AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಮಿಳು ಚಿತ್ರರಂಗದಲ್ಲಿ ರಾಜಕೀಯ: ವಿಜಯ್ ಕೊನೆ ಸಿನಿಮಾ ಟಾರ್ಗೆಟ್

Thalapathy Vijay: ತಮಿಳುನಾಡಿನಲ್ಲಿ ಅರ್ಧ ಶತಮಾನಕ್ಕೂ ಹೆಚ್ಚು ಸಮಯದಿಂದ ಸಿನಿಮಾ ಮತ್ತು ರಾಜಕೀಯ ಜೊತೆ-ಜೊತೆಯಾಗಿ ಸಾಗುತ್ತಿವೆ. ಸಿನಿಮಾಗಳನ್ನು ರಾಜಕೀಯಕ್ಕೆ ಬಳಸುತ್ತಲೇ ಬರಲಾಗುತ್ತಿದೆ. ಸಿನಿಮಾನಲ್ಲಿ ಯಶಸ್ವಿ ಆದವರು ರಾಜಕೀಯಕ್ಕೆ ಬಂದು ಅಲ್ಲಿಯೂ ಯಶಸ್ಸು ಕಂಡಿದ್ದಾರೆ. ಇದೀಗ ಮತ್ತೊಮ್ಮೆ ತಮಿಳುನಾಡಿನಲ್ಲಿ ಸಿನಿಮಾ ರಾಜಕೀಯ ಶುರುವಾಗಿದೆ. ವಿಜಯ್ ಕೊನೆ ಸಿನಿಮಾದ ವಿರುದ್ಧ ಸಿನಿಮಾ ರಾಜಕೀಯ ನಡೆಯುತ್ತಿದೆ.

ತಮಿಳು ಚಿತ್ರರಂಗದಲ್ಲಿ ರಾಜಕೀಯ: ವಿಜಯ್ ಕೊನೆ ಸಿನಿಮಾ ಟಾರ್ಗೆಟ್
Vijay Jana Nayagan
ಮಂಜುನಾಥ ಸಿ.
|

Updated on: Dec 20, 2025 | 6:21 PM

Share

ತಮಿಳುನಾಡಿನಲ್ಲಿ ಚಿತ್ರರಂಗಕ್ಕೂ (Movie) ರಾಜಕೀಯಕ್ಕೂ ಬಹಳ ಆಪ್ತ ಬಂಧ. ಸ್ವಾತಂತ್ರ್ಯ ಬಂದಾಗಿನಿಂದಲೂ ತಮಿಳು ಚಿತ್ರರಂಗದಲ್ಲಿರುವವರೇ ತಮಿಳುನಾಡಿನ ರಾಜಕೀಯದಲ್ಲೂ ಅಬ್ಬರಿಸಿದ್ದಾರೆ. ಅಣ್ಣಾದೊರೈ, ಶಿವಾಜಿ ಗಣೇಶನ್, ಕರುಣಾನಿಧಿ, ಎಂಜಿಆರ್, ಜಯಲಲಿತಾ, ವಿಜಯ್​ಕಾಂತ್, ಶರತ್​​ಕುಮಾರ್ ಇನ್ನೂ ಹಲವಾರು ಮಂದಿ ಸಿನಿಮಾ ಸೆಲೆಬ್ರಿಟಿಗಳು ತಮಿಳುನಾಡು ರಾಜಕೀಯದಲ್ಲಿ ತೊಡಗಿಕೊಂಡಿದ್ದಾರೆ. ಈಗಲೂ ಸಹ ಈ ಪದ್ಧತಿ ಚಾಲ್ತಿಯಲ್ಲಿದ್ದು, ಇತ್ತೀಚೆಗಷ್ಟೆ ನಟ ದಳಪತಿ ವಿಜಯ್ ಅವರು ರಾಜಕೀಯಕ್ಕೆ ಕಾಲಿರಿಸಿದ್ದಾರೆ. ಆದರೆ ತಮಿಳುನಾಡಿನಲ್ಲಿ ಅರ್ಧ ಶತಮಾನದಿಂದಲೂ ಸಿನಿಮಾಗಳನ್ನು ರಾಜಕೀಯಕ್ಕೆ ಬಳಸಿಕೊಳ್ಳುವ ರೂಢಿ ಇದೆ, ಈಗಲೂ ಅದೇ ನಡೆಯುತ್ತಿದೆ.

ವಿಜಯ್ ಅವರು ತಮ್ಮ ಕೊನೆಯ ಸಿನಿಮಾ ‘ಜನ ನಾಯಗನ್’ ಬಿಡುಗಡೆ ದಿನಾಂಕ ಘೋಷಿಸಿದ್ದಾರೆ. ಸಿನಿಮಾ ಜನವರಿ 09 ರಂದು ಬಿಡುಗಡೆ ಆಗಲಿದೆ. ಈ ಸಿನಿಮಾ ಅನ್ನು ತಮ್ಮ ರಾಜಕೀಯ ಪಯಣಕ್ಕೆ ಚಿಮ್ಮುಹಲಗೆಯಾಗಿ ವಿಜಯ್ ಬಳಸಲಿದ್ದಾರೆ. ತಾವೆಂಥಹ ಜನನಾಯಕ ಎಂಬುದನ್ನು ಹೇಳಲೆಂದೇ ಈ ಸಿನಿಮಾ ಮಾಡಿದ್ದಾರೆ. ಆದರೆ ಇದೀಗ ವಿಜಯ್ ಅವರ ಈ ಸಿನಿಮಾ ರಾಜಕೀಯಕ್ಕೆ ಸಿನಿಮಾದ ಮೂಲಕವೇ ಉತ್ತರ ನೀಡಲು ಎದುರಾಳಿಗಳು ಸಜ್ಜಾಗಿದ್ದಾರೆ.

