ಹೆಣ್ಣು ಹೊನ್ನು ಮಣ್ಣಿನ ಹಿಂದೆ ಹೋಗಬಾರದು, ಅದು ತಾನಾಗಿಯೇ ಹುಡುಕಿಕೊಂಡು ಬರಬೇಕು ಅಂತಾರೆ. ಅದರ ಹಿಂದೆ ಹೋದರೆ ಅನಾಹುತ ಕಟ್ಟಿಟ್ಟ ಬುತ್ತಿ. ಇಲ್ಲಿ ಇನ್ನೂ ಒಂದು ಮಾತು ಸೇರಿಸಬಹುದು ಅದೆಂದರೆ ನಾಲಿಗೆ ಹಿಡಿತದಲ್ಲಿರಬೇಕು. ಮೂಳೆ ಇಲ್ಲದ ನಾಲಿಗೆ ಸರಿಯಿಲ್ಲ ಅಂತಾರೆ. ಆದರೆ ಈ ಸ್ಟೋರಿಯಲ್ಲಿ ಇವೆರಡನ್ನೂ ಅವರು ಅನುಸರಿಸಿದ್ದರು. ಈ ಎರಡು ಕಾರಣದಿಂದ ಅಲ್ಲಿ ಮಾರಾಮಾರಿ ನಡೆದು ಹೋಗಿತ್ತು. ಆಗ ನೋಡ ನೋಡುತ್ತಿದ್ದಂತೆ ಉರುಳಿದ್ದವು ಎರಡು ಹೆಣಗಳು. ಇಬ್ಬರು ಮಹಿಳೆಯರ (sisters) ಜೋಡಿ ಕೊಲೆ (double murder) ಮಾಡಿದ ಆವನೊಬ್ಬ ರಾಕ್ಷಸ ಕ್ರೂರತೆ ಮೆರೆದಿದ್ದ. ಇಳಿ ಸಂಜೆ ಹೊತ್ತಿಗೆ ನಡೆದ ಈ ಧಾರುಣ ಘಟನೆ ಇಡೀ ನಗರವನ್ನು ಬೆಚ್ಚಿ ಬೀಳಿಸಿತ್ತು. ಅಷ್ಟಕ್ಕೂ ಇಂತಹದ್ದೊಂದು ಭೀಕರ ಕೊಲೆ ನಡೆದಿದ್ದು ಎಲ್ಲಿ ಗೊತ್ತಾ? ಮನೆಯೊಳಗೆ ನೆತ್ತರಿನಿಂದ ಕೆಂಪು ಬಣ್ಣ ಬಳಿದಂತಾಗಿದೆ. ಮನೆಯ ಹೊರಗೆ ರಕ್ತ ಚೆಲ್ಲಾಡಿದೆ. ಇಬ್ಬರು ಮಹಿಳೆಯರ ಶವಗಳು ರಕ್ತಸಿಕ್ತ ಸ್ಥಿತಿಯಲ್ಲಿ ಬಿದ್ದಿವೆ. ಸ್ಥಳದಲ್ಲಿ ಪೊಲೀಸರು ಪರಿಶೀಲನೆ ಮುಂದುವರೆಸಿದ್ದಾರೆ. ಅಂದ ಹಾಗೆ ಈ ದೃಶ್ಯ ಕಂಡು ಬಂದಿದ್ದು ಬಾಗಲಕೋಟೆ ಜಿಲ್ಲೆ ಬನಹಟ್ಟಿ ನಗರದಲ್ಲಿ, ಹೌದು ಬಾಗಲಕೋಟೆ (bagalkot) ಜಿಲ್ಲೆ ಬನಹಟ್ಟಿ ನಗರ (banahatti) ಅಂತ ತಕ್ಷಣ ನೆನಪಾಗೋದು ನೇಕಾರರು. ರಾಜ್ಯದಲ್ಲೇ ಅತಿ ಹೆಚ್ಚು ಜನರ ನೇಕಾರರನ್ನು ಹೊಂದಿರುವ ತಾಲ್ಲೂಕು ರಬಕವಿ ಬನಹಟ್ಟಿ ನಗರ. ಬನಹಟ್ಟಿ ನಗರದಲ್ಲಿ ಬಡ ನೇಕಾರರು ಇಂದಿಗೂ ನೇಕಾರಿಕೆ ಮಾಡಿಕೊಂಡು ತಮ್ಮ ಜೀವನ ಸಾಗಿಸುತ್ತಾರೆ.
