ಬಾಗಲಕೋಟೆ, ನವೆಂಬರ್ 30: 2ಎ ಮೀಸಲಾತಿಗಾಗಿ ಆಗ್ರಹಿಸಿ ಹೋರಾಟ ಮಾಡುತ್ತಿರುವುದರಿಂದ ಪಂಚಮಸಾಲಿ ಸಮಾಜದ ಮುಖಂಡರಿಗೆ ಕರೆ ಮಾಡಿ ಬೆದರಿಕೆ ಹಾಕುವ ಕೆಲಸ ನಡೆಯುತ್ತಿದೆ. ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ನಮಗೆ ಬೆದರಿಕೆ ಹಾಕುವ ಕೆಲಸ ನಡೆಯುತ್ತಿದೆ ಎಂದು ಬಸವ ಜಯಮೃತ್ಯುಂಜಯ ಸ್ವಾಮೀಜಿ ಗಂಭೀರ ಆರೋಪ ಮಾಡಿದ್ದಾರೆ. ಬಾಗಲಕೋಟೆ ಜಿಲ್ಲೆ ಬನಹಟ್ಟಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಕಳೆದ 4 ದಿನಗಳಿಂದ ಪಂಚಮಸಾಲಿ ತಾಲೂಕು ಘಟಕದ ಅಧ್ಯಕ್ಷರು, ಜಿಲ್ಲಾ ಘಟಕದ ಅಧ್ಯಕ್ಷರಿಗೆ ಕರೆ ಮಾಡಿ ಕೆಲವರು ಬೆದರಿಕೆ ಹಾಕುತ್ತಿದ್ದಾರೆ. ಬೆದರಿಕೆ ಕರೆಗಳಿಂದ ಏನಾದರೂ ಆದರೆ ರಕ್ತ ಕ್ರಾಂತಿ ಆಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಈ ಹಿಂದೆ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಇದ್ದಾಗಲೂ ಹೋರಾಟ ಮಾಡಿದ್ದೆವು. ಬೊಮ್ಮಾಯಿ ಮನೆ ಮುಂದೆಯೇ ಹೋರಾಟ ಮಾಡಿದ್ದೆವು. ಆದರೂ ನಮ್ಮ ಮೇಲೆ ಒಂದು ಕೇಸ್ ಸಹ ದಾಖಲಿಸಿರಲಿಲ್ಲ. ಆದರೆ, ಈಗ ಸಿದ್ದರಾಮಯ್ಯ ಸರ್ಕಾರದಲ್ಲಿ ಬೆದರಿಕೆ ಹಾಕಲಾಗುತ್ತಿದೆ ಎಂದು ಸ್ವಾಮೀಜಿ ಹೇಳಿದ್ದಾರೆ.
ಬೆದರಿಕೆ ಕರೆಗಳ ಹಿಂದೆ ಶಾಸಕರು, ಸಂಸದರು ಇದ್ದರೂ ಸುಮ್ಮನೆ ಬಿಡುವುದಿಲ್ಲ ಎಂದು ಜಯಮೃತ್ಯುಂಜಯಶ್ರೀ ಹೇಳಿದ್ದಾರೆ. ಸ್ವಾಮೀಜಿ ಅವರ ಈ ಹೇಳಿಕೆಯು ಪಂಚಮಸಾಲಿ ಸಮಾಜದ ಮುಖಂಡರಿಗೆ ಬೆದರಿಕೆ ಹಾಕುತ್ತಿರುವುದರ ಹಿಂದೆ ಕಾಂಗ್ರೆಸ್ ಶಾಸಕ, ಸಂಸದರು ಇದ್ದಾರೆಯೇ ಎಂಬ ಅನುಮಾನ ಹುಟ್ಟುಹಾಕಿದೆ.
ಸಮಾಜದ ಜನರ ಭಾವನೆ ಜೊತೆ ಆಟವಾಡುವುದನ್ನು ಬಿಡಬೇಕು. ಬಿಜೆಪಿ ಸರ್ಕಾರ ಇದ್ದಾಗ ಶಾಸಕರು ಹಾಗೂ ಸಿಎಂ ನಮ್ಮ ಬಳಿ ಬರುತ್ತಿದ್ದರು. ಆದರೆ ಈಗ ನಾವು ಶಾಸಕರು ಮತ್ತು ಸಿಎಂ ಬಳಿ ಹೋಗುವಂತಾಗಿದೆ. ನಾವು ಯಾವುದೇ ಶಾಸಕರ ಬಳಿ ಹೋಗುವ ಅಗತ್ಯವಿಲ್ಲ. ಪಕ್ಷದ ಸೂಚನೆ, ನಿಗಮ ಮಂಡಳಿ ಒತ್ತಡಕ್ಕೆ ಒಳಗಾಗಿ ಹೀಗೆ ಮಾತನಾಡುತ್ತಿದ್ದಾರೆ. ಅವರ ಬೆಳವಣಿಗೆಗೆ ತೊಂದರೆ ಆಗಬಹುದು ಅಂತ ನಾವು ಕರೆಯಲ್ಲ ಎಂದು ಸ್ವಾಮೀಜಿ ಹೇಳಿದರು.