ತಮಿಳಿನ ಮತ್ತೊಬ್ಬ ಜನಪ್ರಿಯ ನಟ ಶಿವಕಾರ್ತಿಕೇಯನ್ ನಟನೆಯ ‘ಪರಾಶಕ್ತಿ’ ಸಿನಿಮಾ ಜನವರಿ 14ರಂದು ಬಿಡುಗಡೆ ಆಗಬೇಕಿತ್ತು. ಆದರೆ ವಿಜಯ್ ಅವರ ‘ಜನ ನಾಯಗನ್’ಗೆ ಪೆಟ್ಟು ಕೊಡಬೇಕೆಂದು, ಜನವರಿ 10ರಂದೇ ಸಿನಿಮಾ ಬಿಡುಗಡೆ ಮಾಡುವುದಾಗಿ ನಿರ್ಮಾಪಕ ಆಕಾಶ್ ಭಾಸ್ಕರನ್ ಘೋಷಿಸಿದ್ದಾರೆ. ಅಂದಹಾಗೆ ಆಕಾಶ್ ಅವರು ಡಿಎಂಕೆ ಪಕ್ಷದ ಪ್ರಮುಖ ನಾಯಕರ ನಿಕಟ ಸಂಬಂಧಿ ಆಗಿದ್ದಾರೆ.

ಇದನ್ನೂ ಓದಿ:ವಿಜಯ್ ಅಭಿಮಾನಿಗಳ ಓಲೈಸಲು ಹೋಗಿ ಚಿರಂಜೀವಿ ಅಭಿಮಾನಿಗಳ ಎದುರು ಹಾಕಿಕೊಂಡ ಕೀರ್ತಿ ಸುರೇಶ್

‘ಜನ ನಾಯಗನ್’ ರೀತಿ ‘ಪರಾಶಕ್ತಿ’ ಸಿನಿಮಾ ಸಹ ರಾಜಕೀಯ ವಿಷಯವನ್ನು ಹೊಂದಿರುವ ಸಿನಿಮಾ ಆಗಿದೆ. 1952 ಬಿಡುಗಡೆ ಆಗಿದ್ದ ‘ಪರಾಶಕ್ತಿ’ ಸಿನಿಮಾ ತಮಿಳುನಾಡು ರಾಜಕೀಯದಲ್ಲಿ ಹೊಸ ಅಲೆಯನ್ನೇ ಎಬ್ಬಿಸಿತ್ತು, ಸಾಮಾಜಿಕ ಕ್ರಾಂತಿಗೆ ಕಾರಣವಾಗಿತ್ತು. ಇದೀಗ ಈ ಸಿನಿಮಾಕ್ಕೂ ‘ಪರಾಶಕ್ತಿ’ ಎಂದೇ ಹೆಸರಿಟ್ಟು, ಹಿಂದಿ ಹೇರಿಕೆ, ಜಾತಿ ಪದ್ಧತಿ ಇತರೆ ರಾಜಕೀಯ ವಿಷಯಗಳನ್ನು ಸಿನಿಮಾನಲ್ಲಿ ಅಳವಡಿಸಲಾಗಿದೆ ಎನ್ನಲಾಗುತ್ತಿದೆ. ಇದೇ ಕಾರಣಕ್ಕೆ ಇದೀಗ ಈ ಸಿನಿಮಾವನ್ನು ವಿಜಯ್ ಅವರ ಸಿನಿಮಾದ ಜೊತೆಗೆ ಬಿಡುಗಡೆ ಮಾಡಲಾಗುತ್ತಿದ್ದು, ವಿಜಯ್ ಅವರಿಗೆ ಸ್ಪರ್ಧೆ ನೀಡಲಾಗುತ್ತಿದೆ.

ಅದಾದ ಒಂದೇ ವಾರಕ್ಕೆ ಅಜಿತ್ ನಟನೆಯ ಹಳೆಯ ಹಿಟ್ ಸಿನಿಮಾವನ್ನು ಮರು ಬಿಡುಗಡೆ ಮಾಡಲಾಗುತ್ತಿದ್ದು, ಒಟ್ಟಾರೆ ವಿಜಯ್ ಅವರ ಸಿನಿಮಾಕ್ಕೆ ಹೆಚ್ಚು ಚಿತ್ರಮಂದಿರಗಳು ಸಿಗದಂತೆ, ಹೆಚ್ಚು ಜನರ ಅಟೆನ್ಷನ್ ಸಿಗದಂತೆ ಮಾಡುವ ಪ್ರಯತ್ನಗಳು ನಡೆಯುತ್ತಿವೆ. ತಮಿಳುನಾಡು ಚಿತ್ರರಂಗದಲ್ಲಿ ಮತ್ತೊಮ್ಮೆ ಸಿನಿಮಾ ರಾಜಕೀಯ ಶುರುವಾಗಿದೆ. ಗೆಲುವು ಯಾರಿಗೆ ಆಗುತ್ತದೆ ನೋಡಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