ನೇಕಾರರ ಬೀಡು ಎಂದೇ ಹೆಸರಾಗಿದ್ದು ಬನಹಟ್ಟಿ ನಗರ ಎಲ್ಲ ನೇಕಾರರು ದಿನವಿಡೀ ಮಗ್ಗದಲ್ಲಿ ಬಟ್ಟೆ ನೇಯ್ದು ಕೆಲಸ ಮುಕ್ತಾಯಗೊಳಿಸುವ ಕಾಲವದು. ಆದರೆ ಅದೇ ಹೊತ್ತಲ್ಲಿ ಆ ನಗರದಲ್ಲಿ ಕೇಳಿ ಬಂದ ಸುದ್ದಿ ಇಡೀ ನಗರವನ್ನೇ ಬೆಚ್ಚಿ ಬೀಳಿಸಿತ್ತು. ಎಲ್ಲರೂ ಅಲ್ಲಿ ಡಬ್ಬಲ್ ಮರ್ಡರ್ ಆಗಿದೆಯಂತೆ. ಇಬ್ಬರು ಅಕ್ಕ ತಂಗಿಯರನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದಾರಂತೆ ಎಂಬ ಸುದ್ದಿ ಗುಸುಗುಸು ಶುರುವಾಗಿತ್ತು. ಹೌದು ಆ ನಗರದಲ್ಲಿ ಮಾರ್ಚ್ 13 ರ ಸಂಜೆ 6-30 ರ ಸುಮಾರಿಗೆ ಇಬ್ಬರು ಸಹೋದರಿಯರನ್ನು ರಾಡ್ ಹಾಗೂ ಕಲ್ಲಿನಿಂದ ಹೊಡೆದು ಕೊಲೆ ಮಾಡಲಾಗಿತ್ತು. 45 ವರ್ಷದ ಬೋರವ್ವ ಮಿರ್ಜಿ ಮತ್ತು 48 ವರ್ಷದ ಯಲ್ಲವ್ವ ಪೂಜಾರ ಕೊಲೆಯಾದವರು. ರಕ್ಕಸನೊಬ್ಬನ ಕೈಯಲ್ಲಿ ಸಿಲುಕಿದ ಈ ಇಬ್ಬರೂ ಸಹೋದರಿಯರು ಭೀಕರವಾಗಿ ಕೊಲೆಯಾಗಿ ಪ್ರಾಣ ಕಳೆದುಕೊಂಡಿದ್ದಾರೆ. ಆರೋಪಿ ಮನೆಯೊಳಗಡೆ ಅವರಿಬ್ಬರನ್ನೂ ಹೊಡೆದಿದ್ದು ಅಲ್ಲದೆ, ಮನೆ ಬಾಗಿಲಿನ ಮುಂದೆ ಅವರನ್ನು ಬಿಸಾಕಿ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿ ವಿಕೃತಿ ಮೆರೆದಿದ್ದಾನೆ.
ಹೀಗೆ… ಮಾರ್ಚ್ 13 ರ ಇಳಿ ಸಂಜೆ ವೇಳೆ ಮನೆಯಲ್ಲಿ ಬೋರವ್ವ ಮತ್ತು ಯಲ್ಲವ್ವ ಪೂಜಾರ ಇಬ್ಬರು ಸಹೋದರಿಯರ ಜೋಡಿ ಕೊಲೆ ಸುದ್ದಿ ಕೇಳಿದ್ದೇ ತಡ ಸ್ಥಳಕ್ಕೆ ಬನಹಟ್ಟಿ ಪೊಲೀಸರು ಭೇಟಿ ನೀಡಿದ್ದರು. ಇಬ್ಬರ ಕೊಲೆ ಅದರಲ್ಲೂ ಒಂದೇ ಮನೆಯಲ್ಲಿ… ಮನೆ ಮುಂದೆ ಅಕ್ಕ ತಂಗಿಯರ ಜೋಡಿ ಕೊಲೆ ಬೇರೆ. ಇಷ್ಟು ಕ್ರೂರತನದಿಂದ ಕೊಲೆ ಮಾಡಿರೋದು ಯಾರು ಎಂದು ತನಿಖೆ ಆರಂಭಿಸಿದ್ದರು. ತಾವಾಯಿತು ತಮ್ಮ ಪಾಡಾಯಿತು ಎಂದು ಇದ್ದ ಊರಲ್ಲಿ ಇಂತಹ ಭೀಕರ ಕೊಲೆ ಸುದ್ದಿ ಕೇಳಿಯೇ ಜನರು ಬೆಚ್ಚಿಬಿದ್ದಿದ್ದಾರೆ.
