ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಘೋಷಿಸಲು ಜೂನ್ 27ರ ಗಡುವು: ಬಸವಜಯ ಮೃತ್ಯುಂಜಯ ಸ್ವಾಮೀಜಿ
ಮುಖ್ಯಮಂತ್ರಿ ಈ ಬಗ್ಗೆ ಶೀಘ್ರ ಆಡಳಿತಾತ್ಮಕ ಸಭೆ ನಡೆಸಿ, ಮೀಸಲಾತಿ ಕುರಿತು ತೀರ್ಮಾನ ಪ್ರಕಟಿಸಬೇಕು ಎಂದು ಆಗ್ರಹಿಸಿದರು.
ಬಾಗಲಕೋಟೆ: ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವ ಸಂಬಂಧ ಆಡಳಿತಾತ್ಮಕ ಸಭೆ ನಡೆಸಲು ಜೂನ್ 27ರ ಗಡುವನ್ನು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ನೀಡಿದ್ದಾರೆ. ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಈ ಬಗ್ಗೆ ಶೀಘ್ರ ಆಡಳಿತಾತ್ಮಕ ಸಭೆ ನಡೆಸಿ, ಮೀಸಲಾತಿ ಕುರಿತು ತೀರ್ಮಾನ ಪ್ರಕಟಿಸಬೇಕು. ಈ ಹಿಂದೆ ಕೊಟ್ಟಿದ್ದ ಭರವಸೆಗಳನ್ನು ಮುಖ್ಯಮಂತ್ರಿ ಈಡೇರಿಸಿಲ್ಲ. ನಾವು ಮತ್ಯಾರನ್ನು ಕೇಳಲು ಸಾಧ್ಯ. ಅದಕ್ಕಾಗಿಯೇ ಅವರ ಮನೆ ಎದುರು ಧರಣಿ ನಡೆಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ ಎಂದು ಹೇಳಿದರು.
ಬಾಗಲಕೋಟೆಯಲ್ಲಿ ಮಾತನಾಡಿದ ಅವರು, ಜೂನ್ 27ರಂದು ಮುಖ್ಯಮಂತ್ರಿ ಮನೆಯ ಎದುರು ಧರಣಿ ನಡೆಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಅದಕ್ಕೆ ಅವಕಾಶ ನೀಡಬಾರದು. ಅಷ್ಟರೊಳಗಾಗಿ ಸಿಎಂ ಅವರು ಆಡಳಿತಾತ್ಮಕ ಸಭೆ ನಡೆಸಿ ತೀರ್ಮಾನ ಪ್ರಕಟಿಸಬೇಕು ಎಂದು ಒತ್ತಾಯಿಸಿದರು. ಮೀಸಲಾತಿ ಬೇಡಿಕೆ ನಿರ್ಲಕ್ಷಿಸಿದರೆ ಮುಂದಿನ ದಿನಗಳಲ್ಲಿ ಸಮಾಜದ 25 ಲಕ್ಷ ಜನರು ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ. ಬೇಡಿಕೆ ಈಡೇರುವವರೆಗೆ ಹೋರಾಟ ನಿಲ್ಲುವುದಿಲ್ಲ ಎಂದು ಎಚ್ಚರಿಸಿದರು.
ವಿಜಯಾನಂದ ಕಾಶಪ್ಪನವರ ಮಾತನಾಡಿ, ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗಾಗಿ ಕೊಟ್ಟಿದ್ದ ಗಡುವುಗಳು ಮುಗಿದಿವೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಯಾವುದೇ ನಿರ್ಧಾರವನ್ನ ಹೇಳಿಲ್ಲ. ಬರುವ ಜೂನ್ 27ರ ಒಳಗೆ ಯಾವುದಾದರೂ ಒಂದು ತೀರ್ಮಾನವನ್ನು ಮುಖ್ಯಮಂತ್ರಿ ಹೇಳಬೇಕು. ಇಲ್ಲವಾದಲ್ಲಿ ಜೂನ್ 27ರಂದು ಸಮಾಜದ ಬಾಂಧವರು ಬುತ್ತಿ ಕಟ್ಟಿಕೊಂಡು ಹಾವೇರಿ ಜಿಲ್ಲೆಯಲ್ಲಿ ಸಿಎಂ ಮನೆ ಮುಂದೆ ಧರಣಿ ನಡೆಸುತ್ತೇವೆ ಎಂದರು.
