ಬೆಳಗಾವಿ: ಹೂವಿನ ಅಂಗಡಿ ಮಾಲೀಕನನ್ನು ಕೊಂದ ಬಿರಿಯಾನಿ ಶಾಪ್ ಓನರ್
ಆತ ಹೂವಿನ ವ್ಯಾಪಾರಿ ಜೊತೆಗೆ ಅಲ್ಪ ಪ್ರಮಾಣದಲ್ಲಿ ಬಡ್ಡಿ ವ್ಯವಹಾರ ಕೂಡ ಮಾಡುತ್ತಿದ್ದನು. ಹೂವಿನ ವ್ಯಾಪಾರಿ ಆರು ದಿನಗಳ ಹಿಂದೆ ಕಬ್ಬಿನ ಗದ್ದೆಯಲ್ಲಿ ಕೊಲೆಯಾದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಕೊಲೆ ಕೇಸ್ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ಕಡೆಗೂ ಆರೋಪಿಯನ್ನು ಬಂಧಿಸಿದ್ದಾರೆ. ಅಷ್ಟಕ್ಕೂ ಯಾವ ಕಾರಣಕ್ಕೆ ವ್ಯಾಪಾರಿಯ ಕೊಲೆಯಾಗಿದೆ? ಇಲ್ಲಿದೆ ವಿವರ

ಬೆಳಗಾವಿ, ಜುಲೈ 26: ಕಳೆದ ರವಿವಾರ (ಜು.20) ಬೆಳಗಾವಿ (Belagavi) ಜಿಲ್ಲೆಯ ಕಾಗವಾಡ ತಾಲೂಕಿನ ಶೇಡಬಾಳ ಗ್ರಾಮದ ಹೊರವಲಯದ ಕಬ್ಬಿನ ಗದ್ದೆಯಲ್ಲಿ ಹೂವಿನ ವ್ಯಾಪಾರಿ ಶಶಿಕಾಂತ ಎಂಬುವರ ಶವ ಪತ್ತೆಯಾಗಿತ್ತು. ಶಶಿಕಾಂತ ಕಾಗವಾಡ (Kagawad) ತಾಲೂಕಿನ ಶೇಡಬಾಳ ಗ್ರಾಮದ ನಿವಾಸಿಯಾಗಿದ್ದರು. ಶಶಿಕಾಂತ ಹೂವಿನ ವ್ಯಾಪಾರದ ಜೊತೆಗೆ ಗ್ರಾಮದಲ್ಲಿ ಬಡ್ಡಿ ವ್ಯವಹಾರವನ್ನು ಕೂಡ ಮಾಡುತ್ತಿದ್ದರು. ಅವಶ್ಯಕತೆ ಇದ್ದವರಿಗೆ ಮತ್ತು ತಮಗೆ ಬೇಕಾದವರಿಗೆ ಮಾತ್ರ ಬಡ್ಡಿ ರೂಪದಲ್ಲಿ ಶಶಿಕಾಂತ ಹಣ ನೀಡುತ್ತಿದ್ದರು. ತಾನಾಯ್ತು ತನ್ನ ಕೆಲಸ ಆಯ್ತು ಅಂತ ಇದ್ದ ಶಶಿಕಾಂತ ಕಳೆದ ರವಿವಾರ ಕಬ್ಬಿನ ಗದ್ದೆಯಲ್ಲಿ ಶವವಾಗಿ ಪತ್ತೆಯಾಗಿದ್ದರು.
ಸ್ಥಳೀಯರು ಶವ ಬಿದ್ದಿದ್ದನ್ನು ನೋಡಿ ಕೂಡಲೇ ಕಾಗವಾಡ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದರು, ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದಾಗ ಯಾರೋ ದುಷ್ಕರ್ಮಿಗಳು ತಲೆ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಹತ್ಯೆ ಮಾಡಿರುವುದು ಪೊಲೀಸರಿಗೆ ಮೇಲ್ನೋಟಕ್ಕೆ ಕಂಡುಬಂದಿದೆ.