ಇನ್ನು ಕೆಲವರು ಸ್ಥಳದಲ್ಲಿ ಜಮಾಯಿಸಿದ್ದರು. ಪೊಲೀಸರು ಏನು ಮಾಡುತ್ತಿದ್ದಾರೆ ಏನೆಲ್ಲ ನೋಡುತ್ತಿದ್ದಾರೆ ಎಂದು ಕೆಲವರು ನೋಡೋದಕ್ಕೆ ಬಂದರೆ ಇನ್ನು ಕೆಲವರು ಇಬ್ಬರು ಸಹೋದರಿಯರ ಮೃತ ದೇಹ ಕುತೂಹಲದಿಂದ ನೋಡುತ್ತಿದ್ದರು. ಇನ್ನು ಕೆಲವರು ಪಾಪಿ ಹೀಗೆ ಆಗಬಾರದಿತ್ತು ಎಂದು ಮಾತಾಡಿಕೊಳ್ಳುತ್ತಿದ್ದರು. ಆದರೆ ಇಷ್ಟರಲ್ಲೇ ಪೊಲೀಸರು ಮನೆಯಲ್ಲಿದ್ದ ಇನ್ನೋರ್ವ ಮಹಿಳೆ ಹಾಗೂ ಆಕೆಯ ಮಕ್ಕಳನ್ನು ಕರೆದು ವಿಚಾರಿಸಿದಾಗ ಗೊತ್ತಾಗಿದ್ದು ಕೊಲೆಗಡುಕ ಯಾರು ಅಂತ. ಇಲ್ಲಿ ಬೋರವ್ಬ ಹಾಗೂ ಯಲ್ಲವ್ವ ಪೂಜಾರ ಕೊಲೆ ಮಾಡಿದ ವ್ಯಕ್ತಿ ಕಾಡಪ್ಪ ಭುಜಂಗ ಎಂಬ 35 ವರ್ಷದವ. ಈ ಕಿರಾತಕ ಇಬ್ಬರು ಹೆಣ್ಣುಮಕ್ಕಳ ಕೊಲೆ ಮಾಡಿ ಕ್ರೂರತೆ ಮೆರೆದಿದ್ದಾನೆ. ಕೊಲೆ ನಡೆದ ಕೆಲವೇ ಕ್ಷಣಗಳಲ್ಲಿ ಈ ನರರಾಕ್ಷಸನನ್ನು ಬನಹಟ್ಟಿ ಪೊಲೀಸರು ಬಂಧಿಸಿ ವಿಚಾರಣೆ ಶುರು ಮಾಡಿದ್ದಾರೆ.
ಇಲ್ಲಿ ಈ ಅಬಲೆ ಮಹಿಳೆಯರನ್ನು ಕೊಂದು ರಕ್ಕಸ ನಗೆ ಬೀರಿದ್ದಾನೆ ಈತ. ಮಹಿಳೆಯರನ್ನು ಕೊಲೆ ಮಾಡೋದಕ್ಕೆ ಏನು ಕಾರಣ. ಈ ಮಹಿಳೆಯರಿಗೂ ಆರೋಪಿಗೂ ಏನು ಸಂಬಂಧ ಎಂದು ವಿಚಾರಿಸಿದಾಗ… ಆ ಇಬ್ಬರು ಮಹಿಳೆಯರ ದಾರುಣ ಕೊಲೆಗೆ ಏನು ಕಾರಣ ಇರಬಹುದು? ಇಬ್ಬರನ್ನು ಕೂಡ ಒಂದೆ ಘಳಿಗೆಯಲ್ಲಿ ಕೊಲೆ ಮಾಡುವಂತಹ ತಪ್ಪನ್ನು ಈ ಅಬಲೆ ಮಹಿಳೆಯರು ಏನು ಮಾಡಿದ್ದರು? ಎಂದು ಎಲ್ಲರಿಗೂ ಕುತೂಹಲ.
