ಕೋಲಾರ ಜಿಲ್ಲೆಯ ಅಂತರ್ಜಲ ಹೆಚ್ಚಿಸಲು ಕ್ಯಾಚ್​​ ದಿ ರೈನ್ ಯೋಜನೆ; ಕೆರೆಗಳ ಅಭಿವೃದ್ಧಿಗೆ ನೂರು ದಿನಗಳ ಗಡುವು

ಪ್ರತಿಯೊಂದು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ಕೆರೆ, ರಾಜಕಾಲುವೆ ಪುನರುಜ್ಜೀವನ, ಚೆಕ್‌ಡ್ಯಾಂಗಳು, ಗೋಕುಂಟೆಗಳ ನಿರ್ಮಾಣ, ಅರಣ್ಯೀಕರಣ ಸೇರಿದಂತೆ ಇತರೆ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಕ್ಯಾಚ್​​ ದಿ ರೈನ್ ಯೋಜನೆ ರೂಪಿಸಲಾಗಿದೆ.

ಕೋಲಾರ ಜಿಲ್ಲೆಯ ಅಂತರ್ಜಲ ಹೆಚ್ಚಿಸಲು ಕ್ಯಾಚ್​​ ದಿ ರೈನ್ ಯೋಜನೆ; ಕೆರೆಗಳ ಅಭಿವೃದ್ಧಿಗೆ ನೂರು ದಿನಗಳ ಗಡುವು
ಕೋಲಾರ ಜಿಲ್ಲೆಯ ಅಂತರ್ಜಲ ಹೆಚ್ಚಿಸಲು ಕ್ಯಾಚ್​​ ದಿ ರೈನ್ ಯೋಜನೆ
Follow us
TV9 Web
| Updated By: preethi shettigar

Updated on:Jun 02, 2021 | 8:23 AM

ಕೋಲಾರ: ಭೂಮಿಗೆ ಬೀಳುವ ಮಳೆ ನೀರನ್ನು ಹಿಡಿದಿಟ್ಟು, ಸಮರ್ಥವಾಗಿ ಬಳಸಿಕೊಳ್ಳುವ ಉದ್ದೇಶದಿಂದ ಜಲಶಕ್ತಿ ಅಭಿಯಾನದಲ್ಲಿ ಕ್ಯಾಚ್ ದಿ ರೈನ್ ಅಭಿಯಾನ ಆರಂಭಿಸಿರುವ ಜಿಲ್ಲಾ ಪಂಚಾಯತಿ ಅಧಿಕಾರಿಗಳು ಆ ಮೂಲಕ ಕೋಲಾರ ಜಿಲ್ಲೆಯಲ್ಲಿನ ಜಲಮೂಲಗಳನ್ನು ಅಭಿವೃದ್ಧಿಗೊಳಿಸಲು ಯೋಜನೆ ರೂಪಿಸಿದ್ದಾರೆ. ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ (ನರೇಗಾ) ಮೂಲಕ, ಗ್ರಾಮೀಣ ಭಾಗದ ಜನರಿಗೆ ಉದ್ಯೋಗ ನೀಡಲು ದುಡಿಯೋಣ ಬಾ ಅಭಿಯಾನ ಆರಂಭಿಸಿರುವ ಜಿಲ್ಲಾಪಂಚಾಯತಿ, ಇದೀಗ ಜಲ ಮೂಲಗಳ ಅಭಿವೃದ್ಧಿಗಾಗಿ ಕ್ಯಾಚ್ ದಿ ರೈನ್ ಅಭಿಯಾನ ಆರಂಭಿಸಿದೆ.

ನರೇಗಾ ಯೋಜನೆಯ ಅನುಷ್ಠಾನ ಜವಾಬ್ದಾರಿ ಹೊಂದಿರುವ ಇಲಾಖೆಗಳಾದ ಗ್ರಾಮಪಂಚಾಯತಿ, ತೋಟಗಾರಿಕೆ, ಕೃಷಿ, ರೇಷ್ಮೆ, ಅರಣ್ಯ ಇಲಾಖೆ ಹಾಗೂ ಪಂಚಾಯತ್ ರಾಜ್, ಎಂಜಿನಿಯರಿಂಗ್ ಇಲಾಖೆಗಳಿಗೆ ವಿವಿಧ ಕಾಮಗಾರಿಗಳ ಅನುಷ್ಠಾನದ ಜವಾಬ್ದಾರಿಗಳನ್ನು ಕೂಡ ವಹಿಸಲಾಗುತ್ತಿದೆ. ಈಗಾಗಲೇ ಜಿಲ್ಲಾ ಪಂಚಾಯತಿ ವತಿಯಿಂದ ಜಿಲ್ಲೆಯಲ್ಲಿನ ಕಲ್ಯಾಣಿಗಳ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದೆ. ಅದರಂತೆ ಈಗಾಗಲೇ ಜಿಲ್ಲೆಯಲ್ಲಿ 8 ಕಲ್ಯಾಣಿಗಳನ್ನು ಅಭಿವೃದ್ಧಿಪಡಿಸಲಾಗಿದ್ದು, ಜಲಶಕ್ತಿ ಯೋಜನೆಯಡಿಯಲ್ಲಿ ಉಳಿದ ಜಲಮೂಲಗಳ ಅಭಿವೃದ್ಧಿಗೆ ಕ್ರಮಕೈಗೊಳ್ಳಲಾಗಿದೆ.

