‘ಓಂ’ ಸಿನಿಮಾಕ್ಕೆ ಸೆನ್ಸಾರ್ ಸಮಸ್ಯೆ: ಮುಂದೆ ನಡೆದಿದ್ದೇನು? ವಿವರಿಸಿದ ಉಪ್ಪಿ
Om Movie: ಶಿವರಾಜ್ ಕುಮಾರ್ ನಟಿಸಿ, ಉಪೇಂದ್ರ ನಿರ್ದೇಶನ ಮಾಡಿದ್ದ ‘ಓಂ’ ಸಿನಿಮಾ ಕನ್ನಡದ ಕಲ್ಟ್ ಸಿನಿಮಾಗಳಲ್ಲಿ ಒಂದು. ಹಲವಾರು ಬಾರಿ ಮರು ಬಿಡುಗಡೆ ಆಗಿರುವ ಈ ಸಿನಿಮಾ ಪ್ರತಿಬಾರಿಯೂ ಸೂಪರ್ ಹಿಟ್ ಆಗಿದೆ. ‘ಓಂ’ ಸಿನಿಮಾ ಬಗ್ಗೆ ಹಲವರು ಮಾತನಾಡಿದ್ದಾರೆ. ಸ್ವತಃ ಉಪೇಂದ್ರ ಹಲವು ಬಾರಿ ಮಾತನಾಡಿದ್ದಾರೆ. ಆದರೆ ‘ಓಂ’ ಸಿನಿಮಾಕ್ಕೆ ಸೆನ್ಸಾರ್ ಸಮಸ್ಯೆ ಆಗಿದ್ದು, ಅದಾದ ಬಳಿಕ ಏನಾಯ್ತು ಎಂಬುದನ್ನು ಇದೀಗ ಉಪ್ಪಿ ಹೇಳಿಕೊಂಡಿದ್ದಾರೆ.

ಕನ್ನಡ ಚಿತ್ರರಂಗದ (Sandalwood) ಕಲ್ಟ್ ಸಿನಿಮಾಗಳಲ್ಲಿ ‘ಓಂ’ ಸಹ ಒಂದು. ಕನ್ನಡ ಚಿತ್ರರಂಗದ ದಿಕ್ಕು ಬದಲಿಸಿದ ಸಿನಿಮಾಗಳಲ್ಲಿ ‘ಓಂ’ ಸಹ ಒಂದು. ನಟನೆ, ನಿರ್ದೇಶಕ, ಸಂಗೀತ, ನಿರೂಪಣೆ ಎಲ್ಲ ವಿಭಾಗಗಳಲ್ಲಿಯೂ ಹೊಸತನ ತುಂಬಿಕೊಂಡಿದ್ದ ಸಿನಿಮಾ ಅದಾಗಿತ್ತು. ಹಲವಾರು ದಾಖಲೆಗಳನ್ನು ಮಡಿಲಲ್ಲಿ ತುಂಬಿಕೊಂಡಿರುವ ‘ಓಂ’ ಸಿನಿಮಾ ಬಗ್ಗೆ ಈಗಾಗಲೇ ಹಲವಾರು ಮಂದಿ ಹಲವಾರು ಬಾರಿ ಮಾತನಾಡಿದ್ದಾರೆ. ಓಂ ಸಿನಿಮಾದ ನಿರ್ದೇಶಕ ಉಪೇಂದ್ರ ಸಹ ‘ಓಂ’ ಕುರಿತಾಗಿ ಹಲವು ಬಾರಿ ಮಾತನಾಡಿದ್ದಾರೆ. ‘ಓಂ’ ಸಿನಿಮಾದ ಹಿಂದಿನ ಕತೆ ಹೇಳಿದ್ದಾರೆ. ಆದರೆ ಸಿನಿಮಾಕ್ಕೆ ಸೆನ್ಸಾರ್ ಸಮಸ್ಯೆ ಆಗಿದ್ದು, ಆ ನಂತರ ಏನಾಯ್ತು ಎಂಬುದನ್ನು ಇದೀಗ ಉಪ್ಪಿ ಹಂಚಿಕೊಂಡಿದ್ದಾರೆ.
ಉಪೇಂದ್ರ ಅವರು ಇದೀಗ ಶಿವಣ್ಣ, ರಾಜ್ ಬಿ ಶೆಟ್ಟಿ ಜೊತೆಗೆ ‘45’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಸಿನಿಮಾದ ಪ್ರಚಾರ ಕಾರ್ಯ ಚಾಲ್ತಿಯಲ್ಲಿದೆ. ಟಿವಿ9ಗೆ ವಿಶೇಷ ಸಂದರ್ಶನ ನೀಡಿರುವ ಉಪೇಂದ್ರ, ಅರ್ಜುನ್ ಜನ್ಯಾ ಮತ್ತು ರಾಜ್ ಬಿ ಶೆಟ್ಟಿ, ‘45’ ಸಿನಿಮಾದ ಜೊತೆಗೆ ಇನ್ನೂ ಹಲವು ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಈ ವೇಳೆ ಉಪೇಂದ್ರ ಅವರು ‘ಓಂ’ ಸಿನಿಮಾಕ್ಕೆ ಸೆನ್ಸಾರ್ ಸಮಸ್ಯೆ ಆಗಿದ್ದ ಕತೆಯನ್ನು ಹಂಚಿಕೊಂಡಿದ್ದಾರೆ.