ಆದರೆ ಇಲ್ಲಿ ಈ ಕೊಲೆಗೆ ಆಡಿದ ಮಾತುಗಳು ಆಸ್ತಿ ಮೇಲೆ ಕಣ್ಣು ಎಂಬ ಮಾಹಿತಿ ಸದ್ಯಕ್ಕೆ ಸಿಕ್ಕಿದೆ. ಹಿರಿಯರು ಹೇಳ್ತಾರೆ ಮಾತು ಆಡಿದರೆ ಹೋಯಿತು ಮುತ್ತು ಹೊಡೆದರೆ ಹೋಯಿತು ಅಂತ. ಇಲ್ಲಿ ಈ ಇಬ್ಬರು ಮಹಿಳೆಯರು ಆಡಿದ ಮಾತುಗಳು ಹಾಗೂ ಆರೋಪಿಗೆ ಆಸ್ತಿ ವಿಚಾರಕ್ಕೆ ಮನದಲ್ಲಿ ಕುದಿಯುತ್ತಿದ್ದ ಸೇಡು… ಕಾರಣವಾಗಿದೆ ಎಂದು ಹೇಳಲಾಗುತ್ತಿದೆ. ಅಷ್ಟಕ್ಕೂ ಅಂದು ಆಗಿದ್ದಾದರೂ ಏನು ಅಂದರೆ… ಮಾರ್ಚ್ 13 ರಂದು ಮಧ್ಯಾಹ್ನ ಕಾಡಪ್ಪ ತನ್ನ ಸಹೋದರಿ ಬಂದವ್ವಳನ್ನು ತವರು ಮನೆಗೆ ಕರೆಯೋದಕ್ಕೆ ಬಂದಿದ್ದ.
ಯಾಕೆಂದರೆ ಆಕೆಯ ಎರಡು ಮಕ್ಕಳನ್ನು ತವರು ಮನೆ ಅಂದರೆ ಬನಹಟ್ಟಿ ನಗರದಲ್ಲೇ ಇರುವ ಲಕ್ಷ್ಮಿ ನಗರ. ಲಕ್ಷ್ಮಿ ನಗರದಲ್ಲಿರುವ ಕಾಡಪ್ಪನ ಮನೆ ಅಂದರೆ ಬಂದವ್ವಳ ತವರು ಮನೆಯಲ್ಲಿ ತನ್ನ ಇಬ್ಬರು ಮಕ್ಕಳನ್ನು ಬಿಟ್ಟಿದ್ದಳು. ಆ ಹಿನ್ನೆಲೆ ಕಾಡಪ್ಪ ಇಬ್ಬರು ಮಕ್ಕಳನ್ನು ಬಿಟ್ಟು ನೀನು ಇಲ್ಲೇನು ಮಾಡುತ್ತಿಯಾ? ಭಾವ ಬೇರೆ ಇಲ್ಲ ಬಂದು ಬಿಡು ಎಂದು ಕರೆಯೋದಕ್ಕೆ ಬಂದಿದ್ದ. ಆಗ ಬೇಡ ನಾ ಬರೋದಿಲ್ಲ ಹೋಗು ಎಂದು ಬಂದವ್ವ ಹೇಳಿ ಕಳಿಸಿದ್ದಳು.
ಅಂದು ಮಧ್ಯಾಹ್ನ ಕಾಡಪ್ಪ ಶನಿವಾರ ಪೇಟೆಯಲ್ಲಿರುವ ತನ್ನ ಸಹೋದರಿ ಮನೆಗೆ ಬಂದಾದ ಸಹೋದರಿ ನಾನು ಬರೋದಿಲ್ಲ ಎಂದು ಬೈದು ವಾಪಸ್ ಕಳಿಸಿದ್ದಳು. ಆಗ ಮನೆಗೆ ಹೋಗಿದ್ದ ಕಾಡಪ್ಪ ಸಂಜೆಯಾಗುತ್ತಿದ್ದಂತೆ ಪುನಃ ಸಹೋದರಿ ಮನೆಗೆ ಬಂದು ತವರು ಮನೆಗೆ ಬಾ ನಿನ್ನ ಮಕ್ಕಳನ್ನು ನೋಡಿಕೊಂಡು ಅಲ್ಲೇ ಇರುವಂತೆ ಎಂದು ಹೇಳಿದ್ದ. ಆದರೆ ಆಗಲೂ ಬಂದವ್ವ ಒಪ್ಪಿರಲಿಲ್ಲ. ಮೊನ್ನೆಯಷ್ಟೇ ಮನೆಯಿಂದ ಬಂದಿದ್ದೇನೆ ನಾನು ಬರೋದಿಲ್ಲ ಹೋಗು ಅಂತ ಹೇಳಿದ್ದಳು.