ಅದರಂತೆ ಪ್ರತಿಯೊಂದು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ಕೆರೆ, ರಾಜಕಾಲುವೆ ಪುನರುಜ್ಜೀವನ, ಚೆಕ್‌ಡ್ಯಾಂಗಳು, ಗೋಕುಂಟೆಗಳ ನಿರ್ಮಾಣ, ಅರಣ್ಯೀಕರಣ ಸೇರಿದಂತೆ ಇತರೆ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಯೋಜನೆ ರೂಪಿಸಲಾಗಿದೆ.

ಕ್ಯಾಚ್​ ದಿ ರೈನ್​ ಯೋಜನೆಗೆ ನೂರು ದಿನಗಳ ಗುರಿ! ಬರಪಡೀತ ಜಿಲ್ಲೆಯಾಗಿರುವುದರಿಂದ ಬೀಳುವ ಮಳೆಯನ್ನು ಸರಿಯಾಗಿ ಹಿಡಿದಿಟ್ಟುಕೊಳ್ಳುವ ಮೂಲಕ ಅಂತರ್ಜಲದ ಮಟ್ಟವನ್ನು ಹೆಚ್ಚಿಸುವುದು ಹಾಗೂ ಜಿಲ್ಲೆಯಲ್ಲಿನ ಕೆರೆಗಳನ್ನು ಅಭಿವೃದ್ಧಿಪಡಿಸುವ ಜವಾಬ್ದಾರಿಯನ್ನು ಸರಕಾರ ವಿವಿಧ ಇಲಾಖೆಗಳಿಗೆ ವಹಿಸಿದ್ದು, ಇಲಾಖೆಗಳಿಗೆ ನೀಡಿರುವ ಗುರಿಯನ್ನು ನೂರು ದಿನಗಳಲ್ಲಿ ಪೂರ್ಣಗೊಳಿಸುವಂತೆ ಗಡುವು ನೀಡಲಾಗಿದೆ ಎಂದು ಜಿಲ್ಲಾ ಪಂಚಾಯತಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

 ಈ ಅಭಿಯಾನದಲ್ಲಿ ಗ್ರಾಮ ಪಂಚಾಯತಿ ಪಾತ್ರ ಏನು? ಜಲಶಕ್ತಿ ಅಭಿಯಾನದಡಿಯಲ್ಲಿ ಜಿಲ್ಲೆಯ 156 ಗ್ರಾಮ ಪಂಚಾಯತಿಗಳಲ್ಲಿ, ಪ್ರತಿ ಗ್ರಾಮ ಪಂಚಾಯತಿಗೆ 1 ಕೆರೆಯನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗಿದೆ. ಜತೆಗೆ 5 ಪೋಷಕ ಕಾಲುವೆಗಳ ಅಭಿವೃದ್ಧಿ, 20 ಬೋಲ್ಡರ್ ಚೆಕ್‌ಗಳ ಡ್ಯಾಂಗಳು, 1 ಮಲ್ಟಿ ಆರ್ಚ್ ಚೆಕ್ ಡ್ಯಾಂ, 5 ಮಳೆ ನೀರು ಕೊಯ್ಲು ಕಾಮಗಾರಿಗಳು, 50 ಸೋಕ್ ಪಿಟ್‌ಗಳು, 50 ಬದು ನಿರ್ಮಾಣ, 2 ಸಮುದಾಯ ಆಧಾರಿತ ಕೃಷಿ ಹೊಂಡ, 5 ಗೋಕುಂಟೆಗಳ ನಿರ್ಮಾಣದ ಗುರಿ ನಿಗದಿಪಡಿಸಲಾಗಿದೆ.