ಪಠ್ಯ ಪುಸ್ತಕಗಳಲ್ಲಿ ಬಸವಣ್ಣನವರ ಇತಿಹಾಸ ತಿರುಚಿದ ಕುರಿತು ಪ್ರತಿಕ್ರಿಯಿಸಿದ ಅವರು, ಯಾರು ಸಿಎಂ, ಪಿಎಂ ಆಗಬೇಕು ಎನ್ನುವ ತೀರ್ಮಾನ ಆಗುವುದು ನಾಗಪುರದಲ್ಲಿ. ಆರ್ಎಸ್ಎಸ್ ಹೇಳಿದ ಹಾಗೆ ಕೇಳುವ ಕೈ ಗೊಂಬೆಗಳು ಇವರು. ನಾಗಪುರದ ರಿಮೋಟ್ ಕಂಟ್ರೋಲ್ ಆನ್ ಆದ್ರೆ ಇಲ್ಲಿ ಇವರು ಆನ್ ಆಗ್ತಾರೆ. ಅಲ್ಲಿ ಆಫ್ ಆದ್ರೆ ಇವರು ಆಫ್. ಆ ರೀತಿ ಈಗ ನಡೆಯುತ್ತಿದೆ, ಏನೂ ಮಾಡಲು ಆಗುವುದಿಲ್ಲ. ನಮ್ಮ ದೇಶದ ದುರಾದೃಷ್ಟ ಇದೆಲ್ಲ ಎಂದು ವಿಷಾದಿಸಿದರು.
ಬಿಜೆಪಿಗರನ್ನು ಸಿದ್ದರಾಮಯ್ಯ ಸೀಳುನಾಯಿಗೆ ಹೋಲಿಸಿದ ವಿಚಾರದ ಬಗ್ಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರನ್ನು ಸಮರ್ಥಿಸಿಕೊಂಡರು. ಬಿಜೆಪಿಯವರಿಗೆ ಇತಿಹಾಸವೇ ಗೊತ್ತಿಲ್ಲ. ಇತಿಹಾಸವನ್ನು ಓದದವರು, ತಿಳಿಯದವರು ಇತಿಹಾಸ ರಚಿಸೋಕೆ ಸಾಧ್ಯವೇ? ಅಂಬೇಡ್ಕರ್, ಬಸವಣ್ಣನವರ ಪಠ್ಯ ತಿದ್ದುವ ಮೂಲಕ ಅವಮಾನ ತರುವ ಕೆಲಸ ಆಗುತ್ತಿದೆ. ಶಾಂತಿಯ ತೋಟವನ್ನು ಛಿದ್ರಛಿದ್ರ ಮಾಡಿದ್ದಾರೆ. ಧರ್ಮಧರ್ಮಗಳ ಮಧ್ಯೆ ಬೆಂಕಿ ಹಚ್ಚುತ್ತಿದ್ದಾರೆ. ಬಸವರಾಜ ಬೊಮ್ಮಾಯಿ ಬಸವಣ್ಣನವರ ಹೆಸರು ಇಟ್ಟುಕೊಂಡಿದ್ದಾರೆ. ಬಸವಣ್ಣನಿಗೆ ಚ್ಯುತಿ ತರುವ ಪಠ್ಯಪುಸ್ತಕಕ್ಕೆ ಸಿಎಂ ಅನುಮತಿ ಕೊಡ್ತಾರೆ ಅಂದ್ರೆ ಏನ್ ಹೇಳಬೇಕು ಅರ್ಥ ಆಗ್ತಿಲ್ಲ ಎಂದು ವ್ಯಂಗ್ಯವಾಡಿದರು.
ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