
ಬಾಗಲಕೋಟೆ, ಡಿಸೆಂಬರ್ 31: ಬಿಜೆಪಿ ವಿರುದ್ಧ ದೇಶಾದ್ಯಂತ ಕಾಂಗ್ರೆಸ್ ವೋಟ್ ಚೋರಿ ಅಭಿಯಾನ ನಡೆಸಿತ್ತು. ಕರ್ನಾಟಕದ ಕಲಬುರಗಿಯ ಆಳಂದ ವಿಧಾನಸಭಾ ಕ್ಷೇತ್ರದಲ್ಲಿಯೂ ಮತದಾರರ ಪಟ್ಟಿ ಅಕ್ರಮ ಆರೋಪ ಕೇಳಿಬಂದಿತ್ತು. ಈ ನಡುವೆ ಹುನಗುಂದ ಮತಕ್ಷೇತ್ರದಲ್ಲಿ ಕಾಂಗ್ರೆಸ್ ವಿರುದ್ಧವೇ ಮತದಾರರ ಪಟ್ಟಿ ಅಕ್ರಮ ನಡೆದಿದೆ ಎಂದು ಬಿಜೆಪಿ ದೂರಿದೆ. ದಾಖಲೆ ಸಮೇತ ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ದೂರನ್ನೂ ನೀಡಿದೆ.
ಹುನಗುಂದ ಮತಕ್ಷೇತ್ರದಲ್ಲಿ ಪ್ರತಿ ಬೂತ್ನಿಂದ ಅಕ್ರಮವಾಗಿ 18 ವಯೋಮಿತಿ ಒಳಗಿನ 50 ಜನರನ್ನ ಮತದಾರ ಪಟ್ಟಿಗೆ ಸೇರಿಸಲಾಗಿದೆ. ಹೀಗಾಗಿ ಈ ಬಗ್ಗೆ ಸಮಗ್ರ ತನಿಖೆ ನಡೆಯಬೇಕೆಂದು ಭಾರತೀಯ ಜನತಾ ಪಕ್ಷ ಆಗ್ರಹಿಸಿದೆ. ನವನಗರದ ಬಸ್ ನಿಲ್ದಾಣ ವೃತ್ತದಿಂದ ಜಿಲ್ಲಾಡಳಿತ ಭವನದವರೆಗೆ ಮಾಜಿ ಶಾಸಕರಾದ ವೀರಣ್ಣ ಚರಂತಿಮಠ ಮತ್ತು ದೊಡ್ಡನಗೌಡ ಪಾಟೀಲ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗಿದ್ದು, ಉಗ್ರ ಹೋರಾಟದ ಎಚ್ಚರಿಕೆಯನ್ನು ನೀಡಲಾಗಿದೆ. ಹುನಗುಂದ ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ ವಿರುದ್ದ ಧಿಕ್ಕಾರ ಕೂಗಿ ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ: ಬಾಗಲಕೋಟೆಯಲ್ಲೂ ಮತದಾರರ ಪಟ್ಟಿ ಅಕ್ರಮದ ಸದ್ದು; ವೋಟರ್ ಲಿಸ್ಟ್ನಲ್ಲಿದೆ ಅಪ್ರಾಪ್ತರು, ಬೇರೆ ಊರಿನವರ ಹೆಸರು!
ಮತದಾರರ ಪಟ್ಟಿ ಅಕ್ರಮ ಸಂಬಂಧ ಅಧಿಕಾರಿ ಮತ್ತು ಸಿಬ್ಬಂದಿಗಳ ಮೇಲೆ ಕ್ರಮ ಆಗಬೇಕು. ತಪ್ಪಿತಸ್ಥರನ್ನು ಅಮಾನತು ಮಾಡಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕಾಪಾಡಬೇಕು. ಒಂದು ವೇಳೆ ನ್ಯಾಯಯುತ ತನಿಖೆ ಆಗದಿದ್ದಲ್ಲಿ ಉಗ್ರಹೋರಾಟ ನಡೆಸಲಾಗುವುದು ಎಂದು ಮಾಜಿ ಶಾಸಕರು ಎಚ್ಚರಿಸಿದ್ದಾರೆ. ಮುರಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮತದಾರರ ಪಟ್ಟಿ ಅಕ್ರಮದ ಬಗ್ಗೆ ಈ ಮೊದಲು ಹುನಗುಂದ ತಾಲೂಕು ಪಂಚಾಯತ್ ಮಾಜಿ ಸದಸ್ಯರು ಹಾಗೂ ಸ್ಥಳೀಯರು ಕೂಡ ಆರೋಪಿಸಿದ್ದರು.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.