ಇನ್ನು ಮನೆಯಲ್ಲಿದ್ದ ಬೋರವ್ವ ಹಾಗೂ ಯಲ್ಲವ್ವ ಕೂಡ ನಾವು ಕಳಿಸೋದಿಲ್ಲ, ನೀನು ಪದೆ ಪದೆ ಮನೆಗೆ ಬರಬೇಡ. ಅವಳನ್ನು ಕರೆಯೋದಕ್ಕೆ ಯಾಕೆ ಬರ್ತಿಯಾ ಎಂದು ತಕರಾರು ಮಾಡಿದ್ದರು. ಅದೇ ವೇಳೆ ಬಂದವ್ವ ಇಲ್ಲಿಂದ ಹೋಗು ಎಂದು ಕಳಿಸಿ ತನ್ನ ಪಾಡಿಗೆ ತಾನು ಒಳಗೆ ಹೋಗಿದ್ದಳು. ಅಡುಗೆ ಮನೆಯಲ್ಲಿದ್ದ ಬೋರವ್ವ ಹಾಗೂ ಯಲ್ಲವ್ವ ಕಾಡಪ್ಪ ಹೋಗಿದ್ದಾನೆ ಎಂದು ತಿಳಿದು ಆತನಿಗೆ ಅಶ್ಲೀಲ ಪದ ಬಳಸಿ ಬೈದಾಡಿದ್ದರಂತೆ.
ಆದರೆ ಕಾಡಪ್ಪ ಮಾತ್ರ ಹೋಗದೆ ಅಲ್ಲೇ ಮನೆಯ ಹೊರಗಡೆ ಇದ್ದ. ಯಾವಾಗ ಅವರಿಬ್ಬರ ಬಾಯಿಂದ ಅಶ್ಲೀಲ ಪದಗಳು ಹರಿದಾಡಿದವೋ ನೇರವಾಗಿ ಒಳಬಂದವನೇ ಇಬ್ಬರ ಜೊತೆ ಜಗಳ ತೆಗೆದಿದ್ದ. ಅಲ್ಲೇ ಇದ್ದ ರಾಡ್ ನಿಂದ ಇಬ್ಬರ ತಲೆಗೆ ಬಲವಾಗಿ ಹೊಡೆದಿದ್ದ. ಇಬ್ಬರೂ ಮನೆಯ ಹಾಲ್ ನಲ್ಲಿ ಕುಸಿದು ಬೀಳುತ್ತಿದ್ದಲೇ ಇಬ್ಬರನ್ನು ದರದರನೇ ಮನೆಯ ಹೊರಗೆ ಎಳೆದು ತಂದು ಮನೆಯ ಮುಂದಿನ ರಸ್ತೆಯಲ್ಲಿ ಬಿಸಾಕಿ ಕಲ್ಲಿನಿಂದ ತಲೆ ಹಾಗೂ ದೇಹ ಜಜ್ಜಿ ಜಜ್ಜಿ ಕೊಲೆ ಮಾಡಿದ್ದಾನೆ ಕಾಡಪ್ಪ.
ಎಸ್ ಬನಹಟ್ಟಿ ನಗರದ ಶನಿವಾರಪೇಟೆಯಯಲ್ಲಿ ಸತ್ಯಪ್ಪ ಮಿರ್ಜಿ, ಆತನಿಗೆ ಇಬ್ಬರು ಸಹೋದರಿಯರು ಬೋರವ್ವ ಮಿರ್ಜಿ ಯಲ್ಲವ್ವ ಪೂಜಾರ. ಆದರೆ ಈಗ ಇವರೆಲ್ಲರೂ ಸಾವನ್ನಪ್ಪಿದ್ದಾರೆ. ಇಲ್ಲಿ ಈ ಕುಟುಂಬದ ಕಥೆ ಕೇಳಿದರೆ ಇಲ್ಲಿ ಮೇಲಿಂದ ಮೇಲೆ ಸಾವುಗಳು ಸಂಭವಿಸುತ್ತಲೇ ಬಂದಿವೆ. ಒಂದು ವರ್ಷದ ಹಿಂದೆ ಬಂದವ್ವಳ ಗಂಡ ಸತ್ಯಪ್ಪ ಅನಾರೋಗ್ಯದಿಂದ ಸಾವನ್ನಪ್ಪಿದ್ದಾನೆ.