ಇದನ್ನೂ ಓದಿ: ಬಸವಣ್ಣನ ಹಾಗೆ ನದಿಗೆ ಹಾರಿ ಸಾಯಬೇಕಾಗುತ್ತದೆಂಬ ಯತ್ನಾಳ್ ಹೇಳಿಕೆಗೆ ಪ್ರಿಯಾಂಕ್ ಖರ್ಗೆ ತೀವ್ರ ಆಕ್ರೋಶ
ಹಿಂದಿನ ಸರ್ಕಾರ ಸರಿಯಾಗಿ ಮೀಸಲಾತಿ ನೀಡಲಿಲ್ಲ. ಈಗಿನ ಸರ್ಕಾರ ಸಹ ಮಾಡಲಿಲ್ಲ. ಸಿಎಂ ಸೌಜನ್ಯಕ್ಕೂ ನಮ್ಮ ಬಳಿ ಮಾತನಾಡಲಿಲ್ಲ. ಶಾಸಕರು, ಸಿಎಂ ಮಾತನಾಡಲಿಲ್ಲ. ವಕೀಲರ ಮೂಲಕ ಹೋರಾಟ ಮಾಡಿದ್ದೆವು. ಆಗ ಸಿಎಂ ಎರಡು ಗಂಟೆ ನಮ್ಮ ಜೊತೆ ಮಾತನಾಡಿದ್ದರು. ಆಗ ಸಿಎಂ ನೀತಿ ಸಂಹಿತೆ ನೆಪ ಮಾಡಿ ಹಾರಿಕೆ ಉತ್ತರ ಕೊಟ್ಟಿದ್ದರು. ಸಿಎಂ ಹಾಗೂ ಡಿಸಿಎಂ ಸಮಯಾವಕಾಶ ಕೊಡಲಿಲ್ಲ. ಹಿಂದಿನ ಸರ್ಕಾರದ ವರದಿಗೆ ಹಿಂಬರಹ ಸಹ ಕೊಡಲಿಲ್ಲ. ಭರವಸೆಯನ್ನೂ ನೀಡಲಿಲ್ಲ. ಕೊನೆಗೆ ಈಗ ವಿಧಾನಸೌಧ ಮುತ್ತಿಗೆಗೆ ಮುಂದಾಗಿದ್ದೇವೆ. ಈ ಹಿಂದಿನ ಸರ್ಕಾರಗಳಿದ್ದಾಗಲೂ ಹೋರಾಟ ಮಾಡಿದ್ದೇವೆ. ನಾಡಿನಾದ್ಯಂತ ನಮ್ಮ ಸಮಾಜ ಬಂಧುಗಳು ಯಾರ ಮಾತುಗಳಿಗೂ ಕಿವಿಗೊಡಬೇಡಿ. ಮಕ್ಕಳ ಭವಿಷ್ಯ ನೋಡಿಕೊಂಡು ಹೋರಾಟದಲ್ಲಿ ಭಾಗವಹಿಸಿ, ಬೆಂಬಲಿಸಿ ಎಂದು ಸ್ವಾಮೀಜಿ ಕರೆ ನೀಡಿದರು.
ಪಂಚಮಸಾಲಿಶ್ರೀಗಳು ಸಿಎಂ ಆಗಲಿ ಎಂಬ ಪೋಸ್ಟರ್ ವೈರಲ್ ಆಗಿರುವ ವಿಚಾರದಲ್ಲಿ ಪ್ರತಿಕ್ರಿಯಿಸಿದ ಅವರು, ನಾನು ರಾಜಕೀಯಕ್ಕೆ ಬರುವುದಿಲ್ಲ ಎಂದರು. ನಾನು ಕಿಂಗ್ ಆಗುವುದಿಲ್ಲ, ಕಿಂಗ್ಮೇಕರ್ ಆಗುತ್ತೇನೆ. ರಾಜಕೀಯ ಮಾಡಲು ಯತ್ನಾಳ್ ಸೇರಿದಂತೆ ನಮ್ಮ ಸಮಾಜದ ನಾಯಕರಿದ್ದಾರೆ. ನಮ್ಮ ಮೇಲೆ ಅಭಿಮಾನದಿಂದ ಅಭಿಮಾನಿಗಳು, ಭಕ್ತರು ಪೋಸ್ಟ್ ಹಾಕಿದ್ದಾರೆ ಎಂದು ಅವರು ಹೇಳಿದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