ಕೊಲೆ ಕೇಸ್ ದಾಖಲಿಸಿಕೊಂಡ ಪೊಲೀಸರು ತನಿಖೆಯನ್ನ ಶುರು ಮಾಡಿದ್ದಾರೆ. ಯಾವುದೇ ಸುಳಿವು ಇಲ್ಲದೆ ಆರೋಪಿ ಕೊಲೆ ಮಾಡಿ ಹೋಗಿದ್ದು, ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿತ್ತು. ಆರಂಭದಲ್ಲಿ ಮಾಹಿತಿ ಪಡೆದ ಪೊಲೀಸರಿಗೆ ಗ್ರಾಮದಲ್ಲೇ ಕೆಲವರು ಶಶಿಕಾಂತ ಜೊತೆಗೆ ಮನೆ ವಿಚಾರದಲ್ಲಿ ಕಿರಿಕ್ ಮಾಡುತ್ತಿದ್ದರು, ಅವರೇನಾದರೂ ಮಾಡಿರಬಹುದು ಅಂತ ಊಹಿಸಿದ್ದರು.
ಈ ಹಿನ್ನೆಲೆಯಲ್ಲಿ ಮನೆ ವಿಚಾರವಾಗಿ ಶಶಿಕಾಂತ ಜೊತೆಗೆ ಗಲಾಟೆ ಮಾಡಿದವರನ್ನು ಕರೆತಂದು ಪೊಲೀಸರು ವಿಚಾರಣೆ ನಡೆಸಿದರು. ಆಗ, ಅವರೆಲ್ಲ ಶಶಿಕಾಂತ ಮನೆಯ ಮುಂಭಾಗ ರಸ್ತೆ ಮೇಲೆ ಬಂದಿದ್ದು, ಹೀಗಾಗಿ ತೆರವುಗೊಳಿಸುವಂತೆ ಮಾತ್ರ ಹೇಳಿದ್ವಿ ಆದರೆ, ಕೊಲೆ ಮಾಡಿಲ್ಲ ಅಂತ ಹೇಳಿದ್ದಾರೆ. ಇವರ ಹೇಳಿಕೆ ದಾಖಲಿಸಿಕೊಂಡು ಪೊಲೀಸರು ಪರಿಶೀಲನೆ ನಡೆಸಿದಾಗ ಯಾರು ಕೂಡ ಈ ವಿಚಾರಕ್ಕೆ ಕೊಲೆ ಮಾಡಿಲ್ಲ ಅನ್ನೋದು ಗೊತ್ತಾಗುತ್ತದೆ.
ಆರೋಪಿಗಳ ಸುಳಿವೇ ಇಲ್ಲದಾಗ ಮತ್ತೊಂದು ಆಯಾಮದಲ್ಲಿ ಕಾಗವಾಡ ಪೊಲೀಸರು ತನಿಖೆಯನ್ನ ಶುರು ಮಾಡಿದ್ದಾರೆ. ಈ ವೇಳೆ ಶಶಿಕಾಂತ ಯಾರಿಗೆಲ್ಲ ಬಡ್ಡಿ ರೂಪದಲ್ಲಿ ಹಣ ಕೊಟ್ಟಿದ್ದ ಎಂಬ ಮಾಹಿತಿ ಪಡೆಯುತ್ತಾರೆ. ಇದರಲ್ಲಿ ಬಿರಿಯಾನಿ ಅಂಗಡಿ ನಡೆಸುತ್ತಿದ್ದ ಫೈಮುದ್ದೀನ್ ಜಮಾದಾರ್ಗೆ 20 ಸಾವಿರ ರೂಪಾಯಿ ಬಡ್ಡಿ ರೂಪದಲ್ಲಿ ಹಣ ಕೊಟ್ಟಿರುವುದು ಗೊತ್ತಾಗುತ್ತೆ. ಆತನನ್ನ ಕರೆದು ವಿಚಾರಣೆ ನಡೆಸಿದಾಗ ಜುಲೈ 19ರಂದು ಶಶಿಕಾಂತ ಅಂಗಡಿಗೆ ಹೋಗಿ ಆತನ ಹಣ ಕೊಟ್ಟು ಬಂದೆ, ಆಮೇಲೆ ಏನಾಯ್ತು ಗೊತ್ತಿಲ್ಲ ಅಂತ ಹೇಳಿದ್ದನು.
