ಕೆಎಲ್ ರಾಹುಲ್, ಶುಭ್ಮನ್ ಗಿಲ್ಗೆ ಕಾಲು ನೋವು: ಇಂಗ್ಲೆಂಡ್ಗೆ ತಲೆ ನೋವು
India vs England: ಮ್ಯಾಂಚೆಸ್ಟರ್ನ ಓಲ್ಡ್ ಟ್ರಾಫೋರ್ಡ್ ಮೈದಾನದಲ್ಲಿ ನಡೆಯುತ್ತಿರುವ 4ನೇ ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಪ್ರಥಮ ಇನಿಂಗ್ಸ್ನಲ್ಲಿ 358 ರನ್ ಕಲೆಹಾಕಿದರೆ, ಇಂಗ್ಲೆಂಡ್ ಮೊದಲ ಇನಿಂಗ್ಸ್ನಲ್ಲಿ 669 ರನ್ಗಳಿಸಿತು. ಇದೀಗ ದ್ವಿತೀಯ ಇನಿಂಗ್ಸ್ ಆಡುತ್ತಿರುವ ಟೀಮ್ ಇಂಡಿಯಾ 4ನೇ ದಿನದಾಟದ ಅಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 174 ರನ್ಗಳಿಸಿದೆ.

ಬರೋಬ್ಬರಿ 311 ರನ್ಗಳ ಮುನ್ನಡೆ… ಮ್ಯಾಂಚೆಸ್ಟರ್ ಟೆಸ್ಟ್ನ 4ನೇ ದಿನದಾಟದ ಮೊದಲ ಸೆಷನ್ನಲ್ಲಿ ಇಂಗ್ಲೆಂಡ್ ತಂಡವು ಮೊದಲ ಇನಿಂಗ್ಸ್ ಅನ್ನು 669 ರನ್ಗಳೊಂದಿಗೆ ಅಂತ್ಯಗೊಳಿಸಿದ್ದರು. ಈ 669 ರನ್ಗಳೊಂದಿಗೆ ಇಂಗ್ಲೆಂಡ್ ತಂಡ ಪಡೆದ ಮುನ್ನಡೆ ಬರೋಬ್ಬರಿ 311 ರನ್ಗಳು. ಈ ಹಿನ್ನಡೆಯೊಂದಿಗೆ ಟೀಮ್ ಇಂಡಿಯಾ ದ್ವಿತೀಯ ಇನಿಂಗ್ಸ್ ಆರಂಭಿಸಬೇಕಿತ್ತು.
ಅದರಂತೆ ಎರಡನೇ ಇನಿಂಗ್ಸ್ ಶುರು ಮಾಡಿದ ಟೀಮ್ ಇಂಡಿಯಾಗೆ ಮೊದಲ ಓವರ್ನಲ್ಲೇ ಕ್ರಿಸ್ ವೋಕ್ಸ್ ಆಘಾತ ನೀಡಿದ್ದರು. ಭಾರತ ತಂಡದ ದ್ವಿತೀಯ ಇನಿಂಗ್ಸ್ನ ಮೊದಲ ಓವರ್ನ 4ನೇ ಎಸೆತದಲ್ಲಿ ಯಶಸ್ವಿ ಜೈಸ್ವಾಲ್ (0) ಸ್ಲಿಪ್ನಲ್ಲಿ ಕ್ಯಾಚ್ ನೀಡಿ ನಿರ್ಗಮಿಸಿದ್ದರು. ಮರು ಎಸೆತದಲ್ಲೇ ಸಾಯಿ ಸುದರ್ಶನ್ (0) ಹ್ಯಾರಿ ಬ್ರೂಕ್ಗೆ ಕ್ಯಾಚಿತ್ತು ಹೊರ ನಡೆದರು. ಅಂದರೆ ಟೀಮ್ ಇಂಡಿಯಾ ದ್ವಿತೀಯ ಇನಿಂಗ್ಸ್ನಲ್ಲಿ ರನ್ ಖಾತೆ ತೆರೆಯುವ ಮುನ್ನವೇ 2 ವಿಕೆಟ್ ಕಳೆದುಕೊಂಡಿತು.
ಇತ್ತ ಬ್ಯಾಕ್ ಟು ಬ್ಯಾಕ್ ಎರಡು ವಿಕೆಟ್ ಕಬಳಿಸಿ ಇಂಗ್ಲೆಂಡ್ ತಂಡವು ಹೊಸ ಹುರುಪಿನಲ್ಲಿ ಕಾಣಿಸಿಕೊಂಡಿದ್ದರು. ಅಲ್ಲದೆ ನಾಲ್ಕನೇ ದಿನದಾಟದಲ್ಲೇ ಪಂದ್ಯ ಮುಗಿಸುವ ಸೂಚನೆಯನ್ನು ಸಹ ನೀಡಿದ್ದರು. ಆದರೆ ಈ ಹಂತದಲ್ಲಿ ಜೊತೆಗೂಡಿದ ಕೆಎಲ್ ರಾಹುಲ್ ಹಾಗೂ ಶುಭ್ಮನ್ ಗಿಲ್ ಬಂಡೆಯಂತೆ ಕ್ರೀಸ್ ಕಚ್ಚಿ ನಿಂತರು. ಇಂಗ್ಲೆಂಡ್ ವೇಗಿಗಳ ಮಾರಕ ದಾಳಿಗೆ ಎದೆಯೊಡ್ಡಲು ನಿರ್ಧರಿಸಿದರು. ಪರಿಣಾಮ ದ್ವಿತೀಯ ಸೆಷನ್ನಲ್ಲಿ ಆಂಗ್ಲ ಬೌಲರ್ಗಳಿಗೆ ಒಂದೇ ಒಂದು ವಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ.