ಗ್ರಾಮ ಪಂಚಾಯತಿ ಜತೆಗೆ ಕೈ ಜೋಡಿಸುವ ಇಲಾಖೆಗಳು ಯಾವುವು, ಅದರ ಜವಾಬ್ದಾರಿ ಏನು?

ಕೃಷಿ ಇಲಾಖೆ: ಪ್ರತಿ ಗ್ರಾಮ ಪಂಚಾಯತಿಗಳಿಗೆ 10 ಕೃಷಿ ಹೊಂಡಗಳನ್ನು ನಿರ್ಮಿಸಲು ಗುರಿ ನಿಗದಿಪಡಿಸಲಾಗಿದೆ.

ಅರಣ್ಯ ಇಲಾಖೆ: ಪ್ರತಿ ಗ್ರಾಮ ಪಂಚಾಯತಿಗೆ 2 ಕಿ.ಮೀ.ರಸ್ತೆ ಬದಿಗಳಲ್ಲಿ ಗಿಡಗಳನ್ನು ನೆಡಲು ಹಾಗೂ 1 ನೆಡುತೋಪು ಅಭಿವೃದ್ಧಿಪಡಿಸುವುದು.

ತೋಟಗಾರಿಕೆ ಇಲಾಖೆ: ಪ್ರತಿ ಗ್ರಾಮ ಪಂಚಾಯತಿಗಳಿಗೆ 5 ಪೌಷ್ಠಿಕ ತೋಟ ಕಾಮಗಾರಿಗಳು ಹಾಗೂ ವೈಯಕ್ತಿಕ ಪೌಷ್ಠಿಕ ತೋಟ ಅಭಿವೃದ್ಧಿಪಡಿಸುವ ಗುರಿ.

ಪಿಆರ್‌ಇಡಿ: ಪ್ರತಿ ಗ್ರಾಮ ಪಂಚಾಯತಿಗೆ 5 ರಾಜಕಾಲುವೆ ಕಾಮಗಾರಿ, 1 ಸಮಗ್ರ ಕೆರೆ ಅಭಿವೃದ್ಧಿ ಹಾಗೂ 50 ಬೋಲ್ಡರ್ ಚೆಕ್ ಡ್ಯಾಂಗಳು ಹಾಗೂ ಪ್ರತಿ ಗ್ರಾಮ ಪಂಚಾಯತಿಗೆ 5 ಬೋರ್‌ವೆಲ್ ರೀಚಾರ್ಜ್ ಸೆಕ್ಟರ್​​ಗಳನ್ನು ನಿರ್ಮಿಸಲು ಗುರಿ ನೀಡಲಾಗಿದೆ.

ಕೋಲಾರದಂತಹ ಜಿಲ್ಲೆಗೆ ಕ್ಯಾಚ್ ದಿ ರೈನ್ ಅಭಿಯಾನ ವರದನಾವಾಗಿದ್ದು, ಮಳೆಗಾಲ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಅಭಿಯಾನದಿಂದ ಜಿಲ್ಲೆಯಲ್ಲಿನ ಜಲಮೂಲಗಳು ಮಳೆ ನೀರನ್ನು ಸಮರ್ಥವಾಗಿ ಹಿಡಿದಿಟ್ಟುಕೊಳ್ಳಲು ಸಜ್ಜುಗೊಳಿಸಲಾಗುತ್ತಿದೆ. ಅದರಂತೆ ಪ್ರತಿಯೊಂದು ಸಂಸ್ಥೆಗಳಿಗೆ ಗುರಿಯನ್ನು ನೀಡಲಾಗಿದೆ ಎಂದು ಕೋಲಾರ ಜಿಲ್ಲಾಪಂಚಾಯತಿ ಸಿಇಓ ನಾಗರಾಜ್ ಹೇಳಿದ್ದಾರೆ.

ಇದನ್ನೂ ಓದಿ:

ಅಂತರ್ಜಲ ವೃದ್ಧಿಸಲು ಮಾಸ್ಟರ್ ಪ್ಲ್ಯಾನ್, ಜಲಾಮೃತ ವಿಳಂಬಕ್ಕೆ ರೈತರ ಆಕ್ರೋಶ

ಶರಣು ಮಣ್ಣಿಗೆ : ಆಗುವುದೆಲ್ಲಾ ಎಷ್ಟೊಂದು ಒಳ್ಳೆಯದಕ್ಕೆ! ಇದೋ ನಿನಗೆ ವಂದನೆ ನನ್ನೊಳು ಹೊಕ್ಕ ರೋಗವೇ..

Published On - 8:21 am, Wed, 2 June 21