ಇದನ್ನೂ ಓದಿ: ಬೆಳಗಾವಿ: ಮದುವೆ ಪಾರ್ಟಿಯಲ್ಲಿ ಚಿಕನ್ ಪೀಸ್ಗಾಗಿ ಜಗಳ, ಸ್ನೇಹಿತನ ಕೊಲೆ
ಆದರೆ, ಪೊಲೀಸರು ಫೈಮುದ್ದೀನ್ ಜಮಾದಾರ್ ಪೋನ್ ಲೋಕೆಷನ್ ತೆಗೆದು ನೋಡಿದಾಗ ಮತ್ತು ಕೊನೆಯದಾಗಿ ಫೈಮುದ್ದೀನ್ ಜಮಾದಾರ್ ಜೊತೆಗೆ ಶಶಿಕಾಂತ ಇರುವುದನ್ನು ನೋಡಿದ್ದ ಓರ್ವನ ಹೇಳಿಕೆ ಆಧಾರದ ಮೇಲೆ ಈತನೇ ಏನೋ ಮಾಡಿದ್ದಾನೆ ಅಂದುಕೊಂಡು ತಮ್ಮದೇ ಭಾಷೆಯಲ್ಲಿ ವಿಚಾರಣೆ ನಡೆಸಿದಾಗ ತಾನೇ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ. ಅಷ್ಟಕ್ಕೂ ಯಾವ ಕಾರಣಕ್ಕೆ ಇಲ್ಲಿ ಕೊಲೆ ಆಗಿದೆ ಅಂದರೇ, ಅದು ಕೇವಲ 20ಸಾವಿರ ಹಣಕ್ಕಾಗಿ ಎಂಬುವುದು ಬಾಯಿ ಬಿಟ್ಟಿದ್ದಾನೆ.
20ಸಾವಿರ ಹಣಕ್ಕಾಗಿ ಕೊಲೆ
ಆರು ತಿಂಗಳ ಹಿಂದೆ ಶಶಿಕಾಂತ ಬಳಿ ಬಂದಿದ್ದ ಫೈಮುದ್ದೀನ್ ಅಂಡಗಿ ಲಾಸ್ನಲ್ಲಿ ನಡೆಯುತ್ತಿದೆ ಅಂತ ಹೇಳಿ 20ಸಾವಿರ ಹಣ ಬಡ್ಡಿಯ ರೂಪದಲ್ಲಿ ಪಡೆಯುತ್ತಾನೆ. ಇದಕ್ಕೆ ಹೆಚ್ಚಿನ ಬಡ್ಡಿಯನ್ನು ಶಶಿಕಾಂತ ಹಾಕುತ್ತಾನೆ. ಇದನ್ನು ಒಪ್ಪಿಕೊಂಡು ಹಣ ಇಸಿದುಕೊಂಡು ಬಂದಿದ್ದ ಫೈಮುದ್ದಿನ್ ಸರಿಯಾಗಿ ಬಡ್ಡಿಯನ್ನ ಕೊಡುತ್ತಿರಲಿಲ್ಲ. ಬಡ್ಡಿ ಕೊಡುವುಂತೆ ಶಶಿಕಾಂತ ಎರಡ್ಮೂರು ಬಾರಿ ಕೇಳಿದ್ದನು. ಇದರಿಂದ ಆಕ್ರೋಶಗೊಂಡ ಫೈಮುದ್ದಿನ್, ಜುಲೈ 19ರಂದು ಹಣ ಕೊಡುತ್ತೇನೆ ಅಂತ ಹೇಳಿ ಶಶಿಕಾಂತನ ಹೂವಿನ ಅಂಗಡಿಗೆ ಹೋಗಿದ್ದಾನೆ.
ಆತನನ್ನ ಬೈಕ್ ಮೇಲೆ ಕೂಡಿಸಿಕೊಂಡು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದಾನೆ. ಬೈಕ್ ಹಿಂದೆ ಕುಳಿತಿದ್ದವನನ್ನು ಕೆಳಗೆ ಬೀಳಿಸಿ ಬಳಿಕ ಆತನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಂದು, ಸಾಕ್ಷಿ ಸಿಗಬಾರದು ಅಂತ ಆತನ ಮೊಬೈಲ್ ಹಾಗೂ ಕಲ್ಲನ್ನು ಅಲ್ಲೇ ಪಕ್ಕದಲ್ಲೇ ಇದ್ದ ಕೃಷಿ ಹೊಂಡದಲ್ಲಿ ಬಿಸಾಡಿ ತನೆಗೇನೂ ಗೊತ್ತೆ ಇಲ್ಲ ಎಂಬಂತೆ ಮತ್ತೆ ಬಿರಿಯಾನಿ ಅಂಗಡಿ ಶುರು ಮಾಡಿದ್ದಾನೆ. ಆದರೆ, ಪೊಲೀಸರು ಚಾಣಾಕ್ಷತನದಿಂದ ಆರೋಪಿಯನ್ನು ಬಂಧಿಸಿ, ಹಿಂಡಲಗಾ ಜೈಲಿಗೆ ಕಳುಹಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:00 pm, Sat, 26 July 25







