ಗದಗ-ವಾಡಿ, ಬಾಗಲಕೋಟೆ-ಕುಡಚಿ ರೈಲು ಮಾರ್ಗ ಯಾವಾಗ ಮುಗಿಯುತ್ತೆ? ಮಾಹಿತಿ ನೀಡಿದ ಎಂಬಿ ಪಾಟೀಲ್

| Updated By: ವಿವೇಕ ಬಿರಾದಾರ

Updated on: Sep 08, 2023 | 7:35 AM

ಗದಗ-ವಾಡಿ ಮತ್ತು ಬಾಗಲಕೋಟೆ-ಕುಡುಚಿ ಎರಡು ರೈಲು ಮಾರ್ಗಗಳು ಉತ್ತರ ಕರ್ನಾಟಕದ ಬಹು ಮುಖ್ಯ ರೈಲು ಯೋಜನೆಗಳಾಗಿವೆ. ಈ ಮಾರ್ಗಗಳ ರೈಲು ಸಂಚಾರ ಬಹುಮುಖ್ಯವಾಗಿದೆ. ಈಗಾಗಲೆ ಈ ಮಾರ್ಗಗಳ ರೈಲು ಕಾಮಗಾರಿ ಆರಂಭವಾಗಿದ್ದು, ಯಾವಾಗ ಮುಗಿಯುತ್ತೆ ಎಂಬುವುದರ ಕುರಿತು ಸಚಿವ ಎಂ.ಬಿ ಪಾಟೀಲ್​ ಮಾಹಿತಿ ನೀಡಿದ್ದಾರೆ.

ಗದಗ-ವಾಡಿ, ಬಾಗಲಕೋಟೆ-ಕುಡಚಿ ರೈಲು ಮಾರ್ಗ ಯಾವಾಗ ಮುಗಿಯುತ್ತೆ? ಮಾಹಿತಿ ನೀಡಿದ ಎಂಬಿ ಪಾಟೀಲ್
ಕುಡಚಿ
Follow us on

ಬೆಂಗಳೂರು: ಉತ್ತರ ಕರ್ನಾಟಕದ (North Karnataka) ಎರಡು ಮಹತ್ವದ ರೈಲ್ವೆ ಯೋಜನೆಗಳಾದ (Railway Project) ಬಾಗಲಕೋಟೆ-ಕುಡಚಿ (Bagalkot-Kudachi) ರೈಲು ಮಾರ್ಗವನ್ನು 2025 ರ ಅಂತ್ಯದೊಳಗೆ ಮತ್ತು ಗದಗ-ವಾಡಿ (Gadag-Wadi) ಮಾರ್ಗವನ್ನು ಮಾರ್ಚ್ 2026 ರೊಳಗೆ ಪೂರ್ಣಗೊಳಿಸಲು ಗಡುವು ಹಾಕಿಕೊಳ್ಳಲಾಗಿದೆ ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ ಪಾಟೀಲ್ (MB Patil)​ ಹೇಳಿದರು. ಬುಧವಾರ ಗದಗ-ವಾಡಿ ಮತ್ತು ಬಾಗಲಕೋಟೆ-ಕುಡುಚಿ ನಡುವಿನ ಮಾರ್ಗಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದ ಅವರು ಎರಡೂ ರೈಲು ಮಾರ್ಗಗಳು ಉತ್ತರ ಕರ್ನಾಟಕದ ವಿವಿಧ ಪಟ್ಟಣಗಳಿಗೆ ಸಂಪರ್ಕವನ್ನು ಒದಗಿಸುತ್ತವೆ. ಈ ಯೋಜನೆಯು ರಾಜ್ಯ ಸರ್ಕಾರ ಮತ್ತು ರೈಲ್ವೆ ಇಲಾಖೆಗಳ ತಲಾ ಶೇ 50 ರಷ್ಟು ವೆಚ್ಚ ಹಂಚಿಕೆಯಲ್ಲಿ ನಡೆಯುತ್ತಿದೆ ಎಂದರು.

42 ಕಿ.ಮೀ ಉದ್ದದ ಬಾಗಲಕೋಟೆ-ಕುಡಚಿ ರೈಲು ಮಾರ್ಗದ ಅಂದಾಜು ವೆಚ್ಚ 1,530 ಕೋಟಿ ರೂ. ಇದೆ. ಕಾಮಗಾರಿಗೆ ಬೇಕಾಗಿದ್ದ 2,496 ಎಕರೆ ಭೂಮಿಯ ಪೈಕಿ 2,476 ಎಕರೆ ಹಸ್ತಾಂತರಿಸಲಾಗಿದೆ. ಉಳಿದ 20 ಎಕರೆ ಭೂಮಿಯನ್ನು ಸದ್ಯದಲ್ಲೇ ಬಿಟ್ಟುಕೊಡಲಾಗುವುದು. 2025ರ ಡಿಸೆಂಬರ್​ ಒಳಗೆ ಕಾಮಗಾರಿ ಪೂರ್ಣಗೊಳ್ಳುತ್ತದೆ ಎಂದು ಭರವಸೆ ನೀಡಿದರು.