‘ಓಂ’ ಸಿನಿಮಾಕ್ಕೆ ಸೆನ್ಸಾರ್ ಸಮಸ್ಯೆ ಆಗಿತ್ತು. ಅವರು ಕೆಲವು ದೃಶ್ಯಗಳನ್ನು ತೆಗೆಯಲು ಹೇಳಿದ್ದರು. ಅವುಗಳನ್ನು ಮರಳಿ ಶೂಟ್ ಮಾಡಬೇಕೆಂದರೆ ತುಸು ಸಮಯ ಹಿಡಿಯುತ್ತದೆ. ಆದರೆ ಅದಾಗಲೇ ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆ ಮಾಡಿ ಆಗಿತ್ತು. ಪಾರ್ವತಮ್ಮ ರಾಜ್ಕುಮಾರ್ ಅವರಿಗೆ ಸಿನಿಮಾ ಅನ್ನು ಹೇಳಿದ ದಿನಕ್ಕೆ ಬಿಡುಗಡೆ ಮಾಡಲೇ ಬೇಕು. ಜನರಿಗೆ ಮಾತು ತಪ್ಪು ಬಾರದು ಎಂಬುದು ಅವರ ಉದ್ದೇಶ. ಆದರೆ ಸೆನ್ಸಾರ್ ಸಮಸ್ಯೆ ಆಗಿರುವುದರಿಂದ ಸಮಸ್ಯೆ ಆಗಿತ್ತು.
ಇದನ್ನೂ ಓದಿ:ಶಿವಣ್ಣನಂಥ ಗೆಳೆಯ ಸಿಕ್ಕಿದ್ದು ಪುಣ್ಯ: ಉಪೇಂದ್ರ
ಸೆನ್ಸಾರ್ನವರು ಕೆಲವು ದೃಶ್ಯಗಳನ್ನು ತೆಗೆಯಲು ಹೇಳಿದರು. ಅವುಗಳನ್ನು ತೆಗೆದರೆ ಸರ್ಟಿಫಿಕೇಟ್ ಕೊಡುತ್ತೇನೆ ಎಂದರು. ಪಾರ್ವತಮ್ಮನವರು ಅವರು ಹೇಳಿದ ದೃಶ್ಯಗಳನ್ನು ತೆಗೆದು ಸರ್ಟಿಫಿಕೇಟ್ ಪಡೆದುಕೊಳ್ಳಿ, ನಿಗದಿತ ಸಮಯಕ್ಕೆ ಬಿಡುಗಡೆ ಮಾಡೋಣ ಎಂದರು. ನಾನು ಕೆಲವು ಸಣ್ಣ ಪುಟ್ಟ ದೃಶ್ಯಗಳನ್ನು ತೆಗೆಯಲು ಒಪ್ಪಿಕೊಂಡೆ ಆದರೆ ದೊಡ್ಡ ಅಥವಾ ಮುಖ್ಯವಾದ ದೃಶ್ಯಗಳನ್ನು ತೆಗೆಯಲು ನನಗೆ ಮನಸ್ಸಾಗಲಿಲ್ಲ. ಕೊನೆಗೆ ಪಾರ್ವತಮ್ಮನವರ ಬಳಿ ಒಮ್ಮೆ ವರದಣ್ಣನವರು ಅಪ್ಪಾಜಿ ಅವರು ನೋಡಲಿ ಆ ನಂತರ ತೆಗೆಯುತ್ತೇನೆ ಎಂದು ಹೇಳಿದರಂತೆ.
ಅದರಂತೆ ವರದಣ್ಣ ಮತ್ತು ರಾಜ್ಕುಮಾರ್ ಅವರು ಒಟ್ಟಿಗೆ ‘ಓಂ’ ಸಿನಿಮಾ ನೋಡಿದರಂತೆ. ಸಿನಿಮಾ ನೋಡಿದವರು ಈ ಸಿನಿಮಾದಿಂದ ಯಾವ ಸಣ್ಣ ದೃಶ್ಯವನ್ನೂ ತೆಗೆಯುವಂತೆ ಇಲ್ಲ, ನಾವು ತಡವಾಗಿ ಸೆನ್ಸಾರ್ ಪಡೆದರು ಪರವಾಗಿಲ್ಲ, ಯಾವ ದೃಶ್ಯವನ್ನೂ ತೆಗೆಯುವುದು ಬೇಡ ಎಂದುಬಿಟ್ಟರಂತೆ. ದೃಶ್ಯಗಳನ್ನು ಕಟ್ ಮಾಡಬೇಕಲ್ಲ ಎಂದು ಅಂಜಿಕೆಯಿಂದ, ಬೇಸರದಿಂದ ಇದ್ದ ಉಪೇಂದ್ರ ಅವರಿಗೆ ಇದು ಭಾರಿ ದೊಡ್ಡ ಖುಷಿ ನೀಡಿತಂತೆ. ಅವರ ಮಾತಿನಂತೆ ಯಾವುದೇ ಮುಖ್ಯ ಕಟ್ಗಳು ಇಲ್ಲದೆ ಸಿನಿಮಾ ಬಿಡುಗಡೆ ಸಹ ಆಗಿದ್ದು ಇತಿಹಾಸ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