ಇದರ ನಡುವೆ ಜವಾಬ್ದಾರಿಯುತ ಬ್ಯಾಟಿಂಗ್ನೊಂದಿಗೆ ಕೆಎಲ್ ರಾಹುಲ್ ಹಾಗೂ ಶುಭ್ಮನ್ ಗಿಲ್ 26 ಓವರ್ಗಳಲ್ಲಿ 86 ರನ್ ಕಲೆಹಾಕಿದರು. ಆ ಬಳಿಕ ಮೂರನೇ ಸೆಷನ್ನಲ್ಲೂ ಆಂಗ್ಲರು ಹಲವು ತಂತ್ರಗಳನ್ನು ಪ್ರಯೋಗಿಸಿದರೂ ರಾಹುಲ್ ಹಾಗೂ ಗಿಲ್ ಜೋಡಿಯನ್ನು ಬೇಪಡಿಸಲು ಸಾಧ್ಯವಾಗಲೇ ಇಲ್ಲ. ಅತ್ತ ಮೂರನೇ ಸೆಷನ್ನಲ್ಲಿ 34 ಓವರ್ಗಳನ್ನು ಎದುರಿಸಿದ ಗಿಲ್-ಕೆಎಲ್ ಜೋಡಿ ಒಟ್ಟು 88 ರನ್ ಕಲೆಹಾಕಿದರು.
ಈ ಮೂಲಕ ನಾಲ್ಕನೇ ದಿನದಾಟದಲ್ಲಿ 3ನೇ ವಿಕೆಟ್ ಕಳೆದುಕೊಳ್ಳದಂತೆ ಜವಾಬ್ದಾರಿಯುತ ಇನಿಂಗ್ಸ್ ಆಡಿದರು. ಈ ಇನಿಂಗ್ಸ್ನಲ್ಲಿ ಉಭಯ ದಾಂಡಿಗರು ಎದುರಿಸಿರುವುದು ಬರೋಬ್ಬರಿ 373 ಎಸೆತಗಳನ್ನು. ಈ ಮೂಲಕ 174 ರನ್ಗಳ ಭರ್ಜರಿ ಜೊತೆಯಾಟ ಪ್ರದರ್ಶಿಸಿದ್ದಾರೆ.
ಅತ್ತ ಕ್ರೀಸ್ ಕಚ್ಚಿ ನಿಂತ ಪರಿಣಾಮ ಕೆಎಲ್ ರಾಹುಲ್ ಹಾಗೂ ಶುಭ್ಮನ್ ಗಿಲ್ ಕಾಲು ನೋವಿಗೆ ಒಳಗಾದರು. ಈ ನೋವಿನ ನಡುವೆಯೂ ಆಂಗ್ಲ ಬೌಲರ್ಗಳ ಮುಂದೆ ಸೆಟೆದು ನಿಂತರು. ಇತ್ತ ರಾಹುಲ್ ಹಾಗೂ ಗಿಲ್ಗೆ ಕಾಲು ನೋವು ಶುರುವಾಗಿದ್ದರೆ, ಅತ್ತ ವಿಕೆಟ್ ಪಡೆಯಲು ಹರಸಾಹಸ ಪಡುತ್ತಿದ್ದ ಇಂಗ್ಲೆಂಡ್ ಬೌಲರ್ಗಳಿಗೆ ತಲೆ ನೋವು ಆರಂಭವಾಗಿತ್ತು. ಈ ನೋವುಗಳ ನಡುವೆ ನಾಲ್ಕನೇ ದಿನದಾಟ ಮುಗಿದಿದೆ.
ಇದನ್ನೂ ಓದಿ: KL Rahul: ಬರೋಬ್ಬರಿ 46 ವರ್ಷಗಳ ಬಳಿಕ ಹೊಸ ಇತಿಹಾಸ ನಿರ್ಮಿಸಿದ ಕೆಎಲ್ ರಾಹುಲ್
ಇದೀಗ ಐದನೇ ದಿನದಾಟ ಟೀಮ್ ಇಂಡಿಯಾ ಪಾಲಿಗೆ ನಿರ್ಣಾಯಕ. ಭಾನುವಾರ ಭಾರತ ತಂಡವು ಆಲೌಟ್ ಆಗದಿದ್ದರೆ, ಈ ಪಂದ್ಯವನ್ನು ಡ್ರಾ ಮಾಡಿಕೊಳ್ಳಬಹುದು. ಈ ಮ್ಯಾಚ್ ಅನ್ನು ಟೀಮ್ ಇಂಡಿಯಾ ಡ್ರಾ ಮಾಡಿಕೊಂಡರೆ ಅದು ಭಾರತದ ಪಾಲಿಗೆ ಗೆಲುವು ಎಂದರ್ಥ.
ಅತ್ತ 311 ರನ್ಗಳ ಮುನ್ನಡೆ ಹೊಂದಿರುವ ಇಂಗ್ಲೆಂಡ್ ತಂಡವು ಇನ್ನೂ 8 ವಿಕೆಟ್ ಕಬಳಿಸಿ ಗೆಲ್ಲುವ ಹಾದಿಯನ್ನು ನೋಡಬೇಕಿದೆ. ಹೀಗಾಗಿ ಐದನೇ ದಿನದಾಟದಲ್ಲಿ ಉಭಯ ತಂಡಗಳಿಂದ ಭರ್ಜರಿ ಪೈಪೋಟಿಯನ್ನು ನಿರೀಕ್ಷಿಸಬಹುದು.
Published On - 8:54 am, Sun, 27 July 25
