂಡಿ ಐತಿಹಾಸಿಕ ಕೆರೆ. ಕೇವಲ ಪ್ರವಾಸಿ ತಾಣ ಅಷ್ಟೇ ಅಲ್ಲದೇ ಅದೊಂದು ಆಧ್ಯಾತ್ಮಿಕ ಧಾರ್ಮಿಕ ಕೇಂದ್ರ ಕೂಡ ಹೌದು. ಮುಚಖಂಡಿ ಕೆರೆ ಪಕ್ಕದಲ್ಲಿ ವೀರಭದ್ರ ದೇವಸ್ಥಾನ ಇದ್ದು, ಪ್ರತಿದಿನ ಭಕ್ತರು ದೇವರ ದರ್ಶನಕ್ಕೆ ಬರುತ್ತಾರೆ. ದೇವರ ದರ್ಶನ ಪಡೆದು ಕೆರೆಯನ್ನು ವೀಕ್ಷಣೆ ಮಾಡಿ ಹೋಗುತ್ತಾರೆ. ಕೆರೆ ನೋಡುವುದಕ್ಕೆ ಬರುವವರು ವೀರಭದ್ರ ದೇವಸ್ಥಾನಕ್ಕೆ ತೆರಳಿ ದರ್ಶನ ಪಡೆದು ಹೋಗುತ್ತಾರೆ.
ಈಗ ಪ್ರವಾಸಿತಾಣ ಮತ್ತು ಆಧ್ಯಾತ್ಮಿಕ ಕೇಂದ್ರ ಎರಡು ಇರುವ ಸ್ಥಳಕ್ಕೆ ಮತ್ತಷ್ಟು ಕಳೆ ಸಿಗಲಿದೆ. ಬಾಗಲಕೋಟೆ ಶಾಸಕ ವೀರಣ್ಣ ಚರಂತಿಮಠ ಮುಚಖಂಡಿ ಕೆರೆ ಪ್ರದೇಶದ ಅಭಿವೃದ್ಧಿಗೆ ಯೋಜನೆ ರೂಪಿಸಿದ್ದಾರೆ. ಬುಡಾ, ಜಿಲ್ಲಾ ಪಂಚಾಯಿತಿ, ಲೋಕೋಪಯೋಗಿ ಇಲಾಖೆ, ಸಣ್ಣ ನೀರಾವರಿ ಇಲಾಖೆ ಸಹಯೋಗದಲ್ಲಿ ಆಧುನಿಕ ಉದ್ಯಾನವನ ನಿರ್ಮಾಣವಾಗಲಿದೆ. ಎಂಟು ಕೋಟಿ ರೂ. ವೆಚ್ಚದ ಡಿಪಿಆರ್, ನೀಲನಕ್ಷೆ ಸಿದ್ದಪಡಿಸಲಾಗಿದ್ದು, ಡ್ಯಾಂ ಮುಂಭಾಗದಲ್ಲಿ ಉದ್ಯಾನವನ, ಉದ್ಯಾನವನದಲ್ಲಿ ಮಕ್ಕಳಿಗಾಗಿ ಆಟಿಕೆ ವಸ್ತುಗಳು ಇರಲಿವೆ. ಎರಡು ಬದಿಯಲ್ಲಿರುವ ಗುಡ್ಡಗಳಲ್ಲಿ ದೇವರ ಮೂರ್ತಿಗಳು, ವ್ಯೂವ್ ಪಾಯಿಂಟ್, ಎರಡು ಗುಡ್ಡಗಳಿಗೆ ಸಂಪರ್ಕ ಕಲ್ಪಿಸಲು ದಾರಿ. ಪಕ್ಕದಲ್ಲಿ ಶಾಪಿಂಗ್ ಮಳಿಗೆ, ಹೊಟೆಲ್, ಶೌಚಾಲಯ ನಿರ್ಮಾಣವಾಗಲಿವೆ.
ಮುಚಖಂಡಿ ಕೆರೆ ಬಾಗಲಕೋಟೆಯ ಹೆಮ್ಮೆ. ಅದನ್ನು ಪ್ರವಾಸಿತಾಣ ಮಾಡುವುದರ ಮೂಲಕ ಕೆರೆ ಅಭಿವೃದ್ದಿಪಡಿಸಿ ಕೆರೆ ಕಾಪಾಡುವುದು, ಜನರಿಗೆ ಸುಂದರ ಪ್ರವಾಸಿತಾಣವನ್ನಾಗಿ ಮಾಡುವ ಉದ್ದೇಶದಿಂದ ಈ ಯೋಜನೆ ಕೈಗೊಳ್ಳಲಾಗುತ್ತಿದೆ. ಈಗಾಗಲೇ ಇಂಜಿನಿಯರ್ಗಳು, ಆರ್ಕಿಟೆಕ್ಟ್ಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇವೆ. ಆದಷ್ಟು ಬೇಗ ಈ ಯೋಜನೆ ಶುರುವಾಗಲಿದೆ ಎಂದು ಬಾಗಲಕೋಟೆ ಶಾಸಕ ವೀರಣ್ಣ ಚರಂತಿಮಠ ಅಭಿಪ್ರಾಯಪಟ್ಟಿದ್ದಾರೆ.
ಇಷ್ಟೆಲ್ಲ ಅಭಿವೃದ್ದಿ ಕೆಲಸಕ್ಕೆ ಮುಂದಾಗಿರುವ ಶಾಸಕರ ಕಾರ್ಯಕ್ಕೆ ಸದ್ಯ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಜೊತೆಗೆ ಈಗಾಗಲೇ ಬಾರಿ ಪ್ರಮಾಣದಲ್ಲಿ ಕೆರೆ ಒತ್ತುವರಿಯಾಗಿದ್ದು, ಶಾಸಕರು ಕೆರೆ ಒತ್ತುವರಿ ತೆರವುಗೊಳಿಸುವ ಕೆಲಸ ಕೂಡ ಮಾಡಲಿ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಒಟ್ಟಿನಲ್ಲಿ ಮುಚಖಂಡಿ ಐತಿಹಾಸಿಕ ಕೆರೆ ಪ್ರವಾಸಿತಾಣಕ್ಕಾಗಿ 8 ಕೋಟಿ ರೂ. ಯೋಜನೆ ಸಿದ್ಧಗೊಳ್ಳುತ್ತಿದ್ದು, ಆದಷ್ಟು ಬೇಗ ಈ ಕಾರ್ಯ ಮುಗಿಯಲಿ ಎಂಬುವುದು ಜನರ ಆಶಯವಾಗಿದೆ.
ವರದಿ: ರವಿ ಮೂಕಿ
ಇದನ್ನೂ ಓದಿ:
ಯಾದಗಿರಿ: ಪ್ರವಾಹದಿಂದ ಹಾಳಾದ ಉದ್ಯಾನವನಕ್ಕೆ ಹೈಟೆಕ್ ಟಚ್; 50 ಲಕ್ಷ ರೂ. ಅನುದಾನದಲ್ಲಿ ಸಿದ್ಧವಾಗುತ್ತಿದೆ ಲುಂಬಿನಿ ವನ
ಕೋಲಾರ ಜಿಲ್ಲೆಯ ಅಂತರ್ಜಲ ಹೆಚ್ಚಿಸಲು ಕ್ಯಾಚ್ ದಿ ರೈನ್ ಯೋಜನೆ; ಕೆರೆಗಳ ಅಭಿವೃದ್ಧಿಗೆ ನೂರು ದಿನಗಳ ಗಡುವು