ಇದನ್ನೂ ಓದಿ: ಹುಬ್ಬಳ್ಳಿ ಅಂಕೋಲಾ ರೈಲ್ವೆ ಯೋಜನೆಗೆ ಭೂಕುಸಿತದ ಆತಂಕ; ಈ ಬಗ್ಗೆ ತಜ್ಞರು ಹೇಳುವುದೇನು?

ಬಾಗಲಕೋಟ-ಖಚ್ಚಿದೋಣಿ-ಲೋಕಾಪುರ 60 ಕಿ.ಮೀ ರೈಲು ಕಾಮಗಾರಿ 2024ರ ಮಾರ್ಚ್‌ ವೇಳೆಗೆ ಪೂರ್ಣಗೊಳ್ಳಲಿದ್ದು, ನಂತರ ರೈಲು ಸಂಚಾರ ಆರಂಭಿಸಲಾಗುವುದು. ಮತ್ತೊಂದು ಕುಡಚಿ ಕಡೆಯಿಂದ ಕಾಮಗಾರಿ ಆರಂಭಿಸಲು ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಕೆಲಸ ಆರಂಭವಾಗಬೇಕಿದೆ. ಇನ್ನು ಕುಡಚಿ-ಜಗದಾಳ್​ವರೆಗಿನ ಕಾಮಗಾರಿ ಶೀಘ್ರದಲ್ಲೇ ಆರಂಭವಾಗಲಿದೆ ಎಂದು ಹೇಳಿದರು.

ಗದಗ-ವಾಡಿ ಯೋಜನೆಗೆ 1922 ಕೋಟಿ ರೂ. ವೆಚ್ಚ ಅಂದಾಜಿಸಲಾಗಿದೆ. ಯೋಜನೆಗೆ ಒಟ್ಟು 4,002 ಎಕರೆ ಅಗತ್ಯವಿದ್ದು, ಇದುವರೆಗೆ 3,945 ಎಕರೆ ಸ್ವಾಧೀನಪಡಿಸಿಕೊಳ್ಳಲಾಗಿದೆ. ಮಿಕ್ಕ 57 ಎಕರೆ ಭೂಮಿಯನ್ನು ಇನ್ನೊಂದು ತಿಂಗಳಲ್ಲಿ ಇಲಾಖೆಗೆ ನೀಡಲಾಗುತ್ತದೆ. ಗದಗ-ತಳಕಲ್​ವರೆಗೆ ಈಗಾಗಲೆ ರೈಲು ಹಳಿ ಇದೆ. ತಳಕಲ್ ಮತ್ತು ಕುಷ್ಟಗಿ ನಡುವಿನ ಮಾರ್ಗವನ್ನು ಮಾರ್ಚ್ 2024 ರೊಳಗೆ ಪೂರ್ಣಗೊಳಿಸಲಾಗುವುದು. ಅದಾದ ಬಳಿಕ ಪ್ರಾಯೋಗಿಕ ಸಂಚಾರ ಪ್ರಾರಂಭವಾಗುತ್ತದೆ. ವಾಡಿ-ಶೊರಾಪುರ ನಡುವಿನ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಹೇಳಿದರು.

ಗದಗ-ವಾಡಿ ರೈಲು ಮಾರ್ಗ ಕಾಮಗಾರಿಯಲ್ಲಿ ಗುಣಮಟ್ಟಕ್ಕೆ ಒತ್ತು ಕೊಡುವಂತೆ ಯಲಬುರ್ಗಾ ಶಾಸಕ ಬಸವರಾಜ ರಾಯರೆಡ್ಡಿ ಅವರು ಸಚಿವರನ್ನು ಕೋರಿದರು. ಕಾಮಗಾರಿಗಳ ಗುಣಮಟ್ಟವನ್ನು ಖಚಿತಪಡಿಸಿಕೊಳ್ಳಲು ನಿಯಮಿತವಾಗಿ ಕಾಮಗಾರಿ ಪರಿಶೀಲನೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಈ ಸಂದರ್ಭದಲ್ಲಿ ಕೊಪ್ಪಳ ಸಂಸದ ಕರಡಿ ಸಂಗಣ್ಣ, ಲಿಂಗಸೂಗೂರು ಶಾಸಕ ಮಾನಪ್ಪ ವಜ್ಜಲ್ ಉಪಸ್ಥಿತರಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