ಇನ್ನು ಈ ಇಬ್ಬರು ಸಹೋದರಿಯರಲ್ಲಿ ಯಲ್ಲವ್ವ ಪೂಜಾರ ಮದುವೆ ಮಾತ್ರ ಆಗಿತ್ತು. ಆಕೆಯ ಗಂಡ ಕೂಡ ಮೃತಪಟ್ಟ ಹಿನ್ನೆಲೆ ಆಕೆ ತವರು ಮನೆಗೆ ಬಂದು ವಾಸವಿದ್ದಳು. ಬೋರವ್ವ ಮದುವೆಯೇ ಆಗಿರಲಿಲ್ಲ. ಇಲ್ಲಿ ಈ ಮನೆಯಲ್ಲಿ ಇಬ್ಬರು ವಿಧವೆಯರಾಗಿದ್ದರೆ ಒಬ್ಬಳು ಮದುವೆಯಾಗದ ಮಹಿಳೆ. ಒಂದು ಮನೆಯಲ್ಲಿ ಮೂರು ಜನರು ಮಹಿಳೆಯರು ಬಂದವ್ವಳ ಮಗ ಮಾತ್ರ ಇರುತ್ತಿದ್ದರು.
ಆದರೆ ಇಲ್ಲಿ ಸತ್ಯಪ್ಪ ಮೃತಪಟ್ಟನಂತರ ಕಾಡಪ್ಪ ಭಾವನ ಆಸ್ತಿ ಮೇಲೆ ಕಣ್ಣು ಹಾಕಿದ್ದ ಎಂದು ಹೇಳಲಾಗುತ್ತಿದೆ. ಬೆಳಗಾವಿ ಜಿಲ್ಲೆ ಕೌಜಲಗಿಯಲ್ಲಿ ಸತ್ಯಪ್ಪನಿಗೆ ಸೇರಿದ 5-6 ಎಕರೆ ಹೊಲ ಇತ್ತಂತೆ. ಅದನ್ನು ಸಹೋದರಿಗೆ ಕೊಡದೆ ಸಹೋದರಿಯರ ನಾದಿನಿಯರಾದ ಬೋರವ್ವ, ಯಲ್ಲವ್ವ ತಾವೆ ಆಸ್ತಿ ಹೊಡೆಯಲು ಮುಂದಾಗಿದ್ದರು. ಇದಕ್ಕೆ ಬಂದವ್ವ ಹಾಗೂ ಕಾಡಪ್ಪ ಆ ಆಸ್ತಿ ನಮಗೆ ಸೇರಬೇಕು ಎಂದು ತಕರಾರು ತೆಗೆಯುತ್ತಿದ್ದರಂತೆ. ಈ ವಿಚಾರವೂ ಕೊಲೆಗೆ ಮೂಲ ಕಾರಣ ಇದ್ದಿರಬಹುದು ಎಂದು ಪೊಲೀಸರು ಹೇಳುತ್ತಿದ್ದಾರೆ. ಆದರೆ ಇದು ಇನ್ನು ಖಚಿತವಾಗಿಲ್ಲ ಎಂದು ಬಾಗಲಕೋಟೆ ಎಸ್ ಪಿ ಜಯಪ್ರಕಾಶ್ ಮಾಹಿತಿ ನೀಡಿದ್ದಾರೆ.
ಒಟ್ಟಿನಲ್ಲಿ ಇಲ್ಲಿ ಆಸ್ತಿ ವಿಚಾರ, ಆಡಿದ ಅವಾಚ್ಯ ಶಬ್ದಗಳಿಂದ ದುರಂತಗಳು ನಡೆದು ಹೋಗಿವೆ. ಭಾವನ ಸಹೋದರಿಯರನ್ನೇ ಜಜ್ಜಿ ಕೊಲೆ ಮಾಡಿದ ವ್ಯಕ್ತಿ ಇದೀಗ ಜೈಲು ಸೇರಿದ್ದಾನೆ. ಮಿರ್ಜಿ ಕುಟುಂಬದಲ್ಲಿ ಜನಿಸಿದ ಮೂರು ಮಕ್ಕಳು ಈಗ ಇಲ್ಲದಂತಾಗಿದೆ. ಇನ್ನೇನಿದ್ದರೂ ಬಂದವ್ವನ ಮಕ್ಕಳಿಂದ ಈ ವಂಶಾವಳಿ ಮುಂದುವರೆಯಬೇಕಿದೆ. ಅದೇನೆ ಇರಲಿ ಮಹಿಳೆಯರ ಜೋಡಿ ಕೊಲೆ ಮಾಡಿದ ಈ ರಾಕ್ಷಸನ ಕೃತ್ಯಕ್ಕೆ ಎಲ್ಲರೂ ಛೀ ಅನ್ನುವಂತಾಗಿದೆ.
ವರದಿ: ರವಿ ಮೂಕಿ, ಟಿವಿ9, ಬಾಗಲಕೋಟೆ